ಸಿಎಎ, ರಾಮ ಮಂದಿರ, ತ್ರಿವಳಿ ತಲಾಖ್, ಆರ್ಟಿಕಲ್ 370: ಮೋದಿ 2.0: 1 ವರ್ಷದ ಸಾಧನೆಗಳು!
ನರೇಂದ್ರ ಮೋದಿ ನೇತೃತ್ವದ 2ನೇ ಅವಧಿಯ ಕೇಂದ್ರ ಸರ್ಕಾರಕ್ಕೆ ಇಂದಿಗೆ ಒಂದು ವರ್ಷ ತುಂಬಿದೆ. ಹೀಗಿರುವಾಗ ಜನ ಮೆಚ್ಚಿದ ನಾಯಕ ಮೋದಿ ಈ ಒಂದು ವರ್ಷದಲ್ಲಿ ಮಾಡಿದ ಸಾಧನೆಗಳೇನು? ಇಲ್ಲಿದೆ ಸಂಪೂರ್ಣ ವಿವರ
* ತ್ರಿವಳಿ ತಲಾಖ್ ಪದ್ಧತಿ ರದ್ದು
ತಲಾಖ್ ನಿಷೇಧ ಹಾದಿ
2017 ಆಗಸ್ಟ್: ತ್ರಿವಳಿ ತಲಾಖ್ ನಿಷೇಧಿಸಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು
2017 ಡಿಸೆಂಬರ್: ಕೇಂದ್ರದಿಂದ ಮಸೂದೆ ರಚನೆ. ಅಂಗೀಕಾರವಿಲ್ಲ
2019 ಜುಲೈ: ಲೋಕಸಭೆ, ರಾಜ್ಯಸಭೆಯಲ್ಲಿ ವಿಧೇಯ ಪಾಸ್
2019 ಆಗಸ್ಟ್: ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕು ಸಂರಕ್ಷಣೆ) ಕಾಯ್ದೆ ಜಾರಿ
ತಲಾಖ್ ಎಂದು ಮೂರು ಬಾರಿ ಹೇಳಿ ಮಹಿಳೆಯರಿಗೆ ಹಠಾತ್ ವಿಚ್ಛೇದನ ನೀಡುವ ಮುಸ್ಲಿಂ ಸಮುದಾಯದಲ್ಲಿನ ಹೀನ ಸಂಪ್ರದಾಯಕ್ಕೆ ಮಂಗಳ ಹಾಡಿ, ಅದನ್ನು ಕ್ರಿಮಿನಲ್ ಅಪರಾಧವೆಂದು ಘೋಷಿಸಿದ್ದು ನರೇಂದ್ರ ಮೋದಿ ನೇತೃತ್ವದ 2.0 ಸರ್ಕಾರದ ಪ್ರಮುಖ ಸಾಧನೆಗಳಲ್ಲಿ ಅಗ್ರಗಣ್ಯವಾದುದು. ಸಾಮಾನ್ಯವಾಗಿ ಯಾವುದಾದರೂ ಪುರಾತನ ಸಂಪ್ರದಾಯವನ್ನು ಯಾವುದೇ ಸರ್ಕಾರ ನಿಲ್ಲಿಸಲು ಮುಂದಾದಾಗ ವಿರೋಧ ವ್ಯಕ್ತವಾಗುತ್ತದೆ. ಆದರೆ ಮೋದಿ ಸರ್ಕಾರದ ಈ ನಡೆಗೆ ಮುಸ್ಲಿಂ ಸಮುದಾಯದ ಮಹಿಳೆಯರು ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತಪಡಿಸಿದ್ದು ಗಮನಾರ್ಹ.
ತ್ರಿವಳಿ ತಲಾಖ್ ಅಥವಾ ತಲಾಖ್ ಎ ಬಿದ್ದತ್ ಎಂಬ ಸಂಪದ್ರಾಯ ಮುಸಲ್ಮಾನ ಸಮುದಾಯದಲ್ಲಿ 1400 ವರ್ಷಗಳಿಂದಲೂ ಇದೆ. ವಿಶ್ವದ 22 ದೇಶಗಳು ಈ ಸಂಪ್ರದಾಯವನ್ನು ತಿರಸ್ಕರಿಸಿವೆ. ಮುಸ್ಲಿಂ ಬಹುಸಂಖ್ಯಾತ ದೇಶಗಳೇ ಈ ಸಂಪ್ರದಾಯಕ್ಕೆ ಎಳ್ಳು ನೀರು ಬಿಟ್ಟಿವೆ. ಆದರೆ ಭಾರತದಲ್ಲಿ ಮಾತ್ರ ಎಗ್ಗಿಲ್ಲದೇ ಇದು ಮುಂದುವರಿದಿತ್ತು. ಮತ್ತೊಂದು ವಿವಾಹವಾಗಲು ಅಥವಾ ಹೆಂಡತಿಯನ್ನು ತ್ಯಜಿಸಲು ಮುಸಲ್ಮಾನ ಸಮುದಾಯದ ಪುರುಷರು ಹಠಾತ್ ‘ತಲಾಖ್ ತಲಾಖ್ ತಲಾಖ್’ ಎಂದು ಹೇಳಿದರೆ ಸಾಕಿತ್ತು. ಎಸ್‌ಎಂಎಸ್, ಫೋನ್ ಕರೆ ಹಾಗೂ ವಾಟ್ಸ್‌ಆ್ಯಪ್ ಮೂಲಕವೂ ತಲಾಖ್ ನೀಡುವ ಬೆಳವಣಿಗೆಗಳು ನಡೆದಿದ್ದವು. ಇದು ಮುಸ್ಲಿಂ ಮಹಿಳೆಯರ ಜೀವನವನ್ನೇ ಅಭದ್ರಗೊಳಿಸಿತ್ತು.
ತಲಾಖ್ ವಿರುದ್ಧ ಮುಸಲ್ಮಾನ ಮಹಿಳೆಯರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಕೇಂದ್ರ ಸರ್ಕಾರ ಆ ಮಹಿಳೆಯರ ಪರ ನಿಂತರೆ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ತಲಾಖ್ ಮುಂದುವರಿಸಬೇಕು ಎಂದು ವಾದಿಸಿತ್ತು. ಕೊನೆಗೆ 2017ರ ಆ.22ರಂದು ಸುಪ್ರೀಂಕೋರ್ಟ್‌ನ ಪಂಚ ಸದಸ್ಯ ಸಾಂವಿಧಾನಿಕ ಪೀಠ ತ್ರಿವಳಿ ತಲಾಖ್ ಎಂಬುದು ಅಸಂವಿಧಾನಿಕ ಎಂದು ಘೋಷಿಸಿ ಐತಿಹಾಸಿಕ ತೀರ್ಪು ನೀಡಿತು. ಇದರ ವಿರುದ್ಧ ಕಾಯ್ದೆ ಜಾರಿಗೆ ತರುವಂತೆ ಸರ್ಕಾರಕ್ಕೆ ಸೂಚನೆ ನೀಡಿತು.
ಸುಪ್ರೀಂಕೋರ್ಟ್ ತೀರ್ಪಿನ ನಂತರವೂ ತ್ರಿವಳಿ ತಲಾಖ್ ಸಮಸ್ಯೆ ನಿಲ್ಲಲಿಲ್ಲ. ಈ ನಡುವೆ 2017ರ ಡಿಸೆಂಬರ್‌ನಲ್ಲಿ ಕೇಂದ್ರ ಸರ್ಕಾರ ಮಸೂದೆಯೊಂದನ್ನು ರೂಪಿಸಿತು. 2017ರ ಡಿಸೆಂಬರ್ 28ರಂದು ಮಸೂದೆ ಲೋಕಸಭೆಯಲ್ಲಿ ಅಂಗೀಕಾರವೂ ಆಯಿತು. ಅಷ್ಟರಲ್ಲಾಗಲೇ 100 ಮಹಿಳೆಯರಿಗೆ ತ್ರಿವಳಿ ತಲಾಖ್ ನೀಡಲಾಗಿತ್ತು. ರಾಜ್ಯಸಭೆಯಲ್ಲಿ ಬಹುಮತವಿಲ್ಲದ ಕಾರಣ ವಿಧೇಯಕ ಪಾಸ್ ಆಗಲಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 3 ಬಾರಿ ಸುಗ್ರೀವಾಜ್ಞೆ ಹೊರಡಿಸಿತು. ಹೊಸ ಲೋಕಸಭೆ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ 2019ರಲ್ಲಿ ಹೊಸದಾಗಿ ಮಸೂದೆಯನ್ನು ಮಂಡಿಸಲಾಯಿತು.
