ಕೇರಳದಲ್ಲಿ ಡ್ರಗ್ ಮಾಫಿಯಾ ಬಗ್ಗೆ ವರದಿ ಮಾಡಿದ ಏಷ್ಯಾನೆಟ್ ಮಲೆಯಾಳಂ  ನ್ಯೂಸ್ ಚಾನೆಲ್ ಮೇಲೆ ಇಂದು ಕೇರಳ ಪೊಲೀಸರು ದಾಳಿ ನಡೆಸಿದ್ದಾರೆ.

ಕೊಚ್ಚಿ/ತಿರುವನಂತಪುರ: ಕೇರಳದಲ್ಲಿ ಡ್ರಗ್ ಮಾಫಿಯಾ ಬಗ್ಗೆ ವರದಿ ಮಾಡಿದ ಏಷ್ಯಾನೆಟ್ ಮಲೆಯಾಳಂ ನ್ಯೂಸ್ ಚಾನೆಲ್ ಮೇಲೆ ಇಂದು ಕೇರಳ ಪೊಲೀಸರು ಸರ್ಚ್ ವಾರೆಂಟ್ ಇಲ್ಲದೇ ದಾಳಿ ನಡೆಸಿದ್ದಾರೆ. ಬಾಲಕಿಯೊಬ್ಬಳನ್ನು ಎಸ್‌ಎಫ್‌ಐ ಕಾರ್ಯಕರ್ತ ಡ್ರಗ್ ನೀಡಿ, ಲೈಂಗಿಕ ದೌರ್ಜನ್ಯ ನೀಡಿರುವ ಸುದ್ದಿ ಪ್ರಸಾರ ಮಾಡಿದ್ದನ್ನೂ ವಿರೋಧಿಸಿ, ಏಷ್ಯಾನೆಟ್ ನ್ಯೂಸ್ ಕಚೇರಿ ಮೇಲೆ ವಿರೋಧಿಸಿ ಸಿಪಿಎಂನ ವಿದ್ಯಾರ್ಥಿ ಘಟಕವಾದ ಎಸ್‌ಎಫ್‌ಐನ ಕಾರ್ಯಕರ್ತರು ಕೊಚ್ಚಿಯಲ್ಲಿರುವ ಏಷ್ಯಾನೆಟ್ ಕಚೇರಿಗೆ ಏಕಾಏಕಿ ನುಗ್ಗಿ ದಾಂಧಲೆ ನಡೆಸಿದ್ದರು. ಇದಾದ ಬಳಿಕ ಇಂದು ಶಾಸಕ ಪಿವಿ ಅನ್ವರ್ ಅವರು ನೀಡಿದ ಸುಳ್ಳು ದೂರಿನ ಹಿನ್ನೆಲೆಯಲ್ಲಿ ಏಷ್ಯಾನೆಟ್ ಕಚೇರಿಯಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಸರ್ಚ್ ವಾರೆಂಟ್ ಇಲ್ಲದೇ ದಾಳಿ ನಡೆಸಿದ್ದಾರೆ. ಡ್ರಗ್ ಪ್ರಕರಣ ಹಾಗೂ ಆ ಸುದ್ದಿಯನ್ನು ಪ್ರಸಾರ ಮಾಡಿದ ಏಷ್ಯಾನೆಟ್ ನ್ಯೂಸ್ ಬಾಲಕಿಯ ಐಡೆಂಟಿಟಿ ರಿವೀಲ್ ಮಾಡಿದೆ, ಎಂದು ಇದೀಗ ಆರೋಪಿಸಲಾಗುತ್ತಿದೆ. 

