ಮೋದಿ ಸರ್ಕಾರಕ್ಕೆ ಅದಾನಿ ಗದ್ದಲ ಕುತ್ತು: ಅಮೆರಿಕ ಹೂಡಿಕೆದಾರ ಜಾರ್ಜ್ ಸೊರೋಸ್ ಬಾಂಬ್; ಭಾರಿ ಸಂಚಲನ, ವಿವಾದ ಸೃಷ್ಟಿ
ಟರ್ಕಿ ಅಧ್ಯಕ್ಷ ತಯ್ಯಿಪ್ ಎರ್ಡೋಗನ್ ವಿಷಯ ಪ್ರಸ್ತಾಪಿಸುವಾಗಲೂ ಮತ್ತೆ ಮೋದಿಯನ್ನು ಎಳೆತಂದ ಸೊರೋಸ್, ‘ಎರ್ಡೋಗನ್, ಮೋದಿಯ ಜೊತೆಗೆ ಹಲವು ಸಾಮ್ಯತೆ ಹೊಂದಿದ್ದಾರೆ. ಆದರೆ ಇತ್ತೀಚಿನವರೆಗೂ ಮೋದಿ ತಮ್ಮ ಸ್ಥಾನದಲ್ಲಿ ಭದ್ರವಾಗಿದ್ದರು, ಆದರೆ ಎರ್ಡೋಗನ್ ಟರ್ಕಿ ಆರ್ಥಿಕತೆಯನ್ನು ತಪ್ಪಾಗಿ ನಿರ್ವಹಿಸಿ ಇದೀಗ ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದಾರೆ’ ಎಂದು ಹೇಳಿದರು.
ನವದೆಹಲಿ (ಫೆಬ್ರವರಿ 18, 2023): ಗೌತಮ್ ಅದಾನಿ ಒಡೆತನದ ಅದಾನಿ ಸಮೂಹದ ಕುರಿತು ಅಮೆರಿಕದ ಹಿಂಡನ್‌ಬರ್ಗ್ ಸಂಸ್ಥೆಯ ವರದಿ ಬಿಜೆಪಿ ಮತ್ತು ವಿಪಕ್ಷಗಳ ನಡುವೆ ಸಮರಕ್ಕೆ ಕಾರಣವಾಗಿರುವ ಹೊತ್ತಿನಲ್ಲೇ, ಅಮೆರಿಕ ಮೂಲದ ಆಗರ್ಭ ಶ್ರೀಮಂತ, ಹೂಡಿಕೆದಾರ ಮತ್ತು ದಾನಿ ಜಾರ್ಜ್ ಸೊರೋಸ್ ಕೂಡ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕ್ಯಾತೆ ತೆಗೆದಿದ್ದಾರೆ. ‘ಅದಾನಿ ಹಗರಣದಿಂದ ಇದೀಗ ಮೋದಿ ಸರ್ಕಾರ ಅಲುಗಾಡತೊಡಗಿದೆ. ಜೊತೆಗೆ ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಭಾರತದಲ್ಲಿ ಬಹು ಅಪೇಕ್ಷಿತ ಸಾಂಸ್ಥಿಕ ಪುನರುಜ್ಜೀವನಕ್ಕೆ ಕಾರಣವಾಗಲಿದೆ’ ಎಂದು ಜಾರ್ಜ್ ಸೊರೋಸ್ ಹೇಳಿದ್ದಾರೆ. ಸೊರೋಸ್ ಹೇಳಿಕೆ ದೇಶದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಮೋದಿ ಸರ್ಕಾರ ಗಡಗಡ:
ಜರ್ಮನಿಯ ಮ್ಯೂನಿಕ್ ನಗರದಲ್ಲಿ ಆಯೋಜನೆಗೊಂಡಿರುವ ಜಾಗತಿಕ ಭದ್ರತಾ ಸಮ್ಮೇಳನದಲ್ಲಿ ಗುರುವಾರ 42 ನಿಮಿಷಗಳ ಕಾಲ ಸುದೀರ್ಘವಾಗಿ ಮಾತನಾಡಿದ ಉದ್ಯಮಿ ಜಾರ್ಜ್ ಸೋರೊಸ್, ‘ಮೋದಿ ಮತ್ತು ಉದ್ಯಮಿ ಅದಾನಿ ಅತ್ಯಂತ ಆಪ್ತರು. ಅವರ ಹಣೆಬರಹ ಇದೀಗ ಪರಸ್ಪರ ಹೆಣೆದುಕೊಂಡಿದೆ. ಅದಾನಿ, ಷೇರುಗಳಲ್ಲಿ ಅಕ್ರಮ ಎಸಗಿದ್ದಾರೆ. ಆದರೆ ಈ ವಿಷಯದಲ್ಲಿ ಮೋದಿ ಮೌನಕ್ಕೆ ಶರಣಾಗಿದ್ದಾರೆ. ಆದರೆ ಅವರು ವಿದೇಶಿ ಹೂಡಿಕೆದಾರರಿಗೆ ಮತ್ತು ಸಂಸತ್ತಿಗೆ ಉತ್ತರ ನೀಡಲೇಬೇಕು’ ಎಂದರು.
