ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ನಟಿ ಜ್ಯೋತಿಕಾ ಬೆಂಬಲ ಸೂಚಿಸಿದ್ದಾರೆ. ಸಚಿವರನ್ನು ಬದಲಿಸಲ್ಲ ಎಂದು ಸರ್ಕಾರ ಪಟ್ಟು ಹಿಡಿದಿದೆ. ಆದರೆ, ರಾಜೀನಾಮೆ ಪಡೆಯದಿದ್ದರೆ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಸಿಜೆಪಿ ಎಚ್ಚರಿಕೆ
ನವದೆಹಲಿ (ಜು.25): ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್(Dharmendra Pradhan) ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ನಟಿ ಜ್ಯೋತಿಕಾ(Actress Jyotika) ಬೆಂಬಲ ಘೋಷಿಸಿದ್ದಾರೆ.
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲೇಬೇಕು
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿ ತಮ್ಮ ಸ್ಥಾನದಿಂದ ಕೆಳಗಿಳಿಯಬೇಕು. ನಾನು ಈ ದೇಶದ ವಿದ್ಯಾರ್ಥಿಗಳು ಮತ್ತು ಅವರ ಭವಿಷ್ಯದ ಜೊತೆ ನಿಲ್ಲುತ್ತೇನೆ. ನಾನು ಜವಾಬ್ದಾರಿ, ಪ್ರಜಾಪ್ರಭುತ್ವವಾದಿ ಭಾರತ ಮತ್ತು ಸುಧಾರಿತ ಶಿಕ್ಷಣ ವ್ಯವಸ್ಥೆಯ ಪರವಾಗಿದ್ದೇನೆ' ಎಂದು ಜ್ಯೋತಿಕಾ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಸೋನಮ್ ವಾಂಗ್‌ಚುಕ್, ಅಭಿಜಿತ್ ದಿಪ್ಕೆ, ಸೌರವ್ ದಾಸ್ ಮತ್ತು ಇಡೀ Gen Z ಪೀಳಿಗೆಯನ್ನು ಅವರು ಶ್ಲಾಘಿಸಿದ್ದಾರೆ.'ನಾನೊಬ್ಬಳು ತಾಯಿಯಾಗಿ ನನ್ನ ಮಕ್ಕಳನ್ನು ನಿಮ್ಮಂತೆಯೇ ಬೆಳೆಸಲು ನಾನು ಬಯಸುತ್ತೇನೆ. ನಾವೇ ಭಾರತ ಎಂದು ಸಾಬೀತುಪಡಿಸಿದ್ದಕ್ಕೆ ಮತ್ತು ನಮ್ಮನ್ನು ನಿರ್ಭಯರನ್ನಾಗಿ ಮಾಡಿದ್ದಕ್ಕೆ ಸಿಜೆಪಿಗೆ ಧನ್ಯವಾದಗಳು' ಎಂದು ಜ್ಯೋತಿಕಾ ಹೇಳಿದ್ದಾರೆ.
ಇತ್ತ ಧರ್ಮೇಂದ್ರ ಪ್ರಧಾನ್ ಅವರನ್ನು ಬದಲಿಸುವಂತೆ ಕೇಳುತ್ತಿರುವ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಳ್ಳುವ ಸಾಧ್ಯತೆ ಇಲ್ಲ. ಇಂದು ಮಧ್ಯಾಹ್ನ ಸಿಜೆಪಿ ಜೊತೆ ನಡೆಯಲಿರುವ ಚರ್ಚೆಯಲ್ಲಿ, ಬೇರೆ ಬೇಡಿಕೆಗಳನ್ನು ಪರಿಗಣಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಲಿದೆ. ಪ್ರಧಾನ್ ಅವರನ್ನು ಬದಲಿಸಿದರೆ, ಇದು ಮತ್ತಷ್ಟು ಪ್ರತಿಭಟನೆಗಳಿಗೆ ಕಾರಣವಾಗಬಹುದು ಎಂದು ಸರ್ಕಾರ ಭಾವಿಸಿದೆ. ಆದರೆ, ಸಚಿವರು ರಾಜೀನಾಮೆ ನೀಡದಿದ್ದರೆ ದೇಶಾದ್ಯಂತ ಪ್ರತಿಭಟನೆಗಳನ್ನು ಆಯೋಜಿಸುವುದಾಗಿ ಮತ್ತು 24 ಗಂಟೆಗಳ ಒಳಗೆ ಸಂಸತ್ ಮಾರ್ಚ್ ಅನ್ನು ಪುನರಾರಂಭಿಸುವುದಾಗಿ ಸಿಜೆಪಿ ಘೋಷಿಸಿದೆ.
