ರಕ್ಷಿಸಿದ್ದಕ್ಕೆ ಕೃತಜ್ಞತೆ... ಮಗುವಿಗೆ ಗಂಗಾ ಹೆಸರಿಡುವುದಾಗಿ ಹೇಳಿದ ಕೇರಳಿಗ
- ಗರ್ಭಿಣಿ ಪತ್ನಿಯೊಂದಿಗೆ ಉಕ್ರೇನ್ ತೊರೆದಿದ್ದ ಕೇರಳಿಗ
- ಕೈವ್ ಸಿಟಿಯಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದ ಅಭಿಜಿತ್
- ಆಪರೇಷನ್ ಗಂಗಾ ಕಾರ್ಯಾಚರಣೆಗೆ ಶ್ಲಾಘನೆ
ಉಕ್ರೇನ್‌ನ ಕೈವ್ ನಗರದಲ್ಲಿ ಹೋಟೆಲ್ ಇರಿಸಿಕೊಂಡಿದ್ದ ಕೇರಳದ ವ್ಯಕ್ತಿಯೊಬ್ಬರು ತಮಗೆ ಹುಟ್ಟುವ ಮಗುವಿಗೆ ಆಪರೇಷನ್ ಗಂಗಾ ಹೆಸರಿಡುವುದಾಗಿ ಹೇಳಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಯುದ್ಧ ಘೋಷಣೆ ಮಾಡುತ್ತಿದ್ದಂತೆ ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆಯ ನಿರ್ದೇಶನದಂತೆ ಇವರು ತಮ್ಮ ಗರ್ಭಿಣಿ ಪತ್ನಿಯೊಂದಿಗೆ ನಗರವನ್ನು ತೊರೆದು ಪೋಲೆಂಡ್‌ಗೆ ಆಗಮಿಸಿದ್ದರು. ಈಗ ಪೋಲೆಂಡ್‌ನಲ್ಲಿ ಅವರ ಪತ್ನಿ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೈವ್‌ನಿಂದ ಪೋಲೆಂಡ್ ಗಡಿಯನ್ನು ಸುರಕ್ಷಿತವಾಗಿ ತಲುಪಿದ ನಂತರ, ಅಭಿಜಿತ್ ಅವರ ಪತ್ನಿ ಈಗ ಪೋಲೆಂಡ್‌ನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉಕ್ರೇನ್‌ನ ಕೈವ್‌ನಲ್ಲಿ ರೆಸ್ಟೋರೆಂಟ್ ಮಾಲೀಕನಾಗಿದ್ದ ಕೇರಳದ ಅಭಿಜಿತ್(Abhijeet) ಅವರ ಪತ್ನಿ ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದು, ಅವರಿಗೆ ವೈದ್ಯರು ಮಾರ್ಚ್ 26 ರಂದು ಅಂತಿಮ ದಿನಾಂಕವನ್ನು ನೀಡಿದ್ದಾರೆ. ಇತ್ತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ ಕೈಗೊಂಡ ಅಭೂತಪೂರ್ವ ಕ್ರಮಕ್ಕೆ ಧನ್ಯವಾದ ಸಲ್ಲಿಸುವ ಸಲುವಾಗಿ ಅವರು ತಮಗೆ ಹುಟ್ಟಲಿರುವ ಮಗುವಿಗೆ ಆಪರೇಷನ್ ಗಂಗಾ ಹೆಸರಿಡುವುದಾಗಿ ಹೇಳಿದ್ದಾರೆ. ಆಪರೇಷನ್ ಗಂಗಾ ಹೆಸರಿನ ಮೂಲಕ ಕೇಂದ್ರ ಸರ್ಕಾರ ಯುದ್ಧ ಘೋಷಣೆಯಾದ ದಿನದಿಂದಲೇ ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯರ ರಕ್ಷಣೆಗೆ ಮುಂದಾಗಿತ್ತು.
ನಾಗರಿಕರ ರಕ್ಷಣೆಗೆ ಮತ್ತೆ 5 ಗಂಟೆ ದಿಢೀರ್ ಕದನ ವಿರಾಮ ಘೋಷಿಸಿದ ರಷ್ಯಾ
ಅಭಿಜಿತ್ ಅವರು ಕೇರಳಕ್ಕೆ ಬರಲಿದ್ದು, ಅವರ ಪತ್ನಿ ಚಿಕಿತ್ಸೆ ಮತ್ತು ವಿಶ್ರಾಂತಿಗಾಗಿ ಪೋಲೆಂಡ್‌ನಲ್ಲಿ ಉಳಿದುಕೊಂಡಿದ್ದಾರೆ. ಫೆಬ್ರವರಿ 24 ರಂದು ರಷ್ಯಾ ದೇಶವನ್ನು ಆಕ್ರಮಿಸಿದ ನಂತರ ಇದುವರೆಗೆ 28 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಸರ್ಕಾರ ಗುರುವಾರ ಹೇಳಿಕೊಂಡಿದೆ.ಇತ್ತ ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು 'ಆಪರೇಷನ್ ಗಂಗಾ' ಕಾರ್ಯಾಚರಣೆ ನಡೆಸುತ್ತಿರುವ ಭಾರತ ಸರ್ಕಾರ ತನ್ನ ಕಾಯಕವನ್ನು ಚುರುಕುಗೊಳಿಸಿದೆ.