ಇದನ್ನು ಓದಿ: ಹಿಂಡೆನ್‌ಬರ್ಗ್ ವಿರುದ್ಧ ಕಾನೂನು ಸಮರಕ್ಕೆ ಗ್ರಾಂಟ್ ಥಾರ್ನ್‌ಟನ್ ಸಂಸ್ಥೆ ನೇಮಿಸಿಕೊಂಡಿಲ್ಲ: ಅದಾನಿ ಗ್ರೂಪ್ ಸ್ಪಷ್ಟನೆ
‘ಅದಾನಿ ಹಗರಣವು ಭಾರತದ ಒಕ್ಕೂಟ ಸರ್ಕಾರದಲ್ಲಿ ಮೋದಿ ಹಿಡಿತವನ್ನು ದುರ್ಬಲಗೊಳಿಸಲಿದೆ ಮತ್ತು ಬಹು ಅಪೇಕ್ಷಿತ ಸಾಂಸ್ಥಿಕ ಸುಧಾರಣೆಗೆ ಕಾರಣವಾಗಲಿದೆ. ಈ ವಿಷಯದಲ್ಲಿ ನಾನು ನಿಷ್ಕಪಟಿ ಇರಬಹುದು. ಆದರೆ ಭಾರತದಲ್ಲಿ ಪ್ರಜಾಪ್ರಭುತ್ವ ಪುನರುಜ್ಜೀವನ ಆಗಬೇಕು ಎಂದು ಬಯಸುತ್ತೇನೆ’ ಎಂದು ಹೇಳಿದರು.
ಜೊತೆಗೆ ತಾವು ಆರಂಭಿಸಿರುವ ಓಪನ್ ಸೊಸೈಟಿ ಫೌಂಡೇಷನ್ ಕುರಿತು ಪ್ರಸ್ತಾಪಿಸಿದ ಸೊರೋಸ್, ‘ನಿರ್ಬಂಧಿತ ಸಮಾಜಕ್ಕೆ ಹೋಲಿಸಿದರೆ ಮುಕ್ತ ಸಮಾಜ ಹೆಚ್ಚು ಉನ್ನತ ಮಟ್ಟದ್ದು ಎಂಬುದು ನನ್ನ ನಂಬಿಕೆ. ಇಲ್ಲಿ ಭಾರತ ಕೂಡಾ ಒಂದು ಕುತೂಹಲಕಾರಿ ಪ್ರಕರಣ. ಭಾರತ ಪ್ರಜಾಪ್ರಭುತ್ವ ದೇಶ. ಆದರೆ ಅದರ ನಾಯಕ ನರೇಂದ್ರ ಮೋದಿ ಪ್ರಜಾಪ್ರಭುತ್ವವಾದಿಯಲ್ಲ. ನರೇಂದ್ರ ಮೋದಿ ಮುಕ್ತ ಮತ್ತು ನಿರ್ಬಂಧಿತ ಎರಡೂ ಸಮಾಜದ ಜೊತೆಗೆ ಆಪ್ತ ಸಂಬಂಧ ಹೊಂದಿದ್ದಾರೆ. ಭಾರತ ಕ್ವಾಡ್ (ಆಸ್ಪ್ರೇಲಿಯಾ, ಅಮೆರಿಕ, ಜಪಾನ್) ದೇಶಗಳ ಸದಸ್ಯ ದೇಶ. ಆದರೆ ಅದು ರಷ್ಯಾದಿಂದ ಅಗ್ಗದ ದರದಲ್ಲಿ ತೈಲ ಖರೀದಿ ಮೂಲಕ ಹಣ ಮಾಡುತ್ತಿದೆ’ ಎಂದು ಪರೋಕ್ಷವಾಗಿ ಭಾರತದ ವಿರುದ್ಧ ಕಿಡಿಕಾರಿದರು.
