Asianet Suvarna News Asianet Suvarna News

Republic Day Karnataka Tableau: ಈ ಬಾರಿ ಸ್ತಬ್ಧಚಿತ್ರದಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ ಚಿತ್ರಣ!

*ಮಂಗಳೂರು ಮೂಲದ ಅಪ್ರತಿಮ ಸಮಾಜ ಸುಧಾರಕಿ ಕಮಲಾದೇವಿ ಚಟ್ಟೋಪಾಧ್ಯಾಯ
*ಗಣರಾಜ್ಯೋತ್ಸವ ಪರೇಡ್‌ನಲ್ಲಿ (Republic Day) ಕರ್ನಾಟಕ ಬಹುಕಲಾಕೃತಿ
*ಮಹಿಳೆಯರನ್ನು  ಸಬಲೀಕರಣಗೊಳಿಸುವ ಮೊದಲ ಕನಸು ಕಂಡಾಕೆ. 

Karnataka Republic Day tableau to showcase freedom fighter and social reformer Kamaladevi Chattopadhyay mnj
Author
Bengaluru, First Published Jan 18, 2022, 8:50 AM IST

ನವದೆಹಲಿ (ಜ. 18) : ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ (Republic Day) ಕರ್ನಾಟಕ ಬಹುಕಲಾಕೃತಿ  ಸ್ತಬ್ಧಚಿತ್ರ ಆಯ್ಕೆಯಾಗಿದೆ. ಇದರ ಜೊತೆಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹು ಪ್ರಮುಖ ಪಾತ್ರ ವಹಿಸಿದ್ದ ಕನ್ನಡತಿ ಕಮಲಾದೇವಿ ಚಟ್ಟೋಪಾಧ್ಯಾಯ (Kamaladevi Chattopadhyay) ಅವರ ಮೂರ್ತಿ ಕೂಡಾ ಅನಾವರಣಗೊಳ್ಳಲಿದೆ.ಸ್ವಾತಂತ್ರ್ಯ ಹೋರಾಟಗಾರ್ತಿ, ಸಮಾಜ ಸುಧಾರಕಿ, ಭಾರತದ ಕರಕುಶಲ ಕಲೆ, ಕೈಮಗ್ಗ ಪುನರುಜ್ಜೀವನದ ಹಿಂದಿನ ಶಕ್ತಿ, ರಂಗಕಲೆ, ಭಾರತೀಯ ಮಹಿಳೆಯರನ್ನು ಸಹಕಾರ ವಲಯದ ಮೂಲಕ ಸಬಲೀಕರಣಗೊಳಿಸುವ ಮೊದಲ ಕನಸು ಕಂಡಾಕೆ. ಹೀಗೆ ಹಲವು ಕಾರಣಗಳಿಂದ ಗುರುತಿಸಿಕೊಳ್ಳುವ ಕಮಲಾದೇವಿ ಚಟ್ಟೋಪಾಧ್ಯಾಯ ಅಪ್ಪಟ ಕನ್ನಡತಿ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಕಾರಣ ಅವರ ಹೆಸರಿನ ಮುಂದೆ ಸೇರಿಸುವ ಚಟ್ಟೋಪಾಧ್ಯಾಯ ಎಂಬ ಬಂಗಾಳಿ ಉಪನಾಮ (ಸರ್‌ನೇಮ್‌).

ಕಮಲಾದೇವಿ ಹಿನ್ನೆಲೆ: ಕಮಲಾದೇವಿ ಅವರ ಮೂಲ ಮಂಗಳೂರು. 1903ರಲ್ಲಿ ಅಂದಿನ ಮಂಗಳೂರು ಜಿಲ್ಲಾಧಿಕಾರಿಯಾಗಿದ್ದ ಅನಂತಯ್ಯ ಧಾರೇಶ್ವರ್‌ ಮತ್ತು ಗಿರಿಜಾಬಾಯಿ ದಂಪತಿಯ ಪುತ್ರಿ. ಆದರೆ ಇವರ ಬಾಲ್ಯ ಅಷ್ಟೇನು ಸಂಭ್ರಮದ್ದಾಗಿರಲಿಲ್ಲ. ರೋಲ್‌ ಮಾಡೆಲ್‌ ಎಂದು ನಂಬಿದ್ದ ಅಕ್ಕ ಬಾಲ್ಯವಿವಾಹವಾದ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದರು. 

