ಇರಾನ್-ಇಸ್ರೇಲ್ ಯುದ್ಧದಿಂದ ಹಾರ್ಮುಜ್ ಜಲಸಂಧಿ ಬಂದ್ ಆಗಿ ಭಾರತಕ್ಕೆ ತೈಲ ಸಂಕಷ್ಟ ಎದುರಾಗಿತ್ತು. ಈ ಬಿಕ್ಕಟ್ಟಿನ ನಡುವೆ, ಜಾಗತಿಕ ಇಂಧನ ಮಾರುಕಟ್ಟೆ ಸ್ಥಿರಗೊಳಿಸಲು ಅಮೆರಿಕವು ಭಾರತಕ್ಕೆ ರಷ್ಯಾದ ತೈಲ ಖರೀದಿಸಲು 30 ದಿನಗಳ ತಾತ್ಕಾಲಿಕ ವಿನಾಯಿತಿ ನೀಡಿದೆ.
ಭಾರತೀಯ ಸಂಸ್ಕರಣಾಗಾರರಿಗೆ ರಷ್ಯಾದ ತೈಲವನ್ನು ಖರೀದಿಸಲು 30 ದಿನಗಳ ವಿನಾಯಿತಿ
ನವದೆಹಲಿ: ಇರಾನ್ ಇಸ್ರೇಲ್ ಅಮೆರಿಕಾ ಯುದ್ಧದಿಂದಾಗಿ ಇರಾನ್ ತನ್ನ ಹರ್ಮುಜ್ ಜಲಸಂಧಿಯನ್ನು ಬಂದ್ ಮಾಡಿರುವುದರಿಂದ ಭಾರತ ಅಲ್ಲಿಂದ ತೈಲ ಖರೀದಿಸಲಾಗದೇ ತೀವ್ರ ಸಂಕಷ್ಟಕ್ಕೆ ತುತ್ತಾಗುವುದರಲ್ಲಿತ್ತು. ಏಕೆಂದರೆ ಹಾರ್ಮುಜ್ ಜಲಸಂಧಿ ಮೂಲಕ ಭಾರತಕ್ಕೆ ಬರುವ ತೈಲದ ಪಾಲು ದಿನಕ್ಕೆ 2.5 ರಿಂದ 2.7 ಮಿಲಿಯನ್ ಬ್ಯಾರೆಲ್‌ಗಳಾಗಿವೆ. ಇದರ ಪರಿಣಾಮ ರಷ್ಯಾದಿಂದ ತೈಲ ಖರೀದಿ ಮಾಡೋಣವೆಂದರೆ ಅಮೆರಿಕಾದ ಜೊತೆ ಭಾರತದ ಟ್ರೇಡ್ ಡೀಲ್ ಒಪ್ಪಂದದ ಪ್ರಕಾರ ಅಮೆರಿಕಾ ವಿರೋಧಿಸುವುದರ ಜೊತೆಗ ಮತ್ತಷ್ಟು ಸುಂಕ ಹೇರುವ ಭೀತಿ ಇತ್ತು. ಆದರೆ ಇಂದು ಶುಕ್ರವಾರ ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಭಾರತೀಯ ಸಂಸ್ಕರಣಾಗಾರರಿಗೆ ರಷ್ಯಾದ ತೈಲವನ್ನು ಖರೀದಿಸಲು 30 ದಿನಗಳ ವಿನಾಯಿತಿಯನ್ನು ಘೋಷಿಸಿದ್ದಾರೆ. ಇದಾದ ನಂತರ ಭಾರತದ ಇಂಧನ ಪೂರೈಕೆಗೆ ತಾತ್ಕಾಲಿಕ ಉತ್ತೇಜನ ಸಿಕ್ಕಿದೆ.
