ಇತ್ತೀಚೆಗೆ ನಡೆದ ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ತಿರುವನಂತಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ತಿರುವನಂತಪುರ (ಡಿ.14): ಇತ್ತೀಚೆಗೆ ನಡೆದ ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ತಿರುವನಂತಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ರಾಜ್ಯದ ಯಾವುದೇ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತಿರುವುದು ಇದೇ ಮೊದಲು. ಜೊತೆಗೆ ಎರ್ನಾಕುಲಂ ಜಿಲ್ಲೆಯ ತ್ರಿಪ್ಪುನಿತುರ ನಗರಸಭೆಯಲ್ಲಿ ಮೊದಲ ಬಾರಿ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಪಾಲಕ್ಕಾಡ್‌ ನಗರಸಭೆಯಲ್ಲಿ ಸತತ ಮೂರನೇ ಬಾರಿಗೆ ಗೆಲುವಿನ ನಗೆ ನಕ್ಕಿದೆ.

ತಿರುವನಂತಪುರ ಮಹಾನಗರ ಪಾಲಿಕೆಯಲ್ಲಿ ಬಹುಮತಕ್ಕೆ ಕೇವಲ ಒಂದು ಸ್ಥಾನದ ಕೊರತೆಯಷ್ಟೇ ಇದ್ದು, ಒಂದು ವೇಳೆ ಬಿಜೆಪಿಯೇನಾದರೂ ಅಧಿಕಾರಕ್ಕೆ ಬಂದರೆ ತಿರುವನಂತಪುರ ಪಾಲಿಕೆಯಲ್ಲಿ 45 ವರ್ಷಗಳ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಆಡಳಿತಕ್ಕೆ ಕೊನೆ ಬಿದ್ದಂತಾಗಲಿದೆ. ಜೊತೆಗೆ ಮೊದಲ ಬಾರಿಗೆ ಮಹಾನಗರ ಪಾಲಿಕೆ ಅಧಿಕಾರ ಬಿಜೆಪಿಗೆ ಸಿಕ್ಕಂತೆ ಆಗಲಿದೆ. ಬಿಜೆಪಿಗೆ ಅಧಿಕಾರ ಖಚಿತವಾದರೆ ನಿವೃತ್ತ ಐಪಿಎಸ್‌ ಅಧಿಕಾರಿ ಶ್ರೀಕಲಾ, ಮೇಯರ್‌ ಆಗುವ ಸಾಧ್ಯತೆ ಇದೆ.

ತಿರುವನಂತಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಸಾಧನೆಗೆ ಪ್ರಧಾನಿ ಮೋದಿ, ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷ ರಾಜೀವ್‌ ಚಂದ್ರಶೇಖರ್‌ ಅವರು ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. ವಿಶೇಷವೆಂದರೆ ತಿರುವನಂತಪುರ ಲೋಕಸಭಾ ಕ್ಷೇತ್ರ ಪ್ರತಿನಿಧಿಸುವ ಕಾಂಗ್ರೆಸ್‌ನ ಶಶಿ ತರೂರ್‌ ಕೂಡಾ ಬಿಜೆಪಿಯ ಸಾಧನೆಯನ್ನು ಮೆಚ್ಚಿದ್ದಾರೆ.

50 ಸ್ಥಾನದಲ್ಲಿ ಗೆಲುವು: ತಿರುವನಂತಪುರ ಪಾಲಿಕೆಯ ಒಟ್ಟು 101 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 50, ಎಲ್‌ಡಿಎಫ್‌ 29, ಯುಡಿಎಫ್‌ 19 ಮತ್ತು ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಒಂದು ಸ್ಥಾನದಲ್ಲಿ ಅಭ್ಯರ್ಥಿ ಸಾವಿನ ಕಾರಣ ಚುನಾವಣೆ ನಡೆದಿರಲಿಲ್ಲ. ಹೀಗಾಗಿ ಬಹುಮತಕ್ಕೆ ಬಿಜೆಪಿಗೆ ಕೇವಲ 1 ಮತದ ಕೊರತೆ ಇದೆ. ಪಕ್ಷೇತರ ಅಭ್ಯರ್ಥಿಗಳ ಬೆಂಬಲ ಪಡೆಯುವ ಪ್ರಯತ್ನಗಳು ನಡೆಯುತ್ತಿದೆ.