2019ರ ಜುಲೈ 26ರಂದು ‘ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕು ಸಂರಕ್ಷಣೆ) ಕಾಯ್ದೆ- 2019’ ಲೋಕಸಭೆಯಲ್ಲಿ ಹಾಗೂ ಜು.30ರಂದು ರಾಜ್ಯಸಭೆಯಲ್ಲಿ ಅಂಗೀಕಾರವಾಯಿತು. ರಾಷ್ಟ್ರಪತಿಗಳು ಅಂಕಿತ ಹಾಕುವುದರೊಂದಿಗೆ 2019ರ ಆ.1ರಿಂದ ಈ ಕಾಯ್ದೆ ಜಾರಿಗೆ ಬಂತು. ತನ್ಮೂಲಕ ದೇಶದಲ್ಲಿ ಇತಿಹಾಸ ಸೃಷ್ಟಿಯಾಯಿತು.
ಈ ಕಾಯ್ದೆಯ ಪ್ರಕಾರ, ಮೌಖಿಕವಾಗಿ, ಲಿಖಿತವಾಗಿ ಅಥವಾ ಎಸ್‌ಎಂಎಸ್/ವಾಟ್ಸ್‌ಆ್ಯಪ್/ಇನ್ನಿತರೆ ಎಲೆಕ್ಟ್ರಾನಿಕ್ ಚಾಟ್‌ಗಳ ರೂಪದಲ್ಲಿ ತ್ರಿವಳಿ ತಲಾಖ್ ನೀಡುವುದು ಅಪರಾಧ. ತ್ರಿವಳಿ ತಲಾಖ್ ನೀಡಿದ ವ್ಯಕ್ತಿಗೆ ಗರಿಷ್ಠ 3 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದು. ಪತ್ನಿಯ ವಾದ ಆಲಿಸಿದ ಬಳಿಕವೇ ಜಾಮೀನು ಅರ್ಜಿ ಇತ್ಯರ್ಥವಾಗಬೇಕು. ತಲಾಖ್ ನೀಡಿದ ವ್ಯಕ್ತಿಯು ತನ್ನ ಪತ್ನಿಗೆ ಪರಿಹಾರ ನೀಡಬೇಕು. ಅಪ್ರಾಪ್ತ ಮಕ್ಕಳನ್ನು ಮಹಿಳೆ ತನ್ನ ವಶಕ್ಕೆ ಪಡೆಯಬಹುದು ಎಂದು ವಿವರಿಸಲಾಗಿದೆ.
ಮುಸ್ಲಿಂ ಮಹಿಳೆಯರಿಂದ ಸರ್ಕಾರಕ್ಕೆ ಪ್ರಶಂಸೆ:
ಪ್ರತಿಪಕ್ಷಗಳು ಆಕ್ಷೇಪ ಎತ್ತಿದರೂ ಸರ್ಕಾರ ತ್ರಿವಳಿ ತಲಾಖ್ ನಿಷೇಧಿಸುವ ತನ್ನ ನಿಲುವು ಸಡಿಲಿಸಲಿಲ್ಲ. ತಮ್ಮ ಜೀವನವನ್ನೇ ಅಭದ್ರಗೊಳಿಸಿದ್ದ ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸಿದ ಕೇಂದ್ರ ಸರ್ಕಾರಕ್ಕೆ ಮುಸ್ಲಿಂ ಮಹಿಳೆಯರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅದು ಪ್ರತಿಬಿಂಬಿತವಾಯಿತು. ಮುಸಲ್ಮಾನ ಬಾಹುಳ್ಯದ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಭಾರಿ ಬಹುಮತದೊಂದಿಗೆ ಆರಿಸಿ ಬಂದರು.
* ಒಂದು ದೇಶ, ಒಂದು ಪಡಿತರ ಚೀಟಿ
- ನೀವಿರುವ ಊರಲ್ಲೇ ಸಿಗುತ್ತೆ ಸರ್ಕಾರಿ ಪಡಿತರ
- ಮಹತ್ವಾಕಾಂಕ್ಷಿ ಯೋಜನೆ ಹಂತ ಹಂತವಾಗಿ ಜಾರಿ
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರ್ಕಾರ ದೇಶದ 81 ಕೋಟಿ ಮಂದಿಗೆ ಅತ್ಯಂತ ರಿಯಾಯಿತಿ ದರದಲ್ಲಿ ಪಡಿತರ ವಿತರಿಸುತ್ತಿದೆ. ಈ ಪಡಿತರವನ್ನು ದೇಶದ ಯಾವುದೇ ಭಾಗದಲ್ಲಿ ಬೇಕಾದರೂ ಪಡೆಯುವುದಕ್ಕೆ ‘ಒಂದು ದೇಶ ಒಂದು ಪಡಿತರ ಚೀಟಿ’ ಎಂಬ ಮಹತ್ವಾಕಾಂಕ್ಷಿ ಯೋಜನೆಗೆ ಅಡಿಗಲ್ಲು ಹಾಕಿದೆ.
ಕರ್ನಾಟಕದ ಒಬ್ಬ ಕಾರ್ಮಿಕ ದೂರದ ಮುಂಬೈನಲ್ಲೋ ಅಥವಾ ದೆಹಲಿಯಲ್ಲೋ ಉದ್ಯೋಗ ಮಾಡುತ್ತಿರುತ್ತಾನೆ ಅಂತಿಟ್ಟುಕೊಳ್ಳಿ. ಆತ ತನ್ನ ತವರಿನಲ್ಲಿ ಪಡಿತರ ಚೀಟಿ ಹೊಂದಿರುತ್ತಾನೆ. ಆದರೆ ಪ್ರತಿ ತಿಂಗಳೂ ತವರಿಗೆ ಬಂದು ಪಡಿತರ ಪಡೆಯಲು ಆಗುವುದಿಲ್ಲ. ಆದ ಕಾರಣ ಆತ ಇರುವ ಸ್ಥಳದಲ್ಲೇ ಪಡಿತರ ಪಡೆಯುವ ಸೌಲಭ್ಯ ಕಲ್ಪಿಸುವ ದೂರಗಾಮಿ ಯೋಜನೆ ಇದಾಗಿದ್ದು, 2021ರ ಮಾಚ್‌ರ್‍ನೊಳಗೆ ದೇಶಾದ್ಯಂತ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 3 ರು.ಗೆ ಕೇಜಿ ಅಕ್ಕಿ, 2 ರು.ಗೆ ಕೇಜಿ ಗೋಧಿ, 1 ರು.ಗೆ ಇತರೆ ಧಾನ್ಯಗಳನ್ನು ಸರ್ಕಾರ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆ ಮಾಡುತ್ತಿದೆ (ಕರ್ನಾಟಕದಲ್ಲಿ ಅಕ್ಕಿ ಉಚಿತವಿದೆ). ದೇಶದಲ್ಲಿ 23 ಕೋಟಿ ರೇಷನ್ ಕಾರ್ಡ್‌ಗಳನ್ನು ವಿತರಿಸಲಾಗಿದ್ದು, 80 ಕೋಟಿ ಫಲಾನುಭವಿಗಳು ಇದ್ದಾರೆ.
