- Home
- News
- World News
- ಮಧ್ಯಪ್ರಾಚ್ಯ ಬಿಕ್ಕಟ್ಟು, ಖಮೇನಿ ಹತ್ಯೆ: ವಾಯುಯಾನ ಸಂಪೂರ್ಣ ಬಂದ್, ಭಾರತ ಸೇರಿ ಹಲವು ದೇಶಗಳ ವಿಮಾನ ಸೇವೆ ರದ್ದು
ಮಧ್ಯಪ್ರಾಚ್ಯ ಬಿಕ್ಕಟ್ಟು, ಖಮೇನಿ ಹತ್ಯೆ: ವಾಯುಯಾನ ಸಂಪೂರ್ಣ ಬಂದ್, ಭಾರತ ಸೇರಿ ಹಲವು ದೇಶಗಳ ವಿಮಾನ ಸೇವೆ ರದ್ದು
ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತನಾಗಿದ್ದು, ಮಧ್ಯಪ್ರಾಚ್ಯದಲ್ಲಿ ಪ್ರಾದೇಶಿಕ ಯುದ್ಧದ ಭೀತಿ ಎದುರಾಗಿದೆ. ಅನೇಕ ದೇಶಗಳು ತಮ್ಮ ವಾಯುಪ್ರದೇಶವನ್ನು ಮುಚ್ಚಿದ್ದು, ಏರ್ ಇಂಡಿಯಾ ಸೇರಿದಂತೆ ಜಾಗತಿಕ ವಿಮಾನಯಾನ ಸಂಸ್ಥೆಗಳು ತಮ್ಮ ಸೇವೆಗಳನ್ನು ರದ್ದುಗೊಳಿಸಿವೆ.

ಪಾಶ್ಚಿಮಾತ್ಯ ರಾಷ್ಟ್ರಗಳ ಕಟು ವಿರೋಧಿ ಖಮೇನಿ ಹತ
ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಸಂಘಟಿತ ಮಿಲಿಟರಿ ದಾಳಿಯ ಪರಿಣಾಮ 1989ರಿಂದ ಇರಾನ್‌ನ ಪರಮೋಚ್ಚ ನಾಯಕನಾಗಿದ್ದ, ಪಾಶ್ಚಿಮಾತ್ಯ ರಾಷ್ಟ್ರಗಳ ಕಟು ವಿರೋಧಿಯಾಗಿದ್ದ ಅಯತೊಲ್ಲಾ ಅಲಿ ಖಮೇನಿ ಹತನಾಗಿದ್ದಾನೆ. ಈ ಮಿಲಿಟರಿ ದಾಳಿಗಳು ಜಾಗತಿಕ ರಾಜಕೀಯ, ವ್ಯಾಪಾರದ ಜೊತೆಗೆ ಅಂತರರಾಷ್ಟ್ರೀಯ ವಾಯುಯಾನ ಕ್ಷೇತ್ರದಲ್ಲೂ ಭಾರಿ ಆಘಾತ ಉಂಟುಮಾಡಿವೆ. ಮಧ್ಯಪ್ರಾಚ್ಯದಲ್ಲಿ ವೇಗವಾಗಿ ಬದಲಾಗುತ್ತಿರುವ ಭದ್ರತಾ ಪರಿಸ್ಥಿತಿಯ ಪರಿಣಾಮವಾಗಿ, ಅನೇಕ ದೇಶಗಳು ತಮ್ಮ ವಾಯುಪ್ರದೇಶವನ್ನು ಮುಚ್ಚಿದ್ದು, ವಿಶ್ವದ ಪ್ರಮುಖ ವಿಮಾನಯಾನ ಸಂಸ್ಥೆಗಳು ಸೇವೆಗಳನ್ನು ರದ್ದುಗೊಳಿಸಲು, ವಿಮಾನ ಮಾರ್ಗಗಳನ್ನು ಬದಲಾಯಿಸಲು ಹಾಗೂ ಕೆಲವು ಕಡೆ ಸಂಪೂರ್ಣ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿವೆ. ಬಹುತೇಕ ದೇಶಗಳು ತಮ್ಮ ವಾಯುಗಡಿಯನ್ನು ಮುಚ್ಚಿದೆ. ಪರಿಣಾಮವಾಗಿ ವಿಮಾನ ರದ್ದತಿಯಿಂದಾಗಿ ಸಾವಿರಾರು ಪ್ರಯಾಣಿಕರು ವಿವಿಧ ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದು, ಅನೇಕರ ಪ್ರಯಾಣ ವೇಳಾಪಟ್ಟಿಗಳು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಭಾರತೀಯ ವಿಮಾನಯಾನ ಸಂಸ್ಥೆಗಳ ತೀರ್ಮಾನ
ಏರ್ ಇಂಡಿಯಾ
ಮಧ್ಯಪ್ರಾಚ್ಯದ ಎಲ್ಲಾ ಗಮ್ಯಸ್ಥಾನಗಳಿಗೆ ತನ್ನ ವಿಮಾನ ಸೇವೆಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವುದಾಗಿ ಏರ್ ಇಂಡಿಯಾ ಘೋಷಿಸಿದೆ. “ಪ್ರದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಮುಂದಿನ ಕಾರ್ಯಾಚರಣೆಗಳು ಭದ್ರತಾ ಮೌಲ್ಯಮಾಪನದ ಆಧಾರದಲ್ಲಿ ನಿರ್ಧಾರವಾಗಲಿವೆ,” ಎಂದು ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದೆ.
ಇಂಡಿಗೋ
ಇರಾನಿನ ವಾಯುಪ್ರದೇಶದ ಸುತ್ತಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಇಂಡಿಗೋ ಹೇಳಿದ್ದು, ಪ್ರಯಾಣಕ್ಕೂ ಮೊದಲು ವಿಮಾನದ ಸ್ಥಿತಿಯನ್ನು ಪರಿಶೀಲಿಸುವಂತೆ ಪ್ರಯಾಣಿಕರಿಗೆ ಮನವಿ ಮಾಡಿದೆ. ಮಧ್ಯಪ್ರಾಚ್ಯ ಮತ್ತು ಕೆಲವು ಆಯ್ದ ಅಂತರರಾಷ್ಟ್ರೀಯ ವಲಯಗಳಿಗೆ ತನ್ನ ವಿಮಾನ ಸೇವೆಗಳನ್ನು ಮಾರ್ಚ್ 1, 2026ರವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಟ್ವೀಟ್ ಮಾಡಿದೆ
ಯುರೋಪ್ ಮತ್ತು ಮಧ್ಯಪ್ರಾಚ್ಯದ ಪ್ರಮುಖ ವಿಮಾನಯಾನ ಸಂಸ್ಥೆಗಳು
ಏಜಿಯನ್ ಏರ್‌ಲೈನ್ಸ್
ಗ್ರೀಸ್‌ನ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಏಜಿಯನ್ ಏರ್‌ಲೈನ್ಸ್, ಕಾರ್ಯಾಚರಣೆ ಮತ್ತು ಸುರಕ್ಷತಾ ಕಾರಣಗಳನ್ನು ಉಲ್ಲೇಖಿಸಿ ಮಾರ್ಚ್ 3ರವರೆಗೆ ಹಲವು ವಿಮಾನಗಳನ್ನು ರದ್ದುಗೊಳಿಸಿದೆ. ಟೆಲ್ ಅವೀವ್, ಬೈರುತ್, ಎರ್ಬಿಲ್, ಬಾಗ್ದಾದ್, ದುಬೈ ಮತ್ತು ಅಬುಧಾಬಿಗೆ ಸಂಬಂಧಿಸಿದ ವಿಮಾನಗಳು ಇದರಲ್ಲಿ ಸೇರಿವೆ.
ಎಮಿರೇಟ್ಸ್
ಬಹು ಪ್ರಾದೇಶಿಕ ವಾಯುಪ್ರದೇಶಗಳು ಮುಚ್ಚಲ್ಪಟ್ಟಿರುವ ಹಿನ್ನೆಲೆಯಲ್ಲಿ, ದುಬೈಗೆ ಮತ್ತು ಅಲ್ಲಿಂದ ಹೊರಡುವ ತನ್ನ ವಿಮಾನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಎಮಿರೇಟ್ಸ್ ಪ್ರಕಟಿಸಿದೆ.