ಇದನ್ನು ಓದಿ: ಹಿಂಡನ್‌ಬರ್ಗ್ ವಿರುದ್ಧ ಅದಾನಿ ಕಾನೂನು ಸಮರ: ಅಮೆರಿಕದ ದುಬಾರಿ ಕಾನೂನು ಸಂಸ್ಥೆ ‘ವಾಚ್‌ಟೆಲ್’ ನೇಮಕ
ಬಳಿಕ ಟರ್ಕಿ ಅಧ್ಯಕ್ಷ ತಯ್ಯಿಪ್ ಎರ್ಡೋಗನ್ ವಿಷಯ ಪ್ರಸ್ತಾಪಿಸುವಾಗಲೂ ಮತ್ತೆ ಮೋದಿಯನ್ನು ಎಳೆತಂದ ಸೊರೋಸ್, ‘ಎರ್ಡೋಗನ್, ಮೋದಿಯ ಜೊತೆಗೆ ಹಲವು ಸಾಮ್ಯತೆ ಹೊಂದಿದ್ದಾರೆ. ಆದರೆ ಇತ್ತೀಚಿನವರೆಗೂ ಮೋದಿ ತಮ್ಮ ಸ್ಥಾನದಲ್ಲಿ ಭದ್ರವಾಗಿದ್ದರು, ಆದರೆ ಎರ್ಡೋಗನ್ ಟರ್ಕಿ ಆರ್ಥಿಕತೆಯನ್ನು ತಪ್ಪಾಗಿ ನಿರ್ವಹಿಸಿ ಇದೀಗ ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದಾರೆ’ ಎಂದು ಹೇಳಿದರು.
ತಮ್ಮ ಸುದೀರ್ಘ ಭಾಷಣದಲ್ಲಿ ಸೊರೋಸ್, ಹವಾಮಾನ ಬದಲಾವಣೆ, ರಷ್ಯಾ-ಉಕ್ರೇನ್ ಯುದ್ಧ, ಅಮೆರಿಕದ ಬೆಳವಣಿಗೆ, ಟರ್ಕಿ ಭೂಕಂಪ, ಚೀನಾದ ವೈಫಲ್ಯ, ಅದಾನಿ ಹಗರಣದ ಮೊದಲಾದ ವಿಷಯಗಳ ಕುರಿತು ಮಾತನಾಡಿದರು.
ಇದನ್ನೂ ಓದಿ: ಅದಾನಿ ಕಂಪನೀಲಿ ವಿದೇಶಿ ಹೂಡಿಕೆ ಬಗ್ಗೆ ಸೆಬಿ ತನಿಖೆ; ಹೂಡಿಕೆದಾರರ ಹಿತ ಕಾಯಲು ತಜ್ಞರ ಸಮಿತಿ ರಚಿಸಿ ಎಂದ ಸುಪ್ರೀಂ
ದೇಶದ ವ್ಯವಸ್ಥೆಯಲ್ಲಿ ವಿದೇಶಿ ಹಸ್ತಕ್ಷೇಪ ಸಲ್ಲದು: ಬಿಜೆಪಿ
ಸೊರೋಸ್‌ರ ಈ ಹೇಳಿಕೆಯನ್ನು ಬಿಜೆಪಿ ಕಟುವಾಗಿ ಟೀಕಿಸಿದ್ದು, ಭಾರತದ ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಕಿಡಿಕಾರಿದೆ. ‘ಭಾರತದ ಆಂತರಿಕ ವಿಷಯದಲ್ಲಿ ಮಧ್ಯಪ್ರವೇಶ ಮಾಡುವ ವಿದೇಶಿ ವ್ಯಕ್ತಿಯ ಇಂಥ ಯತ್ನವನ್ನು ಪ್ರತಿ ಭಾರತೀಯ ಕೂಡಾ ಖಂಡಿಸಬೇಕು. ಭಾರತ ಸೇರಿದಂತೆ ಹಲವು ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶಗಳಲ್ಲಿ ಮಧ್ಯಪ್ರವೇಶ ಮಾಡಲು ಸೊರೋಸ್ 100 ಕೋಟಿ ರೂ. ನಿಧಿ ಸ್ಥಾಪಿಸಿದ್ದಾರೆ. ಈ ಹಣವನ್ನು ಭಾರತದ ಸಂಘ ಸಂಸ್ಥೆಗಳಿಗೆ ನೀಡಿ ಸರ್ಕಾರದ ವಿರುದ್ಧ ಆಂದೋಲನಕ್ಕೆ ಬಳಸಲು ಉತ್ತೇಜಿಸುತ್ತಿದ್ದಾರೆ’ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ.