ಹಾಲಿ ಇರುವ ವ್ಯವಸ್ಥೆಯಡಿ, ಪಡಿತರ ಚೀಟಿದಾರ ಆತ ಎಲ್ಲಿರುತ್ತಾನೋ ಅಲ್ಲಿನ ಸ್ಥಳೀಯ ನ್ಯಾಯಬೆಲೆ ಅಂಗಡಿಯಿಂದ ಮಾತ್ರ ಪಡಿತರ ಪಡೆಯಬೇಕು. ಆದರೆ ‘ಒಂದು ದೇಶ ಒಂದು ಪಡಿತರ ಚೀಟಿ’ ಜಾರಿಯಾದರೆ ದೇಶದ ಯಾವುದೇ ಭಾಗದಲ್ಲಿ ಬೇಕಾದರೂ ಪಡಿತರವನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ತಂತ್ರಜ್ಞಾನವನ್ನು ವ್ಯಾಪಕವಾಗಿ ಮಾಡಿಕೊಳ್ಳಲಾಗುತ್ತದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಪಾಯಿಂಟ್ ಆಫ್ ಸೇಲ್ಸ್ ಉಪಕರಣ ಇಟ್ಟಿರಲಾಗುತ್ತದೆ. ಆಧಾರ್ ಮೂಲಕ ಪಡಿತರದಾರನನ್ನು ದೃಢೀಕರಿಸಲಾಗುತ್ತದೆ.
ಅಂತಾರಾಜ್ಯ ಪಡಿತರ ಚೀಟಿ ಪೋರ್ಟಬಲಿಟಿ:
ಒಂದು ದೇಶ, ಒಂದು ಪಡಿತರ ಚೀಟಿ ಯೋಜನೆಯ ಭಾಗವಾಗಿ ಕೇಂದ್ರ ಸರ್ಕಾರ ಪಡಿತರ ಚೀಟಿಗಳ ಪೋರ್ಟಬಿಲಿಟಿಯನ್ನೂ ಜಾರಿಗೆ ತರುತ್ತದೆ. ಇದಕ್ಕಾಗಿ ಪಡಿತರ ವಿತರಣಾ ವ್ಯವಸ್ಥೆ ಸಮಗ್ರ ನಿರ್ವಹಣೆ ಎಂಬ ವೆಬ್‌ಸೈಟ್ ರೂಪಿಸಿದೆ. ಇದರಡಿ ಅಂತಾರಾಜ್ಯ ಪಡಿತರ ಚೀಟಿಗಳ ಪೋರ್ಟಬಲಿಟಿ ನಡೆಯುತ್ತದೆ. ಈ ಮೂಲಕ ಪಡಿತರ ಚೀಟಿದಾರ ತಾನಿರುವ ಸ್ಥಳದಲ್ಲಿ ತನಗೆಷ್ಟುಬೇಕೋ ಅಷ್ಟುಪಡಿತರ ಪಡೆದುಕೊಳ್ಳಬಹುದು.
ಉದಾಹರಣೆಗೆ ಚಾಮರಾಜನಗರದ ವ್ಯಕ್ತಿ ಪುಣೆಯಲ್ಲಿ ಉದ್ಯೋಗದಲ್ಲಿರುತ್ತಾನೆ ಎಂದಿಟ್ಟುಕೊಳ್ಳಿ. ಆತನ ಇಡೀ ಕುಟುಂಬ ಚಾಮರಾಜನಗರದಲ್ಲಿದ್ದರೆ, ಆ ಕಾರ್ಮಿಕ ಮಾತ್ರ ಪುಣೆಯಲ್ಲಿರುತ್ತಾನೆ. ಆತ ಪುಣೆಯ ನ್ಯಾಯಬೆಲೆ ಅಂಗಡಿಗೆ ಹೋಗಿ ತನ್ನ ಪಾಲಿನ ಪಡಿತರ ಪಡೆಯಬಹುದು. ಇತರೆ ಕುಟುಂಬ ಸದಸ್ಯರು ಚಾಮರಾಜನಗರದಲ್ಲೇ ಧಾನ್ಯ ಪಡೆದುಕೊಳ್ಳಬಹುದಾಗಿರುತ್ತದೆ.
‘ಒಂದು ದೇಶ ಒಂದು ಪಡಿತರ ಚೀಟಿ’ ಯೋಜನೆ ಜಾರಿ 2018ರ ಏಪ್ರಿಲ್‌ನಿಂದಲೇ ಪ್ರಾರಂಭವಾಗಿದೆ. ಕರ್ನಾಟಕ ಸೇರಿ 17 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಯೋಜನೆ ಜಾರಿಗೆ ಒಪ್ಪಿವೆ. ಈ ಯೋಜನೆಯಿಂದ ಪಡಿತರ ವ್ಯವಸ್ಥೆಯಲ್ಲಿ ಆಗುತ್ತಿರುವ ಸೋರಿಕೆಗೆ ಕಡಿವಾಣ ಬೀಳಬಹುದು ಎಂದು ಎಣಿಸಲಾಗಿದೆ.
ವಲಸಿಗ ಕಾರ್ಮಿಕರಿಗೆ ಅನುಕೂಲ:
ಕೊರೋನಾ ವೈರಸ್ ನಿಗ್ರಹಕ್ಕಾಗಿ ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದ ಸಂದರ್ಭ ಲಕ್ಷಾಂತರ ಕಾರ್ಮಿಕರು ದುಡಿಮೆ, ಪಡಿತರ ಇಲ್ಲದ ಕಾರಣ ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲೇ ವಾಪಸ್ ತೆರಳಿದರು. ಅಂತಹ ಕಾರ್ಮಿಕರ ಪಡಿತರ ಚೀಟಿ ಅವರು ಇದ್ದ ಸ್ಥಳದಲ್ಲೇ ಇದ್ದಿದ್ದರೆ, ಅವರಿಗೆ ಆಹಾರ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ‘ಒಂದು ದೇಶ ಒಂದು ಪಡಿತರ ಚೀಟಿ’ ಯೋಜನೆ ಜಾರಿಯಿಂದ ಅಂತಹ ಸಮಸ್ಯೆಗಳು ಮುಂದೆ ಎದುರಾಗುವುದಿಲ್ಲ.
ನರೇಂದ್ರ ಮೋದಿ ಅವರ 20 ಲಕ್ಷ ಕೋಟಿ ರು. ಆರ್ಥಿಕ ಪ್ಯಾಕೇಜ್ ಕುರಿತ ವಿವರ ನೀಡುವ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ಒಂದು ದೇಶ ಒಂದು ಪಡಿತರ ಚೀಟಿ’ಯ ಪ್ರಸ್ತಾಪ ಮಾಡಿದ್ದರು. ಇನ್ನು ಕೆಲವೇ ತಿಂಗಳಲ್ಲಿ ಯೋಜನೆಯನ್ನು ಶೇ.80ರಷ್ಟುಜಾರಿ ಮಾಡಲಾಗುವುದು. 2021ರ ಮಾಚ್‌ರ್‍ನೊಳಗೆ ಶೇ.100ರಷ್ಟುಅನುಷ್ಠಾನಕ್ಕೆ ತರಲಾಗುವುದು ಎಂದು ತಿಳಿಸಿದ್ದರು.
* ಅಪಘಾತ ತಗ್ಗಿಸಲು ಹೊಸ ಮೋಟಾರು ಕಾಯ್ದೆ
- ಸಂಚಾರ ನಿಯಮ ಉಲ್ಲಂಘನೆಗೆ ಭಾರಿ ದಂಡ ಹೇರುವ ಶಾಸನ
- ಮೋದಿ 2.0 ಸರ್ಕಾರದ ಮತ್ತೊಂದು ಸಾಧನೆ
130 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಅಪಘಾತಗಳ ಸಂಖ್ಯೆ ಏನು ಕಡಿಮೆ ಇಲ್ಲ. ಪ್ರತಿ ವರ್ಷ 5 ಲಕ್ಷ ಅಪಘಾತಗಳು ಸಂಭವಿಸುತ್ತವೆ. 1.5 ಲಕ್ಷ ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ. 3 ಲಕ್ಷಕ್ಕೂ ಅಧಿಕ ಮಂದಿ ಅಂಗವಿಕಲರಾಗುತ್ತಾರೆ. ವರ್ಷದಿಂದ ವರ್ಷಕ್ಕೆ ಅಪಘಾತಗಳು ಹೆಚ್ಚುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಅಪಘಾತಗಳ ಸಂಖ್ಯೆಯನ್ನೇ ತಗ್ಗಿಸಲು ಕೇಂದ್ರ ಸರ್ಕಾರ ಕಳೆದ ವರ್ಷ ಹೊಸ ಕಾಯ್ದೆಯನ್ನೇ ಜಾರಿಗೆ ತಂದಿತು.
