ಸಂದರ್ಶನ: ಮೋದಿ ಸರ್ಕಾರ 2.0ಕ್ಕೆ ವರ್ಷ: ಉಮೇಶ್ ಜಾಧವ್ ಮೊದಲ ಬಾರಿಗೆ ಸಂಸತ್ ಪ್ರವೇಶ
2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಉಮೇಶ್ ಜಾಧವ್ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ. ಇನ್ನು ಮೋದಿ ಸರಕಾರ 2.0ಕ್ಕೆ ವರ್ಷದ ಸಂಭ್ರಮದ ಬಗ್ಗೆ ಸಂಸದ ಉಮೇಶ್ ಜಾಧವ್ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.
ಡಾ. ಉಮೇಶ ಜಾಧವ ಕಲಬುರಗಿಯಿಂದ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿ ಸಂಸತ್ ಪ್ರವೇಶಿಸಿರುವ ವೈದ್ಯ. ಚಿಂಚೋಳಿಯಿಂದ 2 ಬಾರಿ ಶಾಸಕರಾಗಿ ಆಯ್ಕೆಯಾಗಿ ಜನಾನುರಾಗಿ ಜನನಾಯಕ ಎಂದು ಹೆಸರು ಮಾಡಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಲಬುರಗಿ ಸಂಸದರಾದವರು.
ಹಿಂದುಳಿದ ಜಿಲ್ಲೆಯಲ್ಲಿರುವ ಸಮಸ್ಯೆಗಳನ್ನೆಲ್ಲ ಅಮೂಲಾಗ್ರವಾಗಿ ಅಧ್ಯಯನ ಮಾಡುತ್ತ ಅವುಗಳಿಗೆಲ್ಲದಕ್ಕೂ ಪರಿಹಾರ ಹುಡುಕುವ ಯತ್ನ ಮಾಡುತ್ತಿರುವ ಸಂಸದರು ಜಿಲ್ಲೆಯಿಂದ ವಲಸೆ ತಪ್ಪಿಸುವ ಸಂಕಲ್ಪ ಮಾಡಿದ್ದಾರೆ. ಅದಕ್ಕಾಗಿ ಕಲಬುರಗಿಗೆ ಉದ್ದಿಮೆ ತರುವ ತವಕದಲ್ಲಿದ್ದಾರೆ.
ಸಿಎಎ, ರಾಮ ಮಂದಿರ, ತ್ರಿವಳಿ ತಲಾಖ್, ಆರ್ಟಿಕಲ್ 370: ಮೋದಿ 2.0: 1 ವರ್ಷದ ಸಾಧನೆಗಳು!
ಸೌಲಭ್ಯಪೂರ್ಣ ಇಎಸ್‌ಐಸಿ ಕಟ್ಟಡದಲ್ಲಿ ಅಖಿಲ ಭಾರತ ವೈದ್ಯಕೀಯ ಮಹಾವಿದ್ಯಾಲಯ (ಏಮ್ಸ್) ತರುವ ಹಂಬಲ ಇವರದ್ದು. ನರೇಂದ್ರ ಮೋದಿ ಅವರ ನಾಯಕತ್ವದ ಬಿಜೆಪಿಯಿಂದ ಡಾ. ಜಾಧವ್ ಸಂಸದರಾಗಿ ಒಂದು ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ ಪತ್ರಿಕೆ ಜೊತೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
* ಸಂಸದರಾಗಿ ಒಂದು ವರ್ಷ ಕಳೆಯಿತು, ಹೇಗನ್ನಿಸುತ್ತಿದೆ?
