ಉನ್ನತ ಶಿಕ್ಷಣ ಸಂಸ್ಥೆಗಳ ಪೈಕಿ ದೇಶದಲ್ಲೇ ಅತ್ಯಂತ ಕಡಿಮೆ ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ, ವಸತಿ ಸೌಲಭ್ಯ ನೀಡುತ್ತಿರುವ ಸಂಸ್ಥೆ ದೆಹಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು). ಆದರೆ ಜೆಎನ್‌ಯು ಕಾರ್ಯಕಾರಿ ಮಂಡಳಿಯು ಇತ್ತೀಚೆಗೆ ಶುಲ್ಕ ಹೆಚ್ಚಳ ಮಾಡಲು ಕೈಗೊಂಡಿರುವ ನಿರ್ಣಯದ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶಗೊಂಡು ಹತ್ತು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಆರಂಭವಾದ ಮೂರು ದಿನದಲ್ಲೇ ಶುಲ್ಕ ಏರಿಕೆಯನ್ನು ಬಡ ವಿದ್ಯಾರ್ಥಿಗಳಿಗೆ ವಾಪಸ್‌ ಪಡೆಯಲಾಗಿದೆ. ಆದರೂ ಪ್ರತಿಭಟನೆ ನಿಂತಿಲ್ಲ.

ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾರಣ ಏನು?

ಜೆಎನ್‌ಯು ಕಾರ್ಯಕಾರಿ ಮಂಡಳಿ ಹಾಸ್ಟೆಲ್‌ ಶುಲ್ಕ ಹೆಚ್ಚು ಮಾಡಿದೆ ಮತ್ತು ವಿದ್ಯಾರ್ಥಿಗಳಿಗೆ ವಸ್ತ್ರ ಸಂಹಿತೆ ಜಾರಿ ಮಾಡಿದೆ. ಕ್ಯಾಂಪಸ್‌ನಲ್ಲಿ ಪ್ರತಿಭಟನೆಗೆ ತಡೆ ನೀಡಲು ಮತ್ತು ಕಫä್ರ್ಯ ಸಮಯ ನಿಗದಿಗೆ ಅವಕಾಶ ನೀಡುವ ಹಾಸ್ಟೆಲ್‌ ಕರಡು ಕೈಪಿಡಿ ರೂಪಿಸಿದೆ.

ಜೆಎನ್‌ಯುನಲ್ಲಿ ಮತ್ತೆ ಆಜಾದಿ ಘೋಷಣೆ?

ಹಾಸ್ಟಲ್‌ ಶುಲ್ಕ ಕಡಿಮೆ ಮಾಡುವಂತೆ ಮತ್ತು ಕರಡು ಕೈಪಿಡಿಯನ್ನು ಹಿಂದಕ್ಕೆ ಪಡೆಯುಂತೆ ಒತ್ತಾಯಿಸಿ ಜೆಎನ್‌ಯು ವಿದ್ಯಾರ್ಥಿಗಳು ಕಳೆದೊಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ಪ್ರತಿಭಟನಾನಿರತ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಬಲಪ್ರಯೋಗ ಮತ್ತು ಬಂಧನದ ವಿಷಯ ಸಂಸತ್ತಿನ ಮೇಲ್ಮನೆಯಲ್ಲಿಯೂ ಪ್ರತಿಧ್ವನಿಸಿದೆ.

ಶುಲ್ಕ ಹೆಚ್ಚಿಸಿದ್ದೆಷ್ಟು? ಇಳಿಕೆ ಮಾಡಿರುವುದೆಷ್ಟು?

ಮೊದಲು ಡಬಲ್ ರೂಮ್‌ಗೆ 10 ರು. ಮಾಸಿಕ ಬಾಡಿಗೆ ಇತ್ತು. ಈ ದರವನ್ನು 300 ರು.ಗೆ ಏರಿಕೆ ಮಾಡಲಾಗಿತ್ತು. ಹಾಗೆಯೇ ಸಿಂಗಲ್‌ ರೂಮ್‌ಗೆ 20 ರು. ಇದ್ದ ಬಾಡಿಗೆಯನ್ನು 600 ರು.ಗೆ ಏರಿಕೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಪ್ರತಿಭಟಿಸಿದ ಬಳಿಕ ಬಡತನ ರೇಖೆಗಿಂತ ಕೆಳಗಿರುವ ವಿದ್ಯಾರ್ಥಿಗಳಿಗೆ ಸಿಂಗಲ್ ರೂಮ್‌ಗೆ ತಿಂಗಳ ಬಾಡಿಗೆ 300 ರು., ಡಬಲ್ ರೂಮ್‌ಗೆ ತಿಂಗಳ ಬಾಡಿಗೆ 150 ರು. ನಿಗದಿಪಡಿಸಲಾಗಿದೆ.