ಮೋಟಾರು ವಾಹನಗಳ (ತಿದ್ದುಪಡಿ)ಕಾಯ್ದೆ- 2019ರಡಿ, ರಸ್ತೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ವಿಧಿಸಲಾಗುತ್ತಿದ್ದ ದಂಡವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲಾಯಿತು. ಇದಕ್ಕೆ ಆರಂಭದಲ್ಲಿ ವಿರೋಧ ವ್ಯಕ್ತವಾಯಿತಾದರೂ ಸರ್ಕಾರ ಮಣಿಯಲಿಲ್ಲ. ನಾವು ದಂಡ ಹೆಚ್ಚಿಸುತ್ತಿರುವುದು ಆದಾಯ ಗಳಿಸುವುದಕ್ಕೆ ಅಲ್ಲ, ಅಪಘಾತ ತಗ್ಗಿಸಲು ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಪದೇ ಪದೇ ಹೇಳಿದರು.
ಜನರಿಗೆ ದಂಡ ಹೊರೆ ಅಧಿಕವಾಗುತ್ತದೆ ಎಂಬ ಕಾರಣಕ್ಕೆ ಹಲವು ರಾಜ್ಯಗಳು ದಂಡದ ಮೊತ್ತವನ್ನು ಕೊಂಚ ಪ್ರಮಾಣದಲ್ಲಿ ತಗ್ಗಿಸಿದವು. ಆದಾಗ್ಯೂ ಈ ಕಾಯ್ದೆಯ ಫಲವಾಗಿ ದೇಶಾದ್ಯಂತ ಅಪಘಾತಗಳ ಸಂಖ್ಯೆ ಹಾಗೂ ಅವುಗಳಿಂದ ಸಾವಿಗೀಡಾಗುವವರ ಪ್ರಮಾಣ ಕಡಿಮೆಯಾಗಿದೆ ಎಂದು ಹಲವು ಅಂಕಿ-ಅಂಶಗಳು ತಿಳಿಸಿವೆ.
ನರೇಂದ್ರ ಮೋದಿ ನೇತೃತ್ವದ 2ನೇ ಅವಧಿಯ ಸರ್ಕಾರ ತನ್ನ ಅಲ್ಪಾವಧಿಯಲ್ಲೇ ಜಾರಿಗೆ ತಂದ ಮಹತ್ವದ ಸುಧಾರಣೆಗಳಲ್ಲಿ ಮೋಟಾರು ವಾಹನಗಳ ಕಾಯ್ದೆಯೂ ಒಂದು. 2019ರ ಸೆ.1ರಿಂದ ಈ ಕಾಯ್ದೆ ಜಾರಿಗೆ ಬಂದಿತು. ಕುಡಿದು ವಾಹನ ಚಾಲನೆ ಮಾಡುವವರಿಗೆ 10 ಸಾವಿರ ರು. ದಂಡ ಹಾಗೂ 6 ತಿಂಗಳಿನಿಂದ 2 ವರ್ಷದವರೆಗೂ ಜೈಲು ಶಿಕ್ಷೆ ವಿಧಿಸುವ ಅಂಶವಿದೆ. ಜತೆಗೆ ವಾಹನ ಚಾಲನೆ ಪರವಾನಗಿಯೇ ಇಲ್ಲದೇ ವಾಹನ ಓಡಿಸುವುದಕ್ಕೆ 5000 ರು. ದಂಡ ಹಾಗೂ 3 ತಿಂಗಳು ಜೈಲು ಶಿಕ್ಷೆ. ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಓಡಿಸುವವರಿಗೆ 1000 ರು. ದಂಡ ವಿಧಿಸುವ ಕಠಿಣ ಅಂಶಗಳು ಇವೆ.
ಹಲವು ರಾಜ್ಯಗಳಲ್ಲಿ ದಂಡದ ಪ್ರಮಾಣವನ್ನು ತಗ್ಗಿಸಲಾಯಿತಾದರೂ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವ ತಪ್ಪಿಗೆ ಮಾತ್ರ ಯಾವ ರಾಜ್ಯವೂ ದಂಡದ ಮೊತ್ತ ಕಡಿಮೆ ಮಾಡಲಿಲ್ಲ. ಬಹುತೇಕ ಅಪಘಾತಗಳಿಗೆ ಮದ್ಯ ಸೇವನೆಯೇ ಕಾರಣ ಎಂಬ ವಾದವಿರುವುದರಿಂದ ಯಾವುದೇ ಸರ್ಕಾರವೂ ಈ ದಂಡ ಕಡಿತಗೊಳಿಸುವ ಕ್ರಮಕ್ಕೆ ಮುಂದಾಗಲಿಲ್ಲ.
ದಂಡ ಎಷ್ಟಿತ್ತು? ಎಷ್ಟಾಯ್ತು?
ದಂಡ ಹಳೆಯದು ಹೊಸತು (ರು.ಗಳಲ್ಲಿ)
ಲೈಸೆನ್ಸ್ ಇಲ್ಲದೆ ಚಾಲನೆ 500 5000
ಓವರ್ ಸ್ಪೀಡ್ 400 1000- 4000
ಮದ್ಯ ಸೇವಿಸಿ ವಾಹನ ಚಾಲನೆ - 6 ತಿಂಗಳ ಜೈಲು ಶಿಕ್ಷೆ ಹಾಗೂ/ಅಥವಾ 10 ಸಾವಿರ ರು. ತಪ್ಪು ಪುನರಾವರ್ತನೆಯಾದರೆ 2 ವರ್ಷ ಜೈಲು ಹಾಗೂ/ಅಥವಾ 15 ಸಾವಿರ ರು. ದಂಡ
ವಿಮೆ ಇಲ್ಲದಿದ್ದರೆ 1000 ರು. ದಂಡ ಹಾಗೂ/ಅಥವಾ 3 ತಿಂಗಳು ಜೈಲು ಮೊದಲ ಬಾರಿ 2000, 2ನೇ ಬಾರಿ 4000 ಹಾಗೂ 3 ತಿಂಗಳು ಜೈಲು ಶಿಕ್ಷೆ
ಹೆಲ್ಮೆಟ್ ರಹಿತ ಚಾಲನೆ 100 1000
* ಅಸ್ಸಾಂನಲ್ಲಿ ಶಾಂತಿ ಸ್ಥಾಪಿಸಿದ ಮೋದಿ
- ಬೋಡೋ ಉಗ್ರರ ಜತೆ ಯಶಸ್ವಿ ಒಪ್ಪಂದ ಕುದುರಿಸಿದ ಸರ್ಕಾರ
- ದಶಕಗಳ ಬಿಕ್ಕಟ್ಟಿಗೆ ತೆರೆ, 1500 ಉಗ್ರರ ಶರಣಾಗತಿ
ಈಶಾನ್ಯ ರಾಜ್ಯವಾದ ಅಸ್ಸಾಂನಲ್ಲಿ 80ರ ದಶಕದಿಂದ ಬೋಡೋ ಉಗ್ರರು ಹಿಂಸಾರೂಪದ ಹೋರಾಟ ನಡೆಸಿಕೊಂಡು ಬಂದಿದ್ದರು. ಪ್ರತ್ಯೇಕ ಬೋಡೋಲ್ಯಾಂಡ್ ರಾಜ್ಯಕ್ಕಾಗಿ ಅವರು ನಡೆಸಿದ ತೀವ್ರಗಾಮಿ ಹೋರಾಟಕ್ಕೆ ಬಲಿಯಾದವರು 4000ಕ್ಕೂ ಅಧಿಕ ಮಂದಿ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ಒಂದು ಕ್ರಮದಿಂದಾಗಿ ಈಗ ಅಸ್ಸಾಂ ಶಾಂತವಾಗಿದೆ. ಒಂದೂವರೆ ಸಾವಿರ ಬೋಡೋ ಉಗ್ರರು ಶಸ್ತಾ್ರಸ್ತ್ರ ತ್ಯಜಿಸಿ ಶರಣಾಗಿದ್ದಾರೆ.
