ಮುಂಬೈ ಮೇಲೆ ಭೀಕರ ಉಗ್ರ ದಾಳಿಗೆ 15 ವರ್ಷವಾಗುತ್ತಿದೆ. ಇದರ ಬೆನ್ನಲ್ಲೇ ಇಸ್ರೇಲ್ ಮಹತ್ವದ ಘೋಷಣೆ ಮಾಡಿದೆ. ಮುಂಬೈ ದಾಳಿಯ ರೂವಾರಿ ಲಷ್ಕರ್ ಉಗ್ರ ಸಂಘಟನೆಯನ್ನು ಇಸ್ರೇಲ್ ತನ್ನ ಉಗ್ರರ ಲಿಸ್ಟ್‌ಗೆ ಸೇರಿಸಿದೆ. ಇಷ್ಟೇ ಅಲ್ಲ ಲಷ್ಕರ್ ಉಗ್ರ ಸಂಘಟನೆಯನ್ನು ನಿಷೇಧಿಸಿದೆ.
ಇಸ್ರೇಲ್(ನ.21) ಇಸ್ರೇಲ್ ಮೇಲಿನ ಹಮಾಸ್ ಉಗ್ರ ದಾಳಿಗೆ ಪ್ರತಿಯಾಗಿ ಯುದ್ಧ ನಡೆಯುತ್ತಿದೆ. ಇಸ್ರೇಲ್ ನಡೆಸುತ್ತಿರುವ ಪ್ರತಿದಾಳಿಗೆ ಗಾಜಾ ತತ್ತರಿಸಿದೆ. ಭಯೋತ್ಪಾದನೆ ಭೀಕರತೆಯನ್ನು ಸ್ಪಷ್ಟವಾಗಿ ಅರಿತಿರುವ ಇಸ್ರೇಲ್ ಇದೀಗ ಭಾರತದ ಪರ ಮಹತ್ವದ ಘೋಷಣೆ ಮಾಡಿದೆ. 2008ರಲ್ಲಿ ಮುಂಬೈ ಮೇಲೆ ಪಾಕಿಸ್ತಾನ ಮೂಲದ ಭಯೋತ್ಪಾದಕರು ನಡೆಸಿದ ಭೀಕರ ದಾಳಿಗೆ ಇದೀಗ 15 ವರ್ಷ ತುಂಬುತ್ತಿದೆ. 26/11 ಮುಂಬೈ ದಾಳಿ ಎಂದೇ ಗುರುತಿಸಿಕೊಂಡಿರುವ ಈ ದಾಳಿಯಲ್ಲಿ 175 ಮಂದಿ ಮೃತಪಟ್ಟಿದ್ದರೆ, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ದಾಳಿಯ ರೂವಾರಿ ಪಾಕಿಸ್ತಾನದ ಲಷ್ಕರ್ ಇ ತೈಬಾ ಸಂಘಟನೆಯನ್ನು ಇಸ್ರೇಲ್ ನಿಷೇಧಿಸಿದೆ.
