ಆಡಳಿತ ಹಾಗೂ ಪ್ರತಿಪಕ್ಷ ಮಧ್ಯೆ ಭಾರೀ ವಾಕ್ಸಮರಕ್ಕೆ ನಾಂದಿ ಹಾಡಿದ ಬಿಬಿಸಿ ಮೇಲಿನ ಐಟಿ ರೈಡ್

  • ಮೋದಿ ವಿರುದ್ಧ ಸಾಕ್ಷ್ಯಚಿತ್ರ ಪ್ರದರ್ಶಿಸಿದ್ದಕ್ಕಾಗಿ ಟಾರ್ಗೆಟ್‌: ಪ್ರತಿಪಕ್ಷಗಳ ಆರೋಪ
  • ದಾಳಿಗೂ ನಮಗೂ ಸಂಬಂಧವಿಲ್ಲ, ತನಿಖಾ ಸಂ ತಮ್ಮ ಕೆಲಸ ಮಾಡುತ್ತಿವೆ: ಕೇಂದ್ರ
IT raid on BBC office started a huge war of words between the central govt and the opposition party leader akb

ಯಾಕೆ ದಾಳಿ?

ಬಿಬಿಸಿಯ ಅಂತಾರಾಷ್ಟ್ರೀಯ ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ತೆರಿಗೆ ಇಲಾಖೆಗೆ ಗುಮಾನಿ ಇದೆ. ಭಾರತದಲ್ಲಿ ಗಳಿಸಿದ ಲಾಭವನ್ನು ಬ್ರಿಟನ್‌ಗೆ ಸಂಸ್ಥೆ ಅಕ್ರಮವಾಗಿ ವರ್ಗಾವಣೆ ಮಾಡಿರುವ ಆರೋಪದ ಮೇರೆಗೆ ಈ ದಾಳಿಯನ್ನು ನಡೆಸಲಾಗಿದೆ. ಬಿಬಿಸಿಗೆ ಈ ಕುರಿತು ಈ ಹಿಂದೆ ನೋಟಿಸ್‌ ನೀಡಿದ್ದರೂ ಉತ್ತರ ಬಾರದ ಕಾರಣ ಪರಿಶೀಲನೆ ನಡೆಸಲಾಗಿದೆ ಎಂದು ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.

ವಿನಾಶಕಾಲೇ ವಿಪರೀತ  ಬುದ್ಧಿ: ಕಾಂಗ್ರೆಸ್‌ ಕಿಡಿ

ನವದೆಹಲಿ: ಬಿಬಿಸಿ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ (Income Tax department) ಅಧಿಕಾರಿಗಳು ನಡೆಸಿದ ದಾಳಿ ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷಗಳ ನಡುವೆ ಭಾರೀ ವಾಕ್ಸಮರಕ್ಕೆ ನಾಂದಿ ಹಾಡಿದೆ. ಅದಾನಿ ವಿಷಯದ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ಸಂಸತ್ತಿನಲ್ಲಿ ಕಾಂಗ್ರೆಸ್‌ ಒತ್ತಾಯಿಸುತ್ತಿದೆ. ಆದರೆ ಅತ್ತ ಬಿಬಿಸಿ ವಿರುದ್ಧ ಸರ್ಕಾರ ಮುಗಿಬಿದ್ದಿದೆ. ವಿನಾಶ ಕಾಲೇ ವಿಪರೀತ ಬುದ್ಧಿ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ (Jairam Ramesh) ಟೀಕಿಸಿದ್ದಾರೆ.

ಮೋದಿ ಸಾಕ್ಷ್ಯಚಿತ್ರ ವಿವಾದ ಬೆನ್ನಲ್ಲೇ ಬಿಬಿಸಿಯ ದೆಹಲಿ, ಮುಂಬೈ ಕಚೇರಿಗೆ ಐಟಿ ಶಾಕ್..!

