Watch: 'ದುರಾದೃಷ್ಟಕ್ಕೆ ನಾನು ಸಂಸದ..' ಎಂದ ರಾಹುಲ್‌ ಗಾಂಧಿ, ಸುದ್ದಿಗೋಷ್ಠಿಯ ಮಧ್ಯೆಯೇ ತಿದ್ದಿದ ಜೈರಾಮ್‌ ರಮೇಶ್‌!

ಕಾಂಗ್ರೆಸ್‌ ನಾಯಕ ಹಾಗೂ ವಯ್ನಾಡ್‌ ಸಂಸದ ರಾಹುಲ್‌ ಗಾಂಧಿ ಮತ್ತೊಮ್ಮೆ ಸೋಶಿಯಲ್‌ ಮೀಡಿಯಾ ಟ್ರೋಲ್‌ಗಳಿಗೆ ಆಹಾರವಾಗಿದ್ದಾರೆ. ಗುರುವಾರ ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯ ವೇಳೆ, 'ದುರಾದೃಷ್ಟಕ್ಕೆ ನಾನು ಸಂಸದ..' ಎಂದು ಹೇಳಿದ ಮಾತನ್ನು ಜೈರಾಮ್‌ ರಮೇಶ್‌ ಸುದ್ದಿಗೋಷ್ಠಿಯಲ್ಲಿಯೇ ತಿದ್ದಿ ಸರಿಪಡಿಸಿದ್ದರು.

Jairam Ramesh Corrects Rahul Gandhi's Unfortunate Presser Gaffe san

ನವದೆಹಲಿ (ಮಾ.16): ರಾಹುಲ್‌ ಗಾಂಧಿ ಮತ್ತೊಮ್ಮೆ ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ಗೆ ಆಹಾರವಾಗಿದ್ದಾರೆ. ಸುದ್ದಿಗೋಷ್ಠಿಯ ವೇಳೆ ಅವರು ಬಳಸಿದ ಪದ ಹಾಗೂ ಅದನ್ನು ಅವರ ಪಕ್ಕದಲ್ಲಿಯೇ ಕುಳಿತಿದ್ದ ಜೈರಾಮ್‌ ರಮೇಶ್‌ ತಿದ್ದಿದ್ದನ್ನು ಬಿಜೆಪಿ ಟೀಕಿಸಿದೆ. ಸುದ್ದಿಗೋಷ್ಠಿಯಲ್ಲಿ ಒಂದು ಮಾತನ್ನು ಸರಿಯಾಗಿ ಆಡದ 'ಗೊಂಬೆ'ಯನ್ನ ಹಿಡಿದುಕೊಂಡು ಕಾಂಗ್ರೆಸ್‌ ದೇಶದ ಸಂಸತ್ತನ್ನು ಟೀಕೆ ಮಾಡುತ್ತಿದೆ ಎಂದು ಹೇಳಿದೆ. ಇಂಗ್ಲೆಂಡ್‌ನಲ್ಲಿ ದೇಶದ ಪ್ರಜಾಪ್ರಭುತ್ವವನ್ನು ಟೀಕೆ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ರಾಹುಲ್‌ ಗಾಂಧಿ ಸಂಸತ್‌ ಅಧಿವೇಶನಕ್ಕೆ ಹಾಜರಾಗಿದ್ದರು. ಈ ವೇಳೆ ಮಾತನಾಡಿದ ಅವರು, ಅದಾನಿ ವಿಚಾರದ ಬಗ್ಗೆ ಮಾತನಾಡಲು ಕೇಂದ್ರ ಸರ್ಕಾರ ಹೆದರುತ್ತಿದೆ ಎಂದು ಹೇಳಿದ್ದರು. ಸಂಸತ್‌ ಕಲಾಪ ಮುಂದೂಡಿಕೆಯಾದ ಬಳಿಕ ಮಾತನಾಡಿದ ಅವರು, ಸರ್ಕಾರ ಇಡೀ ಅದಾನಿ ವಿಚಾರದ ಬಗ್ಗೆ ಮಾತನಾಡಲು ಹೆದರುತ್ತಿದೆ ಎಂದಿದ್ದಾರೆ. 'ಕೇಂದ್ರ ಸರ್ಕಾರ ಸಂಪೂರ್ಣ ವಿಚಾರವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನ ಮಾಡುತ್ತಿದೆ. ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅದಾನಿ ವಿಚಾರದಲ್ಲಿ ಹೆದರುತ್ತಿದ್ದಾರೆ. ಆ ಕಾರಣಕ್ಕಾಗಿ ನನ್ನ ವಿಚಾರದಲ್ಲಿ ಇಷ್ಟೆಲ್ಲಾ ತಮಾಷೆಯನ್ನು ಸೃಷ್ಟಿ ಮಾಡಿದ್ದಾರೆ' ಎಂದು ಹೇಳಿದ್ದಾರೆ.