ಇದನ್ನೂ ಓದಿ: Republic Day: ಗಣರಾಜ್ಯೋತ್ಸವಕ್ಕೆ ಕರ್ನಾಟಕದಿಂದ ಕರಕುಶಲ ಕಲಾ ವೈಭವದ ಟ್ಯಾಬ್ಲೋ

ಅದಾದ 7 ವರ್ಷದಲ್ಲಿ ತಂದೆ ಕೂಡಾ ಸಾವನ್ನಪ್ಪಿದ್ದರು. ಆದರೆ ಆಸ್ತಿಯನ್ನು ಪತ್ನಿ ಅಥವಾ ಮಕ್ಕಳ ಹೆಸರಿಗೆ ಬರೆದಿಡದ ಕಾರಣ, ಇಡೀ ಆಸ್ತಿ ಅನಂತಯ್ಯ ಅವರ ಸೋದರನ ಪಾಲಾಯಿತು. ಹೀಗಾಗಿ ಕೇವಲ ಪತಿಯ ಪಿಂಚಣಿ ಹಣದಲ್ಲಿ ಕುಟುಂಬ ನಡೆಸುವ ಅನಿವಾರ್ಯತೆ ಕಮಲಾರ ತಾಯಿಗೆ ಎದುರಾಗಿತ್ತು. ಆಗಿನ ಚಿಕ್ಕ ವಯಸ್ಸಿನಲ್ಲೇ ಈ ತಾರತಮ್ಯವನ್ನು ಕಮಲಾ ದೊಡ್ಡ ಧ್ವನಿಯಲ್ಲಿ ಪ್ರಶ್ನಿಸಿದ್ದರು.

ಈ ನಡುವೆ 1917ರಲ್ಲಿ ಕಮಲಾಗೆ ಮದುವೆ ಆಯಿತು. ಆದರೆ ಎರಡೇ ವರ್ಷದಲ್ಲಿ ಪತಿ ತೀರಿಕೊಂಡರು. ಅದರ ಹೊರತಾಗಿಯೂ ಕಮಲಾರನ್ನು ಅವರ ತಾಯಿ ಚೆನ್ನೈಗೆ ವಿದ್ಯಾಭ್ಯಾಸಕ್ಕೆ ಕಳುಹಿಸಿಕೊಟ್ಟರು. ಅಲ್ಲಿ ಅವರಿಗೆ ಬಂಗಾಳ ಮೂಲದ ಕವಿ, ನಟ ಹರೀಂದ್ರನಾಥ್‌ ಚಟ್ಟೋಪಾಧ್ಯಾಯ ಅವರ ಪರಿಚಯವಾಯಿತು. ಮುಂದೆ ಇಬ್ಬರೂ ವಿವಾಹವಾದರು. ಮುಂದೆ ಕೆಲ ವರ್ಷಗಳ ಪರಸ್ಪರ ಸಮ್ಮತಿಯ ಮೂಲಕ ಕಮಲಾ ಮತ್ತು ಹರೀಂದ್ರನಾಥ್‌ ದೂರವಾದರು. ಅಂದಿನ ದಿನಗಳಲ್ಲಿ ಎಲ್ಲರೂ ಹುಬ್ಬೇರಿಸುವಂತೆ ಕಮಲಾ ಕಾನೂನು ರೀತಿಯಲ್ಲಿ ವಿಚ್ಛೇದನ ಕೋರಿದ್ದರು.

ಇದನ್ನೂ ಓದಿನೇತಾಜಿ ಸ್ತಬ್ಧಚಿತ್ರ, ಕೇರಳ ಬಳಿಕ ಈಗ ಬಂಗಾಳ ಟ್ಯಾಬ್ಲೋ ತಿರಸ್ಕಾರ: ವಿವಾದ!

