ಕೇರಳದಲ್ಲಿ ದೇವಸ್ಥಾನಕ್ಕೆ ಮುಡಿ ಕೊಟ್ಟಿದ್ದ ಕಾರಣ ಸಣ್ಣ ಕೂದಲಿತ್ತು ಎಂದು 12ನೇ ತರಗತಿ ವಿದ್ಯಾರ್ಥಿನಿಗೆ ಕೆಎಸ್‌ಆರ್‌ಟಿಸಿ ನಿರ್ವಾಹಕ ಉಚಿತ ಟಿಕೆಟ್ ನೀಡಲು ನಿರಾಕರಿಸಿದ್ದಾನೆ. ಆಕೆಯನ್ನು ಹುಡುಗನೆಂದು ತಪ್ಪಾಗಿ ಭಾವಿಸಿ ಅವಮಾನಿಸಿದ ಹಿನ್ನೆಲೆಯಲ್ಲಿ ನಿರ್ವಾಹಕನ ವಿರುದ್ಧ ಪ್ರಕರಣ ದಾಖಲಿಸಿ ಅಮಾನತುಗೊಳಿಸಲಾಗಿದೆ.
ಕೊಚ್ಚಿ: ‘ಸಣ್ಣ ಕೂದಲಿರುವ ಕಾರಣ ನೀನು ಹುಡುಗಿಯ ಹಾಗೆ ಕಾಣಿಸುತ್ತಿಲ್ಲ’ ಎಂದು ಹೇಳಿ, 12ನೇ ತರಗತಿಯ ವಿದ್ಯಾರ್ಥಿನಿಗೆ ಪ್ರಿಯದರ್ಶಿನಿ ಯೋಜನೆಯಡಿ ಸರ್ಕಾರಿ ಬಸ್‌ನಲ್ಲಿ ಉಚಿತ ಟಿಕೆಟ್ ನೀಡಲು ನಿರಾಕರಿಸಿದ ಘಟನೆ ಕೇರಳದಲ್ಲಿ ಶನಿವಾರ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಕೆಎಸ್‌ಆರ್‌ಟಿಸಿ ನಿರ್ವಾಹಕ ಮಹೇಶ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪ್ರಾಥಮಿಕ ತನಿಖೆ ಬಳಿಕ ಅಮಾನತುಗೊಳಿಸಲಾಗಿದೆ.
ದೇವಸ್ಥಾನವೊಂದರಲ್ಲಿ ಮುಡಿ ಕೊಟ್ಟಿದ್ದ ಕಾರಣ 12ನೇ ತರಗತಿಯ ವಿದ್ಯಾರ್ಥಿನಿಯ ತಲೆಗೂದಲು ಬಾಯ್‌ಕಟ್ ಮಾಡಿಸಿಕೊಂಡಂತಿತ್ತು. ಜತೆಗೆ ಆಕೆ ಟಿ-ಶರ್ಟ್ ಮತ್ತು ಜೀನ್ಸ್ ತೊಟ್ಟಿದ್ದಳು. ಇದನ್ನು ಕಂಡ ಕಂಡಕ್ಟರ್, ಹುಡುಗನೆಂದು ತಿಳಿದು ಟಿಕೆಟ್‌ಗೆ ದುಡ್ಡು ಕೊಡುವಂತೆ ಕೇಳಿದ್ದಾನೆ. ತಾನು ಹುಡುಗಿ ಎಂದು ಆಕೆ ಹೇಳಿದಾಗ, ‘ನೋಡಿದರೆ ಹಾಗೆ ಕಾಣಿಸುತ್ತಿಲ್ಲ’ ಎಂದು ಕೊಂಕಾಡಿದ್ದಾನೆ. ಬಳಿಕ ಅವಮಾನಿಸಿ ಬಸ್ಸಿನಿಂದ ಇಳಿಸಿದ್ದಾನೆ. ಇದರ ವಿರುದ್ಧ ವಿದ್ಯಾರ್ಥಿನಿ ದೂರು ನೀಡಿದ್ದಳು. ದೂರಿನ ಪರಿಣಾಮ ಅರಿತು ಇದರ ಬೆನ್ನಲ್ಲೇ ಮಹೇಶ್ ಕ್ಷಮೆ ಕೇಳಿದ್ದಾನೆ.
