ವೇಗವಾಗಿ ಬಂದು ಬೈಕ್‌ಗೆ ಗುದ್ದಿ ರಸ್ತೆಗೆ ರಟ್ಟಿದ ಬಾಲಕ ಬೈಕ್ ಹಿಂದೆಯೇ ಬಂದಿದ್ದ ಬಸ್ ಸೈಕಲ್ ನಜ್ಜುಗುಜ್ಜು ಬಾಲಕ ಪವಾಡಸದೃಶ ಪಾರು
ಕಣ್ಣೂರು(ಮಾ.25): ಕೇರಳದ ಕಣ್ಣೂರಿನಲ್ಲಿ ನಾಲ್ಕು ದಿನಗಳ ಹಿಂದೆ ಭೀಕರ ಅಪಘಾತವೊಂದು ಸಂಭವಿಸಿದ್ದು, ಈ ದುರಂತದಲ್ಲಿ ಬಾಲಕ ಪವಾಡವೆಂಬಂತೆ ಪಾರಾಗಿದ್ದಾನೆ. ಸೈಕಲ್‌ನಲ್ಲಿ ವೇಗವಾಗಿ ಬಂದ ಬಾಲಕ ಅಕ್ಕ ಪಕ್ಕ ವಾಹನ ಬರುತ್ತಿದೆಯೋ ಇಲ್ಲವೋ ಎಂಬುವುದನ್ನು ಕೂಡ ನೋಡದೇ ತೀವ್ರ ವೇಗವಾಗಿ ಬಂದು ರಸ್ತೆ ದಾಟಿದ್ದಾನೆ. ಈ ವೇಳೆ ರಸ್ತೆಯಲ್ಲಿ ಬರುತ್ತಿದ್ದ ಬೈಕ್‌ಗೆ ಬಾಲಕನ ಸೈಕಲ್ ಗುದ್ದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಸೈಕಲ್ ರಸ್ತೆ ಮಧ್ಯ ಬಿದ್ದಿದ್ದರೆ, ಈತ ರಸ್ತೆ ದಾಟಿ ಮುಂದೆ ಹೋಗಿ ಬಿದ್ದಿದ್ದಾನೆ. ಈತ ಗುದ್ದಿದ ಬೈಕ್ ಹಿಂದೆಯೇ ಕೇರಳ ಸಾರಿಗೆ ಸಂಸ್ಥೆಯ ಬಸ್ಸೊಂದು ಬಂದಿದ್ದು, ಬಸ್‌ನಡಿ ಸಿಲುಕಿ ಬಾಲಕನ ಸೈಕಲ್ ನಜ್ಜುಗುಜ್ಜಾಗಿದೆ. ಒಂದು ವೇಳೆ ಹೊಡೆತದ ರಭಸಕ್ಕೆ ಬಾಲಕ ರಸ್ತೆಯಿಂದ ಆಚೆಗೆ ಬೀಳದೆ ಸೈಕಲ್ ಜೊತೆಗೆ ನಡುರಸ್ತೆಯಲ್ಲೇ ಬಿದ್ದಿದ್ದರೆ ಏನಾಗುತ್ತಿತ್ತು ಎಂಬುದನ್ನು ಯೋಚಿಸಲು ಕೂಡ ಭಯವಾಗುವಂತಿದೆ ಈ ದೃಶ್ಯಾವಳಿ.