ಸ್ವಾತಂತ್ರ್ಯ ಹೋರಾಟ: ಉನ್ನತ ವಿದ್ಯಾಭ್ಯಾಸಕ್ಕಾಗಿ ಲಂಡನ್‌ಗೆ ತೆರಳಿದ್ದ ವೇಳೆಯೇ ಭಾರತದಲ್ಲಿ ಗಾಂಧಿಜಿ ಅಸಹಕಾರ ಚಳವಳಿ ಆರಂಭಿಸಿದ್ದನ್ನು ತಿಳಿದು, ಕಮಲಾ ತವರಿಗೆ ಮರಳಿದರು. ಮುಂದೆ ಹಲವು ದಶಕಗಳ ಕಾಲ ಸ್ವಾತಂತ್ರ್ಯ ಸಂಗ್ರಾಮ, ಮಹಿಳಾ ಸಬಲೀಕರಣ, ಕರಕುಶಕಲ, ಕೈಮಗ್ಗ ಕಲೆಗೆ ನವಚೈತನ್ಯ ತುಂಬುವ ಕೆಲಸ ಮಾಡಿದರು. 

ಇವರ ಸಾಧನೆಯನ್ನು ಗಮನಿಸಿ ಸರ್ಕಾರ ಪದ್ಮಭೂಷಣ, ಪದ್ಮ ವಿಭೂಷಣ ನೀಡಿ ಗೌರವಿಸಿದೆ. ಇದಲ್ಲದೆ ರಾಮನ್‌ ಮ್ಯಾಗ್ಸಸ್ಸೇ, ಸಂಗೀತ ನಾಟಕ ಅಕಾಡೆಮಿ, ಮೊದಲಾದ ಪ್ರಶಸ್ತಿಗಳು ಅರಸಿಬಂದವು. ಇವರಿಂದಾಗಿಯೇ ರಾಷ್ಟ್ರೀಯ ನಾಟಕ ಶಾಲೆ, ಸಂಗೀತ ನಾಟಕ ಅಕಾಡೆಮಿ, ಸೆಂಟ್ರಲ್‌ ಕಾಟೇಜ್‌ ಇಂಡಸ್ಟ್ರೀಸ್‌ ಎಂಪೋರಿಯಂ, ಕ್ರಾಫ್ಟಸ್‌ ಕೌನ್ಸಿಲ್‌ ಆಫ್‌ ಇಂಡಿಯಾ ಸ್ಥಾಪನೆಯಾದವು.

ಕರ್ನಾಟಕದಿಂದ ಕರಕುಶಲ ಕಲಾ ವೈಭವ: ರಾಷ್ಟ್ರ ರಾಜಧಾನಿ ನವದೆಹಲಿಯ(New Delhi) ರಾಜಪಥದಲ್ಲಿ ಜ.26ರ ಗಣರಾಜ್ಯೋತ್ಸವದಂದು(Republic Day) ಕರ್ನಾಟಕದ ಸಮಸ್ತ ಕರಕುಶಲ ವೈಭವದ ವಿಶ್ವರೂಪ ದರ್ಶನವಾಗಲಿದೆ! ‘ಕರ್ನಾಟಕ- ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು’(Karnataka - Cradle of Heritage Handicrafts) ಎನ್ನುವ ಧ್ಯೇಯದಡಿ ಸಿದ್ಧಗೊಳ್ಳುತ್ತಿರುವ ಸ್ತಬ್ಧಚಿತ್ರ(Tableau) ಗಣರಾಜ್ಯೋತ್ಸವ ದಿನದ ಮೆರವಣಿಗೆಯಲ್ಲಿ ಸಾಗಲಿದ್ದು, ವಿಶ್ವಪ್ರಸಿದ್ಧ ಚನ್ನಪಟ್ಟಣ ಗೊಂಬೆ, ಕಿನ್ನಾಳ ಗೊಂಬೆ, ಇಳಕಲ್‌ ಸೀರೆ, ಉಡುಪಿ ಸೀರೆ, ಮೈಸೂರು ಗಾಂಜೀಫ ಕಲೆಗಳೂ ಸೇರಿದಂತೆ ಜಿಐ ಟ್ಯಾಗ್‌ ಇರುವ 16 ಕರಕುಶಲ ವಸ್ತುಗಳು(Handicrafts) ಅನಾವರಣಗೊಳ್ಳಲಿವೆ.

Follow Us:
Download App:
  • android
  • ios