ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ, 2010ರಲ್ಲಿ ಕೇರಳದಲ್ಲಿ ನಡೆದ ಪ್ರೊಫೆಸರ್‌ ಕೈ ಕತ್ತರಿಸಿದ ಪ್ರಕರಣದಲ್ಲಿ ದೋಷಿಗಳು ಎಂದು ಸಾಬೀತಾಗಿದ್ದ 6 ಮಂದಿ ಪಿಎಫ್‌ಐ ಕಾರ್ಯಕರ್ತರಲ್ಲಿ ಮೂವರಿಗೆ ಜೀವಾವಧಿ ಶಿಕ್ಷೆ ಮತ್ತು ಉಳಿದ ಮೂರು ಮಂದಿಗೆ 3 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. 

ಕೊಚ್ಚಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ, 2010ರಲ್ಲಿ ಕೇರಳದಲ್ಲಿ ನಡೆದ ಪ್ರೊಫೆಸರ್‌ ಕೈ ಕತ್ತರಿಸಿದ ಪ್ರಕರಣದಲ್ಲಿ ದೋಷಿಗಳು ಎಂದು ಸಾಬೀತಾಗಿದ್ದ 6 ಮಂದಿ ಪಿಎಫ್‌ಐ ಕಾರ್ಯಕರ್ತರಲ್ಲಿ ಮೂವರಿಗೆ ಜೀವಾವಧಿ ಶಿಕ್ಷೆ ಮತ್ತು ಉಳಿದ ಮೂರು ಮಂದಿಗೆ 3 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ 6 ಮಂದಿಯನ್ನು ಎನ್‌ಐಎ ವಿಶೇಷ ನ್ಯಾಯಾಧೀಶ ಅನಿಲ್‌.ಕೆ.ಭಾಸ್ಕರ್‌ ಅವರು ದೋಷಿ ಎಂದು ಘೋಷಿಸಿದ್ದರು. ಈ ಪ್ರಕರಣದ 2ನೇ ಆರೋಪಿಯಾಗಿದ್ದ ಸಾಜಿಲ್‌, ಮೂರನೇ ಆರೋಪಿ ನಸಾರ್‌ ಮತ್ತು 5ನೇ ಆರೋಪಿ ನಜೀಬ್‌ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದ್ದು, ಇದರ ಜೊತೆಗೆ ತಲಾ 50 ಸಾವಿರ ರು. ದಂಡವನ್ನು ವಿಧಿಸಲಾಗಿದೆ. ಉಳಿದ ಮೂವರಾದ ಮೋಯಿದ್ದೀನ್‌ ಕುಂಜು, ನೌಶಾದ್‌ ಮತ್ತು ಆಯೂಬ್‌ಗೆ ತಲಾ 3 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 

ಪ್ರಕರಣದ ಕುರಿತು ಮೊದಲು ವಿಚಾರಣೆ ನಡೆಸಿದ ನ್ಯಾಯಾಲಯ 10 ಜನರನ್ನು ದೋಷಿ ಎಂದು ಪ್ರಕಟಿಸಿತ್ತು. ಆದರೆ ವಿಶೇಷ ಎನ್‌ಐಎ ನ್ಯಾಯಾಲಯ ಸಾಜಿಲ್‌, ನಾಸರ್‌ ಮತ್ತು ನಜೀಬ್‌ರನ್ನು ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯಡಿಯಲ್ಲಿ ದೋಷಿಗಳು ಎಂದು ಘೋಷಿಸಿದ್ದಾರೆ. ಇವರೊಂದಿಗೆ ಈ ಕೃತ್ಯಕ್ಕೆ ಸಹಕಾರ ನೀಡಿದ ನೌಷದ್‌, ಪಿ.ಪಿ.ಮೋಯಿದೀನ್‌ ಮತ್ತು ಆಯುಬ್‌ನ್ನು ದೋಷಿಗಳು ಎಂದು ಘೋಷಿಸಿದ್ದಾರೆ. ಉಳಿದ ನಾಲ್ವರನ್ನು ಖುಲಾಸೆಗೊಳಿಸಲಾಗಿದೆ.

ಕೇರಳ ಪ್ರೊಫೆಸರ್‌ ಬಲಕೈ ಕತ್ತರಿಸಿದ್ದ 6 ಪಿಎಫ್‌ಐ ಕಾರ‍್ಯಕರ್ತರು ದೋಷಿ: ಇಂದು ಶಿಕ್ಷೆ ಪ್ರಕಟ

ಏನಿದು ಘಟನೆ?

