ವೀಲ್‌ಚೇರ್‌ನಲ್ಲೂ ದೇಶಕ್ಕಾಗಿ ಸೇವೆ ಸಲ್ಲಿಸಿದ ನಾಯಕ, ಮನ್‌ಮೋಹನ್ ಸಿಂಗ್ ಶ್ಲಾಘಿಸಿದ ಮೋದಿ!
ಇಂದು ರಾಜ್ಯಸಭೆಯಿಂದ ಹಲವು ಹಿರಿಯ ನಾಯಕರು ವಿದಾಯಗೊಂಡಿದ್ದಾರೆ. ನಾಯಕ ಬೀಳ್ಕೊಡುಗೆ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಶ್ಲಾಘಿಸಿದ್ದಾರೆ. ವೀಲ್‌ಚೇರ್‌ನಲ್ಲಿರುವಾಗಲೂ ಮನ್‌ಮೋಹನ್ ಸಿಂಗ್ ದೇಶಕ್ಕಾಗಿ ಸೇವೆ ಸಲ್ಲಿಸುವುದನ್ನು ಬಿಟ್ಟಿರಲಿಲ್ಲ ಎಂದಿದ್ದಾರೆ. ಮೋದಿ ಭಾಷಣದ ವಿವರ ಇಲ್ಲಿದೆ.
ನವದೆಹಲಿ(ಫೆ.08) ದೇಶಕ್ಕೆ ಅತ್ಯಂತ ಸುದೀರ್ಘ ಅವಧಿ ಕಾಲ ಸೇವೆ ಸಲ್ಲಿಸಿದ ಅಪರೂಪದ ನಾಯಕ ಮನ್‌ಮೋಹನ್ ಸಿಂಗ್. ವೀಲ್‌ಚೇರ್‌ನಲ್ಲಿರುವಾಗಲೂ ಮನ್‌ಮೋಹನ್ ಸಿಂಗ್ ದೇಶ ಸೇವೆ ಮುಂದುವರಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ರಾಜ್ಯಸಭೆಯಿಂದ ವಿದಾಯ ಹೇಳುತ್ತಿರುವ ಹಿರಿಯ ನಾಯಕರನ್ನುದ್ದೇಶಿಸಿ ವಿದಾಯದ ಭಾಷಣ ಮಾಡಿದ ಪ್ರಧಾನಿ ಮೋದಿ, ಸದನ ಹಾಗೂ ದೇಶಕ್ಕೆ ಮಾರ್ಗದರ್ಶನ ನೀಡಿ, ದೇಶದ ಅಭಿವೃದ್ಧಿಯಲ್ಲಿ ಕೊಡುಗೆ ಸಲ್ಲಿಸಿದ ನಾಯಕರ ಪೈಕಿ ಮನ್‌ಮೋಹನ್ ಸಿಂಗ್ ಮುಂಚೂಣಿಯಲ್ಲಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ರಾಜ್ಯಸಭಾ ಸಂಸದರ ಕರ್ತವ್ಯ, ಜವಾಬ್ದಾರಿಗಳ ಕುರಿತು ನಾವು ಮನ್‌ಮೋಹನ್ ಸಿಂಗ್ ಅವರನ್ನು ನೋಡಿ ಕಲಿಯಬೇಕು. ಹಳೇ ಸಂಸತ್ ಭವನದಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸಗೊತ್ತುವಳಿ ಮಂಡಿಸಲಾಗಿತ್ತು. ಹೀಗಾಗಿ ಸರ್ಕಾರ ವಿಶ್ವಾಸಮತಕ್ಕೆ ಸಜ್ಜಾಗಿತ್ತು. ಇನ್ನು ವಿಪಕ್ಷ ಹಾಗೂ ಆಡಳಿತ ಪಕ್ಷಕ್ಕೆ ಸರ್ಕಾರವೇ ವಿಶ್ವಾಸ ಮತ ಗೆಲ್ಲಲಿದೆ ಅನ್ನೋದು ತಿಳಿದಿತ್ತು. ಆದರೆ ಮನ್‌ಮೋಹನ್ ಸಿಂಗ್ ವೀಲ್‌ಚೇರ್ ಮೂಲಕ ಆಗಮಿಸಿ ತಮ್ಮ ಮತ ಹಾಕಿದ್ದರು. ಇದು ಒಬ್ಬ ಸದಸ್ಯ ಯಾವ ರೀತಿ ಅಲರ್ಟ್ ಆಗಿರಬೇಕು ಅನ್ನೋದಕ್ಕೆ ಇದು ಉದಾಹರಣೆಯಾಗಿದೆ ಎಂದು ಮೋದಿ ಹೇಳಿದ್ದಾರೆ.
