ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜನವರಿ 29ರಂದು ಜಿಎಸ್ಎಲ್‌ವಿ-ಎಫ್15 ರಾಕೆಟ್ ಮೂಲಕ ಎನ್‌ವಿಎಸ್-02 ಸಂಚರಣಾ (ನ್ಯಾವಿಗೇಶನ್) ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಿತು. ಆದರೆ, ಫೆಬ್ರವರಿ 2, ಭಾನುವಾರದಂದು ಹೇಳಿಕೆ ನೀಡಿದ ಇಸ್ರೋ, ಎನ್‌ವಿಎಸ್-02 ಒಂದು ತಾಂತ್ರಿಕ ಸಮಸ್ಯೆಯನ್ನು ಎದುರಿಸಿತು ಎಂದಿದೆ. ಗಮನಾರ್ಹ ವಿಚಾರವೆಂದರೆ, ಎನ್‌ವಿಎಸ್-02 ಇಸ್ರೋದ ನೂರನೇ ಯಶಸ್ವಿ ಉಡಾವಣೆಯಾಗಿದೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜನವರಿ 29ರಂದು ಜಿಎಸ್ಎಲ್‌ವಿ-ಎಫ್15 ರಾಕೆಟ್ ಮೂಲಕ ಎನ್‌ವಿಎಸ್-02 ಸಂಚರಣಾ (ನ್ಯಾವಿಗೇಶನ್) ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಿತು. ಆದರೆ, ಫೆಬ್ರವರಿ 2, ಭಾನುವಾರದಂದು ಹೇಳಿಕೆ ನೀಡಿದ ಇಸ್ರೋ, ಎನ್‌ವಿಎಸ್-02 ಒಂದು ತಾಂತ್ರಿಕ ಸಮಸ್ಯೆಯನ್ನು ಎದುರಿಸಿತು ಎಂದಿದೆ. ಗಮನಾರ್ಹ ವಿಚಾರವೆಂದರೆ, ಎನ್‌ವಿಎಸ್-02 ಇಸ್ರೋದ ನೂರನೇ ಯಶಸ್ವಿ ಉಡಾವಣೆಯಾಗಿದೆ.
ಯೋಜನೆಯ ಕುರಿತು ಹೇಳಿಕೆ ನೀಡಿರುವ ಇಸ್ರೋ, ಎನ್‌ವಿಎಸ್-02ನಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯ ಪರಿಣಾಮವಾಗಿ, ಉಪಗ್ರಹ ಉದ್ದೇಶಿತ ಕಕ್ಷೆಗೆ ತೆರಳುವ ಪ್ರಕ್ರಿಯೆ ಸ್ಥಗಿತಗೊಂಡಿತು ಎಂದು ವಿವರಿಸಿದೆ. 'ಆರ್ಬಿಟ್ ರೈಸಿಂಗ್ ಮನೂವರ್' (ಕಕ್ಷೆ ಎತ್ತರಿಸುವ ಪ್ರಕ್ರಿಯೆ) ಎನ್ನುವ ಈ ಚಲನೆ, ಉಡಾವಣೆಗೊಂಡ ಉಪಗ್ರಹವನ್ನು ಅದರ ಉದ್ದೇಶಿತ ಕಕ್ಷೆಗೆ ಅಳವಡಿಸಲು ನೆರವಾಗುತ್ತದೆ.
ಉಪಗ್ರಹ ಉಡಾವಣೆಗೊಂಡ ಬಳಿಕ, ಅದರ ಸೌರ ಫಲಕಗಳು ಯಶಸ್ವಿಯಾಗಿ ತೆರೆದಿದ್ದವು. ಅವುಗಳು ಉದ್ದೇಶಿತ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಲು ಯಶಸ್ವಿಯಾಗಿದ್ದು, ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದವು.
ಭೂ ಕೇಂದ್ರದಿಂದ ಉಪಗ್ರಹದೊಡನೆ ಈಗಾಗಲೇ ಯಶಸ್ವಿಯಾಗಿ ಸಂವಹನ ಸಾಧಿಸಲಾಗಿದೆ ಎಂದು ಇಸ್ರೋ ಖಚಿತಪಡಿಸಿದೆ. ಆದರೆ, ಥ್ರಸ್ಟರ್‌ಗೆ ರಾಸಾಯನಿಕವನ್ನು (ಆಕ್ಸಿಡೈಸರ್) ಕಳುಹಿಸಲು ಅವಶ್ಯಕವಾದ ಕವಾಟಗಳು ತೆರೆದುಕೊಳ್ಳದ ಕಾರಣ, ಉಪಗ್ರಹವನ್ನು ಉದ್ದೇಶಿತ ಕಕ್ಷೆಗೆ ಕಳುಹಿಸಲು ಸಾಧ್ಯವಾಗಲಿಲ್ಲ. ಈ ಥ್ರಸ್ಟರ್‌ಗಳು ಒಂದು ರೀತಿ ಸಣ್ಣ ಇಂಜಿನ್‌ಗಳಂತಿದ್ದು, ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ಅವುಗಳ ಸ್ಥಾನಕ್ಕೆ ಕಳುಹಿಸಲು ನೆರವಾಗುತ್ತವೆ. ಆಕ್ಸಿಡೈಸರ್ ಥ್ರಸ್ಟರ್‌ಗಳಿಗೆ ತಲುಪಲು ಸಾಧ್ಯವಾಗದಿದ್ದರೆ, ಉಪಗ್ರಹವನ್ನು ಉದ್ದೇಶಿತ ಕಕ್ಷೆಗೆ ಕಳುಹಿಸಲು ಸಾಧ್ಯವಿಲ್ಲ.
ಇದನ್ನೂ ಓದಿ:
ಇಸ್ರೋ ಮೂಲಗಳ ಪ್ರಕಾರ, ಉಪಗ್ರಹ ಕಕ್ಷೆಯನ್ನು ತಲುಪಿದ ಬಳಿಕ ಅದಕ್ಕೆ ತನ್ನ ಥ್ರಸ್ಟರ್‌ಗಳನ್ನು ಚಾಲನೆಗೊಳಿಸಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ, ಉಪಗ್ರಹಕ್ಕೆ ಬಾಹ್ಯಾಕಾಶದಲ್ಲಿ ತನ್ನ ಉದ್ದೇಶಿತ ಸ್ಥಾನವನ್ನು ತಲುಪಲು ಸಾಧ್ಯವಾಗಲಿಲ್ಲ.
ಉಪಗ್ರಹದ ವ್ಯವಸ್ಥೆಗಳು ಈಗ ಉತ್ತಮ ಸ್ಥಿತಿಯಲ್ಲಿದ್ದು, ಅದು ದೀರ್ಘವೃತ್ತಾಕಾರದ ಕಕ್ಷೆಯಲ್ಲಿ (ಭೂಮಿಯ ಸುತ್ತಲೂ ಇರುವ ಅಂಡಾಕಾರದ ಕಕ್ಷೆ) ಚಲಿಸುತ್ತಿದೆ ಎಂದು ಇಸ್ರೋ ಹೇಳಿದೆ. ಈ ಉಪಗ್ರಹವನ್ನು ನ್ಯಾವಿಗೇಶನ್ (ಸಂಚರಣೆ) ಉದ್ದೇಶಗಳಿಗೆ ಅಭಿವೃದ್ಧಿ ಪಡಿಸಲಾಗಿದ್ದು, ಉಪಗ್ರಹ ದೀರ್ಘವೃತ್ತಾಕಾರದ ಕಕ್ಷೆಯಲ್ಲಿ ಇದ್ದರೂ ಅದನ್ನು ಸಂಚರಣೆಗೆ ಬಳಸಿಕೊಳ್ಳುವುದು ಹೇಗೆ ಎಂಬ ಪರ್ಯಾಯ ಮಾರ್ಗಗಳನ್ನು ಅನ್ವೇಷಿಸಲು ಇಸ್ರೋ ತಂಡ ಪ್ರಯತ್ನಿಸುತ್ತಿದೆ.
ಇಸ್ರೋ ಉಪಗ್ರಹ ಯೋಜನೆಯಲ್ಲಿ ತೊಡಗಿಕೊಂಡಿರುವ ಅಧಿಕಾರಿಯೊಬ್ಬರು ಕರ್ನಾಟಕದ ಹಾಸನದಲ್ಲಿರುವ ಇಸ್ರೋದ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ (ಎಂಸಿಎಫ್) ಎನ್‌ವಿಎಸ್-02 ಉಪಗ್ರಹಕ್ಕೆ ಸಂಬಂಧಿಸಿದ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ ಎಂದಿದ್ದಾರೆ. ಇನ್ನೊಬ್ಬ ಅಧಿಕಾರಿ, ತಾವು ಉಪಗ್ರಹಕ್ಕೆ ಸಂಬಂಧಿಸಿದಂತೆ ಉದ್ದೇಶಿತ ಚಟುವಟಿಕೆಗಳನ್ನು ಮುಂದುವರಿಸುತ್ತಿದ್ದೇವೆ ಎಂದಿದ್ದಾರೆ.
ಇಸ್ರೋ ಎನ್‌ವಿಎಸ್-02 ಉಪಗ್ರಹದ ಉಡಾವಣೆ ನಡೆಸಿ ನಾಲ್ಕು ದಿನಗಳು ಕಳೆದಿದ್ದರೂ ಅದರ ಕಕ್ಷೀಯ ಹೊಂದಾಣಿಕೆಗಳನ್ನು ನಡೆಸಿರಲಿಲ್ಲ. ಇದರಿಂದಾಗಿ ಉಪಗ್ರಹ ತಾಂತ್ರಿಕ ದೋಷಗಳನ್ನು ಎದುರಿಸಿರಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
ಇಸ್ರೋ ಎನ್‌ವಿಎಸ್-02 ಉಪಗ್ರಹವನ್ನು ಉದ್ದೇಶಿತ ಜಿಯೋಸಿಂಕ್ರನಸ್ ಟ್ರಾನ್ಸ್‌ಫರ್ ಕಕ್ಷೆಗೆ ಯಶಸ್ವಿಯಾಗಿ ಅಳವಡಿಸಿರುವುದಾಗಿ ತಿಳಿಸಿತ್ತು. ಇದು ಉಪಗ್ರಹವನ್ನು ಬಾಹ್ಯಾಕಾಶದಲ್ಲಿ ಅದರ ಅಂತಿಮ ಸ್ಥಾನಕ್ಕೆ ಕಳುಹಿಸುವ ಮುನ್ನ ನಡೆಸುವ ಮೊದಲ ಹಂತವಾಗಿದೆ.
ಎನ್‌ವಿಎಸ್-02 ಉಪಗ್ರಹದ ಕುರಿತು ಅಧ್ಯಯನ ನಡೆಸುತ್ತಿರುವ ಒಂದು ಮುಕ್ತ ಬಾಹ್ಯಾಕಾಶ ಸಂಬಂಧಿ ಆ್ಯಪ್ ಪ್ರಕಾರ, ಎನ್‌ವಿಎಸ್-02 ಉಪಗ್ರಹ ಇನ್ನೂ ಅದನ್ನು ಜನವರಿ 29ರಂದು ಇರಿಸಿರುವ ಜಿಯೋಸಿಂಕ್ರನಸ್ ಟ್ರಾನ್ಸ್‌ಫರ್ ಕಕ್ಷೆಯ (ಜಿಟಿಒ) ಸ್ಥಾನದಲ್ಲೇ ಇದೆ. ಸಾಮಾನ್ಯವಾಗಿ ಇಸ್ರೋ ಉಪಗ್ರಹ ಹೊಂದಿರುವ ಇಂಜಿನ್‌ಗಳನ್ನು ಬಳಸಿಕೊಂಡು, ಅದನ್ನು ನಿಧಾನವಾಗಿ ಭಾರತದ ಮೇಲೆ, ಭೂಸ್ಥಿರ ಕಕ್ಷೆಯಲ್ಲಿರುವ 111.75 ಡಿಗ್ರಿ ಪೂರ್ವದ ಸ್ಥಾನಕ್ಕೆ ಕಳುಹಿಸುತ್ತದೆ. ಅಲ್ಲಿ ಎನ್‌ವಿಎಸ್-02 ಹಳೆಯದಾಗಿರುವ ಐಆರ್‌ಎನ್ಎಸ್ಎಸ್-1ಇ ಉಪಗ್ರಹದ ಬದಲಿಗೆ ಕಾರ್ಯ ನಿರ್ವಹಿಸಬೇಕಿತ್ತು.
ಉಡಾವಣೆಗೂ ಮುನ್ನ, ಎನ್‌ವಿಎಸ್-02 ಉಪಗ್ರಹ ನಿಖರವಾದ ಸಮಯದ ಲೆಕ್ಕಾಚಾರ ನಡೆಸುವ ಸಲುವಾಗಿ ದೇಶೀಯ ನಿರ್ಮಾಣದ ಮತ್ತು ಆಮದು ಮಾಡಿಕೊಂಡ ಅಟಾಮಿಕ್ ಕ್ಲಾಕ್‌ಗಳ ಸಂಯೋಜನೆಯನ್ನು ಬಳಸಲಾಗಿದೆ ಎಂದು ಇಸ್ರೋ ಹೇಳಿತ್ತು.
ಎನ್‌ವಿಎಸ್-02 ಉಪಗ್ರಹವನ್ನು ಆರಂಭದಲ್ಲಿ ಭೂಮಿಯ ಸುತ್ತಲಿನ ದೀರ್ಘವೃತ್ತಾಕಾರದ ಕಕ್ಷೆಯಲ್ಲಿ ಇಡಲು ಉದ್ದೇಶಿಸಲಾಗಿತ್ತು. ಭೂಮಿಯಿಂದ ಇದರ ಅತ್ಯಂತ ದೂರದ ಬಿಂದು (ಅಪೊಜೀ) 37,500 ಕಿಲೋಮೀಟರ್ ದೂರದಲ್ಲಿದ್ದರೆ, ಅತ್ಯಂತ ಸನಿಹದ ಬಿಂದು (ಪೆರಿಜೀ) 170 ಕಿಲೋಮೀಟರ್ ದೂರದಲ್ಲಿದೆ. ಜನವರಿ 29ರಂದು ಜಿಎಸ್ಎಲ್‌ವಿ ರಾಕೆಟ್ ಉಪಗ್ರಹವನ್ನು ಈ ಉದ್ದೇಶಿತ ಕಕ್ಷೆಗೆ ಅತ್ಯಂತ ಸನಿಹದಲ್ಲಿ ಅಳವಡಿಸಿತ್ತು. ಈ ಕಕ್ಷೆ ಉದ್ದೇಶಿತ ಅಪೊಜೀಗಿಂತ ಕೇವಲ 74 ಕಿಲೋಮೀಟರ್ ದೂರದಲ್ಲಿದ್ದು, ಉದ್ದೇಶಿತ ಪೆರಿಜಿಗಿಂತ ಕೇವಲ 0.5 ಕಿಲೋಮೀಟರ್ ದೂರದಲ್ಲಿತ್ತು.
ಎನ್‌ವಿಎಸ್-02 ಉಪಗ್ರಹ ಎಲ್1, ಎಲ್5 ಮತ್ತು ಎಸ್ ಫ್ರೀಕ್ವೆನ್ಸಿ ಬ್ಯಾಂಡ್‌ಗಳಲ್ಲಿ ಕಾರ್ಯ ನಿರ್ವಹಿಸಬಲ್ಲ ನ್ಯಾವಿಗೇಶನ್ ವ್ಯವಸ್ಥೆಗಳನ್ನು ಒಳಗೊಂಡಿದೆ. ಇದು ಹಿಂದಿನ ಎನ್‌ವಿಎಸ್-01 ಉಪಗ್ರಹ ಹೊಂದಿದ್ದ ರೀತಿಯಲ್ಲಿ ಸಿ ಬ್ಯಾಂಡ್‌ನಲ್ಲಿ ಕಾರ್ಯಾಚರಿಸುವ ರೇಂಜಿಂಗ್ ವ್ಯವಸ್ಥೆಯನ್ನು ಹೊಂದಿದೆ. ಈ ವ್ಯವಸ್ಥೆಗಳು ಒಟ್ಟಾಗಿ ಉಪಗ್ರಹಕ್ಕೆ ನಿಖರ ನ್ಯಾವಿಗೇಶನ್ ಮತ್ತು ಸ್ಥಾನದ ಮಾಹಿತಿ ಒದಗಿಸಲು ನೆರವಾಗುತ್ತವೆ.
ಇದನ್ನೂ ಓದಿ: ಡಾಕಿಂಗ್ ತಂತ್ರಜ್ಞಾನದಲ್ಲಿ ಇಸ್ರೋ ಹೊಸ ಕಿಂಗ್: ಗಿರೀಶ್ ಲಿಂಗಣ್ಣ
ಎನ್‌ವಿಎಸ್-02 ಎರಡನೇ ತಲೆಮಾರಿನ ಒಟ್ಟು ಐದು ಉಪಗ್ರಹಗಳ ಪೈಕಿ ಎರಡನೆಯದಾಗಿದೆ. ಮೊದಲ ಉಪಗ್ರಹವನ್ನು 2023ರಲ್ಲಿ ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿತ್ತು.
(ಈ ಲೇಖನದ ಬರಹಗಾರರು ಪ್ರಶಸ್ತಿ ಪುರಸ್ಕೃತ ವಿಜ್ಞಾನ ಬರಹಗಾರರು, ಮತ್ತು ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ನೀವು ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
