ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಕನ್ವರಿಯಾತ್ರಿಗಳು ಸಿಆರ್‌ಪಿಎಫ್ ಯೋಧನ ಮೇಲೆ ಹಲ್ಲೆ ನಡೆಸಿದ್ದಾರೆ. ಟಿಕೆಟ್ ವಿಚಾರದಲ್ಲಿ ಆರಂಭವಾದ ವಾಗ್ವಾದ ಹಲ್ಲೆಯಲ್ಲಿ ಅಂತ್ಯಗೊಂಡಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಯೋಧನ ಮೇಲೆ ಕನ್ವರಿಗಳ ದಾದಾಗಿರಿ:

ಆಘಾತಕಾರಿ ಘಟನೆಯೊಂದರಲ್ಲಿ ಕನ್ವರಿಯಾತ್ರಿಗಳು ಸಿಆರ್‌ಪಿಎಫ್‌ ಜವಾನನೊಬ್ಬನನ್ನು ನೆಲಕ್ಕೆ ಬೀಳಿಸಿ ಹಿಗ್ಗಾಮುಗ್ಗಾ ಥಳಿಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ. ಟಿಕೆಟ್‌ಗೆ ಸಂಬಂಧಿಸಿದಂತೆ ಸಿಆರ್‌ಪಿಎಫ್ ಯೋಧ ಹಾಗೂ ಕನ್ವರಿಯಾತ್ರಿಗಳ ಮಧ್ಯೆ ವಾಗ್ವಾದವಾಗಿದ್ದು, ಕುಪಿತಗೊಂಡ ಕನ್ವರಿಯಾತ್ರಿಗಳು ಸಿಆರ್‌ಪಿಎಫ್‌ ಜವಾನನ್ನು ಕೆಳಗೆ ಬೀಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಘಟನೆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕನ್ವರಿಯಾತ್ರೆಯ ವೇಳೆ ಶಾಂತವಾಗಿ ವರ್ತಿಸಬೇಕಾದ ಕನ್ವರಿಗಳು ಗೂಂಡಾಗಳಂತೆ ವರ್ತಿಸಿರುವುದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗ್ತಿದೆ.

ಶನಿವಾರ ಬೆಳಗ್ಗೆ ಈ ಘಟನೆ ನಡೆದಿದೆ. ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್‌ನ ಸಿಬ್ಬಂದಿ ಮಿರ್ಜಾಪುರ ರೈಲು ನಿಲ್ದಾಣದಲ್ಲಿ ಬ್ರಹ್ಮಪುತ್ರ ಮೇಲ್‌ ರೈಲಿಗಾಗಿ ಕಾಯುತ್ತಿದ್ದಾಗ ಕನ್ವರಿಯಾತ್ರಿಗಳಿಗೂ ಯೋಧನಿಗೂ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದಿದೆ. ಈ ವಾಗ್ವಾದ ವಿಕೋಪಕ್ಕೆ ತಿರುಗಿದ್ದು, ಕನ್ವರಿಯಾತ್ರಿಗಳು ಯೋಧನನ್ನು ಸುತ್ತುವರೆದು ಹಲ್ಲೆ ಮಾಡಿದ್ದಾರೆ. ಆತನನ್ನು ನೆಲಕ್ಕೆ ಬೀಳಿಸಿ ಕಾಲಿನಿಂದ ತುಳಿದಿದ್ದಾರೆ.

ಕನ್ವರಿಯಾತ್ರಿಗಳು ಎಲ್ಲರೂ ಕೇಸರಿ ಉಡುಪು ಧರಿಸಿದ್ದು, ಅವರ ವರ್ತನೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಜುಲೈ 11ರಿಂದ ಕನ್ವರಿಯಾತ್ರೆ ಆರಂಭವಾಗಿದ್ದು, ಶಿವಭಕ್ತರು ಹರಿದ್ವಾರ ಗಂಗೋತ್ರಿ ಮುಂತಾದ ಪವಿತ್ರ ಕ್ಷೇತ್ರಗಳಿಗೆ ಹೋಗಿ ಗಂಗೆಯನ್ನು ಬಿಂದಿಗೆಯಲ್ಲಿ ತುಂಬಿಕೊಂಡು ಶಿವನ ಆಲಯಗಳಲ್ಲಿ ದೇವರಿಗೆ ಅಭಿಷೇಕ ಮಾಡುತ್ತಾರೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿ ಬಂದಿದೆ.

Scroll to load tweet…

ಹೋಮ್‌ಗಾರ್ಡನ್ನು 5 ಕಿ.ಮೀ. ದೂರ ಎಳೆದೊಯ್ದ ಕಾರು

ಹಾಗೆಯೇ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಕಾರಿನಲ್ಲಿ ಚಲಾಯಿಸುತ್ತಿದ್ದ ಗುಂಪೊಂದು ಕಾರಿನ ಬೊನೇಟ್ ಮೇಲೆ ಬಿದ್ದ ಹೋಮ್‌ಗಾರ್ಡ್‌ ಸಿಬ್ಬಂದಿಯನ್ನು 5 ಕಿಲೋ ಮೀಟರ್‌ಗೂ ದೂರ ಎಳೆದೊಯ್ದಂತಹ ಆಘಾತಕಾರಿ ಘಟನೆ ನಡೆದಿದೆ.

ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಕಾರಿನ ಬೊನೇಟ್ ಮೇಲೇ ಗೃಹ ರಕ್ಷಕ ದಳದ ಸಿಬ್ಬಂದಿ ಇದ್ದರೂ ಕ್ಯಾರೇ ಮಾಡದ ಕಿಡಿಗೇಡಿಗಳು ಸುಮಾರು 5 ಕಿಲೋ ಮೀಟರ್‌ವರೆಗೆ ಆತನನ್ನು ಎಳೆದೊಯ್ದು ಸಿಗ್ನಲ್‌ನಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಅದೃಷ್ಟವಶಾತ್ ಗೃಹ ರಕ್ಷಕ ಸಿಬ್ಬಂದಿ ಗಟ್ಟಿಯಾಗಿ ಬೊನೇಟ್ ಮೇಲೆ ಹಿಡಿತ ಸಾಧಿಸಿದ್ದರಿಂದ ಜೀವ ಉಳಿದಿದೆ. ಈ ಆಘಾತಕಾರಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಿಡಿಗೇಡಿಗಳ ಕೃತ್ಯಕ್ಕೆ ಭಾರಿ ಆಕ್ರೋಶ ವ್ಯಕ್ತವಾಗ್ತಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿ ಬಂದಿದೆ.

Scroll to load tweet…

ಗಜಕೇಸರಿಯ ಪ್ರತಾಪಕ್ಕೆ ಆಟಿಕೆಗಳಾದ ವಾಹನಗಳು

ಕಾಡಾನೆಯೊಂದರ ಸಿಟ್ಟಿಗೆ ವಾಹನಗಳು ಆಟದ ಆಟಿಕೆಯಂತೆ ಚೆಲ್ಲಾಪಿಲ್ಲಿಯಾದಂತಹ ಘಟನೆ ಉತ್ತರಾಖಂಡ್‌ ರಾಜ್ಯದ ಡೆಹ್ರಾಡೂನ್‌ ಡೋಯ್‌ವಾಲಾ ಪ್ರದೇಶದಲ್ಲಿ ನಡೆದಿದೆ. ಕನ್ವರ್‌ಯಾತ್ರೆಯ ಸಮಯದಲ್ಲೇ ರಸ್ತೆಗೆ ನುಗ್ಗಿದ ಕಾಡನೆಯೊಂದು ರಸ್ತೆಯಲ್ಲಿದ್ದ ಟ್ರಾಕಟರ್ ಲಾರಿಗಳು ಹಾಗೂ ಬೈಕು ಸೇರಿದಂತೆ ಹಲವು ವಾಹನಗಳನ್ನು ಆಟಿಕೆಗಳಂತೆ ತಳ್ಳಿ ಎಸೆದಿದ್ದು, ಈ ದೃಶ್ಯವೂ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Scroll to load tweet…

ಇಲ್ಲಿನ ಮಣಿ ಮೈ ದೇಗುಲದ ಸಮೀಪ ಕನ್ವರಿಯಾತ್ರಿಗಳು ಮೆರವಣಿಗೆ ಸಾಗುತ್ತಿದ್ದಾಗ ರಸ್ತೆಗೆ ನುಗ್ಗಿದ ಕಾಡಾನೆ ಅಲ್ಲಿದ್ದ ವಾಹನಗಳನ್ನು ಚೆಲ್ಲಾಪಿಲ್ಲಿ ಮಾಡಿ ತನ್ನ ಪ್ರತಾಪವನ್ನು ವಾಹನಗಳ ಮೇಲೆ ತೋರಿಸಿತು. ಇದು ಅಲ್ಲಿದ್ದ ಜನರನ್ನು ಭಯದಿಂದ ಓಡುವಂತೆ ಮಾಡಿದೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ತಕ್ಷಣ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಆನೆಯನ್ನು ಕಾಡಿಗೆ ಅಟ್ಟುವ ಪ್ರಯತ್ನ ಮಾಡಿದ್ದಾರೆ. ಘಟನೆಯಲ್ಲಿ ವಾಹನಗಳು ಜಖಂ ಆಗಿವೆ. ಆದರೆ ಮನುಷ್ಯರಿಗೆ ಹಾನಿಯಾಗಿಲ್ಲ.