ದೇವರಿಗೆ ಮುಡಿ ಕೊಟ್ಟಿದ್ದ ಬಾಲಕಿ
ಪೊಲೀಸರ ಮಾಹಿತಿಯಂತೆ, ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 296 ಮತ್ತು 79 ರ ಅಡಿಯಲ್ಲಿ ಭಾನುವಾರ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಶನಿವಾರ ಬಾಲಕಿ ಮತ್ತು ಆಕೆಯ ಸ್ನೇಹಿತರು ಉತ್ತರ ಪರವೂರಿನಿಂದ ಕೊಚ್ಚಿಗೆ ಚಲಿಸುವ ಬಸ್ ಹತ್ತಿದಾಗ ಈ ಘಟನೆ ನಡೆದಿದೆ. ವಿದ್ಯಾರ್ಥಿನಿ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ತಲೆ ಬೋಳಿಸಿಕೊಂಡಿದ್ದು, ಟಿ-ಶರ್ಟ್ ಮತ್ತು ಜೀನ್ಸ್ ಧರಿಸಿದ್ದಳು.
ಕಂಡಕ್ಟರ್ ಆಕೆಯನ್ನು ಹುಡುಗನೆಂದು ತಪ್ಪಾಗಿ ಭಾವಿಸಿ 15 ರೂ. ಟಿಕೆಟ್ ನೀಡಿದ್ದಾನೆ. ವಿದ್ಯಾರ್ಥಿನಿ ಶೂನ್ಯ ಮೌಲ್ಯದ ಟಿಕೆಟ್ ಕೇಳಿದಾಗ, ಕಂಡಕ್ಟರ್ ಅವಮಾನಕರ ಹೇಳಿಕೆಗಳನ್ನು ನೀಡಿದ್ದಾನೆ ಮತ್ತು ಹುಡುಗಿ ಎಂದು ಹೇಗೆ ತಿಳಿಯುತ್ತದೆ ಎಂದು ಪ್ರಶ್ನಿಸಿದ್ದಾನೆ. ದೂರುದಾರೆ, ಕಂಡಕ್ಟರ್ ಮತ್ತು ಕೆಲವು ಪ್ರಯಾಣಿಕರಿಂದ ಹೇಳಿಕೆಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮಹೇಶ್, ವಿದ್ಯಾರ್ಥಿನಿ ಹುಡುಗ ಎಂದು ನಂಬಿದ್ದರಿಂದ ಆರಂಭದಲ್ಲಿ 15 ರೂ. ಟಿಕೆಟ್ ನೀಡಿದ್ದಾಗಿ ಹೇಳಿದರು. ಆಕೆ ತಾನು ಹುಡುಗಿ ಎಂದು ಸ್ಪಷ್ಟಪಡಿಸಿದ ನಂತರ ಅದನ್ನು ಶೂನ್ಯ ಮೌಲ್ಯದ ಟಿಕೆಟ್‌ನೊಂದಿಗೆ ಬದಲಾಯಿಸಿದೆ ಎಂದಿದ್ದಾನೆ.
"ನನಗೆ ಗೊತ್ತಾಗಲಿಲ್ಲ, ಏಕೆಂದರೆ ಅವಳನ್ನು ನೋಡಿದಾಗ ಅವಳು ಹುಡುಗ ಎಂದು ನನಗೆ ಅನಿಸಿತು. 'ಕ್ಷಮಿಸಿ' ಎಂದು ಹೇಳಿ, ನಾನು 15 ರೂ. ಟಿಕೆಟ್ ನೀಡಿದ್ದೇನೆ ಎಂದು ಅಮಾನತುಗೊಂಡ ಬಳಿಕ ಹೇಳಿಕೆ ನೀಡಿದ್ದಾನೆ.
ಹತ್ತಿರದಲ್ಲಿ ಕುಳಿತಿದ್ದ ಮಹಿಳಾ ಪ್ರಯಾಣಿಕರೊಬ್ಬರು ಆರಂಭದಲ್ಲಿ ವಿದ್ಯಾರ್ಥಿಯನ್ನು ಹುಡುಗ ಎಂದು ತಪ್ಪಾಗಿ ಭಾವಿಸಿದ್ದರು. ಹುಡುಗಿಯ ವಿರುದ್ಧ ಯಾವುದೇ ನಿಂದನೀಯ ಭಾಷೆಯನ್ನು ಬಳಸಿಲ್ಲ ಎಂದು ಕೆಲವು ಪ್ರಯಾಣಿಕರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ತನಿಖೆ ಪ್ರಗತಿಯಲ್ಲಿದೆ . ಪ್ರಕರಣದಲ್ಲಿ ತಾನು ನಿರಪರಾಧಿ ಎಂದು ಸಾಬೀತುಪಡಿಸಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸವಿದೆ ಎಂದು ಮಹೇಶ್ ಹೇಳಿದರು.


