ಜಯ್ಪುರ(ಆ.24): ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಮಹಿಳೆಯ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಆಕೆ ಬರೋಬ್ಬರಿ ನೂರು ಕೋಟಿ ಮೌಲ್ಯದ ಆಸ್ತಿಯ ಒಡತಿ ಎಂಬ ಶಾಕಿಂಗ್ ವಿಚಾರ ಬಹಿರಂಗಗೊಂಡಿದೆ. ಆದರೆ ಅದೃಷ್ಟವಿಲ್ಲದಿದ್ದರೆ ಕಣ್ಣೆದುರೇ ಇರುವ ವಸ್ತುಗಳನ್ನು ಮುಟ್ಟಲು ಸಾಧ್ಯವಿಲ್ಲ ಎಂಬ ಮಾತಿದೆ. ಸದ್ಯ ಸಂಜೂ ದೇವಿ ವಿಚಾರದಲ್ಲೂ ಇದು ನಿಜವಾಗಿದೆ. ಗಂಡ ಸಾವನ್ನಪ್ಪಿದ ಬಳಿಕ ಸಂಜೂ ದೇವಿ ಮನೆಯಲ್ಲಿ ಆದಾಯಕ್ಕೇನೂ ಇರಲಿಲ್ಲ. ಹೀಗಾಗಿ ಇಬ್ಬರು ಮಕ್ಕಳನ್ನು ಸಾಕಲು ಈ ಮಹಿಳೆ ಕೂಲಿ ಕೆಲಸ ಮಾಡಲಾರಂಭಿಸಿದ್ದರು. ಉಳುಮೆ ಹಾಗೂ ಪ್ರಾಣಿಗಳನ್ನು ಸಾಕಿ ಇವರು ದಿನ ದೂಡುತ್ತಿದ್ದರು.

ಚಿನ್ನದ ಸಾಲ ಪಡೆದ ಗ್ರಾಹಕರಿಗೆ ಮುತ್ತೂಟ್‌ ಉಚಿತ ಕೋವಿಡ್‌ ವಿಮೆ

ಜಯ್ಪುರದ ಆದಾಯ ತೆರಿಗೆ ಅಧಿಕಾರಿಗಳು ಈ ಮಹಿಳೆ ಮನೆ ಮೇಲೆ ದಾಳಿ ನಡೆಸಿದ್ದು, ಈಕೆ ಬರೋಬ್ಬರಿ ನೂರು ಕೋಟಿ ಆಸ್ತಿಯ ಒಡತಿ ಎಂಬುವುದು ತಿಳಿದು ಬಂದಿದೆ. ಹೀಗಿದ್ದರೂ ಸಂಜೂ ದೇವಿ ಕುಟುಂಬ ನಿರ್ವಹಣೆಗೆ ಹಣ ಗಳಿಸಲು ಭಾರೀ ಪರದಾಟ ನಡೆಸುತ್ತಿದ್ದಾರೆ. 

ಆದಾಯ ತೆರಿಗೆ ಅಧಿಕಾರಿಗಳು ಜಯ್ಪುರ-ದೆಹಲಿ ಹೆದ್ದಾರಿಯಲ್ಲಿರುವ 100 ಕೋಟಿಗೂ ಅಧಿಕ ವೆಚ್ಚ ಬೆಲೆಬಾಳುವ 64 ಭೀಘಾ ಭೂಮಿ(ಸುಮಾರು 25 ಎಕರೆ ಜಾಗ)ಯನ್ನು ಪತ್ತೆ ಹಚ್ಚಿದ್ದಾರೆ. ತನಿಖೆ ನಡೆಸಿದಾಗ ಇದು ಓರ್ವ ಆದಿವಾಸಿ ಮಹಿಳೆಗೆ ಸೇರಿದ್ದು ಎಂಬ ಮಾಹಿತಿಯೂ ಲಭಿಸಿದೆ. ಆದರೆ ಇತ್ತ ಮಹಿಳೆಗೆ ಮಾತ್ರ ಇದ್ಯಾವುದರ ಮಾಹಿತಿಯೇ ಇರಲಿಲ್ಲ. ತಾನು ಜಮೀನು ಖರೀದಿಸಿದ್ದು ಯಾವಾಗ? ಅದೆಲ್ಲಿದೆ ಎಂಬುವುದೂ ಆಕೆಗೆ ತಿಳಿದಿರಲಿಲ್ಲ. ಸದ್ಯ ಆದಾಯ ತೆರಿಗೆ ಅಧಿಕಾರಿಗಳು ಈ ಭೂಮಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. 

ತೆರಿಗೆ ರಿಟರ್ನ್ಸ್‌ನಲ್ಲಿ ದೊಡ್ಡ ವ್ಯವಹಾರ ತಿಳಿಸಬೇಕಾಗಿಲ್ಲ!

