ಐಟಿ ರೇಡ್ ವೇಳೆ ಜಾರ್ಖಂಡ್ ಕಾಂಗ್ರೆಸ್ ಎಂಪಿ ಬಳಿ 400 ಕೋಟಿ ಹಣ! ಈವರೆಗೂ 225 ಕೋಟಿ ಕ್ಯಾಶ್ ಎಣಿಸಿದ ಅಧಿಕಾರಿಗಳು
ಬೋಲಂಗಿರ್ ಜಿಲ್ಲೆಯ ಸುದಾಪಾಡಾದಲ್ಲಿ ಶುಕ್ರವಾರ ಮುಂದುವರೆದ ದಾಳಿ ವೇಳೆ ಹಣದ ಕಂತೆಗಳನ್ನು ತುಂಬಿಟ್ಟಿದ್ದ 156 ಚೀಲಗಳಲ್ಲಿದ್ದ ಹಣದ ಕಂತೆಯನ್ನು ವಶಕ್ಕೆ ಪಡೆಯಲಾಗಿದೆ.
ಭುವನೇಶ್ವರ (ಡಿಸೆಂಬರ್ 9, 2023): ತೆರಿಗೆ ವಂಚನೆ ಆರೋಪದ ಮೇಲೆ ಒಡಿಶಾದ ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರಿಗೆ ಸೇರಿದ ಎಲ್ಲ ನಿವೇಶನಗಳು ಹಾಗೂ ಸಂಸ್ಥೆಗಳ ಮೇಲೆ 3 ದಿನಗಳಿಂದ ದಾಳಿ ನಡೆಸುತ್ತಿರುವ ಆದಾಯ ತೆರಿಗೆ ಇಲಾಖೆ(ಐಟಿ)ಯು ಒಟ್ಟು 225 ಕೋಟಿ ರೂ. ಹಣವನ್ನು ಜಪ್ತಿ ಮಾಡಿದೆ.
ಬುಧವಾರದಿಂದ ಕಾರ್ಯಾಚರಣೆ ನಡೆಸುತ್ತಿದ್ದ ಅಧಿಕಾರಿಗಳು ಬೋಲಂಗಿರ್‌ನಲ್ಲಿರುವ ಸಾಹು ಅವರಿಗೆ ಸೇರಿದ್ದ ಬಲ್ಡಿಯೊ ಸಾಹು ಮತ್ತು ಗ್ರೂಪ್ ಆಫ್ ಕಂಪನೀಸ್ ಮೇಲೆ ದಾಳಿ ನಡೆಸಿ ಗುರುವಾರ 200 ಕೋಟಿ ರೂ. ನಗದು ವಶಕ್ಕೆ ಪಡೆದಿದ್ದರು. ಶುಕ್ರವಾರ ಇನ್ನೂ 25 ಕೋಟಿ ರೂ. ನಗದು ಜಪ್ತಿ ಮಾಡಲಾಗಿದೆ. ‘ಬಲ್ಡಿಯೋ ಸಾಹು’ ಎಂಬುದು ಒಡಿಶಾದ ಅತಿ ದೊಡ್ಡ ಮದ್ಯ ತಯಾರಕ ಮತ್ತು ಮಾರಾಟ ಸಂಸ್ಥೆಯಾಗಿದೆ.
ಇದನ್ನು ಓದಿ: ಐಟಿ ರೇಡ್: ಕಾಂಗ್ರೆಸ್ ಸಂಸದನ ನಿವಾಸದಲ್ಲಿ ಪತ್ತೆಯಾಯ್ತು ನೂರಾರು ಕೋಟಿ ರೂ. ನಗದು!