ಹೌದು. 2ನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುವ ಮೋದಿ ಅವರು ವರ್ಷ ತುಂಬುವ ಮೊದಲೇ ಕೈಗೊಂಡಿರುವ ಕ್ರಾಂತಿಕಾರಿ ನಿರ್ಧಾರವೊಂದು ಅಸ್ಸಾಂನಲ್ಲಿ ಹೊಸ ಶಕೆ ಸೃಷ್ಟಿಸಿದೆ.
ಅಸ್ಸಾಂನ ಬ್ರಹ್ಮಪುತ್ರ ಕಣಿವೆಯ ಉತ್ತರ ಭಾಗದಲ್ಲಿ ಬೋಡೋ ಬುಡಕಟ್ಟು ಸಮುದಾಯವಿದೆ. ಅಸ್ಸಾಂನ ಮೂಲ ನಿವಾಸಿಗಳು ಎಂದು ಹೇಳಿಕೊಳ್ಳುವ ಬೋಡೋಗಳು, ಅಸ್ಸಾಂ ಜನಸಂಖ್ಯೆಯಲ್ಲಿ ಶೇ.28ರಷ್ಟಿದ್ದಾರೆ. ಆದರೆ ಇತರೆ ಸಂಸ್ಕೃತಿ ಹಾಗೂ ಸಮುದಾಯದ ಜನರು ತಮ್ಮ ಭೂಮಿಯನ್ನು ಆಕ್ರಮಿಸಿಕೊಂಡು ತಮ್ಮನ್ನೇ ಅಲ್ಪಸಂಖ್ಯಾತರನ್ನಾಗಿಸುತ್ತಿದ್ದಾರೆ ಎಂಬ ಕಾರಣಕ್ಕೆ 1980ರಿಂದ ಬೋಡೋ ಸಮುದಾಯದ ಜನರು ಹಿಂಸಾರೂಪದ ಹೋರಾಟಕ್ಕೆ ಇಳಿದಿದ್ದರು. ಪ್ರತ್ಯೇಕ ಬೋಡೋಲ್ಯಾಂಡ್ ರಾಜ್ಯವನ್ನು ಸ್ಥಾಪಿಸಿ ತಮಗೆ ಕೊಟ್ಟುಬಿಡಿ ಎಂಬುದು ಅವರ ಪ್ರಮುಖ ಬೇಡಿಕೆಯಾಗಿತ್ತು.
ಬೋಡೋಗಳನ್ನು ನಿಗ್ರಹಿಸಿ, ಅಸ್ಸಾಂನಲ್ಲಿ ಶಾಂತಿ ಸ್ಥಾಪಿಸುವುದು ಎಲ್ಲ ಸರ್ಕಾರಗಳಿಗೂ ತಲೆನೋವಾಗಿತ್ತು. ಈ ನಿಟ್ಟಿನಲ್ಲಿ 1993ರಲ್ಲಿ ಮೊದಲ ಪ್ರಯತ್ನ ನಡೆದು, ಆಲ್ ಬೋಡೋ ಸ್ಟೂಡೆಂಟ್ಸ್ ಯೂನಿಯನ್ ಜತೆ ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡಿತು. ಅದರ ಫಲವಾಗಿ ಬೋಡೋಲ್ಯಾಂಡ್ ಸ್ವಾಯತ್ತ ಮಂಡಳಿ ರಚನೆಯಾಯಿತು. ಅದಕ್ಕೆ ರಾಜಕೀಯ ಅಧಿಕಾರವೂ ಸಿಕ್ಕಿತು. ಆದರೂ ಬೋಡೋಗಳ ಹಿಂಸೆ ಮುಂದುವರಿಯಿತು.
2003ರಲ್ಲಿ ಕೇಂದ್ರ ಸರ್ಕಾರ ಬೋಡೋ ಲಿಬರೇಷನ್ ಟೈಗರ್ಸ್ ಸಂಘಟನೆ ಜತೆ 2ನೇ ಶಾಂತಿ ಒಪ್ಪಂದ ಮಾಡಿಕೊಂಡಿತು. 4 ಜಿಲ್ಲೆಗಳನ್ನು ಒಳಗೊಂಡ ಬೋಡೋಲ್ಯಾಂಡ್ ಪ್ರದೇಶ ಮಂಡಳಿ ರಚನೆಯಾಯಿತು. ಶಿಕ್ಷಣ, ತೋಟಗಾರಿಕೆ, ಅರಣ್ಯ, ಪೊಲೀಸ್, ಸಾಮಾನ್ಯ ಆಡಳಿತ ಹಾಗೂ ಕಂದಾಯ ವಿಚಾರಗಳಲ್ಲಿ ಗಮನಹರಿಸುವ ಅಧಿಕಾರ ದೊರಕಿತು.
ಇಷ್ಟಾದರೂ ಅಸ್ಸಾಂನಲ್ಲಿ ಶಾಂತಿ ಪೂರ್ಣ ಪ್ರಮಾಣದಲ್ಲಿ ಸ್ಥಾಪನೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬೋಡೋ ಉಗ್ರರ ಅತ್ಯಂತ ಅಪಾಯಕಾರಿ ಸಂಘಟನೆಯಾದ ರಾಷ್ಟ್ರೀಯ ಬೋಡೋಲ್ಯಾಂಡ್ ಪ್ರಜಾಸತ್ತಾತ್ಮಕ ರಂಗ (ಎನ್‌ಡಿಎಫ್‌ಬಿ) ಹಾಗೂ ಇನ್ನಿತರೆ ಸಂಘಟನೆಗಳ ಜತೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿತು. ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ 2020ರ ಜ.27ರಂದು ಈ ಅಂಕಿತ ಹಾಕಲಾಯಿತು.
ಈ ಒಪ್ಪಂದದ ಫಲವಾಗಿ ಬೋಡೋಲ್ಯಾಂಡ್‌ನ 1550 ಉಗ್ರರು ತಮ್ಮ 130 ಶಸ್ತಾ್ರಸ್ತ್ರಗಳೊಂದಿಗೆ 2020ರ ಜ.30ರೊಳಗೆ ಶರಣಾಗಬೇಕು ಎಂಬ ನಿಶ್ಚಯವಾಗಿತ್ತು. ಅದರಂತೆ ಶರಣಾಗತಿ ಪ್ರಕ್ರಿಯೆ ನಡೆಯಿತು. ಬೋಡೋಲ್ಯಾಂಡ್ ಅಭಿವೃದ್ಧಿಗೆ ಕೇಂದ್ರ ಸರ್ಕಾರ 1500 ಕೋಟಿ ರು. ಪ್ಯಾಕೇಜ್ ಘೋಷಿಸಿತು. ಇದರ ಫಲವಾಗಿ ಪ್ರತ್ಯೇಕ ರಾಜ್ಯ ಬೇಡಿಕೆಯನ್ನು ಬೋಡೋ ಉಗ್ರರು ಕೈಬಿಟ್ಟರು. ಮೋದಿ ಸರ್ಕಾರದ ಈ ಐತಿಹಾಸಿಕ ಕ್ರಮದಿಂದಾಗಿ ಅಸ್ಸಾಂನ ಬೋಡೋಲ್ಯಾಂಡ್ ಪ್ರದೇಶಗಳಲ್ಲಿ ಶಾಂತಿ ನೆಲೆಸುವಂತಾಯಿತು. ಬೋಡೋಗಳ ಭಾಷೆ, ಸಂಸ್ಕೃತಿ, ಪ್ರಾದೇಶಿಕ ವಿಚಾರವನ್ನು ಸಂರಕ್ಷಿಸುವುದಾಗಿ ಸರ್ಕಾರ ಭರವಸೆ ನೀಡಿತು.
* ಮಕ್ಕಳ ದೌರ್ಜನ್ಯ ತಡೆಗೆ ಕಠಿಣ ಕಾಯ್ದೆ
- 12 ವರ್ಷದೊಳಗಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರೆ ಗಲ್ಲುಶಿಕ್ಷೆ!
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೋ)-2012ಕ್ಕೆ ತಿದ್ದುಪಡಿ ತರುವ ಮೂಲಕ ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ ಚಾರಿತ್ರಿಕ ನಿರ್ಧಾರವನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ 2019ರ ಜುಲೈನಲ್ಲಿ ಕೈಗೊಂಡಿದೆ. ಇದರ ಪ್ರಕಾರ 12 ವರ್ಷದೊಳಗಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರಿಗೆ ಮರಣ ದಂಡನೆ ಸಹಿತ ಕಠಿಣ ಶಿಕ್ಷೆ ವಿಧಿಸಲು ಅವಕಾಶ ಮಾಡಿಕೊಡಲಾಗಿದೆ.
ಈ ತಿದ್ದುಪಡಿಯು ಮಕ್ಕಳನ್ನು ಅಶ್ಲೀಲವಾಗಿ ಚಿತ್ರಿಸುವವರಿಗೂ ಜೈಲುಶಿಕ್ಷೆ ಸಹಿತ ಭಾರಿ ಮೊತ್ತದ ದಂಡ ವಿಧಿಸಲು ಅನುವು ಮಾಡಿಕೊಡುತ್ತದೆ. ಲೈಂಗಿಕ ಕಿರುಕುಳ ಮತ್ತು ಅಶ್ಲೀಲ ಚಿತ್ರಗಳಿಂದ ಮಕ್ಕಳನ್ನು ಕಾಪಾಡಲು 2012ರ ಪೋಕ್ಸೋ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಆದರೆ ಈ ಕಾಯ್ದೆಯಡಿ ಅತ್ಯಾಚಾರಿಗಳಿಗೆ ಕನಿಷ್ಠ 7 ವರ್ಷದಿಂದ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತಿತ್ತು. ಈ ತಿದ್ದುಪಡಿ ಬಳಿಕ 12 ವರ್ಷದೊಳಗಿನ ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಕಾಮುಕರಿಗೆ ಮರಣ ದಂಡನೆ ಶಿಕ್ಷೆ ವಿಧಿಸಲು ಅವಕಾಶ ಮಾಡಿಕೊಟ್ಟು, ಕಾಮುಕರಿಗೆ ಕೇಂದ್ರ ಸರ್ಕಾರ ಕಠಿಣ ಸಂದೇಶ ರವಾನಿಸಿದೆ.
ಮೂರೂ ಸೇನೆಗೆ ಒಬ್ಬನೇ ಮಹಾದಂಡನಾಯಕ
- ದೇಶದ 20 ವರ್ಷಗಳ ಬೇಡಿಕೆ ಈಡೇರಿಸಿದ ನರೇಂದ್ರ ಮೋದಿ ಸರ್ಕಾರ
- ಕಾರ್ಗಿಲ್ ಯುದ್ಧದಿಂದ ಶುರುವಾಗಿದ್ದ ಕೋರಿಕೆಗೆ ಕೊನೆಗೂ ಮುಕ್ತಿ
1999ರಲ್ಲಿ ಪಾಕಿಸ್ತಾನ ಜತೆಗಿನ ಕಾರ್ಗಿಲ್ ಮಹಾಸಮರದಲ್ಲಿ ಭಾರತ ಜಯಭೇರಿ ಬಾರಿಸಿದ ಬೆನ್ನಲ್ಲೇ ಮೂರೂ ಸೇನಾಪಡೆಗಳ ಮುಖ್ಯಸ್ಥರ ಮೇಲೆ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್- ಸೇನಾ ಮಹಾದಂಡನಾಯಕ) ಎಂಬ ಮತ್ತೊಂದು ಹುದ್ದೆ ಸೃಷ್ಟಿಸಬೇಕು ಎಂಬ ಬೇಡಿಕೆ ರಕ್ಷಣಾ ವಲಯದ ತಜ್ಞರಿಂದ ವ್ಯಕ್ತವಾಗಿತ್ತು. ಆದರೆ ನಂತರ ಬಂದ ಯಾವ ಸರ್ಕಾರವೂ ಅದಕ್ಕೆ ಕಿವಿಗೊಟ್ಟಿರಲಿಲ್ಲ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆ ಬೇಡಿಕೆಯನ್ನು ಈಡೇರಿಸಿದ್ದೂ ಅಲ್ಲದೆ ದೇಶದ ಮೊದಲ ಸಿಡಿಎಸ್ ಆಗಿ ಜನರಲ್ ಬಿಪಿನ್ ರಾವತ್ ಅವರನ್ನು ನೇಮಿಸುವ ಮೂಲಕ 20 ವರ್ಷಗಳ ಬೇಡಿಕೆಯನ್ನು ಈಡೇರಿಸಿ, ಇತಿಹಾಸ ಸೃಷ್ಟಿಸಿ ಗಮನ ಸೆಳೆದಿದೆ.
ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಕಾರ್ಗಿಲ್ ಸಮರ ನಡೆಯಿತು. ಅದಾದ ಬಳಿಕ ಆ ಯುದ್ಧದ ಕುರಿತು ಪರಾಮರ್ಶೆ ನಡೆಸಲು ಸಮಿತಿಯೊಂದನ್ನು ರಚನೆ ಮಾಡಲಾಗಿತ್ತು. ಸೇನಾ ಪಡೆಗಳ ನಡುವೆ ಉತ್ತಮ ಸಮನ್ವಯ ಸಾಧಿಸುವುದಕ್ಕಾಗಿ ಸಿಡಿಎಸ್ ಹುದ್ದೆ ಸೃಷ್ಟಿಸಬೇಕು ಎಂಬ ಬೇಡಿಕೆ ಕೇಳಿಬಂದಿತ್ತು. 2001ರಲ್ಲಿ ಸಚಿವರ ಸಮಿತಿಯೊಂದು ಕೂಡ ಇದೇ ಸಲಹೆಯನ್ನು ನೀಡಿತ್ತು. ಭಾರತದ ರಾಷ್ಟ್ರೀಯ ಭದ್ರತೆ ಕ್ಷೇತ್ರದಲ್ಲಿ ಇದು ಕಡ್ಡಾಯವಾಗಿ ಆಗಬೇಕಾದ ಸುಧಾರಣೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. 2012ರಲ್ಲಿ ನರೇಶ್ ಚಂದ್ರ ಅವರ ಕಾರ್ಯಪಡೆ ಕೂಡ ಸಿಡಿಎಸ್ ಅಗತ್ಯವನ್ನು ಒತ್ತಿ ಹೇಳಿತ್ತು. 2016ರಲ್ಲಿ ಲೆಫ್ಟಿನಂಟ್ ಜನರಲ್ ಡಿ.ಬಿ. ಶೇಕಟ್ಕರ್ ಸಮಿತಿ ನೀಡಿದ್ದ 99 ಶಿಫಾರಸುಗಳಲ್ಲಿ ಸಿಡಿಎಸ್ ನೇಮಕವೂ ಪ್ರಮುಖ ಅಂಶವಾಗಿತ್ತು. ಆದರೆ ಅದು ಮುಂದೆ ಹೋಗಲಿಲ್ಲ.
2ನೇ ಬಾರಿ ಪುನರಾಯ್ಕೆಯಾದ ಪ್ರಧಾನಿ ನರೇಂದ್ರ ಮೋದಿ ಅವರು 2019ರ ಆ.15ರಂದು ದೆಹಲಿಯ ಕೆಂಪುಕೋಟೆ ಮೇಲೆ ದೇಶವನ್ನುದ್ದೇಶಿಸಿ ಮಾಡಿದ್ದ ಭಾಷಣದಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ನೇಮಕ ಕುರಿತು ಘೋಷಣೆ ಮಾಡಿದ್ದರು. ಅವರ ಘೋಷಣೆ ನಾಲ್ಕೇ ತಿಂಗಳಲ್ಲಿ ಜಾರಿಯಾಯಿತು. ಡಿ.31ರಂದು ಬಿಪಿನ್ ರಾವತ್ ಅವರು ದೇಶದ ಮೊದಲ ಸಿಡಿಎಸ್ ಆಗಿ ಅಧಿಕಾರ ವಹಿಸಿಕೊಂಡರು.
ಸಿಡಿಎಸ್ ಕೆಲಸ ಏನು?