ಮಾರ್ಚ್ 5, 2026 ರಿಂದ ಅನ್ವಯವಾಗುವಂತೆ ಭಾರತಕ್ಕೆ ಹಡಗುಗಳಲ್ಲಿ ಲೋಡ್ ಮಾಡಲಾದ ರಷ್ಯಾ ಮೂಲದ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣೆ ಮತ್ತು ಮಾರಾಟಕ್ಕೆ ಭಾರತಕ್ಕೆ ಅಧಿಕಾರ ನೀಡುವ ರಷ್ಯಾ ಸಂಬಂಧಿತ ಪರವಾನಗಿಯನ್ನು ಖಜಾನೆ ಇಲಾಖೆಯ ವಿದೇಶಿ ಆಸ್ತಿ ನಿಯಂತ್ರಣ ಕಚೇರಿ ನೀಡಿದೆ ಎಂದು ಅಮೆರಿಕಾದ ಖಜಾನೆ ಹೇಳಿಕೆಯಲ್ಲಿ ತಿಳಿಸಿದೆ.
ವಿವಿಧ ನಿರ್ಬಂಧಗಳ ಆಡಳಿತಗಳಿಂದ ನಿರ್ಬಂಧಿಸಲ್ಪಟ್ಟ ವಹಿವಾಟುಗಳು ಸೇರಿದಂತೆ 2026 ರ , ಏಪ್ರಿಲ್ 3ರ ದಿನದ ಅಂತ್ಯದವರೆಗೆ ಈ ವಹಿವಾಟುಗಳನ್ನು ಅಧಿಕೃತಗೊಳಿಸಲಾಗುತ್ತದೆ ಎಂದು ಅಮೆರಿಕಾದ ಖಜಾನೆ ಹೇಳಿದೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಸ್ಥಿರಗೊಳಿಸಲು ಅಮೆರಿಕಾ ಆಡಳಿತವು ಪ್ರಯತ್ನಿಸುತ್ತಿದ್ದು, ಈ ಕ್ರಮ ಕೈಗೊಂಡಿದೆ. ಭಾರತ ಹಾಗೂ ಅಮೆರಿಕಾ ನಡುವಣ ದ್ವಿಪಕ್ಷೀಯ ಸಂಬಂಧದ ಮಹತ್ವವನ್ನು ಎತ್ತಿ ತೋರಿಸುತ್ತಾ, ಕಾರ್ಯದರ್ಶಿ ಬೆಸೆಂಟ್ ಭಾರತವನ್ನು ಅಮೆರಿಕದ ಅಗತ್ಯ ಪಾಲುದಾರ ಎಂದು ಬಣ್ಣಿಸಿದರು.
ಇದನ್ನೂ ಓದಿ: ಹೆಣ್ಮಕ್ಕಳ ಉಚಿತ ಬಸ್ ಸೇವೆ ಶಕ್ತಿ ಯೋಜನೆಯ 5313 ಕೋಟಿ ಬಿಡುಗಡೆಗೆ KSRTC ಎಂಡಿಯಿಂದ ಸರ್ಕಾರಕ್ಕೆ ಪತ್ರ
ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಅಧ್ಯಕ್ಷ ಟ್ರಂಪ್ ಅವರ ಇಂಧನ ಕಾರ್ಯಸೂಚಿಯು ತೈಲ ಮತ್ತು ಅನಿಲ ಉತ್ಪಾದನೆಯು ಇದುವರೆಗೆ ದಾಖಲಾದ ಅತ್ಯುನ್ನತ ಮಟ್ಟವನ್ನು ತಲುಪಲು ಕಾರಣವಾಗಿದೆ. ಜಾಗತಿಕ ಮಾರುಕಟ್ಟೆಗೆ ತೈಲ ಹರಿಯುವಂತೆ ಮಾಡಲು, ಖಜಾನೆ ಇಲಾಖೆಯು ಭಾರತೀಯ ಸಂಸ್ಕರಣಾಗಾರಗಳು ರಷ್ಯಾದ ತೈಲವನ್ನು ಖರೀದಿಸಲು ತಾತ್ಕಾಲಿಕ 30 ದಿನಗಳ ವಿನಾಯಿತಿಯನ್ನು ನೀಡುತ್ತಿದೆ. ಈ ಉದ್ದೇಶಪೂರ್ವಕ ಅಲ್ಪಾವಧಿಯ ಕ್ರಮವು ರಷ್ಯಾ ಸರ್ಕಾರಕ್ಕೆ ಅಂತಹ ದೊಡ್ಡ ಆರ್ಥಿಕ ಪ್ರಯೋಜನವನ್ನು ನೀಡುವುದಿಲ್ಲ ಏಕೆಂದರೆ ಅದು ಈಗಾಗಲೇ ಸಮುದ್ರದಲ್ಲಿ ಸಿಲುಕಿರುವ ತೈಲವನ್ನು ಒಳಗೊಂಡ ವಹಿವಾಟುಗಳನ್ನು ಮಾತ್ರ ಅಧಿಕೃತಗೊಳಿಸುತ್ತದೆ.
