ಜು.17ರಂದು ನಡೆದ ನೀಟ್‌ ಪರೀಕ್ಷೆ ಒಳ ಉಡುಪು ಗದ್ದಲ ಭಾರೀ ವಿವಾದ ಸೃಷ್ಟಿಸಿದ್ದು, ಕೇರಳದಲ್ಲಿ ಪರೀಕ್ಷೆ ಮೊದಲು ವಿದ್ಯಾರ್ಥಿನಿಯರ ಒಳ ಉಡುಪು ಬಿಚ್ಚಿಸಿದ್ದ ಇನ್ನಿಬ್ಬರನ್ನು ಇಲ್ಲಿನ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಕೊಲ್ಲಂ (ಜು.22): ಜು.17ರಂದು ನಡೆದ ನೀಟ್‌ ಪರೀಕ್ಷೆ ಒಳ ಉಡುಪು ಗದ್ದಲ ಭಾರೀ ವಿವಾದ ಸೃಷ್ಟಿಸಿದ್ದು, ಕೇರಳದಲ್ಲಿ ಪರೀಕ್ಷೆ ಮೊದಲು ವಿದ್ಯಾರ್ಥಿನಿಯರ ಒಳ ಉಡುಪು ಬಿಚ್ಚಿಸಿದ್ದ ಇನ್ನಿಬ್ಬರನ್ನು ಇಲ್ಲಿನ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಪರೀಕ್ಷಾ ಕೊಠಡಿಯ ಸಂಯೊಜಕ ಮತ್ತು ಪರೀಕ್ಷಾ ವೀಕ್ಷಕ ಸೇರಿದಂತೆ ಈವರೆಗೆ ಬಂಧಿತರ ಸಂಖ್ಯೆ 7ಕ್ಕೆ ಏರಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರದಂದು 5 ಮಹಿಳೆಯರನ್ನು ಬಂಧಿಸಿತ್ತು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಸತ್ಯ ಶೋಧನೆ ಸಮಿತಿಯೊಂದನ್ನು ರಚಿಸಿದ್ದು, ಅದು ಕೊಲ್ಲಂಗೆ ಭೇಟಿ ನೀಡಿ ನಾಲ್ಕು ವಾರಗಳಲ್ಲಿ ಎನ್‌ಟಿಎಗೆ ವರದಿ ಒಪ್ಪಿಸಲಿದೆ.

ಕೇರಳದಲ್ಲಿ ಭಾರೀ ಕೋಲಾಹಲ: ಕಳೆದ ಭಾನುವಾರ ನಡೆದ ನೀಟ್‌ ಪರೀಕ್ಷೆ ವೇಳೆ ಕೇರಳದ ಕೊಲ್ಲಂನ ಅಯೂರ್‌ ಪರೀಕ್ಷಾ ಕೇಂದ್ರವೊಂದರಲ್ಲಿ ಅಧಿಕಾರಿಗಳು ಮಹಿಳೆಯರ ಒಳವಸ್ತ್ರವನ್ನು ಬಲವಂತವಾಗಿ ಬಿಚ್ಚಿಸಿದ್ದರು ಎಂಬ ಪ್ರಕರಣ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಒಳವಸ್ತ್ರ ಬಿಚ್ಚಿಸಿದ ಗಂಭೀರ ಆರೋಪ ಮಾಡಿದ್ದ 17 ವರ್ಷದ ಬಾಲಕಿ ನೀಡಿದ ಹೇಳಿಕೆ ಅಧರಿಸಿ ಕೊಲ್ಲಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ನೀಟ್‌ ವೇಳೆ ಒಳವಸ್ತ್ರಕ್ಕೆ ಕೊಕ್‌: ಎದೆ ಮುಚ್ಚಿಕೊಳ್ಳಲು ಕೂದಲು ಹಾಕಿಕೊಂಡೆವು: ಅಳುತ್ತಲೇ ವಿವರಿಸಿದ ವಿದ್ಯಾರ್ಥಿನಿ

ಅದರಲ್ಲಿ ಒಳವಸ್ತ್ರ ಬಿಚ್ಚಿಸಿದ ಅಧಿಕಾರಿಗಳ ವಿರುದ್ಧ ಮಹಿಳೆಯ ಮಾನಭಂಗ (ಸೆಕ್ಷನ್‌ 354), ಮಹಿಳೆಯ ಮಾನಭಂಗ ಮಾಡುವ ಪದ ಬಳಕೆ (ಸೆಕ್ಷನ್‌ 509)ಯ ಗಂಭೀರ ಆರೋಪ ಹೊರಿಸಲಾಗಿದೆ. ವಿದ್ಯಾರ್ಥಿನಿ ಹೇಳಿಕೆ ಆಧರಿಸಿ ಈಗಾಗಲೇ ತನಿಖೆ ಆರಂಭಿಸಲಾಗಿದೆ. ಯುವತಿಯ ಜೊತೆ ಅನುಚಿತವಾಗಿ ನಡೆದುಕೊಂಡವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪರೀಕ್ಷಾ ಕೇಂದ್ರದ ಮೇಲೆ ದಾಳಿ: ಈ ನಡುವೆ ಮಹಿಳಾ ಪರೀಕ್ಷಾರ್ಥಿಗಳ ಜೊತೆಗಿನ ಅಧಿಕಾರಿಗಳ ವರ್ತನೆ ಖಂಡಿಸಿ ವಿದ್ಯಾರ್ಥಿಗಳ ಗುಂಪೊಂದು ಭಾನುವಾರ ಪರೀಕ್ಷೆ ನಡೆದ ಕೇಂದ್ರದ ಮೇಲೆ ದಾಳಿ ನಡೆಸಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದೆ. ಮತ್ತೊಂದೆಡೆ ಮಹಿಳಾ ಅಭ್ಯರ್ಥಿಗಳ ಜೊತೆ ಅನುಚಿತವಾಗಿ ನಡೆದುಕೊಂಡ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಕೇರಳದ ಉನ್ನತ ಶಿಕ್ಷಣ ಖಾತೆ ಸಚಿವೆ ಆರ್‌.ಬಿಂದು ಕೇಂದ್ರ ಶಿಕ್ಷಣ ಖಾತೆ ಸಚಿವ ಧಮೇಂದ್ರ ಪ್ರಧಾನ್‌ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಆರೋಪ ಸುಳ್ಳು- ಟೆಸ್ಟಿಂಗ್‌ ಏಜೆನ್ಸಿ: ‘ಆದರೆ ವಿದ್ಯಾರ್ಥಿನಿ ಮಾಡಿದ ಆರೋಪವನ್ನು ಕಪೋಲಕಲ್ಪಿತ. ಕೆಟ್ಟಉದ್ದೇಶದಿಂದ ಇಂಥದ್ದೊಂದು ಪ್ರಕರಣ ದಾಖಲಿಸಲಾಗಿದೆ. ಅಧಿಕಾರಿಗಳು ಹೀಗೆ ನಡೆದುಕೊಂಡಿದ್ದಾರೆ ಎಂಬ ಯಾವ ದೂರೂ ನಮ್ಮ ಬಳಿ ಸಲ್ಲಿಕೆಯಾಗಿಲ್ಲ’ ಎಂದು ನೀಟ್‌ ಪರೀಕ್ಷೆ ಆಯೋಜಿಸಿದ್ದ ನ್ಯಾಷನಲ್‌ ಟೆಸ್ಟಿಂಗ್‌ ಏಜೆನ್ಸಿಯ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಒಳಉಡುಪು ತೆಗೆದರೆ ಮಾತ್ರ ಪರೀಕ್ಷೆಗೆ ಅನುಮತಿ, ಭಾರಿ ವಿವಾದ ಸೃಷ್ಟಿಸಿದ NEET Exam!

ಏನಾಗಿತ್ತು: ಭಾನುವಾರ ನಡೆದ ಪರೀಕ್ಷೆ ವೇಳೆ ಅಯೂರ್‌ ಕೇಂದ್ರದಲ್ಲಿ ಲೋಹಶೋಧಕ ಯಂತ್ರದಲ್ಲಿ ವಿದ್ಯಾರ್ಥಿಗಳು ಭದ್ರತಾ ತಪಾಸಣೆ ಭಾಗವಾಗಿ ಹಾದುಹೋಗುವಾಗ, 17 ವರ್ಷದ ವಿದ್ಯಾರ್ಥಿನಿ ಧರಿಸಿದ್ದ ಬ್ರಾದಲ್ಲಿದ್ದ ಸ್ಟೀಲ್‌ ಬಟನ್‌ ಇದ್ದ ಕಾರಣ, ಮಷಿನ್‌ ಸದ್ದು ಮಾಡಿತ್ತು. ಈ ವೇಳೆ ಅಧಿಕಾರಿಗಳು, ವಿದ್ಯಾರ್ಥಿನಿಗೆ ನಿನಗೆ ಪರೀಕ್ಷೆ ಮುಖ್ಯವೋ? ಒಳವಸ್ತ್ರವೋ? ಸುಮ್ಮನೆ ನಮ್ಮ ಸಮಯ ಹಾಳು ಮಾಡದೇ ಬ್ರಾ ತೆಗೆದಿಟ್ಟು ಒಳಗೆ ಹೋಗು ಎಂದು ಗದರಿಸಿದ್ದರು. ಇದೇ ರೀತಿ ನೂರಾರು ಮಹಿಳೆಯರ ಒಳವಸ್ತ್ರ ತೆಗೆದು ಹೊರಗಿನ ಕೊಠಡಿಯಲ್ಲಿ ಇರಿಸಲಾಗಿತ್ತು. ಇದರಿಂದ ಬಹುತೇಕರು ಅಘಾತಕ್ಕೆ ಒಳಗಾಗಿದ್ದರು ಎಂದು ವಿದ್ಯಾರ್ಥಿನಿಯ ಪೋಷಕರು ಭಾನುವಾರ ಸುದ್ದಿವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದರು.