ಶಾಲೆಯಲ್ಲಿ ಪ್ರಾಣಪ್ರತಿಷ್ಠೆ ಸಂಭ್ರಮಕ್ಕೆ ಬ್ರೇಕ್, ತಮಿಳುನಾಡು ಸರ್ಕಾರದ ವಿರುದ್ಧ ಅಣ್ಣಾಮಲೈ ಗರಂ!
ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠೆ ಸಂಭ್ರಮದಲ್ಲಿ ಪಾಲ್ಗೊಳ್ಳಲು ಸ್ವಯಂ ಪ್ರೇರಿತವಾಗಿ ಇಚ್ಚಿಸುವ ಶಾಲೆಗಳಿಗೆ ತಮಿಳುನಾಡು ಸರ್ಕಾರ ಅನುಮತಿ ಪಡೆಯುವಂತೆ ನಿರ್ಬಂಧ ವಿಧಿಸಲಾಗುತ್ತಿದೆ ಎಂದು ಅಣ್ಣಾಮಲೈ ಗಂಭೀರ ಆರೋಪ ಮಾಡಿದ್ದಾರೆ.
ಚೆನ್ನೈ(ಜ.21) ಸನತಾನ ಧರ್ಮದ ನಾಶಕ್ಕೆ ಕರೆಕೊಟ್ಟ ತಮಿಳುನಾಡು ಸರ್ಕಾರ ಸಚಿವರ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠೆ ಸಂಭ್ರಮಕ್ಕೆ ತಮಿಳುನಾಡಿನಲ್ಲಿ ನಿರ್ಬಂಧ ವಿಧಿಸಲಾಗಿದೆ ಅನ್ನೋ ಆರೋಪ ಬಲವಾಗುತ್ತಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್ ಸರ್ಕಾರದ ನಿರ್ಬಂಧ ವಿರುದ್ಧ ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಇದೀಗ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಶಾಲೆಗಳಲ್ಲಿನ ಸಂಭ್ರಮಕ್ಕೆ ಅನುಮತಿ ನಿರಾಕರಿಸುವ ತಮಿಳುನಾಡು ಸರ್ಕಾರದ ನಿರ್ಧಾರದ ವಿರುದ್ಧ ಗರಂ ಆಗಿದ್ದಾರೆ.
ಖಾಸಗಿ ಶಾಲೆಗಳು ತಮ್ಮ ಶಾಲಾ ಆವರಣದಲ್ಲಿ ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠೆ ಸಂಭ್ರಮ ಅಥವಾ ಶ್ರೀರಾಮನ ಕುರಿತು ಯಾವುದೇ ಕಾರ್ಯಕ್ರಮ ಆಯೋಜಿಸಲು ಜಿಲ್ಲಾಧಿಕಾರಿ ಅಥವಾ ಸ್ಥಳೀಯ ನ್ಯಾಯಾಲಯದಿಂದ ಅನುಮತಿ ಪಡೆಯುವಂತೆ ಸರ್ಕಾರ ಆದೇಶ ನೀಡಿದೆ ಎಂದು ಅಣ್ಣಾಮಲೈ ಆರೋಪಿಸಿದ್ದಾರೆ. ಭಗವಾನ್ ಶ್ರೀರಾಮ ಭಕ್ತರನ್ನು ಪೊಲೀಸ್, ನ್ಯಾಯಾಲಯದ ಮೂಲಕ ಬೆದರಿಸುವ ತಮಿಳುನಾಡು ಡಿಎಂಕೆ ಸರ್ಕಾರದ ವಿರುದ್ದ ಅಣ್ಣಾಮಲೈ ಆಕ್ರೋಶ ಹೊರಹಾಕಿದ್ದಾರೆ.
ತಮಿಳುನಾಡಿನಲ್ಲಿ ರಾಮಮಂದಿರ ಪ್ರಾಣಪ್ರತಿಷ್ಠೆ ನೇರಪ್ರಸಾರ ಬ್ಯಾನ್, ನಿರ್ಮಲಾ ಗಂಭೀರ ಆರೋಪ!