ಪಾಕಿಸ್ತಾನದ ಲಷ್ಕರ್ ಇ ತೈಬಾ ಉಗ್ರ ಸಂಘಟನೆಯನ್ನು ನಿಷೇಧ ಮಾಡಿರುವ ಇಸ್ರೇಲ್, ತನ್ನ ಉಗ್ರರ ಪಟ್ಟಿಯಲ್ಲಿ ಲಷ್ಕರ್ ಇ ತೈಬಾ ಸಂಘಟನೆಯನ್ನು ಸೇರಿಸಿದೆ. ಇಸ್ರೇಲ್ ಕೇವಲ ಉಗ್ರ ಸಂಘಟನೆಗಳನ್ನು ಮಾತ್ರ ನಿಷೇಧಿಸುತ್ತದೆ. ಇದೀಗ ಲಷ್ಕರ್ ಇ ತೈಬಾ ನಡೆಸಿದ ಭಯೋತ್ವಾದಕ ದಾಳಿ ಹಾಗೂ ಸಾವು ನೋವಿನ ಕುರಿತು ತನಿಖೆ ನಡೆಸಲಾಗಿದೆ. ಪ್ರಮುಖವಾಗಿ ಲಷ್ಕರ್ ಇ ತೈಬಾ ಸಂಘಟನೆಯನ್ನು ನಿಷೇಧಿಸಲು ಭಾರತ ಯಾವುದೇ ಮನವಿ ಮಾಡಿಲ್ಲ. ಇಸ್ರೇಲ್ ಸ್ವಯಂಪ್ರೇರಿತವಾಗಿ ಉಗ್ರ ಸಂಘಟನೆಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ನರಮೇಧ ನಡೆಸಿದ ಲಷ್ಕರ್ ಇ ತೈಬಾ ಉಗ್ರ ಸಂಘಟನೆಯನ್ನು ನಿಷೇಧಿಸಲಾಗಿದೆ ಎಂದು ಇಸ್ರೇಲ್ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಮನಮೋಹನ್ ಸಿಂಗ್ ರೀತಿ ಹಮಾಸ್ ವಿರುದ್ಧ ಇಸ್ರೇಲ್ ಸುಮ್ಮನಿರಬೇಕಿತ್ತು: ಅಮೆರಿಕದ ಖ್ಯಾತ ಲೇಖಕ
ಇಸ್ರೇಲ್ ರಕ್ಷಣಾ ಹಾಗೂ ವಿದೇಶಾಂಗ ಸಚಿವಾಲಯ ಕೆಳೆದ ಕೆಲ ತಿಂಗಳಿನಿಂದ, ದೇಶದೊಳಗೆ, ದೇಶದ ಗಡಿಯಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆ ನಡೆಸುತ್ತಿರುವ ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸಲು ಪಟ್ಟಿ ತಯಾರಿಸಿದೆ. ಈ ಪಟ್ಟಿಯಲ್ಲಿ 2008ರಲ್ಲಿ ಮುಂಬೈ ಮೇಲೆ ದಾಳಿ ನಡೆಸಿ ಭಾರತೀಯರು ಹಾಗೂ ವಿದೇಶಿ ಪ್ರಜೆಗಳ ಮಾರಣಹೋಮಕ್ಕೆ ಕಾರಣವಾದ ಲಷ್ಕರ್ ಇ ತೈಬಾ ಸಂಘಟನೆಯನ್ನು ಸೇರಿಸಿ ನಿಷೇಧಿಸಲಾಗಿದೆ ಎಂದು ಇಸ್ರೇಲ್ ಹೇಳಿದೆ.
ಮುಂಬೈ ಮೇಲೆ ದಾಳಿ ನಡೆಸಿ ಅಮಾಯಕರನ್ನು ಬಲಿ ಪಡೆದ ಲಷ್ಕರ್ ಇ ತೈಬಾ ಸಂಘಟನೆ ಈಗಲೂ ಉಗ್ರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಇದು ಭಾರತಕ್ಕೆ ಮಾತ್ರವಲ್ಲ, ವಿಶ್ವಕ್ಕೆ ಅಪಾಯ. ಹೀಗಾಗಿ ಇಂತಹ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಇಸ್ರೇಲ್ ಹೇಳಿದೆ. ಈ ಸಂದರ್ಭದಲ್ಲಿ ಇಸ್ರೇಲ್ ಈ ದಾಳಿಯಲ್ಲಿ ಮಡಿದ ಅಮಾಯಕರಿಗೆ ಗೌರವ ನಮನಗಳನ್ನು ಸಲ್ಲಿಸುತ್ತದೆ. ಕುಟುಂಬಸ್ಥರಿಗೆ ಸಂತಾಪವನ್ನು ಸೂಚಿಸುತ್ತದೆ. ಮುಂದಿನ ದಿನಗಳಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡಲು ಭಾರತದ ಜೊತೆ ಇಸ್ರೇಲ್ ಒಗ್ಗಟ್ಟಾಗಿ ಹೋರಾಡಲಿದೆ ಎಂದು ಇಸ್ರೇಲ್ ಹೇಳಿದೆ.
26/11 ದಾಳಿ ಆರೋಪಿ ರಾಣಾ ಗಡೀಪಾರಿಗೆ ಅಮೆರಿಕ ಕೋರ್ಟ್ ಅಸ್ತು: ತನಿಖೆಯಲ್ಲಿ ಭಾರತಕ್ಕೆ ಮಹತ್ವದ ಯಶಸ್ಸು
