ಮೋದಿ ಆಡಳಿತವನ್ನು ಟೀಕಿಸಿದ ಅಮೆರಿಕದ ಉದ್ಯಮಿಗೆ ಮಾತಿನಲ್ಲೇ ಜಾಡಿಸಿದ ಜೈಶಂಕರ್!
ಅಂದಾಜು 8.5 ಶತಕೋಟಿ ಡಾಲರ್ ಸಂಪತ್ತನ್ನು ಹೊಂದಿರುವ ಅಮೆರಿಕದ ಉದ್ಯಮಿ ಜಾರ್ಜ್ ಸೊರೋಸ್, ಓಪನ್ ಸೊಸೈಟಿ ಫೌಂಡೇಶನ್‌ನ ಸಂಸ್ಥಾಪಕ. ಇದು ಪ್ರಜಾಪ್ರಭುತ್ವ, ಪಾರದರ್ಶಕತೆ ಮತ್ತು ವಾಕ್ ಸ್ವಾತಂತ್ರ್ಯವನ್ನು ಬೆಂಬಲಿಸುವ ಗುಂಪುಗಳಿಗೆ ಅನುದಾನವನ್ನು ನೀಡುತ್ತಿದೆ. ಇತ್ತೀಚೆಗೆ ಅದಾನಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿ ಸೊರೋಸ್ ಸುದ್ದಿಯಾಗಿದ್ದರು.
ನವದೆಹಲಿ (ಫೆ.18): ಹಿಂಡೆನ್‌ಬರ್ಗ್ ವರದಿಯ ಬಳಿಕ ಅದಾನಿ ಗ್ರೂಪ್‌ನಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಹಾಗಿದ್ದರೂ ಕೇಂದ್ರ ಸರ್ಕಾರ ಅದಾನಿ ಗ್ರೂಪ್ ವಿಚಾರದಲ್ಲಿ ಶಾಂತ ರೀತಿಯಿಂದ ವರ್ತನೆ ಮಾಡಿರುವುದಕ್ಕೆ ವಿಪಕ್ಷಗಳು ಕೇಂದ್ರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿವೆ. ಇದರ ನಡುವೆ ಅಮೆರಿಕದ ಉದ್ಯಮಿ ಹಾಗೂ ಪ್ರಜಾಪ್ರಭುತ್ವ, ಪಾರದರ್ಶಕತೆ ಮತ್ತು ವಾಕ್ ಸ್ವಾತಂತ್ರ್ಯವನ್ನು ಬೆಂಬಲಿಸುವ ಗುಂಪುಗಳಿಗೆ ಅನುದಾನ ನೀಡುವ ಓಪನ್ ಸೊಸೈಟಿ ಫೌಂಡೇಷನ್ ಸಂಸ್ಥಾಪಕ ಜಾರ್ಜ್ ಸೊರೋಸ್ ಪ್ರಧಾನಿ ಮೋದಿಯ ವಿರುದ್ಧ ಟೀಕೆ ಮಾಡಿದ್ದರು. 'ಅದಾನಿ ಹಗರಣದಿಂದ ಇದೀಗ ಮೋದಿ ಸರ್ಕಾರ ಅಲುಗಾಡತೊಡಗಿದೆ. ಜೊತೆಗೆ ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಭಾರತದಲ್ಲಿ ಬಹುದೊಡ್ಡ ಬದಲಾವಣೆಗೆ ಕಾರಣವಾಗಲಿದೆ’ ಎಂದು ಜಾರ್ಜ್ ಸೊರೋಸ್ ಹೇಳಿದ್ದರು. ಜಾರ್ಜ್ ಸೊರೋಸ್ ಮಾತಿಗೆ ನೇರವಾಗಿ ಟೀಕೆ ಮಾಡಿರುವ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಜೈಂಶಕರ್, ಚುನಾವಣೆಯಲ್ಲಿ ತಾವು ನಿರೀಕ್ಷೆ ಮಾಡಿದ ಫಲಿತಾಂಶ ಬರದೇ ಇದ್ದಾಗ ಕೆಲವೊಬ್ಬರು ಪ್ರಜಾಪ್ರಭುತ್ವ ಸರ್ಕಾರವನ್ನು ಪ್ರಶ್ನೆ ಮಾಡುವ ಗೀಳು ಬೆಳೆಸಿಕೊಂಡಿರುತ್ತಾರೆ. ಅಂಥವರಲ್ಲಿ ಜಾರ್ಜ್ ಸೊರೋಸ್ ಕೂಡ ಒಬ್ಬರು ಎಂದು ಹೇಳುವ ಮೂಲಕ ಮಾತಿನಲ್ಲಿಯೇ ತಿವಿದಿದ್ದಾರೆ.
'ಜಾರ್ಜ್ ಸೊರೋಸ್ ಒಬ್ಬ, ವೃದ್ಧ, ಶ್ರೀಮಂತ, ತನ್ನದೇ ಅಭಿಪ್ರಾಯ ಹೊಂದಿರುವ ಅಪಾಯಕಾರಿ ವ್ಯಕ್ತಿ' ಎಂದು ಅವರು ಕರೆದಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ರಕ್ಷಣಾ ಕ್ಷೇತ್ರದ ಡಾವೋಸ್ ಶೃಂಗಸಭೆ ಎಂದೇ ಕರೆಯಲಾಗುವ ಮ್ಯೂನಿಕ್ ಭದ್ರತಾ ಶೃಂಗಸಭೆಯಲ್ಲಿ ಭಾಗವಹಿಸಿರುವ ಜೈಶಂಕರ್ ಇದೇ ವೇದಿಕೆಯನ್ನು ಜಾರ್ಜ್ ಸೊರೋಸ್‌ರ ಜನ್ಮಜಾಲಾಡಿದ್ದಾರೆ. 'ಕೆಲ ವರ್ಷಗಳ ಹಿಂದೆ ಇದೇ ವ್ಯಕ್ತಿ ಭಾರತದಲ್ಲಿ ನಮ್ಮ ಸರ್ಕಾರ ಮುಸ್ಲಿಮರ ಪೌರತ್ವವನ್ನು ಕಸಿದುಕೊಳ್ಳುವ ಯೋಜನೆ ರೂಪಿಸುತ್ತಿದೆ ಎಂದು ಆರೋಪ ಮಾಡಿದ್ದರು. ಇದು ಆಗಿಯೇ ಇಲ್ಲ. ಅದೊಂದು ಹಾಸ್ಯಾಸ್ಪದ ಯೋಚನೆಯಾಗಿತ್ತು. ಆದರೆ, ಅವರು ಹಾಗೆ ಹೇಳಿದ್ದರ ಹಿಂದಿನ ಅರ್ಥವೇನೆಂದು ನೀವು ತಿಳಿದುಕೊಳ್ಳಬೇಕು. ನ್ಯೂಯಾರ್ಕ್‌ನಲ್ಲಿರುವ ಸೊರೋಸ್‌ನಂಥ ಗಣ್ಯನನ್ನು ವೃದ್ಧ, ಶ್ರೀಮಂತ, ತನ್ನದೇ ಅಭಿಪ್ರಾಯ ಹೊಂದಿರುವ ಅಪಾಯಕಾರಿ ವ್ಯಕ್ತಿಯಾಗಿ ನಾನು ನೋಡುತ್ತೇನೆ. ಇಂಥ ವ್ಯಕ್ತಿಗಳು ಪ್ರಪಂಚವು ತನ್ನದೇ ದೃಷ್ಟಿಕೋನದಲ್ಲಿ, ತಾನು ಅಂದುಕೊಂಡ ಹಾಗೆ ಕಾರ್ಯನಿರ್ವಹಿಸಬೇಕು ಎಂದು ಬಯಸುತ್ತಾರೆ. ಆದರೆ, ಅದು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.