ತಮಿಳುನಾಡು ಪೊಲೀಸರು ಶಾಲೆಗಳಿಗೆ ಅನುಮತಿ ನಿರಾಕರಿಸುತ್ತಿದ್ದಾರೆ. ಖಾಸಗಿ ಶಾಲೆಗಳು ಸ್ವಯಂ ಪ್ರೇರಿತವಾಗಿ ತಮ್ಮ ಶಾಲಾ ಆವರಣದಲ್ಲಿ ರಾಮ ಮಂದಿರ ಪ್ರಾಣಪ್ರತಿಷ್ಠೆ ಸಂಭ್ರಮದಲ್ಲಿ ಪಾಲ್ಗೊಳ್ಳಲು, ಶ್ರೀರಾಮನ ಕುರಿತ ಕಾರ್ಯಕ್ರಮ ಆಯೋಜಿಸಲು ಜಿಲ್ಲಾಧಿಕಾರಿ ಅಥವಾ ಸ್ಥಳೀಯ ನ್ಯಾಯಲಯದಿಂದ ಅನುಮತಿ ಪಡೆಯುವಂತೆ ತಮಿಳುನಾಡು ಸರ್ಕಾರ ಹೇಳಿದೆ. ಡಿಎಂಕೆ ಸರ್ಕಾರ ಪೊಲೀಸರನ್ನು ತಮ್ಮ ಉದ್ದೇಶಕ್ಕೆ ಬಳಸಿಕೊಳ್ಳುವುದು ನಿಲ್ಲಿಸಲಿ. ಭಗವಾನ್ ಶ್ರೀರಾಮ ಭಕ್ತರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಲಿ ಎಂದು ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ.
ಈಗಾಗಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತಮಿಳುನಾಡು ಡಿಎಂಸೆ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠಿ ನೇರಪ್ರಾರಕ್ಕೆ ತಮಿಳುನಾಡಿನಲ್ಲಿ ನಿರ್ಬಂಧ ವಿಧಿಸಲಾಗಿದೆ.ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಶ್ರೀರಾಮನ ಹೆಸರಿನಲ್ಲಿ ಯಾವುದೇ ಪೂಜೆ, ಭಜನೆಗೆ ಅವಕಾಶವಿಲ್ಲ ಎಂದು ಮೌಖಿಕ ಆದೇಶ ನೀಡಲಾಗಿದೆ ಎಂದು ನಿರ್ಮಾಲ ಸೀತಾರಾಮನ್ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ವಿರುದ್ಧ ಹೋರಾಡಿ, ಶ್ರೀರಾಮನ ವಿರುದ್ಧವಲ್ಲ, ತಮ್ಮ ನಾಯಕರಿಗೆ ಕಾಂಗ್ರೆಸ್ ಮುಖಂಡನ ಸಲಹೆ!
ಇನ್ನು ಶ್ರೀರಾಮನ ಹೆಸರಿನಲ್ಲಿ ಅನ್ನಸಂತರ್ಪಣೆ, ಕಾರ್ಯಕ್ರಮ ಆಯೋಜನೆಗೂ ಅವಕಾಶ ನೀಡುತ್ತಿಲ್ಲ. ತಮಿಳುನಾಡು ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ನಿರ್ಮಲಾ ಸೀತಾರಾಮನ್ ತೀವ್ರವಾಗಿ ಖಂಡಿಸಿದ್ದರು. ಇದೀಗ ಅಣ್ಣಾಮಲೈ ಕೂಡ ತಮಿಳುನಾಡು ಸರ್ಕಾರದ ಹಿಂದೂ ವಿರೋಧಿ ನೀತಿ ವಿರುದ್ಧ ಗುಡುಗಿದ್ದಾರೆ.