ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ, ಇಂರ್ಟನೆಟ್ ಸ್ಥಗಿತ, ಮತ್ತೆ ಕರ್ಫ್ಯೂ ಜಾರಿ!
ಭಾರಿ ಹಿಂಸಾಚಾರ, ದಂಗೆಯಿಂದ ಶಾಂತವಾಗಿದ್ದ ಮಣಿಪುರದಲ್ಲಿ ಮತ್ತೆ ಪ್ರತಿಭಟನೆ, ಹಿಂಸಾಚಾರ ಭುಗಿಲೆದ್ದಿದೆ. ಪ್ರತಿಭಟನಾಕಾರರು ಸಚಿವರ ಮನೆಗೆ ನುಗ್ಗಿದ್ದಾರೆ. 6 ಮಂದಿ ಒತ್ತೆಯಾಳಾಗಿಟ್ಟು ಹತ್ಯೆ ಮಾಡಿದ ಘಟನೆ ಹಿಂಸಾರೂಪಕ್ಕೆ ತಿರುಗಿದೆ. ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದ್ದು ಕರ್ಫ್ಯೂ ಜಾರಿ ಮಾಡಲಾಗಿದೆ
ಇಂಫಾಲ(ನ.16) ಮಣಿಪುರದ ಹಿಂಸಾಚಾರ ಭಾರತ ಮಾತ್ರವಲ್ಲ, ವಿಶ್ವಾದ್ಯಂತ ಸದ್ದು ಮಾಡಿತ್ತು. ಹರಸಾಹಸ ಬಳಿಕ ಮಣಿಪುರ ತಕ್ಕಮಟ್ಟಿಗೆ ಶಾಂತವಾಗಿತ್ತು. ಆದರೆ ಇದೀಗ ಮತ್ತೆ ಮಣಿಪುರದಲ್ಲಿ ಹಿಂಸಾಚಾರ ಶುರುವಾಗಿದೆ. ಮಣಿಪುರದ ಬುಡಕಟ್ಟ ಸಮುದಾಯದ ಒಂದು ಪಂಗಡದ 6 ಮಂದಿಯನ್ನು ಹತ್ಯೆ ಮಾಡಿ ಮೃತದೇಹವನ್ನು ಜಿರಿಬಾಮ್ ಬಳಿ ಎಸೆಯಲಾಗಿತ್ತು. 6 ಮಂದಿ ಮೃತದೇಹ ಪತ್ತೆಯಾಗುತ್ತಿದ್ದಂತೆ ಪ್ರತಿಭಟನೆ ಆರಂಭಗೊಂಡಿದೆ. ಇದೀಗ ಸಚಿವರ ಮನೆಗೆ ನುಗ್ಗಿದ ಪ್ರತಭಟನಾಕಾರರು ದಾಂಧಲೆ ನಡೆಸಿದ್ದಾರೆ. ಮೂವರು ಶಾಸಕರ ಮನೆಗೂ ನುಗ್ಗಿದ್ದಾರೆ. ಎಲ್ಲೆಡೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಹೀಗಾಗಿ ಮಣಿಪುರ ಸರ್ಕಾರ 7 ಜಿಲ್ಲೆಯಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿದೆ. ಕರ್ಫ್ಯೂ ಮತ್ತೆ ಜಾರಿ ಮಾಡಿದೆ.
