Asianet Suvarna News Asianet Suvarna News

ಮೋದಿ ಒಡನಾಟದಿಂದ ಬೀದರ್‌ ಅಭಿವೃದ್ಧಿ ನಾಗಾಲೋಟ: ಸಂಸದ ಭಗವಂತ ಖೂಬಾ

ಮೋದಿ ಸರಕಾರ 2.0ಕ್ಕೆ ಮೇ.30ಕ್ಕೆ ಒಂದು ವರ್ಷ ಪೂರೈಸಿದೆ. ಈ ಅವಧಿಯಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರಗಳ ಕುರಿತು ಸಂದರ್ಶನದಲ್ಲಿ ಬೀದರ್ ಸಂಸದ ಭಗವಂತ ಖೂಬಾ ಆಡಿದ ಮಾತುಗಳು...

interview with Bidar bjp mp Bhagwanth Khuba on First anniversary of PM Modi Govt 2.0
Author
Bengaluru, First Published Jun 1, 2020, 3:01 PM IST

ಬೀದರ್‌ ಲೋಕಸಭಾ ಕ್ಷೇತ್ರದಿಂದ ಉತ್ತುಂಗದ ರಾಜಕೀಯ ಜೀವನ ಆರಂಭಿಸಿರುವ ಸಂಸದ ಭಗವಂತ ಖೂಬಾ, ಜಿಲ್ಲೆಯ ಬಹು ದಶಕಗಳ ಕನಸುಗಳಾಗಿದ್ದ ನಾಗರಿಕ ವಿಮಾನಯಾನ, ಬೀದರ್‌-ಕಲಬುರಗಿ ರೈಲು ಮಾರ್ಗ, ರಾಷ್ಟ್ರೀಯ ಹೆದ್ದಾರಿಗಳು ಹೀಗೆಯೇ ಹಲವಾರು ಯೋಜನೆಗಳ ಮೂಲಕ ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಸಫಲವಾಗುತ್ತ ಸಾಗಿದ್ದಾರೆ.

ಸಿಎಎ, ರಾಮ ಮಂದಿರ, ತ್ರಿವಳಿ ತಲಾಖ್, ಆರ್ಟಿಕಲ್ 370: ಮೋದಿ 2.0: 1 ವರ್ಷದ ಸಾಧನೆಗಳು!

ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಮತ್ತಷ್ಟುಗುರಿಗಳನ್ನು ಹಾಕಿಕೊಂಡು ಮುನ್ನುಗ್ಗಿದ್ದಾರೆ. ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಒಂದು ವರ್ಷದ ಅವಧಿಯಲ್ಲಿ ಅವರ ಸಾಧನೆಗಳೇನು ಎಂಬ ಕುರಿತಾಗಿ ಕನ್ನಡಪ್ರಭಕ್ಕೆ ಸಂದರ್ಶನ ನೀಡಿದ್ದಾರೆ.

* ಪ್ರಧಾನಿ, ಗೃಹ ಸಚಿವರೊಂದಿಗಿನ ಸಂಬಂಧ ಹೇಗೆ? ಇದರಿಂದ ಕ್ಷೇತ್ರಕ್ಕೆ ಆಗಿರುವ ಲಾಭಗಳೇನು?
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಈ ಹಿಂದಿನ ಗೃಹ ಸಚಿವ ರಾಜನಾಥ ಸಿಂಗ್‌ ಹಾಗೂ ಇಂದಿನ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಅತ್ಯುತ್ತ ಒಡನಾಟ ಹೊಂದಿದ್ದೇನೆ ಇದರಿಂದಾಗಿ ನಮ್ಮ ಕ್ಷೇತ್ರವನ್ನು ಉಡಾನ್‌ ಯೋಜನೆಯಡಿ ಸೇರಿಸಿಕೊಳ್ಳಲಾಯಿತು, ಬೀದರ್‌ನಿಂದ ನಾಗರಿಕ ವಿಮಾನಯಾವ ಆರಂಭವಾಯಿತು, ರೈಲ್ವೆ ಯೋಜನೆಗಳ ಮಹಾಪೂರವೇ ಹರಿಯಿತು, ರಾಷ್ಟ್ರೀಯ ಹೆದ್ದಾರಿಗಳೂ ಸಿಕ್ಕವು.

