ಅದಾನಿ ಗೆಳೆತನದ ವಿದೇಶಿ ಕಂಪನಿಗೆ ರಕ್ಷಣಾ ಗುತ್ತಿಗೆ? ರಾಷ್ಟ್ರೀಯ ಭದ್ರತೆ ಅಪಾಯದಲ್ಲಿ ಎಂದು ವಿಪಕ್ಷ ಹೊಸ ಆರೋಪ
ಬೆಂಗಳೂರಿನ ಎಡಿಟಿಎಲ್ ಕಂಪನಿಗೆ ಕ್ಷಿಪಣಿ, ರಾಡಾರ್ ವ್ಯವಸ್ಥೆ ಮೇಲ್ದರ್ಜೆಗೇರಿಸಲು 590 ಕೋಟಿ ರೂ. ಗುತ್ತಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಕಂಪನಿಯಲ್ಲಿ ಅದಾನಿ, ವಿದೇಶಿ ಕಂಪನಿ ಎಲಾರಾದ ಷೇರು ಇದೆ. ಈ ಹಿನ್ನೆಲೆ ರಾಷ್ಟ್ರೀಯ ಭದ್ರತೆ ಅಪಾಯದಲ್ಲಿದೆ ಎಂದು ವಿಪಕ್ಷಗಳು ಹೊಸ ಆರೋಪ ಮಾಡ್ತಿವೆ.
ನವದೆಹಲಿ (ಮಾರ್ಚ್ 16, 2023): ಹಣಕಾಸು ಅಕ್ರಮಗಳಲ್ಲಿ ತೊಡಗಿದೆ ಎಂಬ ಆರೋಪ ಎದುರಿಸುತ್ತಿರುವ ಅದಾನಿ ಸಮೂಹದ ಕಂಪನಿಗಳಲ್ಲಿ ಹೂಡಿಕೆ ಮಾಡಿರುವ ವಿದೇಶಿ ಕಂಪನಿಯೊಂದಕ್ಕೆ ಭಾರತದ ಕ್ಷಿಪಣಿ ಮತ್ತು ರಾಡಾರ್ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಗುತ್ತಿಗೆ ನೀಡಲಾಗಿದ್ದು, ಅದರಿಂದಾಗಿ ರಾಷ್ಟ್ರೀಯ ಭದ್ರತೆ ಅಪಾಯಕ್ಕೆ ಸಿಲುಕಿದೆ ಎಂದು ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಹೊಸ ಆರೋಪ ಮಾಡಿವೆ. ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಟಿಎಂಸಿ ಸಂಸದೆ ಮೊಹುವಾ ಮೊಯಿತ್ರಾ ಹಾಗೂ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಮುಂತಾದವರು ಈ ಆರೋಪ ಮಾಡಿದ್ದಾರೆ.
ಬೆಂಗಳೂರು ಮೂಲದ ಕಂಪನಿ ವಿವಾದದಲ್ಲಿ:
ಮಾರಿಷಸ್‌ನಲ್ಲಿ ನೋಂದಣಿಯಾದ ಎಲಾರಾ ಇಂಡಿಯಾ ಅಪಾರ್ಚುನಿಟೀಸ್ ಫಂಡ್ (ಎಲಾರಾ ಐಒಎಫ್) ಎಂಬ ವೆಂಚೂರ್ ಕ್ಯಾಪಿಟಲ್ ಕಂಪನಿಯು ಅದಾನಿ ಸಮೂಹದ ಕಂಪನಿಗಳಲ್ಲಿ ಬಂಡವಾಳ ಹೂಡಿಕೆ ಮಾಡಿದೆ. ಈ ಕಂಪನಿಯು ಅದಾನಿ ಸಮೂಹದ ಜೊತೆಗೆ ಸೇರಿ ಬೆಂಗಳೂರು ಮೂಲದ ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಪ್ರೈ.ಲಿ. (ಎಡಿಟಿಎಲ್) ಎಂಬ ಕಂಪನಿಯಲ್ಲೂ ಹೂಡಿಕೆ ಮಾಡಿದೆ. ಈ ರಕ್ಷಣಾ ಕಂಪನಿಯು 2003ರಲ್ಲಿ ಆರಂಭವಾಗಿದ್ದು, ಇಸ್ರೋ ಹಾಗೂ ಡಿಆರ್‌ಡಿಒ ಜೊತೆಗೆ ಸೇರಿ ಕೆಲಸ ಮಾಡುತ್ತಿದೆ. ಈ ಕಂಪನಿಗೆ 2020ರಲ್ಲಿ 590 ಕೋಟಿ ರು. ವೆಚ್ಚದಲ್ಲಿ ಹಳೆಯ ಪೆಚೋರಾ ಕ್ಷಿಪಣಿ ಹಾಗೂ ರಾಡಾರ್ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಮತ್ತು ಡಿಜಿಟಲೀಕರಣಗೊಳಿಸುವ ಗುತ್ತಿಗೆಯನ್ನು ರಕ್ಷಣಾ ಸಚಿವಾಲಯ ನೀಡಿದೆ ಎಂದು ದಿನಪತ್ರಿಕೆಯ ವರದಿ ಹೇಳಿದೆ.