ಎಲ್ಲಾ ವಿದ್ಯಾರ್ಥಿಗಳು ಮೆಸ್‌ಗೆ ಭದ್ರತಾ ಠೇವಣಿ ರೂಪದಲ್ಲಿ 12,000 ರು. ನೀಡಬೇಕೆಂದು ನಿಯಮ ಜಾರಿಗೊಳಿಸಲಾಗಿತ್ತು. ಇದೀಗ ಆ ಮೊತ್ತವನ್ನು 5,500 ರು.ಗೆ ಕಡಿತ ಮಾಡಲಾಗಿದೆ. ಜೊತೆಗೆ ಪ್ರತಿಯೊಬ್ಬ ಜೆಎನ್‌ಯು ವಿದ್ಯಾರ್ಥಿ ತಿಂಗಳಿಗೆ 1,700 ರು. ನಿರ್ವಹಣಾ ವೆಚ್ಚ ನೀಡಬೇಕೆಂದು ನಿಯಮ ರೂಪಿಸಲಾಗಿದೆ. ಒಂದು ವೇಳೆ ವಿದ್ಯಾರ್ಥಿಯು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವನಾದರೆ ಆತನಿಗೆ ರೂಮ್‌ ಬಾಡಿಗೆ, ನಿರ್ವಹಣಾ ವೆಚ್ಚ ಸೇರಿದಂತೆ ಎಲ್ಲದರಲ್ಲೂ ಶೇ.50ರಷ್ಟುರಿಯಾಯಿತಿ ದೊರೆಯಲಿದೆ. ಈ ಇಳಿಕೆಯನ್ನೂ ವಿದ್ಯಾರ್ಥಿಗಳು ಒಪ್ಪುತ್ತಿಲ್ಲ.

ಜೆಎನ್‌ಯು ವಿವೇಕಾನಂದ ಪ್ರತಿಮೆ ಪೀಠ ಮೇಲೆ ಆಕ್ಷೇಪಾರ್ಹ ಸಂದೇಶ!

ವಿದ್ಯಾರ್ಥಿಗಳ ವಾದ ಏನು?

ಪ್ರತಿ ತಿಂಗಳು 2500 ರು. ಮೆಸ್‌ ಬಿಲ್‌, ವಿದ್ಯುತ್‌ ಹಾಗೂ ನೀರಿನ ಬಿಲ್‌ ಸೇರಿ 500 ರು. ಹಾಗೂ ರೂಮ್‌ ರೆಂಟ್‌ ಎಲ್ಲಾ ಸೇರಿದರೆ ವಿದ್ಯಾರ್ಥಿ ವಾರ್ಷಿಕ 60,700 ಪಾವತಿಸಬೇಕಾಗುತ್ತದೆ. ಸಿಂಗಲ… ರೂಮ್‌ನಲ್ಲಿ ಇದ್ದರೆ ಇದೇ ಮೊತ್ತ 62,500 ರು. ಆಗುತ್ತದೆ. ಇಲ್ಲಿನ ಒಟ್ಟು ವಿದ್ಯಾರ್ಥಿಗಳಲ್ಲಿ 40% ವಿದ್ಯಾರ್ಥಿಗಳು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಿಂದ ಬಂದವರು. ಸರ್ಕಾರದ ನಿಯಮಾವಳಿಗಳ ಪ್ರಕಾರ ವಾರ್ಷಿಕ 27,000 ರು.ಗಿಂತ ಕಡಿಮೆ ಆದಾಯ ಹೊಂದಿರುವ ವ್ಯಕ್ತಿಗೆ ಮಾತ್ರ ಬಿಪಿಎಲ್ ಕಾರ್ಡ್‌ ಕೊಡಲಾಗುತ್ತದೆ.

ಇಡೀ ಕುಟುಂಬದ ವರ್ಷದ ಆದಾಯವೇ 27,000 ರು. ಇದ್ದರೆ, ಅದೇ ಕುಟುಂಬದ ವಿದ್ಯಾರ್ಥಿಯನ್ನು ಜೆಎನ್‌ಯುನಲ್ಲಿ ಓದಿಸಲು ಆ ಕುಟುಂಬ ವರ್ಷಕ್ಕೆ 46,600 ರು. ಹೇಗೆ ಭರಿಸುತ್ತದೆ ಎನ್ನುವುದು ವಿದ್ಯಾರ್ಥಿಗಳ ಪ್ರಶ್ನೆ. ಹಾಗೆಯೇ ಶಿಕ್ಷಣ ವ್ಯವಸ್ಥೆಯ ಸಬಲೀಕರಣಕ್ಕೆ ಅಥವಾ ಖಾಸಗಿ ಕಾಲೇಜುಗಳ ಹಾವಳಿ ತಪ್ಪಿಸಲು ಸರ್ಕಾರ ಇಂಥ ಸಬ್ಸಿಡಿ ನೀಡಬೇಕು ಎಂಬ ವಾದವೂ ಕೇಳಿಬರುತ್ತಿದೆ.

