ಹಾಸ್ಯನಟ ಕಪಿಲ್ ಶರ್ಮಾ ಅವರ ಕೆನಡಾದ ಸರ್ರೆಯಲ್ಲಿರುವ ಕ್ಯಾಪ್ಸ್ ಕೆಫೆ ಮೇಲೆ ಮೂರನೇ ಬಾರಿಗೆ ಗುಂಡಿನ ದಾಳಿ ನಡೆದಿದೆ. ಈ ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯರೆಂದು ಹೇಳಲಾದ ಕುಲ್ವೀರ್ ಸಿಧು ಮತ್ತು ಗೋಲ್ಡಿ ಧಿಲ್ಲನ್ ಹೊತ್ತುಕೊಂಡಿದೆ.

ಬಟಿಂಡಾ: ಹಾಸ್ಯನಟ ಹಾಗೂ ಸ್ಟಾಡ್ ಅಪ್ ಕಾಮಿಡಿಯನ್ ಕಪಿಲ್ ಶರ್ಮಾ ಅವರ ಮಾಲೀಕತ್ವದಲ್ಲಿರುವ ಕೆನಡಾದ ಸರ್ರೆಯಲ್ಲಿನ ಪ್ರಸಿದ್ಧ ಕ್ಯಾಪ್ಸ್ ಕೆಫೆ ಮತ್ತೆ ಸುದ್ದಿಯಲ್ಲಿದೆ. ಕಳೆದ ಮೂರು ತಿಂಗಳಲ್ಲಿ ಈಗಾಗಲೇ ಎರಡು ಬಾರಿ ನಡೆದಿದ್ದ ಗುಂಡಿನ ದಾಳಿಯ ನಂತರ, ಗುರುವಾರ ಈ ಕೆಫೆಯಲ್ಲಿ ಮೂರನೇ ಬಾರಿಗೆ ಬಾರಿಗೆ ಗುಂಡಿನ ದಾಳಿ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ಮೂರು ಸೆಕೆಂಡುಗಳ ವೀಡಿಯೊ ಕ್ಲಿಪ್ ವೈರಲ್ ಆಗಿದ್ದು, ಅದರಲ್ಲಿ ಕಾರಿನಲ್ಲಿ ಬಂದ ಶೂಟರ್‌ಗಳು ಕೆಫೆಯ ಮುಂಭಾಗದ ಗಾಜಿನ ಕಿಟಕಿಗಳ ಮೇಲೆ ನಿರಂತರವಾಗಿ ಗುಂಡು ಹಾರಿಸುತ್ತಿರುವ ದೃಶ್ಯಗಳು ದಾಖಲಾಗಿವೆ. ಆದರೆ, ಈ ಕ್ಲಿಪ್‌ನ ನಿಜಾಸತ್ಯತೆ ಕುರಿತು ಅಧಿಕಾರಿಗಳು ಇನ್ನೂ ಅಧಿಕೃತ ದೃಢೀಕರಣ ನೀಡಿಲ್ಲ.

ವೀಡಿಯೊ ದೃಶ್ಯಗಳಲ್ಲಿ ಸ್ಪಷ್ಟವಾಗಿ ಕಾಣುವಂತೆ, ಶೂಟರ್ ವಾಹನದ ಒಳಗಿನಿಂದ ಕೆಫೆಯ ಮುಂಭಾಗದತ್ತ ಪದೇ ಪದೇ ಗುಂಡು ಹಾರಿಸುತ್ತಿದ್ದಾನೆ. ಘಟನೆ ನಂತರ ಸಾಮಾಜಿಕ ಮಾಧ್ಯಮದಲ್ಲಿ ಕುಲ್ವೀರ್ ಸಿಧು ಎಂಬವರ ಹೆಸರಿನಲ್ಲಿ ಒಂದು ಪೋಸ್ಟ್‌ನ ಸ್ಕ್ರೀನ್‌ಶಾಟ್ ವೈರಲ್ ಆಗ ತೊಡಗಿತು. ಅದರೆ ಘಟನೆಯ ಸತ್ಯಾಸತ್ಯತೆ ತಿಳಿದುಬಂದಿಲ್ಲ. ಈ ಪೋಸ್ಟ್‌ನಲ್ಲಿ ಲಾರೆನ್ಸ್ ಬಿಷ್ಣೋಯ್ ಅವರ ಫೋಟೋ ಕೂಡ ಸೇರಿಸಲಾಗಿದ್ದು, ದಾಳಿಯ ಹೊಣೆಗಾರಿಕೆಯನ್ನು ಕುಲ್ವೀರ್ ಸಿಧು ಮತ್ತು ಗೋಲ್ಡಿ ಧಿಲ್ಲನ್ ಎಂಬ ಇಬ್ಬರು ಗ್ಯಾಂಗ್‌ಸ್ಟರ್‌ಗಳು ತಮ್ಮ ಮೇಲೆಯೇ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಪೋಸ್ಟ್‌ನಲ್ಲಿ ಬರೆದಿರುವಂತೆ:

“ವಹೇಗುರು ಜಿ ಕಾ ಖಾಲ್ಸಾ, ವಹೇಗುರು ಜಿ ಕಿ ಫತೇಹ್. ಸರ್ರೆಯ ಕ್ಯಾಪ್ಸ್ ಕೆಫೆಯಲ್ಲಿ ನಡೆದ ಇಂದಿನ ಗುಂಡಿನ ದಾಳಿಯನ್ನು ನಾನು, ಕುಲ್ವೀರ್ ಸಿಧು ಮತ್ತು ಗೋಲ್ಡಿ ಧಿಲ್ಲನ್ ನಡೆಸಿದ್ದೇವೆ. ಸಾರ್ವಜನಿಕರ ಮೇಲೆ ನಮ್ಮ ಯಾವುದೇ ದ್ವೇಷವಿಲ್ಲ. ಆದರೆ ನಮ್ಮ ವಿರುದ್ಧ ಬಾಕಿ ಹಣ ಇಟ್ಟುಕೊಂಡವರು, ಮೋಸ ಮಾಡಿದವರು ಅಥವಾ ನಮ್ಮ ಧರ್ಮದ ವಿರುದ್ಧ ಮಾತನಾಡುವವರು ಎಚ್ಚರಿಕೆಯಿಂದಿರಬೇಕು. ಗುಂಡುಗಳು ಎಲ್ಲಿಂದಲಾದರೂ ಬರಬಹುದು. ಜನರು ತಮ್ಮ ಸಮಸ್ಯೆ ಹೊಂದಿರುವವರಿಂದ ದೂರವಿರಬೇಕು. ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಹಣ ಪಾವತಿಸದವರಿಗೂ ಕ್ರಮ ಕೈಗೊಳ್ಳಲಾಗುವುದು.

ಖ್ಯಾತ ನಾಯಕನಿಗೂ ಕಪಿಲ್ ಗು ಲಿಂಕ್

ಈ ಹೇಳಿಕೆಯಲ್ಲಿ ಬಾಲಿವುಡ್ ಬಗ್ಗೆ ಉಲ್ಲೇಖವೂ ಇದೆ. ಕೆಲವು ಮೂಲಗಳ ಪ್ರಕಾರ, ಈ ಉಲ್ಲೇಖದ ಹಿಂದೆ ಕಪಿಲ್ ಶರ್ಮಾ ಅವರೊಂದಿಗೆ ಆಪ್ತ ಸಂಬಂಧ ಹೊಂದಿರುವ ಒಬ್ಬ ಖ್ಯಾತ ನಾಯಕನ ಹೆಸರು ಇದೆ ಎಂಬ ವದಂತಿಯೂ ಹರಿದಾಡುತ್ತಿದೆ. ಸರ್ರೆ ಪೊಲೀಸ್ ಇಲಾಖೆ ಘಟನೆಯ ತನಿಖೆಯನ್ನು ಪ್ರಾರಂಭಿಸಿದ್ದು, ಸ್ಥಳದಲ್ಲಿ ಹೆಚ್ಚಿನ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಅಧಿಕಾರಿಗಳು ಶೂಟರ್‌ಗಳ ಗುರುತು ಮತ್ತು ಉದ್ದೇಶ ಪತ್ತೆಹಚ್ಚಲು ಸಿಸಿಟಿವಿ ದೃಶ್ಯಗಳು ಹಾಗೂ ಸಾಮಾಜಿಕ ಮಾಧ್ಯಮದ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

ಭದ್ರತೆ ಬಗ್ಗೆ ಚರ್ಚೆ

ಇದಕ್ಕೂ ಮುನ್ನ ಜುಲೈ 10 ಮತ್ತು ಆಗಸ್ಟ್ 7ರಂದು ಇದೇ ಕೆಫೆಯಲ್ಲಿ ಗುಂಡಿನ ಚಕಮಕಿ ನಡೆದಿತ್ತು. ಆಗಲೂ ಮುಂಭಾಗದ ಗಾಜಿನ ಕಿಟಕಿಗಳು ಒಡೆದು ಹೋಗಿದ್ದರೂ, ಯಾರಿಗೂ ಗಾಯವಾಗಿರಲಿಲ್ಲ. ಈ ಘಟನೆಗಳ ನಂತರ ಕೆಲವು ದಿನಗಳ ಕಾಲ ಕೆಫೆ ಮುಚ್ಚಲಾಗಿತ್ತು. ನಂತರ ಸರ್ರೆ ಮೇಯರ್ ಬ್ರೆಂಡಾ ಲಾಕ್ ಅವರ ಉಪಸ್ಥಿತಿಯಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಕೆಫೆಯನ್ನು ಮತ್ತೆ ಸಾರ್ವಜನಿಕರಿಗೆ ತೆರೆಯಲಾಯಿತು.

ಇತ್ತೀಚಿನ ದಾಳಿ ಸರ್ರೆ ನಗರದಲ್ಲಿ ಭದ್ರತಾ ಪರಿಸ್ಥಿತಿ ಮತ್ತು ಅಕ್ರಮ ಗ್ಯಾಂಗ್ ಚಟುವಟಿಕೆಗಳ ಬಗ್ಗೆ ಮತ್ತೆ ಚರ್ಚೆ ಹುಟ್ಟುಹಾಕಿದೆ. ಕಪಿಲ್ ಶರ್ಮಾ ಅವರ ಕೆಫೆಯ ಮೇಲಿನ ಮೂರನೇ ದಾಳಿ ಸ್ಥಳೀಯ ಸಮುದಾಯದ ಆತಂಕವನ್ನು ಹೆಚ್ಚಿಸಿದೆ ಮತ್ತು ಪೊಲೀಸರು ತಕ್ಷಣ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.