ಕತಾರ್ ಏರ್ವೇಸ್
ಕತಾರ್ ವಾಯುಪ್ರದೇಶ ಮುಚ್ಚಿದ ಹಿನ್ನೆಲೆ ದೋಹಾಕ್ಕೆ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವಾಯುಪ್ರದೇಶ ಪುನಃ ತೆರೆಯುವ ಘೋಷಣೆಯಾದ ನಂತರವೇ ಸೇವೆಗಳು ಮರುಪ್ರಾರಂಭವಾಗಲಿವೆ ಎಂದು ಸಂಸ್ಥೆ ತಿಳಿಸಿದೆ.
ಅಮೆರಿಕ ಮತ್ತು ಯುರೋಪಿನ ವಿಮಾನಯಾನಗಳ ಪ್ರತಿಕ್ರಿಯೆ
ಡೆಲ್ಟಾ ಏರ್ ಲೈನ್ಸ್
ಫೆಬ್ರವರಿ 28ರಿಂದ ಮಾರ್ಚ್ 5, 2026ರ ನಡುವಿನ ದಿನಾಂಕಗಳಲ್ಲಿ ಟೆಲ್ ಅವೀವ್‌ಗೆ ಸಂಬಂಧಿಸಿದ ಪ್ರಯಾಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಡೆಲ್ಟಾ ಎಚ್ಚರಿಕೆ ನೀಡಿದೆ.
ವರ್ಜಿನ್ ಅಟ್ಲಾಂಟಿಕ್
ಮುನ್ನೆಚ್ಚರಿಕೆ ಕ್ರಮವಾಗಿ ಇರಾಕಿನ ವಾಯುಪ್ರದೇಶವನ್ನು ತಪ್ಪಿಸಲಾಗುತ್ತಿದೆ. ಕೆಲವು ವಿಮಾನಗಳು ಪರ್ಯಾಯ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹಾರಾಟ ಸಮಯ ಸ್ವಲ್ಪ ಹೆಚ್ಚಾಗಬಹುದು ಎಂದು ಸಂಸ್ಥೆ ತಿಳಿಸಿದೆ.
ಕೆಎಲ್‌ಎಂ
ದುಬೈ, ರಿಯಾದ್ ಮತ್ತು ದಮ್ಮಾಮ್‌ಗೆ ಹೋಗುವ ಅಥವಾ ಅಲ್ಲಿಂದ ಬರುವ ಕೆಲವು ವಿಮಾನಗಳು ಫೆಬ್ರವರಿ 28ರಿಂದ ಮಾರ್ಚ್ 3ರವರೆಗೆ ವ್ಯತ್ಯಯಗೊಳ್ಳಬಹುದು ಎಂದು ಕೆಎಲ್‌ಎಂ ತಿಳಿಸಿದೆ.
ಮುಚ್ಚಿದ ವಿಮಾನ ಮಾರ್ಗ
ಏರ್ ಫ್ರಾನ್ಸ್
AFP ವರದಿ ಪ್ರಕಾರ, ಟೆಲ್ ಅವೀವ್ ಮತ್ತು ಬೈರುತ್‌ಗೆ ತನ್ನ ವಿಮಾನಗಳನ್ನು ರದ್ದುಗೊಳಿಸಿದ್ದು, ಮುಂದಿನ ದಿನಗಳಲ್ಲಿ ವೇಳಾಪಟ್ಟಿಗೆ ಸಂಬಂಧಿಸಿದ ನವೀಕರಣ ನೀಡಲಾಗುವುದು.
ಬ್ರಿಟಿಷ್ ಏರ್ವೇಸ್
ಮುಂದಿನ ವಾರದವರೆಗೆ ಟೆಲ್ ಅವೀವ್ ಮತ್ತು ಬಹ್ರೇನ್‌ಗೆ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದ್ದು, ಶನಿವಾರ ಎಮೆನ್‌ಗೆ ಸೇವೆ ರದ್ದುಗೊಂಡಿದೆ.