* ಒಂದು ವರ್ಷದ ಅವಧಿಯಲ್ಲಿ ನಿಮ್ಮ ಸಾಧನೆಗಳೇನು?
ಕಳೆದ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನತೆಯು ಪ್ರಚಂಡ ಬಹುಮತದಿಂದ ಗೆಲ್ಲಿಸಿದರು. ಜನರ ನಿರೀಕ್ಷೆಯಂತೆ ನಾನು ಕೂಡ ನನ್ನ ಸೇವೆಯನ್ನು ಮಾಡುತ್ತಿದ್ದೇನೆ. ಜಿಲ್ಲೆಯ ಕಬ್ಬು ಬೆಳೆಗಾರರ ಸಂಕಷ್ಟಅರಿತು ಪ್ರತಿ ಟನ್‌ಗೆ 1800 ರು.ಗಳನ್ನು ನೀಡುತ್ತಿದ್ದ ಕಾರ್ಖಾನೆಗಳು 2250 ರು.ಗಳನ್ನು ನೀಡುವಂತೆ ಮಾಡಿದ್ದು ರೈತನ ಮಗನಾಗಿ ರೈತರ ಪರನಿಂತು ಅವರಿಗೆ ಉತ್ತಮ ಬೆಲೆ ಒದಗಿಸಿಕೊಟ್ಟಿರುವುದು ನನಗೆ ಆತ್ಮ ಸಂತೃಪ್ತಿ ನೀಡಿದೆ.

* ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರದ ಸಾಧನೆ ಏನು?
ಆಯುಷ್ಮಾನ ಭಾರತ ಯೋಜನೆಯಡಿ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಆಯುಷ್ಮಾನ ಭಾರತ ಕಾರ್ಡ್‌ಗಳನ್ನು ಮಾಡಲು ಕ್ರಮ ಕೈಗೊಳ್ಳಲಾಗಿದೆ, ಜೊತೆಗೆ ಸಿಎಸ್‌ಸಿ ಕೇಂದ್ರಗಳ ಮೂಲಕವು ಜನರಿಗೆ ಕಾರ್ಡುಗಳು ಪಡೆದುಕೊಳ್ಳಲು ಅವಕಾಶ ಕಲ್ಪಿಸಿದ್ದು ಇಲ್ಲಿಯವರೆಗೆ 5.5ಲಕ್ಷ ಕಾರ್ಡ್‌ಗಳನ್ನು ಮಾಡಿಕೊಡಲಾಗಿದೆ. ಇಲ್ಲಿಯವರೆಗೆ ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1 ಲಕ್ಷಕ್ಕಿಂತ ಹೆಚ್ಚು ಜನ ಆಯುಷ್ಮಾನ ಭಾರತದಡಿ ಚಿಕಿತ್ಸೆ ಪಡೆದಿದ್ದಾರೆ.

* ಬೀದರ್‌ಗೆ ವಿಮಾನಯಾನ ಕಲ್ಪಿಸುವಲ್ಲಿ ನಿಮ್ಮ ಪಾತ್ರವೇನು?
ನಗರದಲ್ಲಿ ದೇಶದ ಮಹತ್ವಾಕಾಂಕ್ಷಿ ಯುದ್ಧ ವಿಮಾನ ತರಬೇತಿ ಕೇಂದ್ರವಿದ್ದು ನಾಗರಿಕ ವಿಮಾನಯಾನ ಪ್ರಾರಂಭಿಸುವದು ಜಿಲ್ಲೆಯ ಜನತೆಯ ಜಶಕಗಳ ಕನಸಾಗಿತ್ತು. ಇಲ್ಲಿ ನಾಗರಿಕ ವಿಮಾನಯಾನ ಪ್ರಾರಂಭಿಸಲು ಅನೇಕ ಏಳು ಬೀಳುಗಳನ್ನು ಕಂಡಿದ್ದೇನೆ. ಕೊನೆಗೂ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವರು, ವಿಮಾನಯಾನ ಸಚಿವರು, ರಾಜ್ಯದ ಮುಖ್ಯಮಂತ್ರಿ, ಸಚಿವರು ಶಾಸಕರ ಸಹಕಾರದಿಂದ ಬೀದರ್‌ನಿಂದ ನಾಗರಿಕ ವಿಮಾನಯಾನ ಆರಂಭವಾಗಿದ್ದು ಅತ್ಯಂತ ಸಂತಸದ ಮತ್ತು ಯಶಸ್ವಿ ಕಾರ್ಯ.

* ಜಿಲ್ಲೆಯ ಹೆದ್ದಾರಿ ಅಭಿವೃದ್ಧಿಗೆ ನೀವೆಷ್ಟುಪ್ರಯತ್ನಪಟ್ಟಿದ್ದೀರಿ?
15ನೇ ಲೋಕಸಭಾ ಸಾಲಿನಲ್ಲಿಯೇ ನಾನು ಸಚಿವರ ಬೆನ್ನುಬಿದ್ದು, 12 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಪರಿವರ್ತಿಸಿಕೊಳ್ಳುವಲ್ಲಿ , ಮಂಜೂರಾತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೆ, ಅದರಂತೆ ಅದರಲ್ಲಿ 2 ರಾಜ್ಯ ಹೆದ್ದಾರಿಗಳು ರಾಷ್ಟ್ರೀಯ ಹೆದ್ದಾರಿಗಳಾಗಿ ಪರಿವರ್ತನೆಯಾಗುವ ಕಾರ್ಯ ಪ್ರಾರಂಭಗೊಂಡಿವೆ, ಬೀದರ್‌ ಹುಮನಾಬಾದ್‌ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಕೆಲವೊಂದು ತಾಂತ್ರಿಕ ತೊಡಕುಗಳು ಬಂದು ಕಾಮಗಾರಿ ಅರ್ಧಕ್ಕೆ ನಿಂತಿತ್ತು ಆದರೆ ಮೇಲಿಂದ ಮೇಲೆ ಕೇಂದ್ರ ಸಚಿವ ನಿತಿನ್‌ ಗಡ್ಕರಿಯವರಿಗೆ ಭೇಟಿ ಮಾಡಿ ಈ ತೊಡಕನ್ನು ನಿವಾರಣೆ ಮಾಡಿಸಿಕೊಂಡಿದ್ದೇನೆ, ಈ ರಸ್ತೆಗೆ ಈಗ ಪುನಃ ಟೆಂಡರ ಕರೆಯಲಾಗಿದ್ದು, ಕೆಲವೆ ದಿನಗಳಲ್ಲಿ ಮತ್ತೆ ಕಾಮಗಾರಿ ಪ್ರಾರಂಭವಾಗಲಿದೆ.

ಬೀದರ್‌ ಕಮಲನಗರ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯೂ ಪ್ರಗತಿಯಲ್ಲಿದೆ, ಬೀದರ್‌ - ಔರಾದ್‌ ರಾಷ್ಟ್ರೀಯ ಹೆದ್ದಾರಿಗೆ ಟೆಂಡರ್‌ ಕರೆಯಲಾಗಿದ್ದು, ಲಾಕಡೌನ್‌ ಮುಗಿದ ಕೂಡಲೇ ಕಾಮಗಾರಿ ಪ್ರಾರಂಭಕ್ಕೆ ಚಾಲನೆ ಸಿಗಲಿದೆ. ಉಳಿದ ರಸ್ತೆಗಳು ಸಹ ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಪ್ರಾರಂಭಗೊಳ್ಳಲಿವೆ.

* ಬೀದರ್‌ನ ರೈಲು ಸೇವೆ ಅಭಿವೃದ್ಧಿಗೆ ಮೋದಿ ಸರ್ಕಾರದ ಕೊಡುಗೆ ಏನು?
ರೈಲ್ವೆ ಇಲಾಖೆಯಡಿ ಕಳೆದ ಸಾಲಿನಲ್ಲಿಯೇ ಅನೇಕ ಐತಿಹಾಸಿಕ ಸಾಧನೆಗಳನ್ನು ಮಾಡಿದ್ದೇನೆ. ಸ್ವಾತಂತ್ರ್ಯ ಬಂದ ನಂತರ ಮೊಟ್ಟಮೊದಲ ಬಾರಿಗೆ ಜಿಲ್ಲೆಗೆ 5 ವರ್ಷಗಳಲ್ಲಿ ಒಟ್ಟು 13 ಹೊಸ ರೈಲುಗಳು ಬಂದಿವೆ. ಜೊತೆಗೆ ಬಹು ವರ್ಷಗಳ ಕನಸಾಗಿದ್ದ ಬೀದರ್‌-ಕಲಬುರಗಿ ರೈಲ್ವೆ ಲೈನ್‌ ಅನ್ನು ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಉದ್ಘಾಟನೆಗೊಳಿಸಿ ಐತಿಹಾಸಿಕ ದಿನವನ್ನಾಗಿ ಮಾಡಿರುವುದು ಜನತೆ ಮರೆತಿಲ್ಲ.

