Asianet Suvarna News Asianet Suvarna News

ಏಕರೂಪ ವಿವಾಹ ಸಂಹಿತೆಗೆ ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್‌ ಸಲಹೆ

ಏಕರೂಪ ವಿವಾಹ ಸಂಹಿತೆಗೆ  ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಕೇರಳ ಹೈಕೋರ್ಟ್‌ ಸಲಹೆ ನೀಡಿದೆ. ಧರ್ಮ ಆಧಾರದಲ್ಲಿ ಕಾನೂನು ಬೇಡ, ಸಮಾನ ಹಿತಾಸಕ್ತಿ ಕಾಯುವ ಕಾನೂನು ಅವಶ್ಯ ಎಂದು ಕ್ರೈಸ್ತ ದಂಪತಿ ವಿಚ್ಛೇದನ ಕೇಸಲ್ಲಿ ಮಹತ್ವದ ಅಭಿಪ್ರಾಯ ನೀಡಿದೆ. ಹಾಗೂ, ಕ್ರೈಸ್ತರ ವಿಚ್ಛೇದನದ 1 ವರ್ಷ ಕಾಯವಿಕೆ ಅವಧಿ ರದ್ದು ಮಾಡಿದೆ. 

kerala high court urges central government to frame uniform marriage code applicable to all communities ash
Author
First Published Dec 11, 2022, 9:04 AM IST

ಕೊಚ್ಚಿ: ಏಕರೂಪ ನಾಗರಿಕ ಸಂಹಿತೆ (Uniform Civil Code) ಜಾರಿಗೆ ದೇಶಾದ್ಯಂತ ಚರ್ಚೆ ನಡೆದಿರುವ ನಡುವೆಯೇ ಏಕರೂಪ ನಾಗರಿಕ ಸಂಹಿತೆಯ ಭಾಗಗಳ ಪೈಕಿ ಒಂದಾದ ‘ಏಕರೂಪ ವಿವಾಹ ಸಂಹಿತೆ’ (Uniform Marriage Code) ಜಾರಿಗೊಳಿಸುವಂತೆ ಸ್ವತಃ ಕೇರಳ ಹೈಕೋರ್ಟ್‌ (Kerala High Court) ಕೇಂದ್ರ ಸರ್ಕಾರಕ್ಕೆ (Central Government) ಸಲಹೆ ನೀಡಿದೆ.
‘ಪ್ರಸಕ್ತ ಜಾರಿಯಲ್ಲಿರುವ ವೈವಾಹಿಕ ಕಾಯ್ದೆಗಳು, ಜನರನ್ನು ಧರ್ಮದ (Religion) ಆಧಾರದಲ್ಲಿ ಪ್ರತ್ಯೇಕಿಸುತ್ತವೆ. ಜಾತ್ಯತೀತ ದೇಶವೊಂದರಲ್ಲಿ ಕಾನೂನು ಜಾರಿಯು ಎಲ್ಲರ ಸಮಾನ ಹಿತಾಸಕ್ತಿ ಕಾಯುವಂತಿರಬೇಕೇ ವಿನಃ ಧರ್ಮ ಆಧಾರದಲ್ಲಿ ಅಲ್ಲ. ಹೀಗಾಗಿ ಹಾಲಿ ಇರುವ ನಿಯಮಗಳನ್ನು ಬದಲಿಸಿ, ಎಲ್ಲರಿಗೂ ಅನ್ವಯವಾಗುವ ಕಾನೂನು ಬೇಕು. ಏಕರೂಪ ವೇದಿಕೆ ಜಾರಿಗೆ ಸಮಯ ಸನ್ನಿಹಿತವಾಗಿದೆ’ ಎಂದು ಮಹತ್ವದ ಅಭಿಪ್ರಾಯ ಪಟ್ಟಿದೆ.

ಕ್ರೈಸ್ತ ದಂಪತಿಯ ವಿಚ್ಛೇದನ (Christian Couple Divorce) ಪ್ರಕರಣದಲ್ಲಿ 1 ವರ್ಷ ಕಾಯುವಿಕೆ ಅವಧಿಯನ್ನು ರದ್ದುಗೊಳಿಸಿ ಆದೇಶ ನೀಡುವ ವೇಳೆ ನ್ಯಾಯಮೂರ್ತಿ ಮೊಹಮ್ಮದ್‌ ಮುಷ್ತಾಕ್‌ ಮತ್ತು ನ್ಯಾಯಮೂರ್ತಿ ಶೋಭಾ ಅನ್ನಮ್ಮ ಎಪೆನ್‌ ಅವರನ್ನೊಳಗೊಂಡ ಪೀಠ ಸಾಕಷ್ಟು ದೂರಗಾಮಿ ಪರಿಣಾಮಗಳನ್ನು ಒಳಗೊಂಡಿರುವ ಈ ಸಲಹೆಗಳನ್ನು ನೀಡಿದೆ.