ಮಾರ್ಚ್ 20 ರಂದು ಭಾನುವಾರ ಸಂಜೆ ಕೇರಳದ (Kerala) ಕಣ್ಣೂರಿನ( Kannur) ತಳಿಪರಂಬ (Taliparamba) ಬಳಿಯ ಚೋರುಕ್ಕಲಾ (Chorukkala) ಎಂಬಲ್ಲಿ ಈ ಘಟನೆ ನಡೆದಿದೆ. ಈ ಭಯಾನಕ ಘಟನೆಯ ದೃಶ್ಯಾವಳಿ ಸ್ಥಳೀಯ ಕಟ್ಟಡವೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬೆಚ್ಚಿ ಬೀಳಿಸುತ್ತಿದೆ. ಅಪಘಾತದ ಬಳಿಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಪವಾಡವಲ್ಲದೇ ಮತ್ತೇನು ಅಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
9 ವರ್ಷದ ಬಾಲಕ ತನ್ನ ಸೈಕಲ್‌ನಲ್ಲಿ ರಸ್ತೆ ದಾಟಲು ಪ್ರಯತ್ನಿಸುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಹುಡುಗ ಎಲ್ಲಿಂದಲೋ ವೇಗವಾಗಿ ಬರುತ್ತಿದ್ದಂತೆ, ಅವನ ಸೈಕಲ್ ನೇರವಾಗಿ ರಸ್ತೆಯಲ್ಲಿ ಚಲಿಸುತ್ತಿದ್ದ ಮೋಟಾರ್‌ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಬಾಲಕ ಗಾಳಿಯಲ್ಲಿ ಹಾರಿ ರಸ್ತೆಯ ಇನ್ನೊಂದು ಬದಿಯಲ್ಲಿ ಎಸೆಯಲ್ಪಟ್ಟಿದ್ದಾನೆ. ಕ್ಷಣದಲ್ಲಿ ಕೇರಳ ಸಾರಿಗೆ ಬಸ್ ಆತನ ಸೈಕಲ್ ಮೇಲೆ ಹಾದು ಹೋಗಿದೆ. ಈ ವೇಳೆ ಬಿದ್ದ ಬಾಲಕ ಕೈಕಾಲು ಉಜ್ಜಿಕೊಂಡು ಮೇಲೆಳುವುದನ್ನು ಸ್ಥಳೀಯರು ಓಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಒಟ್ಟಿನಲ್ಲಿ ಈ ಬಾಲಕ ಎರಡು ಸೆಕೆಂಡ್‌ಗಳಲ್ಲಿ ಎರಡು ಭೀಕರ ಅಪಘಾತಗಳಿಂದ ಪಾರಾಗಿದ್ದಾನೆ.
ಪ್ರಪಾತಕ್ಕೆ ಸ್ಕಿಡ್ ಆದ ಬಸ್, 22 ಮಂದಿ ಪವಾಡಸದೃಶ ಪಾರು!
ಏನು ಅರಿಯದ ಮಕ್ಕಳನ್ನು ದೇವರು ಕಾಯುತ್ತಾನೆ ಎಂಬ ಮಾತಿದೆ. ಅದರಂತೆ ಕಳೆದ ತಿಂಗಳು ಮಹಾರಾಷ್ಟ್ರದಲ್ಲಿ ನಡೆದ ಅವಘಡವೊಂದರಲ್ಲಿ ಮಗುವೊಂದು ಪವಾಡ ಸದೃಶವಾಗಿ ಪಾರಾಗಿತ್ತು. ರೈಲು ಬರುತ್ತಿದ್ದಂತೆ ತಂದೆಯೊಬ್ಬ ತನ್ನ ಆರು ವರ್ಷದ ಮಗುವನ್ನು ಎಳೆದುಕೊಂಡು ರೈಲ್ವೆ ಹಳಿಗೆ ಹಾರಿದ್ದು, ಈ ದುರಂತದಲ್ಲಿ ಮಗು ಯಾವುದೇ ಹಾನಿಯಾಗದೆ ಬದುಕುಳಿದಿತ್ತು. ಆದರೆ ಮಗುವಿನ ತಂದೆ ಸಾವನ್ನಪ್ಪಿದ್ದರು. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ (Kalyan) ಸಮೀಪದ ವಿಠಲವಾಡಿ (Vitthalwadi) ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿತ್ತು. ಘಟನೆಯ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನಂತರ ವೈರಲ್ ಆಗಿತ್ತು.
ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣು, ಪವಾಡಸದೃಶ ರೀತಿಯಲ್ಲಿ ಮಗು ಬಚಾವ್!