ಜಯ್ಪುರ-ದೆಹಲಿ ಹೆದ್ದಾರಿಯ ದಂಡ್‌ ಎಂಬ ಹಳ್ಳಿಯಲ್ಲಿರುವ ಈ ಪ್ರದೇಶದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಸದ್ಯ ಬ್ಯಾನರ್ ಒಂದನ್ನು ಹಾಕಿದ್ದಾರೆ. ಇದರಲ್ಲಿ ಈ ಬೇನಾಮಿ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ತನ್ನ ವಶಕ್ಕೆ ಪಡೆದಿದೆ ಎಂದು ಬರೆದಿದೆ. ಅಲ್ಲದೇ 5 ಹಳ್ಳಿಯ 64 64 ಭೀಘಾ ಭೂಮಿಯಲ್ಲಿ ಹಾಕಲಾಗಿರುವ ಈ ಬ್ಯಾನರ್‌ನಲ್ಲಿ ಈ ಭೂಮಿಯ ಮಾಲಕಿ ಸಂಜೂ ದೇವಿಯಾಗಿದ್ದರು. ಆದರೀಗ ಅವರಾಗಲು ಸಾಧ್ಯವಿಲ್ಲ ಎಂದೂ ಬರೆದಿದೆ. 

ಇನ್ನು ಈ ಸಂಬಂಧ ಹೆಚ್ಚಿನ ತನಿಖೆಗಾಗಿ ಅಧಿಕಾರಿಗಳು ಸಂಜೂ ದೇವಿಯನ್ನು ಭೇಟಿಯಾಗಲು ದೀಪಾವಾಸ್ ಹಳ್ಳಿಗೆ ತೆರಳಿದಾಗ ಆಕೆ ನನ್ನ ಗಂಡ ಹಾಗೂ ಮಾವ ಮುಂಬೈನಲ್ಲೆ ಕೆಲಸ ಮಾಡುತ್ತಿದ್ದರು. ಹೀಗಿರುವಾಗ 2006 ರಲ್ಲಿ ನನ್ನನ್ನು ಜಯ್ಪುರದ ಅಮೇರ್‌ಗೆ ಕರೆದೊಯ್ದು ಒಂದು ಕಾಗದದ ಮೇಲೆ ಹೆಬ್ಬೆಟ್ಟು ಹಾಕಿಸಿದ್ದರು. 12 ವರ್ಷಗಳ ಹಿಂದೆ ನನ್ನ ಗಂಡ ಮೃತಪಟ್ಟಿದ್ದಾರೆ. ಹೀಗಾಗಿ ಎಷ್ಟು ಆಸ್ತಿ, ಎಲ್ಲಿದೆ ಎಂದು ನನಗೆ ತಿಳಿದಿರಲಿಲ್ಲ. ಆದರೆ ಗಂಡ ಮೃತಪಟ್ಟ ಬಳಿಕ ಒಬ್ಬ ವ್ಯಕ್ತಿ ಐದು ಸಾವಿರ ರೂ. ಕೊಟ್ಟು ಹೋಗುತ್ತಿದ್ದರು. ಇದರಲ್ಲಿ ಎರಡೂವರೆ ಸಾವಿರ ನಾದಿನಿ ಇಟ್ಟುಕೊಳ್ಳುತ್ತಿದ್ದರು ಹಾಗೂ ಉಳಿದ ಎರಡೂವರೆ ಸಾವಿರ ನನಗೆ ಕೊಡುತ್ತಿದ್ದರು. ಆದರೀಗ ಅನೇಕ ವರ್ಷಗಳಿಂದ ಆ ಹಣವೂ ಬರುತ್ತಿಲ್ಲ.  ನನ್ನ ಹೆಸರಿನಲ್ಲಿ ಇಷ್ಟು ಮೊತ್ತದ ಆಸ್ತಿ ಇದೆ ಎಂದು ನನಗೆ ಇವತ್ತೇ ಗೊತ್ತಾಗಿದ್ದು ಎಂದಿದ್ದಾರೆ.

ಇನ್ನು ಆದಾಯ ತೆರಿಗೆ ಅಧಿಕಾರಿಗಳಿಗೆ ದೆಹಲಿ ಹೆದ್ದಾರಿ ಬಳಿ, ದೆಹಲಿ ಹಾಗೂ ಮುಂಬೈನ ಉದ್ಯೋಗಿಗಳು ಆದಿವಾಸಿಗಳ ನಕಲಿ ಹೆಸರಿನಲ್ಲಿ ಭೂಮಿ ಖರೀದಿಸುತ್ತಿದ್ದಾರೆಂಬ ದೂರು ಸಿಕ್ಕಿತ್ತು. ಈ ನಿಟ್ಟಿನಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು.