ಮೋದಿ ಸಾಕ್ಷ್ಯಚಿತ್ರ ವಿವಾದ ಬೆನ್ನಲ್ಲೇ ಬಿಬಿಸಿಯ ದೆಹಲಿ, ಮುಂಬೈ ಕಚೇರಿಗೆ ಐಟಿ ಶಾಕ್..!
ಬಿಬಿಸಿಯ ದೆಹಲಿ ಹಾಗೂ ಮುಂಬೈ ಕಚೇರಿಗೆ ಐಟಿ ಅಧಿಕಾರಿಗಳು ದೌಡಾಯಿಸಿದ್ದು, ತೆರಿಗೆ ಸರ್ವೇ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ನವದೆಹಲಿ (ಫೆಬ್ರವರಿ 14, 2023): ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಮುಂಬೈನ ಬಿಬಿಸಿ ಕಚೇರಿಗೆ ಐಟಿ ಅಧಿಕಾರಿಗಳು ದೌಡಾಯಿಸಿದ್ದು, ಬಿಬಿಸಿಗೆ ಶಾಕ್ ಕೊಟ್ಟಿದ್ದಾರೆ. ಪ್ರಧಾನಿ ಮೋದಿ ಹಾಗೂ 2002ರ ಗುಜರಾತ್ ಗಲಭೆ ಸಂಬಂಧದ ಆರೋಪಗಳ ಹಿನ್ನೆಲೆ ಬಿಬಿಸಿ ಸಾಕ್ಷ್ಯಚಿತ್ರ ಭಾರಿ ವಿವಾದ ಮೂಡಿಸಿತ್ತು. ಈ ಬೆನ್ನಲ್ಲೇ ಐಟಿ ಅಧಿಕಾರಿಗಳು ತೆರಿಗೆ ಸರ್ವೇ ನಡೆಸಿದ್ದಾರೆ.
ಸುಮಾರು 20 ತೆರಿಗೆ ಅಧಿಕಾರಿಗಳು ಬಿಬಿಸಿಯ ದೆಹಲಿ ಕಚೇರಿಯನ್ನು ಶೋಧಿಸಿದ್ದು, ಇನ್ನು ಮುಂಬೈನಲ್ಲಿ, ನಿರ್ಮಾಣಕ್ಕೆ ಸಂಬಂಧಿಸಿದ BBC ಸ್ಟುಡಿಯೋವನ್ನು ಶೋಧಿಸಲಾಯ್ತು ಎಂದು ತಿಳಿದುಬಂದಿದೆ. BBCಯನ್ನು ಒಳಗೊಂಡಿರುವ ಅಂತಾರಾಷ್ಟ್ರೀಯ ತೆರಿಗೆ ಮತ್ತು ವರ್ಗಾವಣೆ ಬೆಲೆ ಅಕ್ರಮಗಳ ಸಂಬಂಧ ತೆರಿಗೆ ಅಧಿಕಾರಿಗಳು ಸರ್ವೇ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಫೆಬ್ರವರಿ 14, 2023 ರ ಬೆಳಗ್ಗೆಯಿಂದ ಐಟಿ ಅಧಿಕಾರಿಗಳು ಸರ್ವೇ ನಡೆಸುತ್ತಿದ್ದಾರೆ. ಈ ವೇಳೆ, ಕೆಲ ಪತ್ರಕರ್ತರ ಫೋನ್‌ಗಳನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದೂ ತಿಳಿದುಬಂದಿದೆ.
ಇದನ್ನು ಓದಿ: ಮೋದಿ ವಿರುದ್ಧ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ ನಿಷೇಧ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ: ಮುಂದಿನ ವಾರ ವಿಚಾರಣೆ
ಈ ವೇಳೆ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪತ್ರಕರ್ತರ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ತೆಗೆದುಕೊಂಡು ಹೋಗಲಾಗಿದೆ ಎಂದು ಮೂಲಗಳು ತಿಳಿಸಿವೆ. ತೆರಿಗೆ ಸರ್ವೇ ಮುಗಿಯುವವರೆಗೆ ಕಚೇರಿಗಳನ್ನು ಮುಚ್ಚಲಾಗುವುದು ಮತ್ತು ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ನೌಕರರಿಗೆ ತಿಳಿಸಲಾಗಿದೆ ಎಂದೂ ಹೇಳಲಾಗಿದೆ.
