ಭಾರತ್ ಜೋಡೋ ಯಾತ್ರೆ ಗಾಗಿ ಕೆಜಿಎಫ್ ಮ್ಯೂಸಿಕ್ ಬಳಕೆ ಪ್ರಕರಣ ರದ್ದು ಮಾಡುವಂತೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದ್ದು, ರಾಹುಲ್ ಗಾಂಧಿ ಸೇರಿ ಇತರ ರಾಜಕೀಯ ನಾಯಕರ ವಿರುದ್ಧ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.
ಬೆಂಗಳೂರು (ಜೂ.28): ಕೃತಿಚೌರ್ಯ ಉಲ್ಲಂಘನೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮತ್ತು ಸುಪ್ರಿಯಾ ಶ್ರೀನೇಟ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ಬುಧವಾರ ನಿರಾಕರಿಸಿದೆ. ಭಾರತ್ ಜೋಡೋ ಯಾತ್ರೆ ಗಾಗಿ ಕೆಜಿಎಫ್ ಮ್ಯೂಸಿಕ್ ಬಳಕೆ ಪ್ರಕರಣ ಇದಾಗಿದ್ದು, ಇದನ್ನು ರದ್ದು ಮಾಡುವಂತೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದ್ದು, ರಾಜಕೀಯ ನಾಯಕರ ವಿರುದ್ಧ ತನಿಖೆಗೆ ಕೋರ್ಟ್ ಹಸಿರು ನಿಶಾನೆ ತೋರಿದೆ.
ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠದಿಂದ ಈ ಆದೇಶ ಹೊರಬಿದ್ದಿದೆ. ಅನುಮತಿ ಇಲ್ಲದೆ ಮ್ಯೂಸಿಕ್ ಬಳಕೆ ಮೇಲ್ನೋಟಕ್ಕೆ ಕಂಡು ಬಂದಿದೆ. ಇದು ದೂರುದಾರರ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸುತ್ತದೆ ಎಂದು ಕೋರ್ಟ್ ಹೇಳಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್‌ಗಾಂಧಿ, ಎಐಸಿಸಿ ಜನರಲ್ ಸೆಕ್ರೇಟರಿ ಜೈರಾಮ್ ರಮೇಶ್ ಹಾಗೂ ಎಐಸಿಸಿ ಸೋಷಿಯಲ್ ಮೀಡಿಯಾ ಅಂಡ್ ಡಿಜಿಟಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ ವಿರುದ್ದ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಕೋಟ್ಯಂತರ ರೂ ಅಕ್ರಮ ಆಸ್ತಿ ಗಳಿಸಿ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ Tahsildar Ajith Rai ಯಾರು,
ಕಾಂಗ್ರೆಸ್ ನಾಯಕರ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಕ್ರಮ್ ಹುಯಿಲ್ಗೋಳ್, ಹಕ್ಕುಸ್ವಾಮ್ಯ ಕಾಯಿದೆಯ ಸೆಕ್ಷನ್ 63 ರ ಅಡಿಯಲ್ಲಿ ಅಪರಾಧ ಮಾಡಬೇಕಾದರೆ ಆರೋಪಿಯು ಉದ್ದೇಶಪೂರ್ವಕವಾಗಿ ಇದನ್ನು ಮಾಡಿಲ್ಲ. ಮಾತ್ರವಲ್ಲ ಮ್ಯೂಸಿಕ್ ಬಳಸಿಕೊಂಡು ಯಾವುದೇ ರೀತಿಯ ಹಣ ಗಳಿಸಿಲ್ಲ ಎಂದು ವಾದ ಮಂಡಿಸಿದರು.
ಇದಕ್ಕೆ ಪ್ರತಿಯಾಗಿ ವಾದ ಮಂಡಿಸಿದ ಎಂಆರ್‌ಟಿ ಸಂಸ್ಥೆ ಪರ ಹಿರಿಯ ವಕೀಲ ಎಸ್ ಶ್ರೀರಂಗ ಅವರು ಯಾವುದೇ ಹಣದ ಲಾಭವನ್ನು ಮಾಡಲಾಗಿಲ್ಲ ಎಂದು ಭಾವಿಸಲಾಗಿದ್ದರೂ, ಗಳಿಕೆ ಕೇವಲ ಹಣವೇ? ಅವರು ಇದರಿಂದ ಜನಪ್ರಿಯತೆಯನ್ನು ಗಳಿಸಿದ್ದಾರೆ ಎಂದು ವಾದಿಸಿದರು.
ದಿಲ್ಲಿ ಕರೋಲ್‌ಭಾಗ್ ಮಾರುಕಟ್ಟೆಯಲ್ಲಿ ಬೈಕ್ ರಿಪೇರಿ ಮಾಡಿದ ರಾಹುಲ್ ಗಾಂಧಿ
ಕೆಜಿಎಫ್ ಚಿತ್ರದ ಮ್ಯೂಸಿಕ್ ಬಳಸಿಕೊಂಡಿರುವ ಬಗ್ಗೆ ಎಂಆರ್‌ಟಿ ಮ್ಯೂಸಿಕ್ ಸಂಸ್ಥೆಯಿಂದ ಕೇಸ್ ದಾಖಲಾಗಿತ್ತು. ಎಂಆರ್‌ಟಿ ಮ್ಯೂಸಿಕ್ ಮಾಲೀಕ ನವೀನ್ ಕುಮಾರ್ ಅವರು ಅನುಮತಿ ಪಡೆಯದೇ ಕೆಜಿಎಫ್-2 ಚಿತ್ರದ ಹಾಡಿನ ಮ್ಯೂಸಿಕ್ ಬಳಕೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದರು.
ಈ ಸಂಬಂಧ ಯಶವಂತಪುರ ಠಾಣೆಯಲ್ಲಿ ಐಪಿಸಿ, ಕಾಪಿರೈಟ್ ಕಾಯಿದೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಅಡಿ 2022ರ ಡಿ.08ರಂದು ಎಫ್ಐಆರ್ ದಾಖಲಾಗಿತ್ತು. ಈ ಎಫ್ಐಆರ್ ರದ್ದು ಕೋರಿ ಮೂವರೂ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ವರ್ಜಿ ವಜಾ ಆಗಿದ್ದು ರಾಹುಲ್ ಗಾಂಧಿಗೆ ತೀವ್ರ ಹಿನ್ನಡೆ ಆಗಿದೆ.