ಇದನ್ನು ಓದಿ: Adani ಕೇಸ್: ಇ.ಡಿ. ಕಚೇರಿ ಮುತ್ತಿಗೆಗೆ ವಿಪಕ್ಷಗಳ ಯತ್ನ; ತನಿಖೆ ಕೋರಿ ಇ - ಮೇಲ್‌ನಲ್ಲೇ ದೂರು
ಎಡಿಟಿಎಲ್ ಕಂಪನಿಯಲ್ಲಿ ಅದಾನಿ ಹಾಗೂ ಎಲಾರಾ ಕಂಪನಿಗಳು ಜಂಟಿಯಾಗಿ ಶೇ. 51.65ರಷ್ಟು ಷೇರು ಹೊಂದಿವೆ.
ವಿಪಕ್ಷಗಳ ಆರೋಪವೇನು:
ಭಾರತದ ಕ್ಷಿಪಣಿ ಹಾಗೂ ರಾಡಾರ್ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಗುತ್ತಿಗೆಯನ್ನು ಅದಾನಿ ಒಡೆತನದ ಹಾಗೂ ಎಲಾರಾ ಎಂಬ ವಿದೇಶಿ ಮೂಲದ ಎಲಾರಾ ಎಂಬ ನಕಲಿ ಕಂಪನಿಗೆ ಕೇಂದ್ರ ಸರ್ಕಾರ ನೀಡಿದೆ. ಎಲಾರಾದಲ್ಲಿ ಇರುವ ಹಣ ಯಾರದ್ದು? ಏಕೆ ಭಾರತದ ರಾಷ್ಟ್ರೀಯ ಭದ್ರತೆಯ ನಿಯಂತ್ರಣವನ್ನು ಅಪರಿಚಿತ ವಿದೇಶಿ ಕಂಪನಿಗಳ ಕೈಗೆ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಅದಾನಿ ಸಮೂಹ ಷೇರುಗಳ ಜಿಗಿತ: 2 ದಿನದಲ್ಲಿ 3,102 ಕೋಟಿ ರೂ. ಲಾಭ ಮಾಡಿಕೊಂಡ ಎನ್‌ಆರ್‌ಐ
ಟಿಎಂಸಿ ಹಾಗೂ ಶಿವಸೇನೆ ಸಂಸದರು ಕೂಡ ಪತ್ರಿಕೆಯ ವರದಿ ಟ್ವೀಟ್ ಮಾಡಿ, ‘ಕೇಂದ್ರ ಸರ್ಕಾರದ ಸ್ನೇಹಿತ ಅದಾನಿಗಾಗಿ ದೇಶದ ರಕ್ಷಣಾ ಕ್ಷೇತ್ರವನ್ನೇ ಅಪಾಯಕ್ಕೆ ನೂಕಲಾಗಿದೆ. ಆಸ್ಕರ್‌ನಲ್ಲಿ ‘ಚುಪಾರುಸ್ತುಂ’ ವಿಭಾಗದ ಪ್ರಶಸ್ತಿಯೇನಾದರೂ ಇದ್ದರೆ ಡಿಆರ್‌ಡಿಒ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೇ ನೀಡಬೇಕು’ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಮರಳಿ ಹಳಿಗೆ ಅದಾನಿ ಗ್ರೂಪ್: 2 ಗಂಟೆಗಳಲ್ಲಿ 5 ಬಿಲಿಯನ್ ಡಾಲರ್ ಜಿಗಿದ ಗೌತಮ್ ಅದಾನಿ ಆಸ್ತಿ