ಬಿಬಿಸಿ ಅಂದ್ರೆ ಭ್ರಷ್ಟ ಬಕ್ವಾಸ್‌ ಕಾರ್ಪೊರೇಷನ್‌

ಪ್ರಧಾನಿ ಮೋದಿ ವಿರುದ್ಧದ ಸಾಕ್ಷ್ಯಚಿತ್ರ ಪ್ರಸಾರ ಮಾಡಿದ್ದಾಕ್ಕಾಗಿ ಬಿಬಿಸಿಯನ್ನು ತೆರಿಗೆ ಇಲಾಖೆ ಗುರಿಯಾಗಿಸಿಕೊಂಡಿದೆ ಎಂಬ ಕಾಂಗ್ರೆಸ್ ಆರೋಪವನ್ನು ಬಿಜೆಪಿ ಅಲ್ಲಗಳೆದಿದೆ. ಬಿಜೆಪಿ ಮೇಲೆ ಗೂಬೆ ಕೂರಿಸುವುದು ತಪ್ಪು. ಬಿಬಿಸಿ ಎಂದರೆ ‘ಭ್ರಷ್ಟ ಬಕ್ವಾಸ್‌ ಕಾರ್ಪೊರೇಷನ್‌ ಎಂದು ಬಿಜೆಪಿ ವಕ್ತಾರ ಗೌರವ್‌ ಭಾಟಿಯಾ (Gaurav Bhatia) ತಿರುಗೇಟು ಕೊಟ್ಟಿದ್ದಾರೆ. ಸರ್ಕಾರಿ ಸಂಸ್ಥೆಗಳು ತಮ್ಮ ಕೆಲಸ ಮಾಡುತ್ತಿವೆ ಎಂದು ಸಚಿವ ಅನುರಾಗ್‌ ಠಾಕೂರ್‌ (Anurag Thakur) ಸಮರ್ಥಿಸಿಕೊಂಡಿದ್ದಾರೆ.

ತನಿಖೆಗೆ ಸಹಕಾರ: ಬಿಬಿಸಿ

ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ಬಿಬಿಸಿ, ಪ್ರಸಕ್ತ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಮ್ಮ ದೆಹಲಿ ಮತ್ತು ಮುಂಬೈ (Delhi and Mumbai) ಕಚೇರಿಯಲ್ಲಿದ್ದಾರೆ ಮತ್ತು ನಾವು ಅವರಿಗೆ ಪೂರ್ಣ ಸಹಕಾರ ನೀಡುತ್ತಿದ್ದೇವೆ. ಶೀಘ್ರವೇ ಪರಿಸ್ಥಿತಿ ತಿಳಿಯಾಗಲಿದೆ ಎಂಬ ವಿಶ್ವಾಸವಿದೆ ಎಂದು ಟ್ವೀಟ್‌ ಮಾಡಿದೆ. ಬ್ರಿಟನ್‌ ಸರ್ಕಾರ (British government) ಕೂಡ ಈ ಬಗ್ಗೆ ನಾವು ನಿಗಾ ವಹಿಸಿದ್ದೇವೆ ಎಂದು ಹೇಳಿದೆ.

ಜೊತೆಗೆ ತನ್ನ ಸಿಬ್ಬಂದಿಗಳಿಗೆ ಪ್ರತ್ಯೇಕ ಮಾಹಿತಿ ರವಾನಿಸಿರುವ ಬಿಬಿಸಿ, ಕಚೇರಿಯಲ್ಲಿರದ ಸಿಬ್ಬಂದಿಗಳಿಗೆ ಕಚೇರಿಯಿಂದ ದೂರ ಇರುವಂತೆ ಮತ್ತು ಕಚೇರಿಯಲ್ಲಿ ಇರುವವರಿಗೆ ಆತಂಕಕ್ಕೆ ಒಳಗಾಗದಂತೆ ಮನವಿ ಮಾಡುತ್ತೇವೆ. ನಾವು ಪರಿಸ್ಥಿತಿಯನ್ನು ನಿರ್ವಹಿಸುತ್ತಿದ್ದೇವೆ ಎಂದು ಹೇಳಿದೆ.

ಬಿಜೆಪಿ ಸೇರ್ತಿಲ್ಲ, ಆದರೆ ದೇಶ ದುರ್ಬಲ ಮಾಡುವ ಶಕ್ತಿಗಳ ವಿರುದ್ಧವಿದ್ದೇನೆ: ಅನಿಲ್‌ ಆಂಟನಿ!