2010ರಲ್ಲಿ ಜೋಸೆಫ್‌ ತಾವು ಪಾಠ ಮಾಡುತ್ತಿದ್ದ ಕಾಲೇಜಿನ ಬಿಕಾಂ ವಿದ್ಯಾರ್ಥಿಗಳಿಗೆ ಆಂತರಿಕ ಪರೀಕ್ಷೆ ನಡೆಸಲು ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದರು. ಅದರಲ್ಲಿ ಲೇಖಕ ಪಿ.ಟಿ.ಕುಂಜು ಮೊಹಮ್ಮದ್‌ ಅವರನ್ನು ಬರೀ ಮೊಹಮ್ಮದ್‌ ಎಂದು ಬಣ್ಣಿಸಿದ್ದರು. ಇದು ಉದ್ದೇಶಪೂರ್ವಕ ಕೃತ್ಯ. ಇದು ಇಸ್ಲಾಂ ಧರ್ಮ ನಿಂದನೆ ಎಂದು ಮತೀಯವಾದಿಗಳು ಕಿಡಿಕಾರಿದ್ದರು. ಇದೇ ಕಾರಣಕ್ಕಾಗಿ 2010ರ ಜು.4ರಂದು ಚರ್ಚ್‌ನಲ್ಲಿ ಪ್ರಾರ್ಥನೆ ಮುಗಿಸಿ ಕುಟುಂಬದೊಂದಿಗೆ ಹಿಂದಿರುಗುತ್ತಿದ್ದ ನ್ಯೂಮನ್‌ ಕಾಲೇಜಿನ ಪ್ರೊ.ಟಿಜೆ. ಜೋಸೆಫ್‌ ಅವರನ್ನು ಕಾರಿನಿಂದ ಹೊರಗೆಳೆದ ದುಷ್ಕರ್ಮಿಗಳು ಅವರ ಬಲಗೈಯನ್ನು ಕತ್ತರಿಸಿದ್ದರು. ಈ ಪ್ರಕರಣದ ಪ್ರಮುಖ ಆರೋಪಿ ಸಾವದ್‌ ಇನ್ನೂ ಸಹ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 54 ಮಂದಿಯನ್ನು ಆರೋಪಿಗಳೆಂದು ಘೋಷಿಸಲಾಗಿದ್ದು, ಚಾರ್ಜ್‌ಶೀಟ್‌ನಲ್ಲಿ 37 ಮಂದಿಯನ್ನು ಹೆಸರಿಸಲಾಗಿತ್ತು.

ಘಟನೆ ಬಗ್ಗೆ ನಂತರ ಪ್ರತಿಕ್ರಿಯಿಸಿದ ಟಿ.ಜೆ.ಜೋಸೆಫ್‌ (TJ Joseph), ನನ್ನ ಕೈ ಕತ್ತರಿಸಿದವರ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ. ಆದರೆ ಈ ಘಟನೆಯಿಂದ ನಾನು ನನ್ನ ಹೆಂಡತಿ ಸೇರಿದಂತೆ ಬಹಳಷ್ಟನ್ನು ಕಳೆದುಕೊಂಡೆ. ಆದರೆ ಅದು ನನ್ನ ಜೀವನವನ್ನು ಸಂಪೂರ್ಣವಾಗಿ ನಾಶ ಮಾಡಲಿಲ್ಲ. ನನ್ನ ಮೇಲೆ ದಾಳಿ ಮಾಡಿದವರು ಕೇವಲ ಆಯುಧಗಳಾಗಿದ್ದರು ಮತ್ತು ಅವರ ನಂಬಿಕೆಗಳ ಬಲಿಪಶುಗಳಾಗಿದ್ದರು. ಯಾವುದೇ ಯುದ್ಧದಲ್ಲಿ ಗೆದ್ದವರಿಗೂ ನನ್ನ ಹಾಗೆ ನಷ್ಟವಾಗುತ್ತದೆ. ಆದರೂ ಹೋರಾಡುವುದನ್ನು ಬಿಡಬಾರದು ಎಂದಿದ್ದಾರೆ. 

ನವಿ ಮುಂಬೈ ಮನೆಗಳಲ್ಲಿ ಕಾಣಿಸಿಕೊಂಡ ಪಿಎಫ್‌ಐ ಜಿಂದಾಬಾದ್‌ ಸ್ಟಿಕ್ಕರ್‌: ಪಟಾಕಿ ಕಟ್ಟಿದ ಕಿಡಿಗೇಡಿಗಳು