ಇದನ್ನು ಓದಿ: ನಾಲ್ವರು ಹುಡುಗಿಯರ ಮದುವೆ ಆಗುವುದು ಅಸ್ವಾಭಾವಿಕ: ನಿತಿನ್‌ ಗಡ್ಕರಿ

ಪ್ರಕರಣ ಹಿನ್ನೆಲೆ:
ಕ್ರೈಸ್ತ ಜೋಡಿಯೊಂದು 2022ರ ಜನವರಿಯಲ್ಲಿ ವಿವಾಹವಾಗಿತ್ತು (Marriage). ಆದರೆ ವಿವಾಹವಾದ 4 ತಿಂಗಳಲ್ಲೇ ದಿನಗಳಲ್ಲಿ ತಮ್ಮ ನಿರ್ಧಾರ ತಪ್ಪಾಗಿತ್ತು ಎಂದು ಇಬ್ಬರಿಗೂ ಅನಿಸಿ, ಇಬ್ಬರು ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಅದರೆ ಕ್ರೈಸ್ತರ ವಿಚ್ಛೇದನ ಕಾಯ್ದೆ 1869ರ ಸೆಕ್ಷನ್‌ 10ಎ ಅನ್ವಯ, ವಿಚ್ಛೇದನ ನೀಡಬೇಕಾದರೆ ದಂಪತಿ ಪರಸ್ಪರ ಸಮ್ಮತಿಯ ಮೂಲಕ 1 ವರ್ಷ ದೂರವಿರಬೇಕು ಎಂಬ ಅಂಶವಿದೆ. ಇದೇ ಕಾರಣ ನೀಡಿ ಕೌಟುಂಬಿಕ ನ್ಯಾಯಾಲಯವು ಇವರ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ನಿರಾಕರಿಸಿತ್ತು. ಹೀಗಾಗಿ ವಿಚ್ಛೇದನಕ್ಕೆ ಅಡ್ಡಿಯಾಗಿರುವ ವಿಚ್ಛೇದನ ಕಾಯ್ದೆ 1869ರ ಸೆಕ್ಷನ್‌ 10ಎ ಅನ್ನು ರದ್ದು ಮಾಡಬೇಕೆಂದು ದಂಪತಿ ಕೋರಿ ಕೇರಳ ಹೈಕೋರ್ಟ್‌ ಮೊರೆ ಹೋಗಿದ್ದರು.

ಈ ಅರ್ಜಿಯ ಕುರಿತು ಶುಕ್ರವಾರ ತೀರ್ಪು ನೀಡಿರುವ ನ್ಯಾಯಾಲಯ ‘ದುಡುಕಿನ ನಿರ್ಧಾರಗಳಿಂದ ದಂಪತಿಗೆ ರಕ್ಷಣೆ ನೀಡುವ ಸಲುವಾಗಿ ಸೆಕ್ಷನ್‌ 10ಎ ಅನ್ನು ರೂಪಿಸಲಾಗಿದೆ. ಭಾರತೀಯ ಸಮಾಜದಲ್ಲಿ ವಿವಾಹವನ್ನು ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧ ಬೆಸುಗೆ ಮಾತ್ರವಲ್ಲದೇ, ಒಂದು ಶಕ್ತಿಶಾಲಿ ಕುಟುಂಬ ಮತ್ತು ಸಮಾಜದ ನಿರ್ಮಾಣಕ್ಕೆ ಅಡಿಗಲ್ಲು ಹಾಕುವ ಪ್ರಕ್ರಿಯೆ ಎಂದು ಕೂಡಾ ಪರಿಗಣಿಸಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ 1 ವರ್ಷದ ಕಾಯುವಿಕೆಯ ಅವಧಿಯೇ ದಂಪತಿಗೆ ಸಾಕಷ್ಟು ತೊಂದರೆ ನೀಡುತ್ತಿದೆ ಎಂದಾದಲ್ಲಿ, ಇಬ್ಬರೂ ನಾಲ್ಕು ಗೋಡೆಯ ನಡುವೆ ಸಂಕಟ ಅನುಭವಿಸಬೇಕೆಂದು ಕಾನೂನು ಸೂಚಿಸಲು ಆಗುತ್ತದೆಯೇ?’ ಎಂದು ನ್ಯಾಯಪೀಠ ಪ್ರಶ್ನಿಸಿತು.

