ಖ್ಯಾತ ಹಾಸ್ಯನಟ ಕಪಿಲ್ ಶರ್ಮಾ ಅವರ ಕೆನಡಾ ಕೆಫೆ ಬಳಿ ಮತ್ತೊಮ್ಮೆ ಗುಂಡಿನ ದಾಳಿ ನಡೆದಿದ್ದು, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಬಂದಿದೆ ಎಂಬ ಸುದ್ದಿ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ಕಪಿಲ್ ಶರ್ಮಾಗೆ ಎಚ್ಚರಿಕೆ ನೀಡಿದೆ.
ಖ್ಯಾತ ಹಾಸ್ಯನಟ ಕಪಿಲ್ ಶರ್ಮಾ ಅವರ ಕೆನಡಾ ಕೆಫೆ ಸುತ್ತ ಮತ್ತೊಮ್ಮೆ ಗ್ಯಾಂಗ್‌ಸ್ಟರ್‌ಗಳ ಹಾವಳಿ ಶುರುವಾಗಿದೆ ಅನ್ನೋ ಸುದ್ದಿ ಆನ್‌ಲೈನ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಪೋಸ್ಟ್‌ಗಳ ಪ್ರಕಾರ, ಬ್ರಿಟಿಷ್ ಕೊಲಂಬಿಯಾದ ಸರ್ರೆ ನಗರದಲ್ಲಿರುವ ಕಪಿಲ್ ಅವರ 'ಕ್ಯಾಪ್ಸ್ ಕೆಫೆ' ಬಳಿ ಇತ್ತೀಚೆಗೆ ಗುಂಡಿನ ದಾಳಿ ನಡೆದಿದೆ. ಕೆಫೆಯ ಪಕ್ಕದಲ್ಲೇ ಇರುವ ಮತ್ತೊಂದು ರೆಸ್ಟೋರೆಂಟ್ ಮೇಲೆ ಗುಂಡು ಹಾರಿಸಲಾಗಿದೆ ಅಂತಾ ವರದಿಗಳು ಹೇಳುತ್ತಿವೆ. ಈ ಘಟನೆಯ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಕೈವಾಡ ಇದೆ ಅನ್ನೋ ಆರೋಪಗಳು ಕೇಳಿಬಂದಿವೆ.
'ಟೈಸನ್ ಬಿಷ್ಣೋಯ್ ಜೋರಾ ಸಿಧು' ಅನ್ನೋ ಫೇಸ್‌ಬುಕ್ ಖಾತೆಯಿಂದ ಶೇರ್ ಮಾಡಲಾಗಿದೆ ಎನ್ನಲಾದ ಪೋಸ್ಟ್‌ನ ಸ್ಕ್ರೀನ್‌ಶಾಟ್‌ಗಳು ಈ ಸುದ್ದಿಗೆ ಮೂಲವಾಗಿವೆ. ಈ ಪೋಸ್ಟ್‌ನಲ್ಲಿ, ಕಪಿಲ್ ಶರ್ಮಾ ಮತ್ತು ಕೆಫೆ ಮಾಲೀಕರಿಗೆ 'ಸರಿಯಾಗಿರಿ' (fall in line) ಅಂತಾ ಎಚ್ಚರಿಕೆ ನೀಡಲಾಗಿದೆ. ಮಾತು ಕೇಳದಿದ್ದರೆ ಪರಿಣಾಮ ನೆಟ್ಟಗಿರಲ್ಲ ಅಂತಾನೂ ಬೆದರಿಕೆ ಹಾಕಲಾಗಿದೆ. ಆದರೆ, ಈ ಪೋಸ್ಟ್‌ಗಳ ಸತ್ಯಾಸತ್ಯತೆ ಬಗ್ಗೆ ಕೆನಡಾ ಅಧಿಕಾರಿಗಳಿಂದಾಗಲೀ ಅಥವಾ ಕಪಿಲ್ ಶರ್ಮಾ ತಂಡದಿಂದಾಗಲೀ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
ವೈರಲ್ ಬೆದರಿಕೆ ಪೋಸ್ಟ್‌ಗಳಿಂದ ಆತಂಕ
ವೈರಲ್ ಪೋಸ್ಟ್‌ಗಳ ಪ್ರಕಾರ, ಸರ್ರೆಯಲ್ಲಿರುವ ಕ್ಯಾಪ್ಸ್ ಕೆಫೆ ಪಕ್ಕದ 'ಚಾಯ್ ಸುಟ್ಟಾ ಬಾರ್' ಬಳಿ ಈ ಗುಂಡಿನ ದಾಳಿ ನಡೆದಿದೆ. ಈ ಬೆದರಿಕೆ ಪೋಸ್ಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದ್ದು, ಕಪಿಲ್ ಶರ್ಮಾ ಅವರ ಸುರಕ್ಷತೆ ಮತ್ತು ಕೆನಡಾದಲ್ಲಿರುವ ಅವರ ವ್ಯವಹಾರಗಳ ಭದ್ರತೆ ಬಗ್ಗೆ ಜನರಲ್ಲಿ ಆತಂಕ ಹೆಚ್ಚಾಗಿದೆ.
ಸದ್ಯಕ್ಕೆ, ಈ ಎಲ್ಲಾ ಆರೋಪಗಳು ಇನ್ನೂ ದೃಢಪಟ್ಟಿಲ್ಲ. News18 ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳು ಈ ಬಗ್ಗೆ ವರದಿ ಮಾಡಿದ್ದು, ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ನಿಜವೇ ಅಥವಾ ಯಾವುದಾದರೂ ಕ್ರಿಮಿನಲ್ ಗ್ಯಾಂಗ್ ಜೊತೆ ನೇರ ಸಂಪರ್ಕ ಹೊಂದಿವೆಯೇ ಎಂಬುದನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ ಎಂದು ಹೇಳಿವೆ.
2025ರಿಂದ ನಿರಂತರ ದಾಳಿ
2025ರಿಂದ ಕ್ಯಾಪ್ಸ್ ಕೆಫೆಯನ್ನು ಗುರಿಯಾಗಿಸಿಕೊಂಡು ಹಲವು ದಾಳಿಗಳು ನಡೆದಿವೆ. ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ಕೆಫೆ ಶುರುವಾದ ಕೆಲವೇ ದಿನಗಳಲ್ಲಿ, ಅಂದರೆ ಜುಲೈ 10, 2025 ರಂದು ಮೊದಲ ಬಾರಿಗೆ ಗುಂಡಿನ ದಾಳಿ ನಡೆದಿತ್ತು. ಆಗ ಕೆಫೆ ಮತ್ತು ಅಕ್ಕಪಕ್ಕದ ಕಟ್ಟಡಗಳ ಮೇಲೆ ಗುಂಡು ಹಾರಿಸಲಾಗಿತ್ತು. ಅದೃಷ್ಟವಶಾತ್, ಯಾರಿಗೂ ಗಾಯಗಳಾಗಿರಲಿಲ್ಲ.
ನಂತರ ಆಗಸ್ಟ್ 7, 2025 ರಂದು ಅದೇ ಜಾಗದಲ್ಲಿ ಎರಡನೇ ಬಾರಿಗೆ ಗುಂಡಿನ ದಾಳಿ ನಡೆಯಿತು. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು ಅಕ್ಟೋಬರ್ 2025ರಲ್ಲಿ. ಆಗ ನಾಲ್ಕು ತಿಂಗಳಲ್ಲೇ ಮೂರನೇ ಬಾರಿಗೆ ಕೆಫೆ ಮೇಲೆ ದಾಳಿ ಮಾಡಲಾಗಿತ್ತು. ಆ ಸಮಯದಲ್ಲಿ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸೇರಿದವರು ಅಂತಾ ಹೇಳಿಕೊಂಡ ವ್ಯಕ್ತಿಗಳು ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ದಾಳಿಯ ಹೊಣೆ ಹೊತ್ತಿದ್ದರು.
ಭದ್ರತೆಯ ಬಗ್ಗೆ ಹೆಚ್ಚಿದ ಚಿಂತೆ
ಹೀಗೆ ಪದೇ ಪದೇ ದಾಳಿಗಳು ನಡೆಯುತ್ತಿರುವುದು ಮತ್ತು ಹೊಸದಾಗಿ ಆನ್‌ಲೈನ್‌ನಲ್ಲಿ ಬೆದರಿಕೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಕಪಿಲ್ ಶರ್ಮಾ ಅವರ ಕೆಫೆಯ ಸುರಕ್ಷತೆ ಬಗ್ಗೆ ಆತಂಕಗಳು ಹೆಚ್ಚಾಗುತ್ತಲೇ ಇವೆ. ಅಧಿಕಾರಿಗಳು ಈ ಬಗ್ಗೆ ಹೊಸದಾಗಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ, ಈ ಸರಣಿ ಘಟನೆಗಳಿಂದಾಗಿ ಈ ವಿಷಯ ಸಾರ್ವಜನಿಕರ ಗಮನದಲ್ಲೇ ಉಳಿದಿದೆ.