ಕಾಂಗ್ರೆಸ್‌ನಿಂದಲೂ ಸೊರೋಸ್ ಹೇಳಿಕೆ ತಿರಸ್ಕಾರ
ಅದಾನಿ-ಮೋದಿ ವಿಷಯದಲ್ಲಿ ಹಲವು ದಿನಗಳಿಂದ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದ ಪ್ರಮುಖ ವಿಪಕ್ಷ ಕಾಂಗ್ರೆಸ್ ‘ಅದಾನಿ ಪ್ರಕರಣವು ಭಾರತದಲ್ಲಿ ಪ್ರಜಾಸತಾತ್ಮಕ ಬದಲಾವಣೆಗೆ ಕಾರಣವಾಗುತ್ತದೆಯೇ ಎಂಬುದು ದೇಶದ ಅತ್ಯಂತ ಹಳೆಯ ಪಕ್ಷ (ಕಾಂಗ್ರೆಸ್) ಮತ್ತು ಇತರೆ ವಿಪಕ್ಷಗಳಿಗೆ ಸಂಬಂಧಿಸಿದ ವಿಷಯವೇ ಹೊರತೂ, ಶತಕೋಟ್ಯಧೀಶ ಜಾರ್ಜ್ ಸೊರೋಸ್‌ಗೆ ಸಂಬಂಧಿಸಿದ್ದಲ್ಲ. ನಮಗೂ ಅವರಿಗೂ ನಂಟಿಲ್ಲ’ ಎನ್ನುವ ಮೂಲಕ ಸೊರೋಸ್ ಹೇಳಿಕೆಯನ್ನು ಪರೋಕ್ಷವಾಗಿ ತಿರಸ್ಕರಿಸಿದೆ.
ಇದನ್ನೂ ಓದಿ: ಸಾಲ ಮುಂಗಡ ಪಾವತಿ ಘೋಷಣೆ: ಶೇ. 25 ರವರೆಗೆ ಜಿಗಿದ ಅದಾನಿ ಎಂಟರ್‌ಪ್ರೈಸಸ್ ಷೇರು
ಸೊರೋಸ್ ಸಂಸ್ಥೆಗೆ ಕನ್ನಡಿಗ ಸಲೀಲ್ ಉಪಾಧ್ಯಕ್ಷ!
ಮೋದಿ-ಅದಾನಿ ವಿಷಯದಲ್ಲಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿರುವ ಜಾರ್ಜ್ ಸೊರೋಸ್ ಅವರ ಓಪನ್ ಸೊಸೈಟಿ ಫೌಂಡೇಷನ್‌ಗೆ ಕರ್ನಾಟಕ ಮೂಲದ ಸಲೀಲ್ ಶೆಟ್ಟಿ ಉಪಾಧ್ಯಕ್ಷರಾಗಿದ್ದಾರೆ. ಸಲೀಲ್ ಇದಕ್ಕೂ ಮುನ್ನ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಸೇರಿದಂತೆ ಹಲವು ಮಾನವ ಹಕ್ಕುಗಳ ಸಂಘಟನೆಯಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಮ್ಮಿಕೊಂಡಿದ್ದ ಭಾರತ್ ಜೋಡೋ ಯಾತ್ರೆ ಅಕ್ಟೋಬರ್ 11ರಂದು ಕರ್ನಾಟಕದಲ್ಲಿ ಸಾಗಿದ ವೇಳೆ ಸಲೀಲ್ ಶೆಟ್ಟಿ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ್ದರು. ಆದರೆ ಸೊರೋಸ್ ಹೇಳಿಕೆಗೂ ತಮಗೂ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.