ಅಲ್ಲದೆ, ಇದು ರೇಡ್ ಅಲ್ಲ ತೆರಿಗೆ ಸರ್ವೇ ಎಂದು ಐಟಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ನಮ್ಮ ಅಧಿಕಾರಿಗಳು ಶೋಧ ನಡೆಸಲು ಹೋಗಿಲ್ಲ, ಬಿಬಿಸಿಯ ಅಕೌಂಟ್ ಪುಸ್ತಕಗಳನ್ನು ತಪಾಸಣೆ ನಡೆಸಲು ಹೋಗಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮೋದಿಯ ಬಿಬಿಸಿ ಸಾಕ್ಷ್ಯಚಿತ್ರ ವಿರೋಧಿಸಿದ ಬೆನ್ನಲ್ಲೇ ಕಾಂಗ್ರೆಸ್ ತೊರೆದ ಮಾಜಿ ಕೇಂದ್ರ ಸಚಿವ ಆಂಟನಿ ಪುತ್ರ
ಇದು ಸಮೀಕ್ಷೆಯೇ ಹೊರತು ಐಟಿ ಶೋಧವಲ್ಲ, ವಶಪಡಿಸಿಕೊಂಡಿರುವ ಫೋನ್‌ಗಳನ್ನು ಹಿಂತಿರುಗಿಸಲಾಗುವುದು ಎಂದು ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ. "ನಮಗೆ ಕೆಲವು ಸ್ಪಷ್ಟೀಕರಣಗಳು ಬೇಕಾಗಿದ್ದವು ಮತ್ತು ಅದಕ್ಕಾಗಿ ನಮ್ಮ ತಂಡವು ಬಿಬಿಸಿ ಕಚೇರಿಗೆ ಭೇಟಿ ನೀಡುತ್ತಿದೆ ಮತ್ತು ನಾವು ಸಮೀಕ್ಷೆಯನ್ನು ನಡೆಸುತ್ತಿದ್ದೇವೆ. ನಮ್ಮ ಅಧಿಕಾರಿಗಳು ಖಾತೆ ಪುಸ್ತಕಗಳನ್ನು ಪರಿಶೀಲಿಸಲು ಹೋಗಿದ್ದಾರೆ, ಇದು ಹುಡುಕಾಟಗಳಲ್ಲ" ಎಂದು ಆದಾಯ ತೆರಿಗೆ ಮೂಲಗಳು ಪ್ರತಿಪಾದಿಸಿವೆ. ಐಟಿ ಅಧಿಕಾರಿಗಳು ಬಿಬಿಸಿಯ ಹಣಕಾಸು ಇಲಾಖೆಯನ್ನು ಅದರ ಬ್ಯಾಲೆನ್ಸ್ ಶೀಟ್ ಮತ್ತು ಖಾತೆಗಳ ವಿವರಗಳನ್ನು ಕೇಳಿದರು ಎಂದೂ ಮೂಲಗಳು ತಿಳಿಸಿವೆ.
ಕಳೆದ ತಿಂಗಳು ಸಾರ್ವಜನಿಕ ವೇದಿಕೆಗಳಿಂದ ತೆಗೆದುಹಾಕಲಾದ "ಭಾರತ: ಮೋದಿ ಪ್ರಶ್ನೆ" ಎಂಬ ಎರಡು ಭಾಗಗಳ ಡಾಕ್ಯುಮೆಂಟರಿ ಸೀರಿಸ್ ಹಿನ್ನೆಲೆ ಬಿಬಿಸಿ ಇತ್ತೀಚೆಗೆ ಸುದ್ದಿಯಲ್ಲಿತ್ತು. ಜನವರಿ 21 ರಂದು, ಮಾಹಿತಿ ತಂತ್ರಜ್ಞಾನ ನಿಯಮಗಳು, 2021 ರ ಅಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿಕೊಂಡು ಕೇಂದ್ರ ಸರ್ಕಾರ ವಿವಾದಾತ್ಮಕ ಸಾಕ್ಷ್ಯಚಿತ್ರದ ಹಲವು ಯೂಟ್ಯೂಬ್ ವಿಡಿಯೋಗಳು ಹಾಗೂ ಟ್ವಿಟ್ಟರ್ ಪೋಸ್ಟ್‌ಗಳನ್ನು ನಿರ್ಬಂಧಿಸಲು ನಿರ್ದೇಶಿಸಿದೆ.
ಇದನ್ನೂ ಓದಿ: ವಿವಾದಿತ ಮೋದಿ ಸಾಕ್ಷ್ಯಚಿತ್ರಕ್ಕೆ ಬಿಬಿಸಿ ಸಂಸ್ಥೆ ಸಮರ್ಥನೆ: ಭಾರತ, ರಿಷಿ ಸುನಕ್ ಟೀಕೆಗೆ ಸ್ಪಷ್ಟನೆ
ಈ ಮಧ್ಯೆ, ಬಿಬಿಸಿ ಕಚೇರಿಗೆ ಐಟಿ ಅಧಿಕಾರಿಗಳು ತೆರಿಗೆ ಶೋಧ ನಡೆಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್, ಪ್ರಧಾನಿ ಮೋದಿಯವರನ್ನು ಟೀಕಿಸುವ ಸಾಕ್ಷ್ಯಚಿತ್ರದ ಬಗ್ಗೆ ಸರ್ಕಾರವು ಬಿಬಿಸಿಯನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದೆ. "ಇಲ್ಲಿ ನಾವು ಅದಾನಿ-ಹಿಂಡೆನ್‌ಬರ್ಗ್ ವಿವಾದದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಯನ್ನು ಕೇಳುತ್ತಿದ್ದೇವೆ ಮತ್ತು ಅಲ್ಲಿ ಸರ್ಕಾರವು ಬಿಬಿಸಿಯನ್ನು ಕಾಡುತ್ತಿದೆ. ವಿನಾಶ ಕಾಲೇ ವಿಪರೀತ ಬುದ್ಧಿ (ಒಬ್ಬರು ಅವನತಿ ಹೊಂದಿದಾಗ, ಒಬ್ಬರು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ)" ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್.ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಮೋದಿ ಸಾಕ್ಷ್ಯಚಿತ್ರ ಮತ್ತಷ್ಟು ಕಿಚ್ಚು; ಕೆಲವೆಡೆ ಪ್ರದರ್ಶನ: ಸತ್ಯ ಹೊರಗೆ ಬಂದೇ ಬರುತ್ತದೆ ಎಂದ ರಾಹುಲ್ ಗಾಂಧಿ