ಸಂಸತ್ತಿನಲ್ಲಿ ಅವರು ನನಗೆ ಮಾತನಾಡಲು ಬಿಡೋದಿಲ್ಲ ಯಾಕೆಂದರೆ ನಾನು ಕೇಳಿದ ಪ್ರಶ್ನೆ ಇಂದಿಗೂ ಕೂಡ ಟೇಬಲ್‌ನ ಮೇಲಿದೆ. ಅದಾನಿ ಹಾಗೂ ಪ್ರಧಾನಿ ಮೋದಿಗೆ ಇರುವ ಸಂಬಂಧವೇನು? ರಕ್ಷಣಾ ಒಪ್ಪಂದಗಳನ್ನು ಅದಾನಿ ಗ್ರೂಪ್‌ಗೆ ನೀಡಿದ್ದಕ್ಕೆ ಕಾರಣವೇನು ಎಂದು ಪ್ರಶ್ನೆ ಮಾಡಿದ್ದಾರೆ. ಸಂಸತ್ತಿಗೆ ಉತ್ತರಿಸೋದು ನನ್ನ ಮೊದಲ ಜವಾಬ್ದಾರಿ ಎಂದು ವಯನಾಡ್‌ ಸಂಸದ ರಾಹುಲ್‌ ಗಾಂಧಿ ಸುದ್ದಿಗೋಷ್ಠಿಯಲ್ಲಿ ಹೇಳುವ ಸಮಯದಲ್ಲಿ ಅವರ ಮಾತು ಹಳಿ ತಪ್ಪಿತು.

'ನಾನು ನಿಮ್ಮೊಂದಿಗೆ ಎಲ್ಲಾ ವಿಚಾರವನ್ನು ಹಂಚಿಕೊಳ್ಳಬಹುದು. ದುರಾದೃಷ್ಟಕ್ಕೆ ನಾನು ಸಂಸದ. ಸಂಸತ್ತಿನಲ್ಲಿ ನನಗೆ ಮಾತನಾಡಲು ಅವಕಾಶ ಸಿಗಲಿದೆ ಎನ್ನುವ ವಿಶ್ವಾಸ ನನಗಿದೆ. ಹಾಗಾಗಿ ನನ್ನ ಹೇಳಿಕೆಯನ್ನು ಮೊದಲಿಗೆ ಸಂಸತ್ತಿನ ಮುಂದೆ ಇಡಲಿದ್ದೇವೆ. ಆ ಬಳಿಕ ನಾನು ನಿಮ್ಮೊಂದಿಗೆ ಚರ್ಚೆಯಲ್ಲಿ ಭಾಗಿಯಾಗಲಿದ್ದೇನೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ಈ ಮಾತನ್ನು ರಾಹುಲ್‌ ಗಾಂಧಿ ಹೇಳಿ ಮುಗಿಸುವ ಹೊತ್ತಿಗಾಗಲೇ ಅವರ ಪಕ್ಕದಲ್ಲಿ ಕುಳಿತಿದ್ದ ಜೈರಾಮ್‌ ರಮೇಶ್‌, ರಾಹುಲ್‌ ಅವರ ಮಾತನ್ನು ಅರ್ಧಕ್ಕೆ ನಿಲ್ಲಿಸಿದರು. 'ದುರಾದೃಷ್ಟಕ್ಕೆ ನಾನು ಸಂಸದ' ಎಂದರೆ ತಪ್ಪಾಗುತ್ತದೆ. ಅದನ್ನು ಜೋಕ್‌ ಆಗಿ ತೆಗೆದುಕೊಳ್ಳುತ್ತಾರೆ. ಹಾಗಾಗಿ ದುರಾದೃಷ್ಟಕ್ಕೆ ನಾನು ನಿಮಗೆ ಸಂಸದ ಎಂದು ಹೇಳಿ ಎಂದರು. ಇದನ್ನು ಮೈಕ್‌ ಆಫ್‌ ಮಾಡದೇ ಹೇಳಿದ ಕಾರಣಕ್ಕೆ ಎಲ್ಲರಿಗೂ ಇದು ತಿಳಿಸಿತು. ಆ ಬಳಿಕ ಮಾತನಾಡಿದ ರಾಹುಲ್‌ ಗಾಂಧಿ, 'ದುರಾದೃಷ್ಟಕ್ಕೆ ನಿಮ್ಮ ಪಾಲಿಗೆ ನಾನು ಸಂಸತ್‌ ಸದಸ್ಯ..' ಎಂದು ಹೇಳುವ ಮೂಲಕ ತಪ್ಪನ್ನು ಸರಿಪಡಿಸಿಕೊಂಡರು.