ಸಿಜೆಪಿ ಪ್ರತಿನಿಧಿಗಳೊಂದಿಗೆ ಕೇಂದ್ರ ಸರ್ಕಾರದ ನಿರ್ಣಾಯಕ ಸಭೆ ಮಧ್ಯಾಹ್ನ ನಡೆಯಲಿದೆ. ಈ ಪ್ರತಿಭಟನೆಗಳ ನಡುವೆಯೇ, ಮಕ್ಕಳ ಪ್ರಶ್ನೆಗಳಿಗೆ ಉತ್ತರ ನೀಡಬೇಕು, ಮಾತುಕತೆ ಮತ್ತು ಒಮ್ಮತ ಮುಖ್ಯ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರತಿಕ್ರಿಯಿಸಿದ್ದಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಹೆಚ್ಚಿನ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ, ಇಂದೂ ಕೂಡ 18 ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗುತ್ತದೆ.
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಒಪ್ಪದಿದ್ದರೆ ಸಿಜೆಪಿ ಪ್ಲಾನ್ ಬಿ ಏನು?
ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣದಲ್ಲಿ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆ ನಡೆಯುತ್ತಿದೆ. ಈ ನಡುವೆ ಕೇಂದ್ರ ಸರ್ಕಾರ ಸಿಜೆಪಿ ಪಾರ್ಟಿಯೊಂದಿಗೆ ಸಭೆ ನಡೆಸಿದೆ. ಸಭೆ ಬಳಿಕ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಕ್ರಿಯಿಸಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯೇ ನಮ್ಮ ಮುಖ್ಯ ಬೇಡಿಕೆ ಎಂದು ಸ್ಟಷ್ಟಪಡಿಸಿದೆ.
ಸಭೆಯ ವೇಳೆ ಪರಿಹಾರ ಮತ್ತು ಕಾನೂನು ಸಂಬಂಧಿತ ವಿಷಯಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಿದರೂ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲವೆಂದು ಪಕ್ಷದ ರಾಷ್ಟ್ರೀಯ ವಕ್ತಾರ ಅಶುತೋಷ್ ರಾಂಕಾ ಹೇಳಿದ್ದಾರೆ. ಸರ್ಕಾರ ಈ ಬೇಡಿಕೆಗೆ ಸ್ಪಷ್ಟ ಪ್ರತಿಕ್ರಿಯೆಯನ್ನು ನೀಡದಿದ್ದರೆ, ಅಂತಹ ಸಭೆಗಳು ಅರ್ಥಹೀನ. ಪಕ್ಷವು ತನ್ನ ಭವಿಷ್ಯದ ಕಾರ್ಯತಂತ್ರದ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದರು.
ಇಂದು ಸರ್ಕಾರದಿಂದ ಲಿಖಿತ ಒಪ್ಪಿಗೆ ಪಡೆಯುವ ಭರವಸೆ ಇದೆ. ಈ ವಿಷಯಗಳ ಕುರಿತು ಚರ್ಚೆಗಳು ಮುಂದುವರೆದಿವೆ, ಆದರೆ ಚಳವಳಿಯ ಪ್ರಮುಖ ಬೇಡಿಕೆ ಇನ್ನೂ ಈಡೇರಿಲ್ಲ ಎಂದು ಅವರು ಹೇಳಿದರು.