ಪ್ರಗತಿಪರ ಹಾಗೂ ಉದಾರವಾದಿ ರಾಜಕೀಯದ ಬೆಂಬಲಿಗನಾಗಿರುವ ಜಾರ್ಜ್ ಸೊರೋಸ್, ಅದಾನಿ ಗ್ರೂಪ್ ವಿರುದ್ಧದ ವಂಚನೆ ಆರೋಪಗಳ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮೌನವಾಗಿದ್ದಾರೆ. ಸಂಸತ್ತಿನಲ್ಲಿ ಅವರು ವಿದೇಶದ ಹೂಡಿಕೆದಾರರ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದಿದ್ದರು. ಈ ಹಗರಣ ಭಾರತ ಸರ್ಕಾರದ ಮೇಲೆ ಮೋದಿಯವರ ಹಿಡಿತವನ್ನು ದೊಡ್ಡ ಮಟ್ಟದಲ್ಲಿ ದುಬರ್ಲ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ಇದರಿಂದಾಗಿ ಭಾರತದಲ್ಲಿ ಕೆಲವು ಸಾಂಸ್ಥಿಕ ಸುಧಾರಣೆಗಳಿಗೆ ಬಾಗಿಲು ತೆರೆಯುತ್ತದೆ. ನಾನು ಭಾರತದಲ್ಲಿ ಪ್ರಜಾಸತಾತ್ಮಕ ಪುನರುಜ್ಜೀವನವನ್ನು ನಿರೀಕ್ಷೆ ಮಾಡುತ್ತೇನೆ' ಎಂದು 92 ವರ್ಷದ ಮ್ಯಾನೇಜರ್ ತಿಳಿಸಿದ್ದಾರೆ.
ಮೋದಿ ಸರ್ಕಾರಕ್ಕೆ ಅದಾನಿ ಗದ್ದಲ ಕುತ್ತು: ಅಮೆರಿಕ ಹೂಡಿಕೆದಾರ ಜಾರ್ಜ್ ಸೊರೋಸ್ ಬಾಂಬ್; ಭಾರಿ ಸಂಚಲನ, ವಿವಾದ ಸೃಷ್ಟಿ
ಸೊರೋಸ್‌ನಂಥ ವ್ಯಕ್ತಿಗಳು ಹೇಗೆಂದರೆ, ಅವರ ಮೆಚ್ಚಿನ ವ್ಯಕ್ತಿ ಚುನಾವಣೆಯಲ್ಲಿ ನಿಂತು ಗೆಲುವು ಸಾಧಿಸಿದರೆ ಅದು ಪ್ರಜಾಪ್ರಭುತ್ವದ ಸರ್ಕಾರ, ಅದೇ ಭಿನ್ನ ಫಲಿತಾಂಶ ಬಂದರೆ ಚುನಾವಣೆಯಲ್ಲೂ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಸುಧಾರಣೆ ಬರಬೇಕು ಎಂದು ಹೇಳುವ ಜನ. ಮುಕ್ತ ಸಮಾಜ ಎನ್ನುವ ವಕಾಲತ್ತಿನ ಅಡಿಯಲ್ಲಿ ಇಂಥ ವ್ಯಕ್ತಿಗಳು ಇದನ್ನೆಲ್ಲ ಮಾತನಾಡುತ್ತಾರೆ ಎಂದು ಜೈಶಂಕರ್ ಹೇಳಿದ್ದಾರೆ.
ದಾವೋಸ್‌ನಲ್ಲಿ ಮೋದಿ, ಟ್ರಂಪ್ ವಿರುದ್ಧ ಬಿಲಿಯನೇರ್ ಸೊರೊಸ್ ವಾಗ್ದಾಳಿ!
"ಪಿಎಂ-ಸಂಬಂಧಿತ ಅದಾನಿ ಹಗರಣ" ಭಾರತದಲ್ಲಿ ಪ್ರಜಾಪ್ರಭುತ್ವದ ಪುನರುಜ್ಜೀವನವನ್ನು ಉಂಟುಮಾಡುತ್ತದೆಯೇ ಎಂಬುದು ಸಂಪೂರ್ಣವಾಗಿ ಕಾಂಗ್ರೆಸ್, ವಿರೋಧ ಪಕ್ಷಗಳು ಮತ್ತು ನಮ್ಮ ಚುನಾವಣಾ ಪ್ರಕ್ರಿಯೆಯ ಮೇಲೆ ಅವಲಂಬಿತವಾಗಿದೆ. ಅದಕ್ಕೂ ಜಾರ್ಜ್ ಸೊರೊಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು. "ನಮ್ಮ ನೆಹರೂವಿಯನ್ ಪರಂಪರೆಯು ಸೊರೋಸ್‌ನಂತಹ ಜನರು ನಮ್ಮ ಚುನಾವಣಾ ಫಲಿತಾಂಶಗಳನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದಿದ್ದರು.