ಯುದ್ಧ ಹಾಗೂ ಇನ್ನಿತರೆ ಬಿಕ್ಕಟ್ಟಿನ ಸಂದರ್ಭದಲ್ಲಿ ಸೇನಾ ಪಡೆಗಳ ಮೂರೂ ಮುಖ್ಯಸ್ಥರ ಅಭಿಪ್ರಾಯವನ್ನು ಆಲಿಸಿ ಸರ್ಕಾರಕ್ಕೆ ಒಂದು ಸಮಗ್ರ ಅಭಿಪ್ರಾಯ ನೀಡುವುದೇ ಸಿಡಿಎಸ್ ಅವರ ಪ್ರಮುಖ ಜವಾಬ್ದಾರಿ. ಸಮರ ಘೋಷಣೆಯಾದಾಗ ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆಯ ಮುಖ್ಯಸ್ಥರ ಜತೆ ಸಮಾಲೋಚನೆ ನಡೆಸಿ ಅವರ ಅಭಿಪ್ರಾಯವನ್ನು ಆಲಿಸಲಾಗುತ್ತದೆ. ಆದರೆ ಕ್ರೋಢೀಕೃತ ಸಲಹೆ ನೀಡಲು ಸಹಕಾರಿಯಾಗುತ್ತಾರೆ.
ಸಿಡಿಎಸ್ ಅವರು ರಕ್ಷಣಾ ಸಚಿವರಿಗೆ ಸೇನೆಯ ಮೂರೂ ವಿಭಾಗಗಳಿಗೆ ಸಂಬಂಧಿಸಿದಂತೆ ಪ್ರಮುಖ ಸಲಹೆಗಾರರಾಗಿರುತ್ತಾರೆ. ಸಿಡಿಎಸ್ ಅಲ್ಲದೆ ಮೂರೂ ಸೇನೆಗಳ ಮುಖ್ಯಸ್ಥರ ಜತೆಗೂ ರಕ್ಷಣಾ ಸಚಿವರು ಮಾತನಾಡಬಹುದಾಗಿರುತ್ತದೆ. ಸೇನೆಗೆ ಅಗತ್ಯ ಶಸ್ತಾ್ರಸ್ತ್ರ, ಸಲಕರಣೆ ಖರೀದಿ, ತರಬೇತಿ ಹಾಗೂ ಸಿಬ್ಬಂದಿ ವಿಚಾರವಾಗಿ ಮೂರೂ ಸೇನೆಗಳ ಮುಖ್ಯಸ್ಥರ ಜತೆ ಚರ್ಚಿಸಿ ಸಿಡಿಎಸ್ ಅವರು ಸರ್ಕಾರದ ಜತೆ ವ್ಯವಹರಿಸುತ್ತಾರೆ.
ಮೂರೂ ಸೇನೆಗಳ ಮುಖ್ಯಸ್ಥರಿಗೆ ಎಷ್ಟುವೇತನ, ಭತ್ಯೆ ಸಿಗುತ್ತದೆಯೋ ಅಷ್ಟನ್ನೇ ಸಿಡಿಎಸ್‌ಗೆ ನೀಡಲಾಗುತ್ತದೆ. ಸೇನಾ ವ್ಯವಹಾರಗಳ ಇಲಾಖೆಯನ್ನು ಸಿಡಿಎಸ್ ಮುನ್ನಡೆಸುತ್ತಾರೆ.
* ಭಯೋತ್ಪಾದನೆ ನಿಗ್ರಹಕ್ಕೆ ಕಠಿಣ ಕಾಯ್ದೆ
- ಉಗ್ರರ ಆಸ್ತಿ ಮುಟ್ಟುಗೋಲು
ಭಯೋತ್ಪಾದನೆ ವಿರೋಧಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಸಂಸತ್ತಿನ ಎರಡೂ ಸದನಗಳಲ್ಲಿ ಮಂಡಿಸಿ ಅನುಮೋದನೆ ಪಡೆದು ಜಾರಿ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 2ನೇ ಅವಧಿಯ ಎನ್‌ಡಿಎ ಸರ್ಕಾರ ಕೈಗೊಂಡ ಪ್ರಮುಖ ನಿರ್ಧಾರಗಳಲ್ಲಿ ಒಂದು. ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಗೆ (1967) ತಿದ್ದುಪಡಿ ಕೋರುವ ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಮಸೂದೆಗೆ 2019ರ ಜುಲೈ 14ರಂದು ಲೋಕಸಭೆಯಲ್ಲಿ ಅನುಮೋದನೆ ಪಡೆಯಲಾಗಿತ್ತು. ಅನಂತರ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಮಸೂದೆ ಕುರಿತು ಸಂಸದೀಯ ಸಮಿತಿಯ ಮರುಪರಿಶೀಲನೆ ಅಗತ್ಯ ಎಂದು ಅಭಿಪ್ರಾಯಪಟ್ಟರೂ ಪ್ರತಿಪಕ್ಷಗಳಿಗೆ ಬಹುಮತ ಸಿಗದ ಕಾರಣ ಜು.24ರಂದು ಅಲ್ಲೂ ಮಸೂದೆ ಪಾಸಾಯಿತು. ಹೀಗೆ ಶತಾಯಗತಾಯ ತಿದ್ದುಪಡಿ ತರುವ ಮೂಲಕ ಕೇಂದ್ರ ಸರ್ಕಾರ ಭಯೋತ್ಪಾದನೆ ನಿಗ್ರಹಕ್ಕೆ ಬಲವಾದ ಕಾನೂನನ್ನು ಜಾರಿ ಮಾಡಿದೆ, ಉಗ್ರವಾದದ ವಿರುದ್ಧ ಸಮರ ಸಾರಿದೆ.
ಈ ಕಾಯ್ದೆಯನ್ವಯ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ, ದೇಶದ್ರೋಹ ಚಟುವಟಿಕೆಗಳು ಮತ್ತು ಭಯೋತ್ಪಾದನೆಗೆ ಕುಮ್ಮಕ್ಕು, ಪ್ರೋತ್ಸಾಹ, ಪ್ರಾಯೋಜಕತ್ವ ನೀಡುವ ಯಾವುದೇ ವ್ಯಕ್ತಿಯನ್ನು ‘ಭಯೋತ್ಪಾದಕ’ ಎಂದು ಘೋಷಿಸಲು ಅವಕಾಶವಿದೆ. ಹಾಗೂ ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಲು ಅವಕಾಶವಿದೆ.
* ರಾಷ್ಟ್ರೀಕೃತ ಬ್ಯಾಂಕುಗಳ ವಿಲೀನ
- ಸಣ್ಣಪುಟ್ಟಬ್ಯಾಂಕುಗಳನ್ನು ಸೇರಿಸಿ ಬೃಹತ್ ಬ್ಯಾಂಕ್ ಸ್ಥಾಪನೆ
ಕರ್ನಾಟಕದ ಸಿಂಡಿಕೇಟ್ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್ ಸೇರಿದಂತೆ ಸಾರ್ವಜನಿಕ ವಲಯದ 10 ಬ್ಯಾಂಕುಗಳನ್ನು ಕೇಂದ್ರ ಸರ್ಕಾರ ವಿಲೀನಗೊಳಿಸಿದ್ದು, ಇದೇ 2020ರ ಏಪ್ರಿಲ್ 1ರಿಂದ ಈ ವಿಲೀನ ಪ್ರಕ್ರಿಯೆ ಜಾರಿಯಾಗಿದೆ. ಇದರಿಂದ ದೇಶದಲ್ಲಿ ಒಟ್ಟು 5 ದೊಡ್ಡ ಬ್ಯಾಂಕುಗಳು ಹೊರಹೊಮ್ಮಿದಂತಾಗಿದೆ.