ನನಗಂತೂ ತುಂಬ ಖುಷಿ ಇದೆ. ಜನಾಶಿರ್ವಾದದಿಂದ ಸಂಸದನಾಗಿ ಕಲಬುರಗಿಯನ್ನು ದಿಲ್ಲಿಯಲ್ಲಿ ಪ್ರತಿನಿಧಿಸುತ್ತಿರುವ ಹೆಮ್ಮೆ ನನಗಿದೆ. ಸಂಸತ್ತು ನಡೆದಾಗಲೆಲ್ಲಾ ಒಂದು ಚೂರೂ ಸಮಯ ವ್ಯರ್ಥ ಮಾಡದೆ ಪಾರ್ಲಿಮೆಂಟ್ ಕಲಾಪಗಳಲ್ಲಿ ಪಾಲ್ಗೊಂಡಿರುವೆ. 90 ದಿನಗಳಿಗೂ ಹೆಚ್ಚುಕಾಲ ಕಲಾಪಗಳಲ್ಲಿದ್ದ ಸಂತೃಪ್ತಿ ನನಗಿದೆ. ಕಲಾಪದಲ್ಲಿ ಕಲಬುರಗಿ ಜನಮನದ ಸಂಗತಿಗಳನ್ನೂ ಪ್ರಸ್ತಾಪಿಸಿ ಮಾತನಾಡಿರುವ ಖುಷಿ ಇದೆ.
* ಈ ಒಂದು ವರುಷದಲ್ಲಿ ನಿಮ್ಮ ಕೊಡುಗೆ ಏನೇನು ಎಂದು ವಿವರಿಸುತ್ತೀರಾ?
ಸಂಸತ್ ಭವನದ ಮೆಟ್ಟಿಲಿಗೆ ನಮಸ್ಕರಿಸಿ ಒಳಗೆ ಕಾಲಿಟ್ಟಮರುಕ್ಷಣವೇ ನಾಗರಿಕ ವಿಮಾನ ಸಚಿವ ಹರದೀಪ್ ಸಿಂಗ್ ಪುರಿ ಅವರನ್ನು ಕಂಡು ಕಲಬುರಗಿ ವಿಮಾನ ನಿಲ್ದಾಣಕ್ಕೆ ಚಾಲನೆ ಕೊಡಿಸುವ ಯತ್ನಕ್ಕೆ ಶ್ರೀಕಾರ ಹಾಕಿದ್ದೆ. ನಿರಂತರ ಯತ್ನದಿಂದ ಕೊನೆಗೂ ವಿಮಾನ ನಿಲ್ದಾಣ ಉಡಾನ್ ಯೋಜನೆಯಲ್ಲಿ ನ. 21, 2019 ರಂದು ಕಾರ್ಯಾರಂಭಿಸಿತು. ಇದು ಈ ವರ್ಷದ ಸಾಧನೆಯ ಮೊದಲ ಮೈಲಿಗಲ್ಲು. ಇಎಸ್‌ಐಸಿ ಆಸ್ಪತ್ರೆಯಲ್ಲಿನ ಮೆಡಿಕೋ ಲೀಗಲ್ ಕೇಸ್ ನೋಡದ ಸಂಗತಿ ಬಗ್ಗೆ ಸಂಬಂಧಪಟ್ಟವರ ಗಮನ ಸೆಳೆದು ಎಂಎಲ್‌ಸಿ ಕೇಸ್‌ಗಳಿಗೆ ಪ್ರವೇಶಕ್ಕೆ ಅವಕಾಶ ದೊರಕಿಸಿದೆ. ಈಗ ಇಎಸ್‌ಐಸಿ ರೋಗಿಗಳ ಸಂಖ್ಯಾಬಲ ಹೆಚ್ಚಿದೆ. ಬ್ಲಡ್ ಬ್ಯಾಂಕ್, ಮೆಡಿಕಲ್ ರೆಕಾರ್ಡ್ ಸೆಕ್ಷನ್, ವೈದ್ಯಕೀಯ ಕೌಶಲ್ಯಾಭಿವೃದ್ಧಿ ಸೆಕ್ಷನ್ ಆರಂಭಗೊಂಡಿದೆ. ವಿಕಲ ಚೇತನರು/ ಸಾರ್ವಜನಿಕರು ರೇಲ್ವೆ ಪಾಸ್ ತರಲು ಸೊಲ್ಲಾಪುರಕ್ಕೆ ಹೋಗಬೇಕಿತ್ತು. ಅದನ್ನೀಗ ಕಲಬುರಗಿಯಲ್ಲೇ ದೊರಕುವಂತೆ ಮಾಡಲಾಗಿದೆ. ರೇಲ್ವೆ ನಿಲ್ದಾಣದಲ್ಲಿ ಹವಾನಿಯಂತ್ರಿತ ವೇಟಿಂಗ್ ರೂಂ, ಪಾದಚಾರಿ ಪಥ ವ್ಯವಸ್ಥೆ, ಹಬ್ಬ/ ಹರಿದಿನಗಳು, ವಿವಿಧ ಸಮುದಾಯದ ಜಯಂತಿಗಳಿಗೆ ವಿಶೇಷ ರೈಲು ಸೇವೆ ನೀಡಲಾಗಿದೆ.