ಇದನ್ನೂ ಓದಿ: ಸಂಸತ್ತಲ್ಲೂ ಈಗ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಚರ್ಚೆ: ಖಾಸಗಿ ಮಸೂದೆ ಮಂಡಿಸಿದ ಬಿಜೆಪಿಗ

ಜೊತೆಗೆ ಈ ಹಿಂದೆ ಇಂಥದ್ದೇ ಪ್ರಕರಣದಲ್ಲಿ ಕಾಯುವಿಕೆಯ ಅವಧಿಯನ್ನು 2 ರಿಂದ 1 ವರ್ಷಕ್ಕೆ ಇಳಿಸುವ ಮೂಲಕ ಹಿಂದೂ, ಪಾರ್ಸಿ ಮತ್ತು ವಿಶೇಷ ವಿವಾಹ ಕಾಯ್ದೆಗಳಿಗೆ ಸಮನಾಗಿಸಿ ತಾನೇ ನೀಡಿದ ಆದೇಶವನ್ನೂ ಪ್ರಸ್ತಾಪಿಸಿದ ನ್ಯಾಯಾಲಯ, ‘1869ನೇ ಕಾಯ್ದೆಯ ಅಂಶಗಳನ್ನು ಮುಂದಿಟ್ಟು ದಂಪತಿ ಒಂದು ವರ್ಷ ಕಾಯುವಿಕೆ ಅವಧಿ ಪೂರೈಸಿಲ್ಲ ಎಂದು ವಿಚ್ಛೇದನದ ಅವಕಾಶ ನಿರಾಕರಿಸುವುದು ಸಾಂವಿಧಾನಿಕವಾಗಿ ಮಾನ್ಯವಾಗದು. ವೈವಾಹಿಕ ವಿವಾದಗಳ ವೇಳೆ ಕಾನೂನುಗಳು ನ್ಯಾಯಾಲಯದ ಮಧ್ಯಸ್ಥಿಕೆಯಲ್ಲಿ ತಮ್ಮ ನಡುವಿನ ಸಮಸ್ಯೆಯನ್ನು ಬಗೆಹರಿಸಲು ನೆರವು ನೀಡಬೇಕು. ಪರಿಹಾರ ಸಾಧ್ಯವಿಲ್ಲ ಎಂದಾದಲ್ಲಿ, ಅರ್ಜಿದಾರರಿಗೆ ಯಾವುದು ಉತ್ತಮ ಎಂದು ನಿರ್ಧರಿಸುವ ಅವಕಾಶವನ್ನು ಕಾನೂನು ನ್ಯಾಯಾಲಯಗಳಿಗೆ ಬಿಡಬೇಕು.

ಹೀಗಾಗಿ ಕ್ರೈಸ್ತ ಜೋಡಿಗಳು ವಿಚ್ಛೇದನ ಪಡೆಯಲು 1 ವರ್ಷ ಕಾಯುವಿಕೆ ಅವಧಿ ಪೂರೈಸಿರಬೇಕು ಎಂಬ ಕಾಯ್ದೆ ಅಸಾಂವಿಧಾನಿಕ ಎನ್ನುವ ಕಾರಣಕ್ಕೆ ನಾವು ರದ್ದುಪಡಿಸುತ್ತಿದ್ದೇವೆ. ಏಕೆಂದರೆ ಇದು ಅರ್ಜಿದಾರರ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ’ ಎಂದು ಹೇಳಿತು. ಜೊತೆಗೆ ಕೌಟುಂಬಿಕ ನ್ಯಾಯಾಲಯವು ಅರ್ಜಿದಾರರ ಮತ್ತಷ್ಟು ಹಾಜರಿಯನ್ನು ಬಯಸದೇ ಆವರಿಗೆ ಶೀಘ್ರ ವಿಚ್ಛೇದನ ನೀಡಬೇಕು ಎಂದು ಆದೇಶಿಸಿತು.

ಇದನ್ನೂ ಓದಿ: ಸಾಧ್ಯವಾದಷ್ಟು ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ: ಬಿಜೆಪಿ ಅಧ್ಯಕ್ಷ ನಡ್ಡಾ ಘೋಷಣೆ

ಜೊತೆಗೆ ವೈವಾಹಿಕ ವಿವಾದಗಳ ವಿಷಯದಲ್ಲಿ ಎಲ್ಲರ ಸಮಾನ ಹಿತಾಸಕ್ತಿ ಕಾಪಾಡಲು ಮತ್ತು ಸಂಗಾತಿಗಳ ಒಳಿತಿಗಾಗಿ ಏಕರೂಪ ವಿವಾಹ ಕಾಯ್ದೆ ಜಾರಿ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಪ್ರಯತ್ನಿಸಬೇಕು ಎಂದು ಸಲಹೆ ನೀಡಿತು.

Follow Us:
Download App:
  • android
  • ios