100 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಬಂಧನ

ಹಾಸ್ಟೆಲ… ಶುಲ್ಕ ಹೆಚ್ಚಳವನ್ನು ಸಂಪೂರ್ಣ ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿ ಜೆಎನ್‌ಯು ವಿದ್ಯಾರ್ಥಿಗಳು ರಾಜಧಾನಿಯಲ್ಲಿ ಭಾರೀ ಪ್ರತಿಭಟನೆ ನಡೆಸಿ ಸಂಸತ್ತಿನತ್ತ ತೆರಳುತ್ತಿದ್ದಾಗ ಪೊಲೀಸರು 100ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಪೊಲೀಸರು ನಡೆಸಿದ ಲಾಠಿ ಪ್ರಹಾರದಲ್ಲಿ ಅನೇಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಹೊಸ ನಿಯಮ ವಿರೋಧಿಸಿ ರೊಚ್ಚಿಗೆದ್ದ ಕೆಲವು ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಹಲವು ದಿನಗಳಿಂದ ಮುಷ್ಕರ ಹೂಡಿದ್ದು, ಸಹ ಪ್ರಾಧ್ಯಾಪಕಿಯೊಬ್ಬರನ್ನು ಕ್ಲಾಸಿನಲ್ಲೇ 20 ಗಂಟೆಗಳ ಕಾಲ ಕೂಡಿಹಾಕಿದ್ದರು. ನಂತರ ಅವರನ್ನು ಬಿಡಗಡೆ ಮಾಡಲಾಯ್ತು. ಮಹಿಳಾ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಸ್ವಾಮಿ ವಿವೇಕಾನಂದರ ಮೂರ್ತಿಯನ್ನೂ ವಿರೂಪಗೊಳಿಸಿದ್ದರು.

8000 ವಿದ್ಯಾರ್ಥಿಗಳಲ್ಲಿ ಡಾಕ್ಟರೆಟ್‌ ಓದುತ್ತಿರುವವರೇ ಹೆಚ್ಚು!

ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಜೆಎನ್‌ಯುನಲ್ಲಿ ಸದ್ಯ 8000 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅದರಲ್ಲಿ 52% ವಿದ್ಯಾರ್ಥಿಗಳು ಸಮಾಜ ವಿಜ್ಞಾನ, ಸಾಹಿತ್ಯ, ಕಲೆ ವಿಭಾಗದಲ್ಲಿ ಓದುತ್ತಿದ್ದಾರೆ. ಹೊರ ದೇಶಗಳ 1210 ವಿದ್ಯಾರ್ಥಿಗಳಿದ್ದಾರೆ.

ಯುನಿವರ್ಸಿಟಿಯ ಒಟ್ಟು ವಿದ್ಯಾರ್ಥಿಗಳಲ್ಲಿ 55% ವಿದ್ಯಾರ್ಥಿಗಳು ಅಂದರೆ 4,359 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಎಂ.ಫಿಲ್‌ ಮತ್ತು ಪಿ.ಎಚ್‌.ಡಿ ಮಾಡುತ್ತಿದ್ದಾರೆ. ಅಂದರೆ ಇಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಓದುತ್ತಿರುವವರಿಗಿಂತ ಪಿಎಚ್‌ಡಿ ಮಾಡುತ್ತಿರುವವರೇ ಹೆಚ್ಚು.

ಒಬ್ಬ ವಿದ್ಯಾರ್ಥಿಗೆ ಸರ್ಕಾರದಿಂದ 7 ಲಕ್ಷ ರು. ಖರ್ಚು

ಮೂಲ ಸೌಕರ್ಯ, ಕಟ್ಟಡ ನಿರ್ಮಾಣ, ಭೂಮಿ ಇವೆಲ್ಲವುಗಳ ಹೊರತಾಗಿ ಪ್ರತಿ ವರ್ಷ ಜೆಎನ್‌ಯು ಕಾರ‍್ಯನಿರ್ವಹಣೆಗೆ ಸರ್ಕಾರ 556 ಕೋಟಿ ಖರ್ಚು ಮಾಡುತ್ತದೆ. ಅಂದರೆ ಒಬ್ಬ ವಿದ್ಯಾರ್ಥಿಗೆ ಪ್ರತಿ ವರ್ಷ 6.95 ಲಕ್ಷ ರು. ಖರ್ಚು ಮಾಡುತ್ತಿದೆ. ಇತರೆ ಆದಾಯ ಎಲ್ಲವನ್ನೂ ಒಗ್ಗೂಡಿಸಿ ಲೆಕ್ಕ ಹಾಕಿದರೂ 8000 ವಿದ್ಯಾರ್ಥಿಗಳಿಗೆ ಸರ್ಕಾರ ವಾರ್ಷಿಕ 352 ಕೋಟಿ ವ್ಯಯಿಸುತ್ತಿದೆ. ಅಂದರೆ ಪ್ರತಿ ವಿದ್ಯಾರ್ಥಿಯೂ 4.4 ಲಕ್ಷ ಸರ್ಕಾರಿ ಸಬ್ಸಿಡಿ ಪಡೆಯುತ್ತಿದ್ದಾರೆ.