* ಕಲಬುರಗಿಯಲ್ಲಿ ರೇಲ್ವೆ ವಿಭಾಗೀಯ ಕಚೇರಿ ಸ್ಥಾಪನೆ ಯೋಜನೆ ಎಲ್ಲಿಗೆ ಬಂತು?
ಸಂಸದನಾದ ಬಳಿಕ ರೇಲ್ವೆ ರಾಜ್ಯ ಸಚಿವ ಸುರೇಶ ಅಂಗಡಿಯವರಿಗೆ ಕಂಡು ಇದೇ ವಿಚಾರವಾಗಿ ಮನವಿ ನೀಡಿ ಗಮನ ಸೆಳೆಯಲಾಯಿತು. ನಾನು ಈ ಯೋಜನೆಯ ಪರವಾಗಿದ್ದೇನೆ. ಈ ಯೋಜನೆÜæ ಕಲಬುರಗಿಗೆ ಬರೋದು ಶತಸಿದ್ಧ. ಯಾವ ಕಾರಣಕ್ಕೂ ಕೈಬಿಟ್ಟಿಲ್ಲ. ಇದು ಜೀವಂತವಿರುವ ಯೋಜನೆ ಎಂದು ಹೇಳಬಯಸುವೆ. ಕಲಬುರಗಿ- ಬೆಂಗಳೂರು ರೈಲು ಸೇವೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕೊರೋನಾ ಸಂಕಷ್ಟಎದುರಾಗಿದ್ದರಿಂದ ತಾತ್ಕಾಲಿಕವಾಗಿ ನಿಂತಿದೆ. ರೇಲ್ವೆ ಮೂಲ ಸವಲತ್ತುಗಳನ್ನು ಹೆಚ್ಚಿಸುವ ಇನ್ನೂ ಹಲವು ಯೋಜನೆ ಇಲ್ಲಿಗೆ ತರುವ ಬಯಕೆ ನನ್ನದು.
* ಕಲಬುರಗಿ ಮಟ್ಟಿಗೆ ನಿಮ್ಮ ಮುಂದಿನ ಕ್ರಿಯಾ ಯೋಜನೆಗಳೇನು?
ಕಲಬುರಗಿ ಮಂದಿಗೆ ಉದ್ಯೋಗ ನೀಡುವಂತಹ ಬಹುದೊಡ್ಡ ಕಾರ್ಖಾನೆ ಇಲ್ಲಿಗೆ ತರುವ ಹೆಬ್ಬಯಕೆ. ದಿ. ಅನಂತ ಕುಮಾರ್ ಸಚಿವರಾಗಿದ್ದಾಗ ಕಮಲಾಪುರಕ್ಕೆ ರಸಗೊಬ್ಬರ ಕಾರ್ಖಾನೆ ಮಂಜೂರು ಮಾಡಲು ಸಿದ್ಧರಾಗಿದ್ದರು. ಆಗಿನ ಸಂಸದರು ಆ ಬಗ್ಗೆ ಬೆನ್ನು ಹತ್ತದ ಕಾರಣ ಅದು ನಮಗೆ ದಕ್ಕಲಿಲ್ಲ, ಕೋಲಾರದತ್ತ ಮುಖಮಾಡಿತು. ಗುಳೆ ಸಮಸ್ಯೆ ತುಂಬ ಇದೆ. ಗುರುಮಠಕಲ್‌ನಿಂದಲೇ ಹೆಚ್ಚಿನ ಜನ ಗುಳೆ ಹೋಗುತ್ತಿದ್ದಾರೆ. ಗುಳೆ ಹೋಗೋದನ್ನು ತಪ್ಪಿಸಬೇಕು, 7 ದಶಕವಾದರೂ ಜನರಿಗೆ ಅವರಿದ್ದಲ್ಲೇ ಕೆಲಸ ಕೊಡಲಾಗಿಲ್ಲ, ಸ್ಥಳೀಯವಾಗಿಯೇ ನೌಕರಿ ಜನರಿಗೆ ಸಿಗುವಂತಾಗಬೇಕು, ಅಂತಹ ಉದ್ದಿಮೆಗಳಿಗೆ ಹುಡುಕಿ ಕಲಬುರಗಿಗೆ ತರುವ ಯತ್ನ ಮಾಡುವೆ. ಗುರುಮಠಕಲ್ ಏರಿಯಾದಲ್ಲಿ ಔಷಧಿ ಉದ್ದಿಮೆ ತರುವ ಯತ್ನ ಸಾಗಿದೆ, ಇಲ್ಲೇ ಇಂಡಸ್ಟ್ರಿಯಲ್ ಕಾರಿಡಾರ್ ಸ್ಥಾಪಿಸುವ ಇರಾದೆ ಇದೆ. ಇಎಸ್‌ಐಸಿ ಕಟ್ಟಡದ ಸದ್ಬಳಕೆಗೆ ಇಲ್ಲಿ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ ಏಮ್ಸ್ ಸ್ಥಾಪನೆಯಾಗಲಿ ಎಂಬ ಪ್ರಸ್ತಾವನೆ ಸರಕಾರದ ಮುಂದಿದೆ.
* ಪ್ರಧಾನಿ ಮೋದಿಯವರ ಬಗ್ಗೆ ನಿಮ್ಮ ಅಭಿಪ್ರಾಯ?
ಮೋದಿಯವರು ಲೀಡರ್ ಶಿಪ್ ಕ್ವಾಲಿಟಿ ಇರುವ ಮುತ್ಸದ್ದಿ ಜನನಾಯಕರು. ಅವರ ಪ್ರತಿ ನಡೆ- ನುಡಿಯಿಂದಲೂ ನಮ್ಮಂತಹವರಿಗೆ ಕಲಿಯೋದು ತುಂಬ ಇದೆ. ಅವರ ಸ್ಮರಣ ಶಕ್ತಿ ಅಪಾರವಾದುದು. ಅನೇಕ ಸಂಗತಿಗಳನ್ನು ಮುಖ ನೋಡಿದ ತಕ್ಷಣ ಮೆಲುಕು ಹಾಕುವ ಮೋದಿಯವರ ಕಾರ್ಯ ವೈಖರಿಗೆ ನಾವು ದಂಗಾಗಿದ್ದೇವೆ. ಭಾರತಕ್ಕೆ ಇಂತಹ ನಾಯಕ ದೊರಕಿರೋದು ನಮ್ಮೆಲ್ಲರ ಭಾಗ್ಯ ಎಂದೇ ಹೇಳಬೇಕು. ಅವರು ಪ್ರಧಾನಮಂತ್ರಿ ಆಗಿರುವಾಗಲೇ ಸಂಸದರಾಗಿ ಕೆಲಸ ಮಾಡುತ್ತಿರುವುದು ನನ್ನ ಸೌಭಾಗ್ಯ.
ಕೆಲಸ ಜಾಧವ್ ಸ್ಪೆಷಾಲಿಟಿ
ಬಿಜೆಪಿ ಸಂಸದ ಡಾ. ಉಮೇಶ ಜಾಧವ್ ಕಲಬುರಗಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆಯವರನ್ನು ಪರಾಜಿತರನ್ನಾಗಿಸಿ ಸಂಸತ್ ಪ್ರವೇಶಿಸಿದವರು. ಸಹಜವಾಗಿಯೇ ಇವರ ಮೇಲೆ ಜನರ ನಿರೀಕ್ಷೆಗಳು ತುಂಬ ಇವೆ. ಅವನ್ನೆಲ್ಲ ಈಡೇರಿಸಲೆಂದೇ ತಾವು ಪ್ರತಿನಿತ್ಯ 18 ರಿಂದ 19 ಗಂಟೆ ನಿರಂತರ ಕೆಲ್ಸ ಮಾಡುವೆ ಎನ್ನುತ್ತಾರೆ ಡಾ. ಜಾಧವ್. ಜನರ ಸಮಸ್ಯೆಅರಿತು ಸಂಬಂಧಪಟ್ಟವರ ಗಮನ ಸೆಲೆದು ಪರಿಹಾರ ನೀಡೋದು, ಹೊಸ ಯೋಜನೆಗಾಗಿ ದಿಲ್ಲಿ ಹಂತದಲ್ಲಿ ಪ್ರಭಾವ ಬೀರುವ, ಸಚಿವಾಲಯ ಸುತ್ತಾಡಿ ಕೆಲಸ ನಿರ್ವಹಿಸುವ ಡಾ. ಜಾಧವ್ ಕಲಬುರಗಿ ಜನಸಾಮಾನ್ಯರ ಸಂಸದನಾಗಿ ಹೊರಹೊಮ್ಮಿದವರು.