ಕೋಳಿಕ್ಕೋಡ್ ಏಷ್ಯಾನೆಟ್ ನ್ಯೂಸ್ ಪ್ರಾದೇಶಿಕ ಕಚೇರಿಯಲ್ಲಿ ಕೇರಳ ಪೊಲೀಸರು ಶೋಧ ನಡೆಸಿದ್ದಾರೆ. ಕಾಂಗ್ರೆಸ್ ಶಾಸಕ ಅನ್ವರ್ ಎಂಬುವವರು ನೀಡಿದ ದೂರಿನ ಮೇರೆಗೆ ಕೋಜಿಕೋಡ್ನ ವೆಲ್ಲಾಯಿಲ್ ಪೊಲೀಸರು ಏಷ್ಯಾನೆಟ್ ಕಚೇರಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸಹಾಯಕ ಕಮೀಷನರ್ ವಿ.ಸುರೇಶ್ ನೇತೃತ್ವದಲ್ಲಿ ಈ ಶೋಧ ನಡೆದಿದೆ. ಪೊಲೀಸರ ತನಿಖೆಗೆ ಸಹಕರಿಸುವುದಾಗಿ ಏಷ್ಯಾನೆಟ್ ನ್ಯೂಸ್ ಪ್ರಾದೇಶಿಕ ಮುಖ್ಯಸ್ಥ ಶಜಾಹಾನ್ ಪಿ ಹೇಳಿದ್ದಾರೆ. ವೆಲ್ಲಾಯಿಲ್ ಸಿಐ ಬಾಬುರಾಜ್, ನಡಕ್ಕವ್ ಸಿಐ ಜಿಜೀಶ್‌, ನಗರ ಎಸ್‌ಐ ಗಿಬಿನ್, ಎಎಸ್‌ಐ ದೀಪಕುಮಾರ್, ಸಿಪಿಒ ದೀಪು ಪಿ, ಅನೀಶ್, ಸಜೀತಾ ಸೈಬರ್ ಸೆಲ್ ಕಚೇರಿಯ ಬಿಜಿತ್ ಎಲ್‌.ಎ, ತಹಸೀಲ್ದಾರ್ ಸಿ ಶ್ರೀಕುಮಾರ್, ಪುತ್ತಯಂಗಡಿ ಗ್ರಾಮಾಧಿಕಾರಿ ಎಂ. ಸಜ್ಜನ್ ಈ ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದರು. 

ಏಷಿಯಾನೆಟ್ ನ್ಯೂಸ್‌ನ ಕೋಳಿಕ್ಕೋಡ್ ಕಚೇರಿ ಮೇಲೆ ಶುಕ್ರವಾರ ಸಂಜೆ ಎಸ್‌ಎಫ್‌ಐ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ದಾಳಿ ನಡೆಸಿದ್ದರು. ಕಚೇರಿಗೆ ನುಗ್ಗಿದ ಎಸ್‌ಎಫ್‌ಐ ಕಾರ್ಯಕರ್ತರು, ಕಚೇರಿಯೊಳಗೆ ಘೋಷಣೆಗಳನ್ನು ಕೂಗಿ ಸಿಬ್ಬಂದಿಯನ್ನು ಬೆದರಿಸಿದ್ದಾರೆ. ಅಲ್ಲದೇ ಅವಮಾನಕರ ಸಂದೇಶಗಳಿರುವ ಬ್ಯಾನರ್‌ಗಳನ್ನು ಪ್ರದರ್ಶಿಸಿದ್ದಾರೆ. ಕೂಡಲೇ ಈ ವಿಚಾರ ತಿಳಿದ ಪಲರಿವಟ್ಟಂ ಪೊಲೀಸರು (Palarivattom police) ಏಷ್ಯಾನೆಟ್ ಕಚೇರಿಗೆ ಬಂದು ಕಾರ್ಯಕರ್ತರನ್ನು ಹೊರಗೆಳೆದು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರೆಸ್‌ಕ್ಲಬ್ ಆಫ್ ಇಂಡಿಯಾ ಈ ಘಟನೆಯನ್ನು ತೀವ್ರವಾಗಿ ಖಂಡಿಸಿತ್ತು. ಈ ಕುರಿತಾಗಿ ಕೇರಳ ಸರ್ಕಾರ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿತ್ತು. ಅಲ್ಲದೇ ರಾಜ್ಯದಲ್ಲಿ ಸುದ್ದಿ ವಾಹಿನಿ ಕಚೇರಿ ಮೇಲೆ ದಾಳಿ ನಡೆಸಿರುವುದನ್ನು ಖಂಡಿಸಿ ಪತ್ರಕರ್ತರು ಕೂಡ ಪ್ರತಿಭಟನೆ ನಡೆಸುತ್ತಿದ್ದಾರೆ. 

ಏಷ್ಯಾನೆಟ್ ಕಚೇರಿ ಮೇಲೆ ಎಸ್‌ಎಫ್‌ಐ ದಾಳಿಗೆ ಸಂಬಂಧಿಸಿದಂತೆ ಸಿಪಿಎಂನ ವಿದ್ಯಾರ್ಥಿ ಘಟಕ ಎಸ್‌ಎಫ್‌ಐನ 30 ಕಾರ‍್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಶುಕ್ರವಾರ ಸಾಯಂಕಾಲ 8 ಗಂಟೆಯ ಸುಮಾರಿಗೆ ಕಚೇರಿಗೆ ಅಕ್ರಮವಾಗಿ ನುಗ್ಗಿದ ಎಸ್‌ಎಫ್‌ಐ ಕಾರ್ಯಕರ್ತರು, ಭದ್ರತಾ ಸಿಬ್ಬಂದಿ ಮತ್ತು ಏಷ್ಯಾನೆಟ್ ಸಿಬ್ಬಂದಿಯನ್ನು ತಳ್ಳಿ, ನ್ಯೂಸ್‌ ಚಾನಲ್‌ನ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಈ ವೇಳೆ ಸಿಬ್ಬಂದಿಗೆ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಏಷ್ಯಾನೆಟ್‌ ನ್ಯೂಸ್‌ ತಿಳಿಸಿದೆ. 

ಕೇರಳದಲ್ಲಿ ಡ್ರಗ್‌ ಮಾಫಿಯಾ ಬಯಲು ಮಾಡಿದ್ದ ಏಷ್ಯಾನೆಟ್ ಕಚೇರಿ ಮೇಲೆ ಎಸ್‌ಎಫ್‌ಐ ಗೂಂಡಾಗಳ ದಾಳಿ

ಅಕ್ರಮವಾಗಿ ನುಗ್ಗಿದವರ ವಿರುದ್ಧ ಐಪಿಸಿ ಸೆಕ್ಷನ್‌ 143 (ಕಾನೂನುಬಾಹಿರ ಗುಂಪುಗಾರಿಕೆ), 147 (ಗಲಭೆ) ಮತ್ತು 149ಗಳಡಿ ಪ್ರಕರಣ ದಾಖಲಿಸಲಾಗಿದೆ. ಯಾವ ಕಾರಣಕ್ಕಾಗಿ ಈ ಪ್ರತಿಭಟನೆ ನಡೆದಿದೆ ಎಂಬುದು ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಎಸ್‌ಎಫ್‌ಐ ಕೇರಳದಲ್ಲಿ ಅಧಿಕಾರದಲ್ಲಿರುವ ಸಿಪಿಐಎಂ ಪಕ್ಷದ ವಿದ್ಯಾರ್ಥಿ ವಿಭಾಗವಾಗಿದ್ದು, ಡ್ರಗ್ ಕೇಸ್ವೊಂದರಲ್ಲಿ ಈ ಸಂಘಟನೆಯ ಸದಸ್ಯರು ಭಾಗಿಯಾದ ಬಗ್ಗೆ ಏಷ್ಯಾನೆಟ್ ವರದಿ ಮಾಡಿತ್ತು. ಇದಾದ ಬಳಿಕ ಫೇಕ್ ನ್ಯೂಸ್ ಎಂದು ಬ್ಯಾನರ್ ಹಿಡಿದು ಎಸ್‌ಎಫ್‌ಐ ಗೂಂಡಾಗಳು ಏಷ್ಯಾನೆಟ್ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದರು. ಇದನ್ನು ಖಂಡಿಸಿ ಕೇರಳದಲ್ಲಿ ಪತ್ರಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಧ್ಯೆಯೇ ಏಷ್ಯಾನೆಟ್ ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿಯ ಐಡೆಂಟಿಟಿ ರಿವೀಲ್ ಮಾಡಿದ್ದಾರೆಂದು ಆರೋಪಿಸಿ, ಏಷ್ಯಾನೆಟ್ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. 

ಘಟನೆಯನ್ನು ಏಷ್ಯಾನೆಟ್ ಚೇರ್ಮೇನ್ ರಾಜೇಶ್ ಕಲ್ರಾ ಖಂಡಿಸಿದ್ದಾರೆ. ಸುಳ್ಳು ಪ್ರಕರಣ ಎಂದು ಎಸ್‌ಎಫ್‌ಐ ದಾಂಧಲೆ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಏಷ್ಯಾನೆಟ್ ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಕೊಚ್ಚಿಯ ಏಷ್ಯಾನೆಟ್ ಕಚೇರಿ ಮೇಲೆ ಎಸ್‌ಎಫ್‌ಐ ದಾಂಧಲೆ ಬಳಿಕ ಈ ದಾಳಿ ನಡೆದಿದೆ. ಇದು ನಮ್ಮ ವಸ್ತುನಿಷ್ಠ ವರದಿಯ ಮೇಲೆ ನಡೆದ ದಾಳಿಯಾಗಿದ್ದು, ಇದರಿಂದ ನಮ್ಮನ್ನು ಹಿಮ್ಮೆಟ್ಟಿಸಲಾಗದು. ನಾವು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ನಮ್ಮ ತಂಡದೊಂದಿಗೆ ನಾವಿದ್ದೇವೆ ಎಂದು ಟ್ವಿಟ್ ಮಾಡಿದ್ದಾರೆ. 


Scroll to load tweet…