ಕೇಂದ್ರ ರೈಲ್ವೆ ಸಚಿವಾಲಯದಿಂದ ಬೀದರ್‌ ನಾಂದೇಡ ವಾಯಾ ಔರಾದ ಒಟ್ಟು 2152ಕೋಟಿ ರು. ವೆಚ್ಚದಲ್ಲಿ 155 ಕಿ.ಮೀ. ಹೊಸ ರೈಲ್ವೆ ಯೋಜನೆಯನ್ನು ಕೇಂದ್ರ ರೈಲ್ವೆ ಸಚಿವಾಲಯ ಮಂಜೂರಾತಿ ನೀಡಿದೆ. ಈ ಸಾಲಿನಲ್ಲಿಯೂ ರೈಲ್ವೆ ಸಚಿವರಿಗೆ ಭೇಟಿ ಮಾಡಿ, ಬೀದರ್‌ನಿಂದ ದೆಹಲಿಗೆ, ಬೀದರ್‌ - ಹುಬ್ಬಳ್ಳಿ, ಧಾರವಾಡ, ಬೆಳಗಾವಿಗೆ ಹೊಸ ರೈಲುಗಳಿಗೆ ಬೇಡಿಕೆಯನ್ನು ಇಟ್ಟಿದ್ದೇನೆ.

ಬೀದರ್‌-ಯಶವಂತಪುರ ವಾಯಾ ಕಲಬುರಗಿ ಮಾರ್ಗಕ್ಕೆ ಈಗಾಗಲೇ ಮಂಜೂರಾತಿ ಸಿಕ್ಕಿದೆ. ಸಧ್ಯ ವಾರದಲ್ಲಿ 4 ದಿನ ಈ ಮಾರ್ಗವಾಗಿ ರೈಲು ಚಲಿಸಲು ಮಂಜೂರಾತಿ ಸಿಕ್ಕಿದೆ. ಲಾಕಡೌನ್‌ ಮುಗಿದ ಬಳಿಕ ಈ ಮಾರ್ಗದಿಂದ ರೈಲು ಪ್ರಾರಂಭವಾಗಲಿದೆ.

* ಉದ್ಯಮ ಕ್ಷೇತ್ರದ ಅಭಿವೃದ್ಧಿಗೆ ಏನು ಕ್ರಮ ಕೈಗೊಂಡಿದ್ದೀರಿ?
ಕ್ಷೇತ್ರದಲ್ಲಿ ಕೈಗಾರಿಕೊದ್ಯಮಗಳು ಬೆಳೆದು, ಕ್ಷೇತ್ರದ ಯುವಕರು ಇಲ್ಲಿಯೇ ಉದ್ಯೋಗ ಪಡೆಯಲಿ ಎನ್ನುವ ಉದ್ದೇಶದಿಂದ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಉದ್ಯಮಿಗಳೊಂದಿಗೆ, ಅಧಿಕಾರಿಗಳೊಂದಿಗೆ, ಸಭೆ ನಡೆಸಲಾಗಿದೆ ಮತ್ತು ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ, ಕೈಗಾರಿಕೆಗಳಿಗೆ ಅವಶ್ಯಕರುವ ಸಿಇಪಿಟಿ ನಿರ್ಮಾಣಕ್ಕೆ ವೇಗ ನೀಡಿದ್ದೇನೆ. ಹೈದ್ರಾಬಾದ್‌ನಲ್ಲಿ ಮತ್ತು ಹುಬ್ಬಳ್ಳಿಯಲ್ಲಿ ನಡೆದ ಇನ್ವೆಸ್ಟಕರ್ನಾಟಕದಲ್ಲಿ ಭಾಗವಹಿಸಿದ್ದು ಲೋಕಸಭಾ ಕ್ಷೇತ್ರದಲ್ಲಿ ಕೆಎನ್‌ ಫಾರ್ಮ ಇಕ್ವಿಪ್‌ಮೆಂಟ್ಸ್‌ ಪ್ರೈ.ಲಿ. ಹೈದ್ರಾಬಾದ ಮತ್ತು ಕೃಷಿ ಸೇವಾ ಆಗ್ರೋ ಸೋಲಾಪೂರ ನವರು ಒಟ್ಟು 115 ಕೋಟಿ ರು. ವೆಚ್ಚದಲ್ಲಿ ಕೃಷಿ ಉಪಕರಣಗಳ ತಯಾರಿಕೆ ಘಟಕ ಸ್ಥಾಪನೆಗೆ ಮುಂದಾಗಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಒಡಂಬಡಿಕೆ ಮಾಡಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಜಿಲ್ಲೆಗೆ ಸುಮಾರು 2000 ಕೋಟಿ ರು. ಬಂಡವಾಳ ಬರುವ ನಿರೀಕ್ಷೇಯಿದೆ.