ಬ್ರಿಟಿಷರ ನೆರಳಿನಲ್ಲಿ ಆಡಳಿತದ ನಡೆಸಿತ್ತು ಕಾಂಗ್ರೆಸ್, ರಾಜ್ಯಸಭೆಯಲ್ಲಿ ಇತಿಹಾಸ ಬಿಚ್ಚಿಟ್ಟ ಮೋದಿ!
ಆಗಸ್ಟ್ ತಿಂಗಳಲ್ಲಿ ಮನ್‌ಮೋಹನ್ ಸಿಂಗ್ ವೀಲ್‌ಚೇರ್ ಮೂಲಕವೇ ಸದನಕ್ಕೆ ಆಗಮಿಸಿದ್ದರು. ಸದನದಲ್ಲಿ ಪ್ರಮುಖ ಮಸೂದೆ ಕುರಿತು ಚರ್ಚೆ ಸಮಯದಲ್ಲಿ ಪಾಲ್ಗೊಂಡ ಮನ್‌ಮೋಹನ್ ಸಿಂಗ್, ಸರ್ಕಾರದ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದ್ದರು.
ಮನ್‌ಮೋಹನ್ ಸಿಂಗ್ 6ನೇ ಬಾರಿಗೆ ರಾಜ್ಯಸಭಾ ಸಂಸದರಾಗಿ ಇಂದು ವಿದಾಯ ಹೇಳಿದ್ದಾರೆ. 2004ರಿಂದ 2014ರ ವರೆಗೆ ದೇಶದ 13ನೇ ಪ್ರಧಾನಿಯಾಗಿ ಸುದೀರ್ಘ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 2014ರಿಂದ 2024ರ ವರೆಗೆ ರಾಜ್ಯಸಭಾ ಸದಸ್ಯರಾಗಿ ಸೇವೆ ಮುಂದುವರಿಸಿದ್ದರು. ಪಿವಿ ನರಸಿಂಹ ರಾವ್ ಅವರ ಸರ್ಕಾರದಲ್ಲಿ ಮನ್‌ಮೋಹನ್ ಸಿಂಗ್ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇನ್ನು 1982 ರಿಂದ 1985ರ ವರೆಗೆ ದೇಶದ ರಿವರ್ವ್ ಬ್ಯಾಂಕ್ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದಾರೆ.
ಮೊದಲ ಬಾರಿಗೆ ಸಂಸತ್ತಿನಲ್ಲಿ ಶ್ವೇತಪತ್ರ ಹೊರಡಿಸಲಿದೆ ಕೇಂದ್ರ ಸರ್ಕಾರ, ಏನಿದು ವೈಟ್ ಪೇಪರ್?
ಮನ್‌ಮೋಹನ್ ರಾಜಕಾರಣಿಗಿಂತ ದೇಶದ ಅತ್ಯುನ್ನತ ಅರ್ಥಶಾಸ್ತ್ರಜ್ಞರಾಗಿಯೇ ಗುರುತಿಸಿಕೊಂಡಿದ್ದಾರೆ. ಜವಾರ‌್‌ಲಾಲ್ ನೆಹರೂ, ಇಂದಿರಾ ಗಾಂಧಿ ಬಳಿಕ ಅತೀ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ನಾಯಕ ಅನ್ನೋ ಹೆಗ್ಗಳಿಕೆಗೆ ಮನ್‌ಮೋಹನ್ ಸಿಂಗ್ ಪಾತ್ರರಾಗಿದ್ದಾರೆ. ಇದೀಗ ಮನ್‌ಮೋಹನ್ ಸಿಂಗ್ ದಾಖಲೆಯನ್ನು ಪ್ರಧಾನಿ ಮೋದಿ ಸರಿಗಟ್ಟಿದ್ದಾರೆ.