ಮುಂಬೈ ಮೆಟ್ರೋ ನಿಲ್ದಾಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ವಿಶ್ವದಲ್ಲೇ ಮೊದಲ ಬಾರಿಗೆ ಉಗುಳಲೆಂದೇ ಪ್ರತ್ಯೇಕ ಸ್ಥಳವನ್ನು ನಿರ್ಮಿಸಲಾಗಿದೆ. ಮತ್ತೊಂದೆಡೆ, ಡಬ್ಲ್ಯುಎಚ್‌ಒ ವರದಿಯ ಪ್ರಕಾರ ಭಾರತದ 5 ಕೋಟಿ ಶಾಲಾ ಮಕ್ಕಳಿಗೆ ನೈರ್ಮಲ್ಯ ಸೌಲಭ್ಯಗಳಿಲ್ಲದಿದ್ದರೂ, ಕುಡಿಯುವ ನೀರಿನ ಲಭ್ಯತೆಯಲ್ಲಿ ದೇಶವು ಉತ್ತಮ ಸಾಧನೆ ಮಾಡಿದೆ.
ಮುಂಬೈ: ಸಾರ್ವಜನಿಕ ಸ್ಥಳಗಳಲ್ಲಿ ನೈರ್ಮಲ್ಯದ ಕೊಂಚವೂ ಅರಿವಿಲ್ಲದೆ ಕಂಡ ಕಂಡಲ್ಲಿ ಉಗುಳುವವರಿಂದ ಬಚಾವಾಗಲು ಮುಂಬೈ ಮೆಟ್ರೋ ವಿನೂತನ ಕಲ್ಪನೆ ಜಾರಿಗೆ ತಂದಿದೆ. ಇದೇ ಮೊದಲ ಬಾರಿಗೆ ಮುಂಬೈ ಮೆಟ್ರೋ ನಿಲ್ದಾಣದಲ್ಲಿ ಉಗುಳಲೆಂದೇ ಪ್ರತ್ಯೇಕ ಸ್ಥಳ ನಿಗದಿ ಮಾಡಲಾಗಿದೆ. ಈ ಸ್ಥಳದಲ್ಲಿ ವಾಷ್‌ಬೇಸಿನ್ ಅಳವಡಿಸಲಾಗಿದ್ದು, ಅದನ್ನು ಬಳಸಿಕೊಂಡು ಪ್ರಯಾಣಿಕರು ಉಗುಳಬಹುದಾಗಿದೆ. ಅದರ ಮೇಲಿನ ಫಲಕದಲ್ಲಿ , ‘ಉಗುಳಲು ವಿಶ್ವದ ಮೊದಲ ನಿರ್ದಿಷ್ಟ ಸ್ಥಳ’ ಎಂದು ಬರೆಯಲಾಗಿದೆ.
ಇದು ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ತರೇವಾರಿ ಕಾಮೆಂಟ್ ಮಾಡಿದ್ದಾರೆ. ‘ಭಾರತದಲ್ಲಿ ಆಧುನಿಕ ಸಮಸ್ಯೆಗಳಿವೆ, ಆದ್ದರಿಂದ ಉಗುಳಲು ಮೊದಲು ವ್ಯಾಖ್ಯಾನಿಸಲಾದ ಸ್ಥಳ. ತಿಂಗಳ ನಂತರ ಕಸದ ತೊಟ್ಟಿಯ ಸುತ್ತಲೂ ಉಗುಳಿರುವುದು ಕಂಡುಬಂದರೆ ನನಗೆ ಆಶ್ಚರ್ಯವಾಗುವುದಿಲ್ಲ’ ಎಂದೆಲ್ಲ ಪ್ರತಿಕ್ರಿಯಿಸಿದ್ದಾರೆ.