ಇನ್ನು ಬೋಲಂಗಿರ್ ಜಿಲ್ಲೆಯ ಸುದಾಪಾಡಾದಲ್ಲಿ ಶುಕ್ರವಾರ ಮುಂದುವರೆದ ದಾಳಿ ವೇಳೆ ಹಣದ ಕಂತೆಗಳನ್ನು ತುಂಬಿಟ್ಟಿದ್ದ 156 ಚೀಲಗಳಲ್ಲಿದ್ದ ಹಣದ ಕಂತೆಯನ್ನು ವಶಕ್ಕೆ ಪಡೆಯಲಾಗಿದೆ. ಈ ಪೈಕಿ 6 ರಿಂದ 7 ಚೀಲಗಳ ಹಣವನ್ನು ಎಣಿಕೆ ಮಾಡಲಾಗಿದ್ದು, ಅದರಲ್ಲಿದ್ದ 25 ಕೋಟಿ ರೂ. ಕಂಡು ಬಂದಿದೆ. ಇನ್ನೂ ಉಳಿದ ಚೀಲಗಳನ್ನು ಎಣಿಕೆ ಮಾಡಬೇಕಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಎಲ್ಲ ಚೀಲಗಳನ್ನೂ ಎಣಿಕೆ ಮಾಡಿದರೆ ಸುಮಾರು 400 ಕೋಟಿ ರೂ.ಗೂ ಅಧಿಕ ಹಣ ಸಿಗಬಹುದು ಎನ್ನಲಾಗಿದೆ.
ಸಾಹು ಸಂಸ್ಥೆಯ ಸಂಬಲ್‌ಪುರ, ಬೋಲಂಗೀರ್, ತಿತಿಲಗಢ, ಬೌಧ್, ಸುಂದರ್‌ಗಢ, ರೂರ್ಕೆಲಾ ಮತ್ತು ಭುವನೇಶ್ವರದಲ್ಲಿ ದಾಳಿ ನಡೆಸಲಾಗಿದೆ. ಬುಧವಾರ ಸುಂದರಗಢ ನಗರದ ಸರ್ಗಿಪಾಲಿಯಲ್ಲಿರುವ ಕೆಲವು ಮನೆ, ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.
ಇದನ್ನು ಓದಿ: ಚುನಾವಣೆಯಲ್ಲಿ ಹಂಚಲು ಕರ್ನಾಟಕದಿಂದ ತೆಲಂಗಾಣಕ್ಕೆ 3.5 ಕೋಟಿ ರೂ. ಹಣ ಸಾಗಾಟ! ಹೈದರಾಬಾದಲ್ಲಿ ಜಪ್ತಿ
ರಾಜ್ಯದಲ್ಲಿ ಇಷ್ಟು ಹಣ ವಶ ಇದೇ ಮೊದಲು:
ಇನ್ನು ‘ಇದು ಒಡಿಶಾದಲ್ಲಿ ಆದಾಯ ತೆರಿಗೆ ಇಲಾಖೆಯಿಂದ ಇದುವರೆಗಿನ ಅತಿದೊಡ್ಡ ನಗದು ವಶವಾಗಿರಬಹುದು. ರಾಜ್ಯದಲ್ಲಿ ಇಷ್ಟು ದೊಡ್ಡ ಮೊತ್ತದ ಹಣವನ್ನು ನಾನು ಎಂದಿಗೂ ಜಪ್ತಿ ಮಾಡಿಲ್ಲ’ ಎಂದು ಮಾಜಿ ಐಟಿ ಕಮಿಷನರ್ ಶರತ್ ಚಂದ್ರ ದಾಶ್ ಹೇಳಿದ್ದಾರೆ.
ನೋಟು ಎಣಿಸಲು 8 ಯಂತ್ರ:
ಇನ್ನು ಐಟಿ ವಶಪಡಿಸಿಕೊಂಡಿರುವ ಭಾರೀ ಮೊತ್ತದ ನೋಟುಗಳನ್ನು ಎಣಿಸಲು ಸುಮಾರು 8 ಯಂತ್ರಗಳನ್ನು ಬಳಸಲಾಗುತ್ತಿದೆ. ಇನ್ನೂ ಹೆಚ್ಚುವರಿ 2 ಯಂತ್ರಗಳನ್ನು ತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ನೋಟು ಎಣಿಕೆಯಲ್ಲಿ 30 ಬ್ಯಾಂಕ್ ಸಿಬ್ಬಂದಿಗಳು ಭಾಗಿಯಾಗಿದ್ದಾರೆ. ಎಣಿಕೆ ಆಗದ 150 ಹಣದ ಬ್ಯಾಗ್‌ಗಳನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಖಾತೆಗೆ ಕೊಂಡೊಯ್ಯಲಾಗಿದೆ.