ಶಕ್ತಿಗೆ ಡಾ.ಜಾಧವ್ ಫಿದಾ!
ಮುತ್ಸದ್ದಿ ನಾಯಕ, ಪ್ರಧಾನಿ ನರೇಂದ್ರ ಮೋದಿಯವರ ಸ್ಮರಣ ಶಕ್ತಿ, ಸಂಗತಿಗಳನ್ನು ಮೆಲಕು ಹಾಕುವ ಪರಿ ಕಂಡು ಡಾ. ಜಾಧವ್ ಫಿದಾ ಆಗಿದ್ದಾರೆ. ಗೆದ್ದ ಸಂಭ್ರಮದಲ್ಲಿ ದಿಲ್ಲಿಗೆ ಹೋದಾಗ ಎಲ್ಲರನ್ನು ಮಾತನಾಡಿಸುತ್ತಿದ್ದಾಗ ಮೋದಿಯವರು ತಾವೇ ಬಳಿ ಬಂದು ಹೆಸರು ಹಿಡಿದು ಕರೆದು ನೀವು ಕಲಬುರಗಿಯಲ್ಲಿ ಯಾರನ್ನ ಸೋಲಿಸಿ ಇಲ್ಲಿಗೆ ಬಂದಿದ್ದೀರಿ ಎಂಬುದು ನನಗೆ ಗೊತ್ತು ಎಂದು ನಕ್ಕು ಬೆನ್ನು ತಟ್ಟಿಚೆನ್ನಾಗಿ ಕೆಲಸ ಮಾಡಿ ಎಂದ ಕ್ಷಣವನ್ನು ಡಾ. ಜಾಧವ್ ನೆನಪಿಸಿಕೊಳ್ಳುತ್ತಾರೆ. ‘ನಾನು ಯಾರನ್ನೂ ಸೋಲಿಸಲಿಲ್ಲ, ಜನರೇ ಆ ಕೆಲಸ ಮಾಡಿದ್ದಾರೆ, ಮೋದಿಯವರ ಹೆಸರು ಚಮತ್ಕಾರಿ ಕೆಲಸ ಮಾಡಿದೆ’ ಎಂದು ನಾನು ಮೋದಿಯವರನ್ನು ಉದ್ದೇಶಿಸಿ ಹೇಳಿದ್ದೆ’ ಎನ್ನುತ್ತಾರೆ. ಒಮ್ಮೆ ಔತಣಕೂಟದಲ್ಲಿಯೂ ಮೋದಿಯವರ ಜೊತೆ ಡಾ. ಜಾಧವ್ ಮುಖಾಮುಖಿಯಾದಾಗ ಮುಖ ನೋಡುತ್ತಲೇ ಮೋದಿಯವರು ನಾನು ಇಂತಹ ದಿನ ಕಲಬುರಗಿಗೆ ಬಂದಿದ್ದೆ ಎಂದು ದಿನಾಂಕ, ಸಮಯ ಹೇಳುತ್ತಲೇ ಕಲಬುರಗಿ ಸಮಾರಂಭದ ಸಂಗತಿಗಳನ್ನು ಮೆಲುಕು ಹಾಕಿದ್ದು ಕಂಡು ಅವರ ನೆನಪಿನ ಶಕ್ತಿ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಾರೆ
ಸಂದರ್ಶನ: ಶೇಷಮೂರ್ತಿ ಅವಧಾನಿ (ಕಲಬುರಗಿ)