ಅದಾನಿ ಗೆಳೆತನದ ವಿದೇಶಿ ಕಂಪನಿಗೆ ರಕ್ಷಣಾ ಗುತ್ತಿಗೆ? ರಾಷ್ಟ್ರೀಯ ಭದ್ರತೆ ಅಪಾಯದಲ್ಲಿ ಎಂದು ವಿಪಕ್ಷ ಹೊಸ ಆರೋಪ

ರಾಹುಲ್‌ ತಮ್ಮ ಮಾತನ್ನು ಸರಿಪಡಿಸಿಕೊಂಡರೂ, ಟ್ವಿಟರ್‌ನಲ್ಲಿ ಕಾಂಗ್ರೆಸ್ ನಾಯಕ ಟ್ರೋಲ್‌ ಆಗಿದ್ದಾರೆ. ರಾಹುಲ್‌ ಅವರ ಮೂಲಕ ಹೇಳಿಕೆಯನ್ನು ಇರಿಸಿಕೊಂಡು ಟ್ರೋಲ್‌ ಮಾಡುತ್ತಿದ್ದಾರೆ.

ದೇಶದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪಿಸಿದವರ ತಿರಸ್ಕರಿಸಿ: ಕೇಂದ್ರ ಸಚಿವ ವಿ.ಕೆ.ಸಿಂಗ್‌

'ನೋಡದೇ ಏನನ್ನೂ ಬರೆಯಲು ಈತನಿಗೆ ಸಾಧ್ಯವಿಲ್ಲ. ಬೇರೊಬ್ಬರನ್ನು ಕೇಳದೇ ಒಂದಕ್ಷರ ಮಾತಾಡೋಕೆ ಬರೋದಿಲ್ಲ. ಆದರೆ, ಪ್ರಧಾನಿ ಆಗಬೇಕು ಎನ್ನುವ ಆಸೆ ಹೊತ್ತಿದ್ದಾನೆ. 'ದುರಾದೃಷ್ಟಕ್ಕೆ ನಾನು ಸಂಸದ' ಎನ್ನುವ ಮಾತಿನ ಅರ್ಥವೇನು? ನಿಮಗೆ ಸಂಸದರಾಗಲು ಯಾರು ಒತ್ತಾಯ ಮಾಡಿದ್ದಾರೆ? ನೀವು ದೇಶದ ಸಂಸತ್‌ಗೆ ಗೌರವ ಕೊಡಲು ಸಾಧ್ಯವಿಲ್ಲ ಎಂದಾದರೆ, ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ' ಎಂದು ಲೋಕಸಭಾ ಸಂಸದ ರಾಜ್‌ಕುಮಾರ್‌ ಚಹರ್‌ ಟ್ವೀಟ್‌ ಮಾಡಿದ್ದಾರೆ.

Latest Videos
Follow Us:
Download App:
  • android
  • ios