ಮಲೇಷ್ಯಾದಲ್ಲಿರುವ ಸಲ್ಮಾನ್ ಖುರ್ಷಿದ್‌, ಉಗ್ರವಾದದ ವಿರುದ್ಧ ಭಾರತದ ಸಂದೇಶ ಜಗತ್ತಿಗೆ ರವಾನಿಸುವ ಅಭಿಯಾನದ ಬಗ್ಗೆ ಮಾತನಾಡಿದ್ದಾರೆ.

ನವದೆಹಲಿ (ಜೂ.3): ಆಪರೇಷನ್‌ ಸಿಂದೂರದ ಬಳಿಕ ಜಾಗತಿಕವಾಗಿ ಉಗ್ರಪೋಷಕ ಪಾಕಿಸ್ತಾನದ ಬಣ್ಣ ಬಯಲು ಮಾಡಲು ಸರ್ವಪಕ್ಷ ನಿಯೋಗದ ಭಾಗವಾಗಿ ಮಲೇಷ್ಯಾಕ್ಕೆ ತೆರಳಿರುವ ಕಾಂಗ್ರೆಸ್ ಸಂಸದ ಸಲ್ಮಾನ್ ಖುರ್ಷಿದ್‌, ಸ್ವಂತ ಪಕ್ಷದ ನಡೆ ನುಡಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಹಾಗೂ ‘ಒಗ್ಗಟ್ಟು ಕೇವಲ ವಿದೇಶದಲ್ಲಿದ್ದರೆ ಸಾಲದು’ ಎಂದು ಟಾಂಗ್‌ ನೀಡಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಉಗ್ರವಾದದ ವಿರುದ್ಧ ಭಾರತದ ಸಂದೇಶವನ್ನು ಜಗತ್ತಿಗೆ ರವಾನಿಸಲು ಈಗ ಅಭಿಯಾನ ನಡೆಯುತ್ತಿದೆ. ಆದರೆ ಮನೆಯಲ್ಲಿಯೇ (ಭಾರತದಲ್ಲಿ) ಇರುವ ಜನರು ರಾಜಕೀಯ ನಿಷ್ಠೆಯನ್ನು ಲೆಕ್ಕ ಹಾಕುತ್ತಿದ್ದಾರೆ. ದೇಶಭಕ್ತರಾಗಿರುವುದು ಅಷ್ಟೊಂದು ಕಷ್ಟವೇ?’ ಎಂದು ಬರೆದುಕೊಂಡಿದ್ದಾರೆ. 

ಭಾನುವಾರ ಮಲೇಷ್ಯಾದ ರಾಜಧಾನಿ ಕೌಲಾಲಂಪುರದಲ್ಲಿ ಮಾತನಾಡಿದ್ದದ ಅವರು, ‘ಭಾರತ ಏಕಧ್ವನಿಯಿಂದ ಉಗ್ರವಾದ ಇನ್ನಿಲ್ಲ ಎನ್ನುತ್ತಿದೆ. ಈ ಏಕತೆ ಕೇವಲ ವಿದೇಶದಲ್ಲಿದ್ದರೆ ಸಾಲದು, ಸ್ವದೇಶಕ್ಕೆ ಮರಳಿದ ಮೇಲೂ ಕಂಡುಬರಬೇಕು’ ಎಂದಿದ್ದರು. ಅಲ್ಲದೆ, ಇತ್ತೀಚೆಗೆ ಮೋದಿ ಸರ್ಕಾರವು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದನ್ನು ಶ್ಲಾಘಿಸಿದ್ದರು.

2026ರ ವೇಳೆಗೆ ರಷ್ಯಾದಿಂದ ಬಾಕಿ 2 ಎಸ್-400 ಕ್ಷಿಪಣಿ ವ್ಯವಸ್ಥೆ ಪೂರೈಕೆ

ನವದೆಹಲಿ: 2025-2026ರ ವೇಳೆಗೆ ಎಸ್-400 ವಾಯುರಕ್ಷಣಾ ವ್ಯವಸ್ಥೆಯ ಉಳಿದ ಘಟಕಗಳನ್ನು ಭಾರತಕ್ಕೆ ತಲುಪಿಸಲು ರಷ್ಯಾ ಬದ್ಧವಾಗಿದೆ ಎಂದು ಭಾರತದಲ್ಲಿನ ರಷ್ಯಾದ ಉಪರಾಯಭಾರಿ ರೋಮನ್ ಬಾಬುಷ್ಕಿನ್ ಹೇಳಿದ್ದಾರೆ. ‘ಭಾರತ ಮತ್ತು ಪಾಕಿಸ್ತಾನದ ಸಂಘರ್ಷದ ವೇಳೆ ಎಸ್‌-400 ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಕೇಳಿದ್ದೇವೆ. ರಷ್ಯಾ ಮತ್ತು ಭಾರತ ಸಹಭಾಗಿತ್ವದ ಸುದೀರ್ಘ ಇತಿಹಾಸವನ್ನು ಹೊಂದಿವೆ. ಒಪ್ಪಂದದಂತೆ, ಉಳಿದ 2 ಎಸ್‌-400 ಘಟಕಗಳನ್ನು 2025-26ರ ವೇಳೆಗೆ ಭಾರತಕ್ಕೆ ತಲುಪಿಸಲಾಗುವುದು’ ಎಂದರು.

ಭಾರತ-ರಷ್ಯಾ ನಡುವೆ 5 ಎಸ್-400 ವ್ಯವಸ್ಥೆಗಳ ಖರೀದಿಗೆ ಒಪ್ಪಂದವಾಗಿತ್ತು. ಈ ಪೈಕಿ ಮೂರನ್ನು ಈಗಾಗಲೇ ರಷ್ಯಾ ಹಸ್ತಾಂತರಿಸಿದೆ.ಆಪರೇಷನ್ ಸಿಂದೂರದ ವೇಳೆ ಸುದರ್ಶನ ಚಕ್ರವೆಂದೇ ಖ್ಯಾತವಾಗಿರುವ ರಷ್ಯಾನಿರ್ಮಿತ ಎಸ್‌-400 ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿತ್ತು.