ಪ್ರಧಾನಿ ನರೇಂದ್ರ ಮೋದಿ(Narendra Modi) ಸರ್ಕಾರ ತನ್ನ ರಾಜತಾಂತ್ರಿಕ ಸಂಪರ್ಕಗಳನ್ನು ಬಳಸಿ 5 ದೇಶಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಪ್ರಯಾಣಿಕ ವಿಮಾನಗಳಲ್ಲದೆ, ವಾಯುಪಡೆಯ ವಿಮಾನಗಳನ್ನೂ ಬಳಸಿ ನಿರಂತರವಾಗಿ ಏರ್ ಲಿಫ್ಟ್(Airlift) ಮಾಡುತ್ತಿದೆ. ಅಲ್ಲದೆ, ಉಕ್ರೇನ್‌ನಲ್ಲಿ ಸಿಲುಕಿರುವವರು ಗಡಿಯತ್ತ ಬರಲು ಅಗತ್ಯ ಸಮನ್ವಯ ವ್ಯವಸ್ಥೆಯನ್ನೂ ಮಾಡುತ್ತಿದೆ. ಅಮೆರಿಕ, ಚೀನಾದಂತಹ ದೇಶಗಳೇ ತಮ್ಮ ನಾಗರಿಕರ ರಕ್ಷಣೆ ಬಗ್ಗೆ ಕೈಚೆಲ್ಲಿ ‘ನಿಮ್ಮ ಸುರಕ್ಷತೆ ನೀವೇ ನೋಡಿಕೊಳ್ಳಿ’ ಎಂಬರ್ಥದ ಸಂದೇಶ ರವಾನಿಸಿರುವ ಸಂದರ್ಭದಲ್ಲಿ ಭಾರತ ಸರ್ಕಾರ ತನ್ನೆಲ್ಲಾ ಶಕ್ತಿ-ಯುಕ್ತಿಯನ್ನೂ ಬಳಸಿ ಭಾರತೀಯರ(Indians) ರಕ್ಷಣೆಯಲ್ಲಿ ತೊಡಗಿದೆ.
ಗುರುವಾರ ಸುಮಾರು 19 ವಿಮಾನಗಳಲ್ಲಿ 3726 ಮಂದಿ ಭಾರತಕ್ಕೆ ಬಂದಿಳಿದಿದ್ದಾರೆ. ಉಕ್ರೇನ್ ಯುದ್ಧ ಆರಂಭವಾದ ಬಳಿಕ ಇದು ಈವರೆಗಿನ ಒಂದು ದಿನದ ಬೃಹತ್ ರಕ್ಷಣಾ ಕಾರಾರಯಚರಣೆಯಾಗಿದೆ. ಈ ವಿಮಾನಗಳಲ್ಲಿ 63 ಕನ್ನಡಿಗರನ್ನೂ ಕರೆತರಲಾಗಿದ್ದು, 5 ದಿನದಲ್ಲಿ ಏರ್‌ಲಿಫ್ಟ್ ಅಡಿ ರಕ್ಷಿಸಲ್ಪಟ್ಟ ಕರುನಾಡಿಗರ ಸಂಖ್ಯೆ 149ಕ್ಕೇರಿಕೆಯಾಗಿದೆ. ಈ ಮಧ್ಯೆ ರಷ್ಯಾ - ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳು ಬೆಲಾರಸ್‌ನಲ್ಲಿ 2ನೇ ಹಂತದ ಸಂಧಾನ ಮಾತುಕತೆ ನಡೆಸಿದ್ದು, ಚರ್ಚೆಯು ಮಹತ್ವದ ಪ್ರಗತಿ ಕಂಡಿದೆ. ಯುದ್ಧಪೀಡಿತ ಸ್ಥಳಗಳಲ್ಲಿ ಜನರ ತೆರವು ಕಾರ್ಯಾಚರಣೆಗೆ ಅನುವು ಮಾಡಿಕೊಡಲು ಉಭಯ ದೇಶಗಳು ಸಮ್ಮತಿಸಿವೆ.
Russia- Ukraine War: ರಷ್ಯಾ ಬಾಂಬ್ ದಾಳಿಗೆ ಉಕ್ರೇನಿನ 160ಕ್ಕೂ ಅಧಿಕ ಶೈಕ್ಷಣಿಕ ಸಂಸ್ಥೆಗಳು ಉಡೀಸ್
ಮರಿಯೂಪೋವಾ, ವೋಲ್‌ನವೋಕಾ ನಗರಗಳಲ್ಲಿ ಕದನ ವಿರಾಮ ಘೋಷಿಸಲಾಗಿದೆ. ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನಾಗರೀಕರಿಗೆ ಸೂಚಿಸಲಾಗಿದೆ. ಭಾರತೀಯ ಕಾಲಮಾನ ಸಂಜೆ 5 ಕ್ಕೆ ಕದನ ವಿರಾಮ ಮುಕ್ತಾಯಗೊಳ್ಳಲಿದೆ. ಇದೇ ವೇಳೆ, ನಾಗರಿಕರ ತೆರವು ಕಾರ್ಯಾಚರಣೆಯಲ್ಲದೆ ಆಹಾರ ಹಾಗೂ ಔಷಧ ಪೂರೈಕೆಗೆ ಯಾವುದೇ ಅಡ್ಡಿ ಮಾಡಬಾರದು. ಇಂಥ ಕೆಲಸಗಳು ನಡೆಯುವಾಗ ತಾತ್ಕಾಲಿಕವಾಗಿ ಕದನವಿರಾಮ ನೀತಿಯನ್ನು ಅನುಸರಿಸಬೇಕು ಎಂದು ಮಾತುಕತೆಯಲ್ಲಿ ನಿರ್ಧರಿಸಲಾಗಿದೆ.