ಭಾರತವು ಅಮೆರಿಕದ ಅತ್ಯಗತ್ಯ ಪಾಲುದಾರ, ಮತ್ತು ನವದೆಹಲಿಯು ಅಮೆರಿಕದ ತೈಲ ಖರೀದಿಯನ್ನು ಹೆಚ್ಚಿಸುತ್ತದೆ ಎಂದು ನಾವು ಸಂಪೂರ್ಣವಾಗಿ ನಿರೀಕ್ಷಿಸುತ್ತೇವೆ. ಈ ತಾತ್ಕಾಲಿಕ ಕ್ರಮವು ಜಾಗತಿಕ ಇಂಧನ ವಿಚಾರವನ್ನೇ ಒತ್ತೆಯಾಳಾಗಿ ತೆಗೆದುಕೊಳ್ಳುವ ಇರಾನ್ ಪ್ರಯತ್ನದಿಂದ ಉಂಟಾದ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಪೋಸ್ಟ್‌ನಲ್ಲಿ ಅವರು ಬರೆದಿದ್ದಾರೆ.
ಉಕ್ರೇನ್ ಮೇಲಿನ ಆಕ್ರಮಣದಿಂದಾಗಿ ರಷ್ಯಾದ ಮೇಲೆ ಒತ್ತಡ ಹೇರುವ ಪ್ರಯತ್ನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ನವೆಂಬರ್‌ನಲ್ಲಿ ರಷ್ಯಾದ ತೈಲ ಪ್ರಮುಖ ಕಂಪನಿಗಳಾದ ಲುಕೋಯಿಲ್ ಮತ್ತು ರೋಸ್‌ನೆಫ್ಟ್ ಮೇಲೆ ನಿರ್ಬಂಧಗಳನ್ನು ವಿಧಿಸಿದ್ದರು. ಇದರ ನಂತರ ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತದ ಮೇಲೂ ಭಾರಿ ಸುಂಕ ವಿಧಿಸಿದ್ದರು. ಇದಾದ ನಂತರ ನಡೆದ ಭಾರತ ಅಮೆರಿಕಾ ಒಪ್ಪಂದ ಬಳಿಕ ಭಾರತ ರಷ್ಯಾದಿಂದ ಕಚ್ಚಾ ತೈಲ ಆಮದನ್ನು ಜನವರಿಯಲ್ಲಿ ದಿನಕ್ಕೆ ಸುಮಾರು 1.1 ಮಿಲಿಯನ್ ಬ್ಯಾರೆಲ್‌ಗಳಿಗೆ ಇಳಿಕೆ ಮಾಡಿತ್ತು. ಇದು ನವೆಂಬರ್ 2022 ರ ನಂತರದ ಅತ್ಯಂತ ಕಡಿಮೆ ಆಮದು ಪ್ರಮಾಣವಾಗಿದೆ.
ಇದನ್ನೂ ಓದಿ: ಡಿ.ಕೆ.ಸುರೇಶ್ ಧ್ವನಿಯಲ್ಲಿ ಮಾತನಾಡಿದ ಆರೋಪ: ಬಂಗಾರಿ ಕೇಸ್‌ನಲ್ಲಿ ನಟ ಧರ್ಮಗೆ CID ಧ್ವನಿ ಪರೀಕ್ಷೆ
ಭಾರತವೂ ಅಮೆರಿಕಾ ಹೇರಿದ ಭಾರಿ ಸುಂಕ ವಿನಾಯಿತೆಗೆ ಪರಿಹಾರ ಕೋರಿದ್ದರಿಂದ ಒಟ್ಟಾರೆ ತೈಲ ಆಮದಿನಲ್ಲಿ ರಷ್ಯಾದಿಂದ ಖರೀದಿಸುತ್ತಿದ್ದ ತೈಲದ ಪಾಲು 21.2% ಕ್ಕೆ ಇಳಿದಿದೆ ಎಂದು ಉದ್ಯಮದ ದಾಖಲೆಗಳು ತೋರಿಸಿವೆ. ಆದರೆ ಫೆಬ್ರವರಿಯಲ್ಲಿ ಈ ಪಾಲು ಸುಮಾರು 30% ಕ್ಕೆ ಏರಿದೆ ಎಂದು ಮೂಲಗಳು ತಿಳಿಸಿವೆ.
ಕೊಲ್ಲಿಯಲ್ಲಿನ ಪ್ರಮುಖ ತೈಲನಿಕ್ಷೇಪಗಳ ಮೇಲಿನ ಇರಾನ್ ದಾಳಿಯಿಂದಾಗಿ ಮಧ್ಯಪ್ರಾಚ್ಯದಾದ್ಯಂತ ತೈಲ ಉತ್ಪಾದನೆಗೆ ತೊಂದರೆಯಾಗಿದೆ, ಜಾಗತಿಕ ತೈಲ ಪೂರೈಕೆಯ 20% ಅನ್ನು ನಿರ್ವಹಿಸುವ ಕಿರಿದಾದ ಕಡಲ ಚಾಕ್‌ಪಾಯಿಂಟ್ ಆಗಿರುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿರುವುದರಿಂದ ಪರಿಸ್ಥಿತಿ ಉಲ್ಬಣಕ್ಕೆ ಕಾರಣವಾಗಿದೆ.
ಕಳೆದ ಕೆಲವು ದಿನಗಳಿಂದ ಇರಾನ್‌ನಿಂದ ದಾಳಿಗೊಳಗಾದ ವಿಶ್ವದ ಪ್ರಮುಖ ತೈಲ ಪೂರೈಕೆ ಘಟಕಗಳಲ್ಲಿ ಸೌದಿಯ ರಾಷ್ಟ್ರೀಯ ತೈಲ ಸಂಸ್ಕಾರಣಾ ಘಟಕವಾದ ಅರಾಮ್ಕೊದ ರಾಸ್ ತನುರಾ ಸಂಸ್ಕರಣಾಗಾರ ಮತ್ತು ಇರಾಕ್‌ನ ರುಮೈಲಾ ತೈಲ ಕ್ಷೇತ್ರಗಳು ಸೇರಿವೆ.
ಇರಾನ್ ಹಾರ್ಮುಜ್ ಜಲಸಂಧಿಯನ್ನು ದೀರ್ಘಕಾಲದವರೆಗೆ ಮುಚ್ಚಿರುವುದರಿಂದ ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಯುದ್ಧವು ತೈಲ ಬೆಲೆಗಳನ್ನು ಹೆಚ್ಚಿಸಿದೆ. ಬ್ರೆಂಟ್ ಕಚ್ಚಾ ತೈಲ ಇಂದು ಬೆಳಗ್ಗೆ ಬ್ಯಾರೆಲ್‌ಗೆ $83.07 ಕ್ಕೆ ಏರಿದೆ. ಆದರೂ, ಜಾಗತಿಕ ಬೆಲೆಗಳಲ್ಲಿ ಇಂತಹ ಏರಿಕೆಯ ಹೊರತಾಗಿಯೂ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವ ಯಾವುದೇ ಸಾಧ್ಯತೆಯನ್ನು ಮೂಲಗಳು ತಳ್ಳಿಹಾಕಿವೆ.


