ಇತ್ತೀಚೆಗೆ ಎಸ್‌ಎಫ್‌ಐ ಕಾರ‍್ಯಕರ್ತರ ದಾಂಧಲೆ ಹಿನ್ನೆಲೆ ಕೇರಳದ ಎಲ್ಲ ಏಷ್ಯಾನೆಟ್‌ ಕಚೇರಿಗಳಿಗೆ ರಕ್ಷಣೆ ನೀಡಲು ಕೇರಳ ಹೈಕೋರ್ಟ್‌ ಸೂಚನೆ ನೀಡಿದೆ. ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸ್‌ ಕಾವಲಿಗೆ ತಾಕೀತು ನೀಡಿದ್ದಾರೆ. 

ಕೊಚ್ಚಿ (ಮಾರ್ಚ್‌ 9, 2023): ಮಲಯಾಳಂನ ಪ್ರಮುಖ ಸುದ್ದಿ ವಾಹಿನಿ ‘ಏಷ್ಯಾನೆಟ್‌’ ಕಚೇರಿಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಕೇರಳ ಹೈಕೋರ್ಟ್‌ ಬುಧವಾರ ಪೊಲೀಸರಿಗೆ ನಿರ್ದೇಶನ ನೀಡಿದೆ. ಎಡ ವಿದ್ಯಾರ್ಥಿ ಸಂಘಟನೆಯಾದ ಎಸ್‌ಎಫ್‌ಐ ಮತ್ತು ಸಿಪಿಎಂ ಯುವ ಘಟಕ ಡಿವೈಎಫ್‌ಐನಿಂದ ಮುಂದೆಯೂ ಹಿಂಸೆ ಹಾಗೂ ಬೆದರಿಕೆಯ ಆತಂಕ ಇದೆ. ಹೀಗಾಗಿ ರಕ್ಷಣೆ ನೀಡಬೇಕು ಎಂದು ಏಷ್ಯಾನೆಟ್‌, ಹೈಕೋರ್ಚ್‌ ಮೊರೆ ಹೋಗಿತ್ತು. ಇದನ್ನು ಪರಿಗಣಿಸಿದ ನ್ಯಾಯಮೂರ್ತಿ ಎನ್‌. ನಗರೇಶ್‌ ಅವರು, ‘ವಾಹಿನಿಯ ತಿರುವನಂತಪುರಂ, ಕೊಚ್ಚಿ, ಕಲ್ಲಿಕೋಟೆ ಮತ್ತು ಕಣ್ಣೂರು ಕಚೇರಿಗಳಿಗೆ ರಕ್ಷಣೆ ನೀಡಬೇಕು. ಘರ್ಷಣೆ ಅಥವಾ ಹಿಂಸಾಚಾರದ ಸಂಭವವಿದ್ದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಬೇಕು’ ಎಂದು ಆದೇಶಿಸಿದರು.

ಮಾರ್ಚ್ 3 ರಂದು ಸುಮಾರು 30 ಎಸ್‌ಎಫ್‌ಐ ಕಾರ್ಯಕರ್ತರು (SFI Activists) ಕೊಚ್ಚಿಯ (Kochi) ಕಚೇರಿಗೆ ಬಲವಂತವಾಗಿ ಅತಿಕ್ರಮಣ ಮಾಡಿದರು ಹಾಗೂ ಸಿಬ್ಬಂದಿಯನ್ನು ಬೆದರಿಸುವ ಯತ್ನ ಮಾಡಿದರು. ದುಷ್ಕರ್ಮಿಗಳು ಅಲ್ಲಿ ಕೆಲಸಕ್ಕೆ ಅಡ್ಡಿಪಡಿಸಿ 1 ಗಂಟೆಗಳ ಕಾಲ ಕೆಲಸ ನಿಲ್ಲಿಸಿದರು ಮತ್ತು ಸುಮಾರು ಒಂದು ಗಂಟೆಗಳ ಕಾಲ ಸಿಬ್ಬಂದಿಯನ್ನು ಬಂಧನದಲ್ಲಿರಿಸಿದ್ದರು’ ಎಂದು ಚಾನೆಲ್‌ ಹೈಕೋರ್ಟ್‌ ಮೊರೆ ಹೋಗಿತ್ತು.

ಇದನ್ನು ಓದಿ: ಏಷ್ಯಾನಟ್ ನ್ಯೂಸ್ ಕಚೇರಿ ದಾಳಿಗೆ ಪೊಲೀಸರ ಮೇಲಿತ್ತು ಕೇರಳ ಸರಕಾರದ ತೀವ್ರ ಒತ್ತಡ

8ನೇ ಪ್ರತಿವಾದಿ (ಡಿವೈಎಫ್‌ಐ) (DYFI) ಸಾರ್ವಜನಿಕ ವೇದಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ, ‘ಸುದ್ದಿ ವಾಹಿನಿಯ ವಿರುದ್ಧ ಕೇರಳದಾದ್ಯಂತ (Kerala) ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ. ಮಾಧ್ಯಮ ಕಚೇರಿಗೆ ನುಗ್ಗುವುದು ಕಾನೂನುಬಾಹಿರ ಮತ್ತು ಪತ್ರಿಕಾ ಸ್ವಾತಂತ್ರ್ಯದ (Freedom of Press) ಮೇಲಿನ ದಾಳಿಯಾಗಿದೆ. ಪತ್ರಿಕೆಗಳ ಮೂಲಕ ಮಾಹಿತಿ ಪಡೆಯುವ ಮೂಲಭೂತ ಹಕ್ಕು ಅಪಾಯದಲ್ಲಿದೆ’ ಎಂದು ಚಾನೆಲ್‌ ಹೇಳಿತ್ತು.

ಅಪ್ರಾಪ್ತೆಯ ನಕಲಿ ವಿಡಿಯೋವನ್ನು ಚಾನೆಲ್‌ ಪ್ರಸಾರ ಮಾಡಿದೆ ಎಂದು ಆರೋಪಿಸಿ ಎಸ್‌ಎಫ್‌ಐ ಕಾರ್ಯಕರ್ತರು ಏಷ್ಯಾನೆಟ್‌ ಕಚೇರಿಗೆ ನುಗ್ಗಿದ್ದರು. ಬಳಿಕ 8 ಮಂದಿಯನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.

ಇದನ್ನೂ ಓದಿ: ಸುಳ್ಳು ಕೇಸ್: ಕೇರಳದ ಕೋಳಿಕ್ಕೋಡ್ ಏಷ್ಯಾನೆಟ್ ಕಚೇರಿ ಮೇಲೆ ಪೊಲೀಸರ ದಾಳಿ