ತ್ರಿಪ್ಪುನಿತುರದಲ್ಲಿ ಗೆಲುವು

ಇನ್ನು ಪಾಲಕ್ಕಾಡ್‌ ನಗರಸಭೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ನ ತೀವ್ರ ಪೈಪೋಟಿಯ ಹೊರತಾಗಿಯೂ ಮೂರನೇ ಬಾರಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದು, ತ್ರಿಪ್ಪುನಿತುರ ನಗರಸಭೆಯಲ್ಲಿ ಇದೇ ಮೊದಲ ಬಾರಿಗೆ ಎನ್‌ಡಿಎ ಮೈತ್ರಿಕೂಟ ಗದ್ದುಗೆ ಹಿಡಿದು ಇತಿಹಾಸ ಬರೆದಿದೆ. ಆದರೆ, ಪಂಡಲಂ ನಗರಸಭೆಯಲ್ಲಿ ಅಧಿಕಾರ ಕಳೆದುಕೊಂಡಿದೆ. ಕೇಂದ್ರ ಸಚಿವ ಸುರೇಶ್ ಗೋಪಿ ಅವರು ಪ್ರತಿನಿಧಿಸುವ ತ್ರಿಶ್ಶೂರ್‌ ಕ್ಷೇತ್ರದ ಕೋಡುಂಗಲ್ಲೂರ್‌ ನಗರಸಭೆಯಲ್ಲಿ ಬಿಜೆಪಿಯು 46ರಲ್ಲಿ 18 ಸ್ಥಾನಗಳಿಸಿದೆ.

ಇಂದು ಕೇರಳದಲ್ಲಿ ಬಿಜೆಪಿ ಕಾರ್ಯಕರ್ತರು ತಲೆಮಾರುಗಳ ಕಾಲ ಮಾಡಿದ ಕೆಲಸ ಮತ್ತು ಮಾಡಿದ ಹೋರಾಟಗಳನ್ನು ಸ್ಮರಿಸುವ ದಿನ. ಅಂದು ಕಾರ್ಯಕರ್ತರು ತಳಮಟ್ಟದಲ್ಲಿ ಮಾಡಿದ ಕೆಲಸದ ಪರಿಣಾಮ ಇಂದು ಪಕ್ಷಕ್ಕೆ ಗೆಲುವು ಸಿಕ್ಕಿದೆ. ನಮ್ಮ ಪಕ್ಷ ತಿರುವನಂತಪುರ ನಗರದ ಬೆಳವಣಿಗೆಗೆ ಕೆಲಸ ಮಾಡಲಿದೆ. ಥ್ಯಾಂಕ್ಯೂ ತಿರುವನಂತಪುರ.
-ನರೇಂದ್ರ ಮೋದಿ, ಪ್ರಧಾನಿ

ವಿವಿಧ ಕ್ಷೇತ್ರಗಳಲ್ಲಿ ಭರ್ಜರಿ ಜಯ ಸಾಧಿಸಿದ ಯುಡಿಎಫ್‌ಗೆ ಅಭಿನಂದನೆ. ಅಂತೆಯೇ ನನ್ನ ಕ್ಷೇತ್ರವಾಗಿರುವ ತಿರುವನಂತಪುರಂನಲ್ಲಿ ಬಿಜೆಪಿಯ ಐತಿಹಾಸಿಕ ಸಾಧನೆಯನ್ನೂ ಸ್ವಾಗತಿಸಿ ಅಭಿನಂದಿಸುತ್ತೇನೆ. ನಾನು ಯಾವಾಗಲೂ ಎಲ್‌ಡಿಎಫ್‌ ಪಕ್ಷಗಳನ್ನು ಬೆಂಬಲಿಸಿಕೊಂಡು ಬಂದಿದ್ದೇನೆ. ಆದರೆ ಮತದಾರರು ಆಡಳಿತದಲ್ಲಿ ಬದಲಾವಣೆ ಬಯಸಿ ಮತ ಚಲಾಯಿಸಿದ್ದಾರೆ. ಇದೇ ಪ್ರಜಾಪ್ರಭುತ್ವದ ಸೌಂದರ್ಯ.
-ಶಶಿ ತರೂರ್‌, ಹಿರಿಯ ಕಾಂಗ್ರೆಸ್‌ ನಾಯಕ

ಕಳೆದ 45 ವರ್ಷಗಳಲ್ಲಿ ತಿರುವನಂತಪುರದ ಅಭಿವೃದ್ಧಿಗೆ ಸಿಪಿಎಂ ಏನೂ ಮಾಡಿಲ್ಲ. ಹೀಗಾಗಿ ಜನ ನಮ್ಮನ್ನು ಸ್ವೀಕರಿಸಿದ್ದಾರೆ. ಶ್ರಮಕ್ಕೆ ಫಲ ಸಿಕ್ಕಿದೆ. ನಮ್ಮ ಗುರಿಯೇನಿದ್ದರೂ ಅಧಿಕಾರ ಹಿಡಿಯುವುದರ ಕಡೆಗಷ್ಟೆ. ಅದರಲ್ಲಿ ನಾವು ಯಶಸ್ವಿಯಾಗಿದ್ದೇವೆ. ನಾನು ವೈಯಕ್ತಿಕವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಕಾರಣ ಫಲಿತಾಂಶದ ಬಗ್ಗೆ ಸ್ಪಷ್ಟತೆ ಇತ್ತು. ನಾವು ಅಂಕಿ-ಸಂಖ್ಯೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ,
-ರಾಜೀವ್‌ ಚಂದ್ರಶೇಖರ್‌, ಬಿಜೆಪಿ ರಾಜ್ಯಾಧ್ಯಕ್ಷ