ಕೇಂದ್ರ ಸರ್ಕಾರ ಮೊದಲ ಪ್ರಯತ್ನದಲ್ಲಿ ಎಸ್‌ಬಿಐ ಹಾಗೂ ಅದರ ಸಹವರ್ತಿ ಬ್ಯಾಂಕುಗಳ ವಿಲೀನ ಮಾಡಿತ್ತು. ನಂತರ ಎರಡನೇ ಪ್ರಯತ್ನದಲ್ಲಿ ಬ್ಯಾಂಕ್ ಆಫ್ ಬರೋಡ, ದೇನಾ ಮತ್ತು ವಿಜಯಾ ಬ್ಯಾಂಕುಗಳನ್ನು ವಿಲೀನಗೊಳಿಸಿತ್ತು. ಅನಂತರ 2019ರ ಆಗಸ್ಟ್‌ನಲ್ಲಿ ಮತ್ತೊ ಮೂರನೇ ಹಂತದಲ್ಲಿ ದೇಶದ ಪ್ರಮುಖ 10 ಬ್ಯಾಂಕುಗಳನ್ನು 4 ಭಾಗಗಳಾಗಿ ವಿಲೀನಗೊಳಿಸಿ ಮತ್ತೊಂದು ಸುತ್ತಿನ ಮಹಾ ವಿಲೀನ ಪ್ರಕ್ರಿಯೆಗೆ ಕೈಹಾಕಿತು. ಅದರಂತೆ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್(ಒಬಿಸಿ) ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನ್ ಬ್ಯಾಂಕ್ ಜತೆ ವಿಲೀನವಾಗಿವೆ. ಪರಿಣಾಮ ಎಸ್‌ಬಿಐ ಬಳಿಕ ಎರಡನೇ ಅತಿ ದೊಡ್ಡ ಪಿಎಸ್‌ಯು ಬ್ಯಾಂಕ್ ಆಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೊರಹೊಮ್ಮಿದೆ. ಹಾಗೆಯೇ ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಜೊತೆಗೆ ವಿಲೀನವಾಗಿದೆ. ಯೂನಿಯನ್ ಬ್ಯಾಂಕ್ ಜೊತೆ ಕಾರ್ಪೋರೇಷನ್ ಬ್ಯಾಂಕ್ ಮತ್ತು ಆಂಧ್ರ ಬ್ಯಾಂಕ್ ವಿಲೀನವಾಗಿವೆ.
ಸಾರ್ವಜನಿಕ ಬ್ಯಾಂಕುಗಳನ್ನು ವಿಲೀನಗೊಳಿಸಿ ಜಾಗತಿಕ ಮಟ್ಟದ ಬೃಹತ್ ಬ್ಯಾಂಕುಗಳನ್ನಾಗಿ ಮಾಡುವುದು, ವಸೂಲಾಗದ ಸಾಲಗಳಿಂದ ಬ್ಯಾಂಕುಗಳಿಗೆ ಮುಕ್ತಿ ನೀಡುವುದು ಮತ್ತು ಬ್ಯಾಂಕುಗಳ ಅನಗತ್ಯ ವೆಚ್ಚವನ್ನು ತಗ್ಗಿಸುವುದು ಕೇಂದ್ರ ಸರ್ಕಾರದ ಬ್ಯಾಂಕುಗಳ ವಿಲೀನದ ಹಿಂದಿನ ಮಹತ್ತರ ಉದ್ದೇಶವಾಗಿದೆ.
* ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ
- ದೇಶದ ಪ್ರತಿ ರೈತರ ಬ್ಯಾಂಕ್ ಖಾತೆಗೆ ವರ್ಷಕ್ಕೆ .6000
ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಸಾರಿತ್ತು. ಅದರಂತೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಅಧಿಕಾರಕ್ಕೆ ಬಂದ ನಂತರದ ಮೊದಲ ಬಜೆಟ್‌ನಲ್ಲಿ ಮೋದಿ ಸರ್ಕಾರ ಘೋಷಿಸಿತು. ಈ ಯೋಜನೆ ಅಡಿಯಲ್ಲಿ ದೇಶದ 14 ಕೋಟಿ ರೈತರ ಬ್ಯಾಂಕ್ ಖಾತೆಗೆ ಪ್ರತಿ ವರ್ಷ 6000 ರು. ನೆರವು ನೀಡಲಾಗುತ್ತಿದೆ. ಇದುವರೆಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ 8000 ಕೋಟಿ ಜಮಾ ಆಗಿದೆ.
ಈ ಯೋಜನೆ ಕೇವಲ ದುರ್ಬಲ ರೈತ ಕುಟುಂಬಗಳಿಗೆ ಪೂರಕ ಆದಾಯ ಒದಗಿಸುವ ಭರವಸೆ ಮಾತ್ರವಲ್ಲದೆ, ವಿಶೇಷವಾಗಿ ರೈತರ ತುರ್ತು ಅಗತ್ಯಗಳಿಗೆ ನೆರವಾಗುತ್ತಿದೆ. ಮೊದಲಿಗೆ ಎರಡು ಹೆಕ್ಟೇರ್ ವರೆಗೆ ಭೂಮಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ ಈ ಯೋಜನೆಯ ಲಾಭ ದೊರೆಯಲಿದೆ ಎಂದು ಹೇಳಲಾಗಿತ್ತು. ಆದರೆ ಅನಂತರದಲ್ಲಿ 2 ಕೋಟಿ ಹೆಚ್ಚುವರಿ ರೈತರನ್ನೂ ಈ ಯೋಜನೆಯ ವ್ಯಾಪ್ತಿಗೆ ಸೇರಿಸಲಾಯಿತು.
* ರೈತರು, ವ್ಯಾಪಾರಿಗಳು ಮತ್ತು ಕಾರ್ಮಿಕರಿಗೆ ಪಿಂಚಣಿ
- ಅಸಂಘಟಿತ ವಲಯದವರಿಗೂ ನಿವೃತ್ತಿ ನಂತರ ಜೀವನಕ್ಕೆ ಭದ್ರತೆ
ರೈತರಿಗಾಗಿ ಕಿಸಾನ್ ಸಮ್ಮಾನ್ ಯೋಜನೆ ಜಾರಿ ಮಾಡಿದ್ದು ಮಾತ್ರವಲ್ಲದೆ, ಪ್ರಧಾನ ಮಂತ್ರಿ ಕಿಸಾನ್ ಪಿಂಚಣಿ ಯೋಜನೆಯನ್ನೂ ಕೇಂದ್ರ ಸರ್ಕಾರ ಜಾರಿ ಮಾಡಿದೆ. ಈ ಮೂಲಕ ಎಲ್ಲಾ ರೈತರನ್ನೂ ಪಿಂಚಣಿ ಯೋಜನೆ ವ್ಯಾಪ್ತಿಗೆ ತಂದಿದೆ.
60 ವರ್ಷ ವಯಸ್ಸು ಮೀರಿದ ಸಣ್ಣ ಮತ್ತು ಅತಿ ಸಣ್ಣ ಕೃಷಿ ಹಿಡುವಳಿದಾರರಿಗೆ ಮಾಸಿಕ 3000 ರು. ಪಿಂಚಣಿ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಹಾಗೆಯೇ 60 ವರ್ಷ ಮೀರಿದ ವ್ಯಾಪಾರಿಗಳಿಗೆ ಮಾಸಿಕ 3000ರು. ಪಿಂಚಣಿ ಖಾತ್ರಿ ನೀಡುವ ಯೋಜನೆಯನ್ನೂ ಕೇಂದ್ರ ಸರ್ಕಾರ ಜಾರಿ ಮಾಡಿದೆ. ಇದರಿಂದ ಸುಮಾರು 3 ಕೋಟಿ ಚಿಲ್ಲರೆ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ.
ಜೊತೆಗೆ ‘ಪ್ರಧಾನ ಮಂತ್ರಿ ಶ್ರಮಯೋಗಿ ಮನ್‌ಧನ್ ಯೋಜನೆ’ ಅಡಿಯಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೂ ತಿಂಗಳಿಗೆ 3000 ರು. ಪಿಂಚಣಿ ನೀಡುವ ಮಹತ್ವದ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿ ಜಾರಿ ಮಾಡಿದೆ. 18-40 ವರ್ಷದೊಳಗಿನ ಕಾರ್ಮಿಕರು ಪಿಂಚಣಿಗೆ ನೋಂದಣಿ ಮಾಡಿಸಲು ಅರ್ಹರಾಗಿದ್ದು, ಅವರಿಗೆ 60 ವರ್ಷ ತುಂಬಿದ ಬಳಿಕ ಪಿಂಚಣಿ ಪಾವತಿ ಆರಂಭವಾಗುತ್ತದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಕೇಂದ್ರ ಸರ್ಕಾರ ಜಾರಿಗೆ ತಂದ ಈ ಯೋಜನೆಯ ಉದ್ದೇಶವಾಗಿದೆ.