ಇದು ದಾಳಿ ಅಲ್ಲ ಸಮೀಕ್ಷೆ ಅಷ್ಟೇ: ಐಟಿ ಮೂಲಗಳು

ಮತ್ತೊಂದೆಡೆ ಮಂಗಳವಾರ ನಡೆಸಿದ್ದು ದಾಳಿ ಅಲ್ಲ, ಅದು ಕೇವಲ ಸಮೀಕ್ಷೆ ಅಷ್ಟೆ. ನಾವು ಕೆಲವೊಂದು ಲೆಕ್ಕದ ಪುಸ್ತಕಗಳ ಪರಿಶೀಲನೆಗೆ ತೆರಳಿದ್ದೇವೆ. ಇದು ಯಾವುದೇ ತಪಾಸಣೆ ಅಲ್ಲ. ನಾವು ಬಿಬಿಸಿಯಿಂದ ಬ್ಯಾಲೆನ್ಸ್‌ ಶೀಟ್‌ ಮತ್ತು ಲೆಕ್ಕಪತ್ರದ ದಾಖಲೆಗಳನ್ನು ಕೇಳಿದ್ದೇವೆ. ಕೆಲವು ಸ್ಪಷ್ಟನೆಗಳನ್ನು ಬಯಸಿದ್ದೇವೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ಹೇಳಿವೆ.

ಏನೇನಾಯ್ತು?

ಫೆ.14ರ ಬೆಳಗ್ಗೆ ದೆಹಲಿ, ಮುಂಬೈ ಬಿಬಿಸಿ ಕಚೇರಿಗೆ ತೆರಿಗೆ ಅಧಿಕಾರಿಗಳ ಲಗ್ಗೆ
ಪತ್ರಕರ್ತರ ಮೊಬೈಲ್‌, ಲ್ಯಾಪ್‌ಟಾಪ್‌ಗಳನ್ನು ನಿರ್ದಿಷ್ಟ ಸ್ಥಳದಲ್ಲಿಡಲು ಸೂಚನೆ
ಬಳಿಕ ಕಚೇರಿಯಲ್ಲಿ ಅಧಿಕಾರಿಗಳಿಂದ ಹಲವಾರು ದಾಖಲೆಗಳ ಪರಿಶೀಲನೆ ಕಾರ್ಯ
ದಾಳಿ ವೇಳೆ ಬಿಬಿಸಿ ಸಿಬ್ಬಂದಿ, ತೆರಿಗೆ ಅಧಿಕಾರಿಗಳ ನಡುವೆ ಜೋರು ವಾಗ್ವಾದ

ಬಿಬಿಸಿಗೆ ಐಟಿ ಬಿಸಿ

2002ರ ಗುಜರಾತ್‌ ಗಲಭೆ ಪ್ರಕರಣದಲ್ಲಿ ಅಂದಿನ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ (Narendra Modi) ಪಾತ್ರ ಇತ್ತು ಎಂದು ಆರೋಪಿಸಿ ಸಾಕ್ಷ್ಯಚಿತ್ರ ಪ್ರಸಾರ ಮಾಡಿ ಕಳೆದ ಕೆಲ ದಿನಗಳಿಂದ ವಿವಾದದ ಕೇಂದ್ರಬಿಂದುವಾಗಿರುವ ಬ್ರಿಟನ್‌ ಮೂಲದ 'ಬಿಬಿಸಿ' ಸುದ್ದಿಸಂಸ್ಥೆಗೆ ಮಂಗಳವಾರ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದರು. ಮಂಗಳವಾರ ಬೆಳಗ್ಗೆಯಿಂದ ದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿ ಮೇಲೆ ದಾಳಿ ಆರಂಭಿಸಿರುವ ಐಟಿ ಅಧಿಕಾರಿಗಳು ತಡರಾತ್ರಿಯವರೆಗೂ ಹಣಕಾಸು ಲೆಕ್ಕಪತ್ರಗಳನ್ನು ಪರಿಶೀಲಿಸಿದ್ದಾರೆ. ಸಿಬ್ಬಂದಿಯ ಮೊಬೈಲ್‌, ಲ್ಯಾಪ್‌ಟಾಪ್‌ ವಶಪಡಿಸಿಕೊಂಡು ಅವುಗಳನ್ನು ಜಾಲಾಡಿದ್ದಾರೆ.

ದಾಳಿ ತಡರಾತ್ರಿವರೆಗೂ ಮುಂದುವರಿದಿತ್ತು. ಸದ್ಯಕ್ಕೆ ನಿಲ್ಲುವ ಲಕ್ಷಣಗಳಿಲ್ಲ. ಬುಧವಾರವೂ ದಾಳಿ ಮುಂದುವರಿಯಲಿದೆ ಎಂದು ಮೂಲಗಳು ಹೇಳಿವೆ.  ಈ ನಡುವೆ ಬಿಬಿಸಿ ಕಚೇರಿಗಳ ಮೇಲಿನ ಐಟಿ ದಾಳಿಯನ್ನು ವಿಪಕ್ಷಗಳು ಹಾಗೂ ಮಾಧ್ಯಮ ಸಂಘಟನೆಗಳು ಟೀಕಿಸಿವೆ. ಪ್ರಧಾನಿ ನರೇಂದ್ರ ಮೋದಿ ಕುರಿತ 'ಇಂಡಿಯಾ: ದ ಮೋದಿ ಕ್ವಶ್ಚೆನ್‌ ('India: The Modi Question') ಸಾಕ್ಷ್ಯಚಿತ್ರವನ್ನು ಪ್ರದರ್ಶನ ಮಾಡಿದ್ದಕ್ಕಾಗಿ ಬಿಬಿಸಿಯನ್ನು ಗುರಿ ಮಾಡಿಕೊಳ್ಳಲಾಗಿದೆ ಎಂದು ಕಿಡಿಕಾರಿವೆ. ಮತ್ತೊಂದೆಡೆ, ದಾಳಿಗೂ ನಮಗೂ ಸಂಬಂಧವಿಲ್ಲ. ತನಿಖಾ ಸಂಸ್ಥೆಗಳು ಅವುಗಳ ಕೆಲಸ ಮಾಡುತ್ತಿವೆ ಎಂದು ಬಿಜೆಪಿ ಹಾಗೂ ಕೇಂದ್ರ ಸರ್ಕಾರ ತಿರುಗೇಟು ನೀಡಿದೆ.

ಬೆಳಗ್ಗೆ 11ಕ್ಕೆ ದಾಳಿ ಶುರು:

ಮಂಗಳವಾರ ಬೆಳಗ್ಗೆ 11 ಗಂಟೆಗೆ ಎರಡು ನಗರಗಳಲ್ಲಿನ ಮೂರು ಕಚೇರಿಗಳ ಮೇಲೆ ದಾಳಿ ಆರಂಭಿಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಪತ್ರಕರ್ತರು ಹಾಗೂ ಸಿಬ್ಬಂದಿಗಳ ಮೊಬೈಲ್‌, ಲ್ಯಾಪ್‌ಟಾಪ್‌ಗಳನ್ನು ನಿರ್ದಿಷ್ಟಸ್ಥಳದಲ್ಲಿ ಇಡುವಂತೆ ಸೂಚಿಸಿ ಬಳಿಕ ದಾಖಲೆಗಳ ಪರಿಶೀಲನೆ ಶುರು ಮಾಡಿದರು. ಈ ವೇಳೆ ಆಗಾಗ ಸಿಬ್ಬಂದಿ ಹಾಗೂ ಐಟಿ ಅಧಿಕಾರಿಗಳ ನಡುವೆ ವಾಗ್ವಾದವೂ ನಡೆದಿದೆ. ಲ್ಯಾಪ್‌ಟಾಪ್‌ ತಪಾಸಣೆ ವೇಳೆ ಐಟಿ ಸಿಬ್ಬಂದಿ 'ಟ್ಯಾಕ್ಸ್‌' ಎಂಬ ಕೀವರ್ಡ್‌ ಬಳಸಿದರು ಎಂದು ಮೂಲಗಳು ಹೇಳಿವೆ.

ಲಂಡನ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಿಬಿಸಿ ಮತ್ತು ಅದರ ಭಾರತೀಯ ಅಂಗದ ಹಣಕಾಸು ವ್ಯವಹಾರಗಳನ್ನು ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಬಿಬಿಸಿ ಇಂಡಿಯಾದ ಅಂತಾರಾಷ್ಟ್ರೀಯ ತೆರಿಗೆ ವಿಷಯದಲ್ಲಿನ ಅಕ್ರಮ ಹಾಗೂ ಭಾರತದಲ್ಲಿನ ಲಾಭದ ಹಣವನ್ನು ಬ್ರಿಟನ್‌ಗೆ ಅಕ್ರಮವಾಗಿ ವರ್ಗಾವಣೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಆದರೆ ಸಂಸ್ಥೆಯ ಯಾವುದೇ ಸಿಬ್ಬಂದಿ ಅಥವಾ ನಿರ್ದೇಶಕರ ಮನೆ ಮೇಲೆ ದಾಳಿ ನಡೆಸಿಲ್ಲ.

Latest Videos
Follow Us:
Download App:
  • android
  • ios