ದೇಶದ 5 ಕೋಟಿ ಮಕ್ಳಿಗೆ ಶಾಲೆಗಳಲ್ಲಿ ನೈರ್ಮಲ್ಯ ಸೌಲಭ್ಯ ಇಲ್ಲ: ಡಬ್ಲ್ಯುಎಚ್‌ಒ
ನವದೆಹಲಿ: ಭಾರತದ 5 ಕೋಟಿ ಮಕ್ಕಳಿಗೆ ಶಾಲೆಗಳಲ್ಲಿ ನೈರ್ಮಲ್ಯದ ಸೌಲಭ್ಯಗಳು ಸಿಗುತ್ತಿಲ್ಲ ಎಂಬ ಕಳವಳಕಾರಿ ವಿಷಯವನ್ನು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್‌ನ ಜಂಟಿ ಮೇಲ್ವಿಚಾರಣಾ ಕಾರ್ಯಕ್ರಮದ (ಜೆಎಂಪಿ) ವರದಿಯಲ್ಲಿ ತಿಳಿಸಲಾಗಿದೆ.
‘ಶಾಲೆಗಳಲ್ಲಿ ಕುಡಿಯುವ ನೀರು, ನೈರ್ಮಲ್ಯ ಮತ್ತು ಸ್ವಚ್ಛತೆಯ ವಿಷಯದಲ್ಲಿ ಪ್ರಗತಿ 2015-2025’ ಎಂಬ ವರದಿಯ ಪ್ರಕಾರ, 2025ರಲ್ಲಿ ಜಗತ್ತಿನಾದ್ಯಂತ ಒಟ್ಟು 24.4 ಕೋಟಿ ಮಕ್ಕಳಿಗೆ ತಮ್ಮ ಶಾಲೆಗಳಲ್ಲಿ ನೈರ್ಮಲ್ಯ ವ್ಯವಸ್ಥೆಗಳು ಸಿಗುತ್ತಿಲ್ಲ. ಇವರ ಪೈಕಿ ಐದನೇ ಒಂದು ಭಾಗದಷ್ಟು ಭಾರತೀಯರೇ ಇದ್ದಾರೆ. ಆದರೆ ಇದೇ ವೇಳೆ, ಮೂಲಭೂತ ನೈರ್ಮಲ್ಯ ಸೌಲಭ್ಯಗಳಿಲ್ಲದ ಶಾಲೆಗಳ ಸಂಖ್ಯೆ ಭಾರತದಲ್ಲಿ ಶೇ.14ರಷ್ಟು ಕಡಿಮೆಯಾಗಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.
ನೀರಿನ ಸೌಲಭ್ಯ ಒದಗಿಸುವ ಗುರಿ
ಅತ್ತ ಕುಡಿಯುವ ನೀರಿನ ಲಭ್ಯತೆಯ ವಿಷಯದಲ್ಲಿ ಭಾರತವು ತುಲನಾತ್ಮಕವಾಗಿ ಉತ್ತಮ ಸಾಧನೆ ಮಾಡಿದೆ. 2025ರಲ್ಲಿ, ಭಾರತದ ಸುಮಾರು 1.2 ಕೋಟಿ ಮಕ್ಕಳಿಗೆ ಶಾಲೆಯಲ್ಲಿ ಕುಡಿಯುವ ನೀರಿನ ಸೌಲಭ್ಯವಿರಲಿಲ್ಲ. ಜಾಗತಿಕವಾಗಿ ಇಂತಹ 20 ಮಕ್ಕಳ ಪೈಕಿ ಒಬ್ಬರು ಭಾರತದವರಾಗಿದ್ದರು. 2030ರ ವೇಳೆಗೆ ನೀರಿನ ಸೌಲಭ್ಯ ಒದಗಿಸುವ ಗುರಿ ಸಾಧಿಸುವ ಹಾದಿಯಲ್ಲಿರುವ 62 ದೇಶಗಳ ಪೈಕಿ ಭಾರತವೂ ಒಂದಾಗಿದೆ ಎಂದು ತಿಳಿಸಿದೆ.