ಮಣಿಪುರದ ಉಗ್ರರ ಗುಂಪು 6 ಮಂದಿಯನ್ನು ಅಪಹರಿಸಿ ಹತ್ಯೆ ಮಾಡಿತ್ತು. ಸ್ಥಳೀಯ ಉಗ್ರರ ಅಪಹರಣದ ಬೆನ್ನಲ್ಲೇ ಪ್ರತಿಭಟನೆಗಳು ಆರಂಭಗೊಂಡಿತ್ತು. ಯಾವಾಗ 6 ಮಂದಿ ಮೃತದೇಹ ಪತ್ತೆಯಾಯಿತೋ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಇಂಫಾಲ್ ವೆಸ್ಟ್, ಇಂಫಾಲ್ ಈಸ್ಟ್, ಬಿಶ್ನುಪುರ್, ತೌಬಲ್, ಕಾಕ್ಚಿಂಗ್, ಕಾಂಗ್ಪೊಕ್ಪಿ, ಚುರಾಚಂದಾಪುರ ಭಾಗದಲ್ಲಿ ಎರಡು ದಿನಗಳ ಕಾಲ ಇಂಟರ್ನಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಜೊತೆಗೆ ಕರ್ಫ್ಯೂ ಜಾರಿ ಮಾಡಲಾಗಿದೆ. ಇದೇ ಚುರಾಚಂದಾಪುರ ಕಳೆದ ವರ್ಷ ನಡೆದ ಭಾರಿ ಹಿಂಸಾಚಾರದ ಕೇಂದ್ರ ಬಿಂದುವಾಗಿತ್ತು. ನವೆಂಬರ್ 16 ಸಂಜೆ 5.15ರಿಂದ ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇಂಫಾಲ ವೆಸ್ಟ್ ಜಿಲ್ಲಾಧಿಕಾರಿ ಹೇಳಿದ್ದಾರೆ.
ಮಾದಕದ್ರವ್ಯದ ಸುನಾಮಿಗೆ ನಲುಗಿತೇ ಈಶಾನ್ಯ ಭಾರತವೆಂಬ ಸ್ವರ್ಗ?
ಸಮುದಾಯದ ಕೆಲವರನ್ನು ಅಪಹರಿಸಿ ಹತ್ಯೆ ಮಾಡಿದ ಘಟನೆ ಖಂಡಿಸಿ ಮತ್ತೊಂದು ಸಮುದಾಯ ಭಾರಿ ಪ್ರತಿಭಟನೆ ಆರಂಭಿಸಿದೆ. ಮಣಿಪುರ ಸಚಿವರ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಮೂವರು ಶಾಸಕರ ಮನೆಗೂ ಪ್ರತಿಭಟನಾಕಾರರು ನುಗ್ಗಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದಿರುವ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್, ಕೂಡಲೇ ತಪ್ಪಿತಸ್ಥರ ಬಂಧಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಮಣಿಪುರ ಗೃಹ ಸಚಿವಾಲಯ ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕಠಿಣ ಕ್ರಮಕ್ಕೆ ಮುಂದಾಗಿದೆ. ಹೆಚ್ಚುವರಿ ಪೊಲೀಸ್ ಹಾಗೂ ಅರೆಸೇನಾ ತುಕಡಿ ನಿಯೋಜನೆ ಮಾಡಲಾಗಿದೆ. ಮಣಿಪುರ ಘಟನೆ ಹಿಂಸಾರೂಪಕ್ಕೆ ತಿರುಗುತ್ತಿದ್ದಂತೆ ಕೇಂದ್ರ ಗೃಹ ಸಚಿವಾಲಯ ಮಾಹಿತಿ ಪಡೆದುಕೊಂಡಿದೆ. ಮಣಿಪುರದಲ್ಲಿ ಶಾಂತಿ ಕಾಪಾಡಲು ಕೇಂದ್ರದಿಂದ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ಪರಿಸ್ಥಿತಿ ಬಿಗಡಾಸುತ್ತಿದೆ. ಕಳೆದ ವರ್ಷ ನಡೆದ ಭಾರಿ ಹಿಂಸಾಚಾರದ ರೀತಿಯಲ್ಲಿ ಈ ಬಾರಿಯೂ ಪ್ರತಿಭಟನೆಗಳು ಸಾಗುತ್ತಿದೆ. ಇದು ರಾಜ್ಯದಲ್ಲಿ ಮತ್ತೊಂದು ಸುತ್ತಿನ ಹಿಂಸಾಚಾರಕ್ಕೆ ನಾಂದಿಯಾಗದಿರಲಿ ಎಂದು ಸ್ಥಳೀಯರು ಪ್ರಾರ್ಥಿಸುತ್ತಿದ್ದಾರೆ.