ಲೂಟಿ ಮಾಡಿದ ಪ್ರತಿ ಪೈಸೆಯೂ ವಾಪಸ್: ಇದು ಮೋದಿ ಗ್ಯಾರಂಟಿ; ಕಾಂಗ್ರೆಸ್ ಸಂಸದನ ಆಸ್ತಿ ಮೇಲಿನ ದಾಳಿಗೆ ಪ್ರಧಾನಿ ಪ್ರತಿಕ್ರಿಯೆ
ದೇಶದ ಜನರು ಈ ನೋಟುಗಳ ಕಂತೆಯನ್ನು ನೋಡಬೇಕು ಮತ್ತು ಕಾಂಗ್ರೆಸ್ ನಾಯಕರನ್ನು ನಿಮ್ಮ ಪ್ರಾಮಾಣಿಕತೆಯ ವಿಳಾಸ ಎಲ್ಲಿದೆ ಎಂದು ಕೇಳಬೇಕು. ಜನರಿಂದ ಲೂಟಿ ಮಾಡಿದ ಪ್ರತಿ ಪೈಸೆಯನ್ನೂ ಹಿಂದಿರುಗಿಸಬೇಕಾಗುತ್ತದೆ. ಇದು ಮೋದಿ ಗ್ಯಾರಂಟಿ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ನವದೆಹಲಿ (ಡಿಸೆಂಬರ್ 9, 2023): ‘ಜನರಿಂದ ಲೂಟಿ ಮಾಡಿದ ಪ್ರತಿ ಪೈಸೆಯನ್ನೂ ಹಿಂದಿರುಗಿಸಬೇಕು, ಇದು ಮೋದಿ ಗ್ಯಾರಂಟಿ’ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ. ಒಡಿಶಾದ ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರಿಗೆ ಸೇರಿವೆ ಎನ್ನಲಾದ ಸ್ಥಳಗಳ ಮೇಲೆ ಒಡಿಶಾದಲ್ಲಿ ದಾಳಿ ಮಾಡಿರುವ ಆದಾಯ ತೆರಿಗೆ ಇಲಾಖೆ, 225 ಕೋಟಿ ರೂ. ಗೂ ಹೆಚ್ಚು ನಗದು ವಶಕ್ಕೆ ಪಡೆದಿರುವ ಬೆನ್ನಲ್ಲೇ ಕಾಂಗ್ರೆಸ್ ವಿರುದ್ಧ ಮೋದಿ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘ದೇಶದ ಜನರು ಈ ನೋಟುಗಳ ಕಂತೆಯನ್ನು ನೋಡಬೇಕು ಮತ್ತು ಅದರ (ಕಾಂಗ್ರೆಸ್) ನಾಯಕರನ್ನು ‘ನಿಮ್ಮ ಪ್ರಾಮಾಣಿಕತೆಯ ವಿಳಾಸ ಎಲ್ಲಿದೆ’ ಎಂದು ಕೇಳಬೇಕು. ಜನರಿಂದ ಲೂಟಿ ಮಾಡಿದ ಪ್ರತಿ ಪೈಸೆಯನ್ನೂ ಹಿಂದಿರುಗಿಸಬೇಕಾಗುತ್ತದೆ. ಇದು ಮೋದಿ ಗ್ಯಾರಂಟಿ’ ಎಂದಿದ್ದಾರೆ.
ಇದರೊಂದಿಗೆ ಐಟಿ ವಶಕ್ಕೆ ಪಡೆದಿರುವ ಹಣದ ಕಂತೆಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಇದನ್ನು ಓದಿ: ಐಟಿ ರೇಡ್ ವೇಳೆ ಜಾರ್ಖಂಡ್ ಕಾಂಗ್ರೆಸ್ ಎಂಪಿ ಬಳಿ 400 ಕೋಟಿ ಹಣ! ಈವರೆಗೂ 225 ಕೋಟಿ ಕ್ಯಾಶ್ ಎಣಿಸಿದ ಅಧಿಕಾರಿಗಳು
ಯಾರು ಈ ಧೀರಜ್ ಸಾಹು?
ಜಾರ್ಖಂಡ್ ಮೂಲದ ಉದ್ಯಮಿ ಹಾಗೂ ರಾಜಕಾರಣಿ. 64 ವರ್ಷ. 1980 ರಿಂದ 89 ರವರೆಗೆ ಜಾರ್ಖಂಡ್‌ನ ರಾಂಚಿ ಕ್ಷೇತ್ರದ ಸಂಸದರಾಗಿದ್ದ ಶಿವ ಪ್ರಸಾದ್ ಸಾಹು ಅವರ ಸಹೋದರ.ವಿದ್ಯಾರ್ಥಿ ನಾಯಕರಾಗಿ ಕಾಂಗ್ರೆಸ್ ಪ್ರವೇಶಿಸಿದ ಧೀರಜ್ ಈಗಲೂ ಅದೇ ಪಕ್ಷದ ಜತೆ ಗುರುತಿಸಿಕೊಂಡಿದ್ದಾರೆ. 2010 ರಿಂದ ರಾಜ್ಯಸಭೆ ಸದಸ್ಯರಾಗಿದ್ದಾರೆ.
ನೋಟು ಎಣಿಸಲು 8 ಯಂತ್ರ:
ಇನ್ನು ಐಟಿ ವಶಪಡಿಸಿಕೊಂಡಿರುವ ಭಾರೀ ಮೊತ್ತದ ನೋಟುಗಳನ್ನು ಎಣಿಸಲು ಸುಮಾರು 8 ಯಂತ್ರಗಳನ್ನು ಬಳಸಲಾಗುತ್ತಿದೆ. ಇನ್ನೂ ಹೆಚ್ಚುವರಿ 2 ಯಂತ್ರಗಳನ್ನು ತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ನೋಟು ಎಣಿಕೆಯಲ್ಲಿ 30 ಬ್ಯಾಂಕ್ ಸಿಬ್ಬಂದಿಗಳು ಭಾಗಿಯಾಗಿದ್ದಾರೆ. ಎಣಿಕೆ ಆಗದ 150 ಹಣದ ಬ್ಯಾಗ್‌ಗಳನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಖಾತೆಗೆ ಕೊಂಡೊಯ್ಯಲಾಗಿದೆ.
ಇದನ್ನು ಓದಿ: ಐಟಿ ರೇಡ್: ಕಾಂಗ್ರೆಸ್ ಸಂಸದನ ನಿವಾಸದಲ್ಲಿ ಪತ್ತೆಯಾಯ್ತು ನೂರಾರು ಕೋಟಿ ರೂ. ನಗದು!