ಲುಫ್ಥಾನ್ಸಾ
ಮಾರ್ಚ್ 7ರವರೆಗೆ ಟೆಲ್ ಅವೀವ್, ಬೈರುತ್, ಅಮ್ಮನ್, ಎರ್ಬಿಲ್ ಮತ್ತು ಟೆಹ್ರಾನ್‌ಗೆ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಇಸ್ರೇಲ್, ಲೆಬನಾನ್, ಜೋರ್ಡಾನ್, ಇರಾಕ್, ಕತಾರ್ ಮತ್ತು ಇರಾನ್ ವಾಯುಪ್ರದೇಶಗಳನ್ನು ತಪ್ಪಿಸುವುದಾಗಿ ಸಂಸ್ಥೆ ದೃಢಪಡಿಸಿದೆ.
ಟರ್ಕಿಶ್ ಏರ್ಲೈನ್ಸ್
ಮಾರ್ಚ್ 2ರವರೆಗೆ ಲೆಬನಾನ್, ಸಿರಿಯಾ, ಇರಾಕ್, ಇರಾನ್ ಮತ್ತು ಜೋರ್ಡಾನ್‌ಗೆ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ.
ಐಟಿಎ ಏರ್ವೇಸ್
ಮಾರ್ಚ್ 7ರವರೆಗೆ ಟೆಲ್ ಅವೀವ್‌ಗೆ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಯುದ್ಧದ ಹಿನ್ನೆಲೆ: ಪ್ರಾದೇಶಿಕ ಯುದ್ಧದ ಭೀತಿ
ಅಧಿಕಾರಿಗಳ ಪ್ರಕಾರ, ದಶಕಗಳಲ್ಲಿ ಇರಾನ್ ಮೇಲೆ ನಡೆದ ಅತ್ಯಂತ ದೊಡ್ಡ ದಾಳಿಯೆಂದು ಬಣ್ಣಿಸಲಾದ ಅಮೆರಿಕ–ಇಸ್ರೇಲ್ ದಾಳಿಯಲ್ಲಿ ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಿದ್ದು, ಪೂರ್ಣ ಪ್ರಮಾಣದ ಪ್ರಾದೇಶಿಕ ಯುದ್ಧದ ಆತಂಕವನ್ನು ಹೆಚ್ಚಿಸಿದೆ.
ವಿಮಾನ ರದ್ದತಿ ಸಂಖ್ಯೆ: ಆತಂಕಕಾರಿ ಅಂಕಿಅಂಶಗಳು
ರಾಯಿಟರ್ಸ್ ವರದಿ ಪ್ರಕಾರ, ವಾಯುಯಾನ ವಿಶ್ಲೇಷಣಾ ಸಂಸ್ಥೆ ಸಿರಿಯಮ್‌ನ ಪ್ರಾಥಮಿಕ ಮಾಹಿತಿಯಲ್ಲಿ, ಈ ಘಟನಡ ನಂತರ ಕತಾರ್ ಮತ್ತು ಇಸ್ರೇಲ್‌ಗೆ ನಿಗದಿತ ವಿಮಾನಗಳ ಅರ್ಧದಷ್ಟು ಹಾಗೂ ಕುವೈತ್‌ಗೆ ಸುಮಾರು 28% ವಿಮಾನಗಳು ರದ್ದುಗೊಂಡಿವೆ. ಒಟ್ಟಾರೆ ಮಧ್ಯಪ್ರಾಚ್ಯಕ್ಕೆ ಹೋಗುವ ಸುಮಾರು 25% ವಿಮಾನಗಳು ರದ್ದುಗೊಂಡಿವೆ. ಭಾನುವಾರ ಮಾತ್ರವೇ ಮಧ್ಯಪ್ರಾಚ್ಯಕ್ಕೆ ನಿಗದಿಯಾಗಿದ್ದ 4,329 ವಿಮಾನಗಳಲ್ಲಿ 716 ವಿಮಾನಗಳು ರದ್ದುಗೊಂಡಿವೆ ಎಂದು ಸಿರಿಯಮ್ ತಿಳಿಸಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