* ಕೊರೋನಾ ಸಂಕಷ್ಟದ ದಿನಗಳಲ್ಲಿ ಜನರಿಗಾಗಿ ಸಂಸದರ ಕಾರ್ಯವೇನು?
ಕೋವಿಡ್‌-19 ವೈರಸ್‌ನಿಂದ ಜಗತ್ತೆ ಒದ್ದಾಡುತ್ತಿದೆ, ಅದರಂತೆ ನಮ್ಮ ದೇಶದಲ್ಲಿಯೂ ಸಾವಿರಾರು ಜನ ಕೋರೋನಾ ಸೋಂಕಿಗೆ ಸಿಲುಕಿದ್ದಾರೆ. ಆದರೆ ಪ್ರಧಾನಮಂತ್ರಿಗಳ ಧೃಢ ನಿರ್ಧಾರದಿಂದ ಮುಂದುವರೆದ ದೇಶಗಳಿಗೆ ಹೋಲಿಸಿದರೆ, ನಮ್ಮ ದೇಶದ ಜನ ಹೆಚ್ಚು ಸುರಕ್ಷಿತವಾಗಿದ್ದಾರೆ ಎಂದು ಹೇಳಲು ಸಂತೋಷವಾಗುತ್ತದೆ. ಒಬ್ಬ ಜನಪ್ರತಿನಿಧಿಯಾಗಿ ಕ್ಷೇತ್ರದ ಜನತೆಯನ್ನು ಕೊರೋನಾದಿಂದ ರಕ್ಷಿಸಲು, ನಾನು ಸರ್ಕಾರಕ್ಕೆ ನನ್ನ 2 ತಿಂಗಳ ಸಂಬಳ ಮತ್ತು ಸಂಸದರ ಪ್ರದೇಶಾಭಿವೃದಿ ನಿಧಿಯಡಿ 1ಕೋಟಿ ರು. ದೇಣಿಗೆಯನ್ನು ನೀಡಿದ್ದೇನೆ. ಜೊತೆಗೆ ಅಧಿಕಾರಿಗಳ ಜೊತೆ ಕ್ಷೇತ್ರದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸಭೆ ತೆಗೆದುಕೊಂಡು ಜನರ ಸುರಕ್ಷತೆಗಾಗಿ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ಪಡೆದುಕೊಂಡು, ಅಗತ್ಯ ಸಲಹೆಗಳು ನೀಡಿದ್ದೇನೆ.

ನನ್ನ ಕಚೇರಿಯಿಂದ ನಿತ್ಯ ಜನರ ಸಮಸ್ಯೆಗಳನ್ನು ಆಲಿಸಿ, ಅವರಿಗೆ ಸಿಗಬೇಕಾದ ಸರ್ಕಾರದ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದೇನೆ. ನಮ್ಮ ಪ್ರಾಣದ ಹಂಗನ್ನು ತೊರೆದು, ನಮ್ಮೆಲ್ಲರ ರಕ್ಷಣೆ ಮಾಡುತ್ತಿರುವ ಕೊರೋನಾ ವಾರಿಯರ್ಸ್‌ಗಳಾದ ವೈದ್ಯರು, ಶೂಶ್ರೂ‚ಷಕರು, ಅಧಿಕಾರಿಗಳು, ಪೊಲೀಸರು, ಸ್ವಚ್ಛತಾ ಸಿಬ್ಬಂದಿಗಳು, ಬ್ಯಾಂಕ್‌ ಸಿಬ್ಬಂದಿಗಳು ಮತ್ತು ಜಿಲ್ಲಾಡಳಿತಕ್ಕೆ ಜನರ ಸಹಿಯುಳ್ಳ ಅಭಿನಂದನಾ ಪತ್ರವನ್ನು ನೀಡಿದ್ದೇನೆ.

ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ, ಜನಧನ ಯೋಜನೆಯಒಟ್ಟು 3,16,704 ಮಹಿಳಾ ಖಾತೆಗೆಳಿಗೆ ಒಟ್ಟು 15.83ಕೋಟಿ ರು. ಪರಿಹಾರ ಜಮೆಯಾಗಿದೆ. ಕಿಸಾನ ಸಮ್ಮಾನ ಯೋಜನೆಯಡಿ ಒಟ್ಟು 1,52,900 ರೈತರಿಗೆ 30.58ಕೋಟಿ. ರು. ಜಮೆಯಾಗಿದೆ.

 

Follow Us:
Download App:
  • android
  • ios