ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆಪರೇಷನ್ ಸಿಂದೂರ್ ಇನ್ನೂ ಮುಗಿದಿಲ್ಲ, ಇದುವರೆಗೆ ನಡೆದಿದ್ದೆಲ್ಲವೂ ಕೇವಲ ಟ್ರೈಲರ್ ಎಂದು ಹೇಳಿದ್ದಾರೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ದೃಢವಾಗಿದೆ ಮತ್ತು IMF ಪಾಕಿಸ್ತಾನಕ್ಕೆ ನೀಡುವ ಆರ್ಥಿಕ ನೆರವು ಭಯೋತ್ಪಾದನೆಗೆ ನೆರವಾಗಬಹುದು ಎಂಬ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಆಪರೇಷನ್ ಸಿಂದೂರ್ ಇನ್ನೂ ಮುಗಿದಿಲ್ಲ, ಇದುವರೆಗೆ ನೀವು ನೋಡಿದ್ದು, ಬರೀ ಟ್ರೈಲರ್ ಅಷ್ಟ್ಟೇ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಅವರು ಗುಜರಾತ್‌ನ ಭುಜ್‌ನಲ್ಲಿರುವ ವಾಯುಪಡೆಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಯೋಧರೊಂದಿಗೆ ಕೆಲ ಕಾಲ ಸಂವಹನ ನಡೆಸಿದರು. ಈ ವೇಳೆ ದೇಶವನ್ನು ಯೋಧರನ್ನು ಉದ್ದೇಶಿಸಿ ಮಾತನಾಡಿದ ಅವರು ಆಪರೇಷನ್ ಸಿಂದೂರ್ ಇನ್ನೂ ಮುಗಿದಿಲ್ಲ, ಇಷ್ಟರವರೆಗೆ ಏನು ನಡೆಯಿತೋ ಅದು ಕೇವಲ ಟ್ರೈಲರ್ ಅಷ್ಟೇ, ಸರಿಯಾದ ಸಮಯ ಬಂದಾಗ ನಾವು ಸಂಪೂರ್ಣ ಚಿತ್ರವನ್ನು ಜಗತ್ತಿಗೆ ತೋರಿಸುತ್ತೇವೆ ಎಂದು ರಾಜನಾಥ್ ಸಿಂಗ್ ಹೇಳಿದರು.
ದೇಶದ ವಾಯುಪಡೆಯು ಆಪರೇಷನ್ ಸಿಂದೂರ್‌ನ್ನು ಪರಿಣಾಮಕಾರಿಯಾಗಿ ಮುನ್ನಡೆಸಿದೆ. ನಮ್ಮ ವಾಯಿಪಡೆಯು ಭಯೋತ್ಪಾದನೆ ವಿರುದ್ಧದ ಈ ಅಭಿಯಾನವನ್ನು ಪರಿಣಾಮಕಾರಿಯಾಗಿ ಮುನ್ನಡೆಸಿದೆ ಎಂದು ವಾಯುಪಡೆಯ ಕಾರ್ಯವೈಖರಿಗೆ ಸಚಿವ ರಾಜನಾಥ್ ಸಿಂಗ್ ಬೆನ್ನುತಟ್ಟಿದರು. ದೇಶದ ಬ್ರಹ್ಮೋಸ್ ಕ್ಷಿಪಣಿಯ ಶಕ್ತಿಯನ್ನು ಪಾಕಿಸ್ತಾನವೂ ಒಪ್ಪಿಕೊಂಡಿದೆ. ನಮ್ಮ ದೇಶದಲ್ಲಿ ಹಗಲಿನಲ್ಲಿ ನಕ್ಷತ್ರ ತೋರಿಸುವುದು ಎಂಬ ಗಾದೆ ಇದೆ. ಆದರೆ ಪಾಕಿಸ್ತಾನಕ್ಕೆ ನಾವು ರಾತ್ರಿಯ ಕತ್ತಲಿನಲ್ಲಿ ಹಗಲನ್ನು ತೋರಿಸಿದ್ದೇವೆ ಎಂದು ಸಿಂಗ್ ಹೇಳಿದರು.
ಇದೇ ವೇಳೆ ಐಎಂಎಫ್ ಹಣವನ್ನು ಪಾಕಿಸ್ತಾನ ಭಯೋತ್ಪಾದನೆಗೆ ಬಳಸುತ್ತಿರುವ ಬಗ್ಗೆ ರಾಜನಾಥ್ ಸಿಂಗ್ ಕಳವಳ ವ್ಯಕ್ತಪಡಿಸಿದರು. ಪಾಕಿಸ್ತಾನಕ್ಕೆ 1 ಬಿಲಿಯನ್ ಯುಎಸ್ ಡಾಲರ್ ನೆರವು ನೀಡುವ ನಿರ್ಧಾರವನ್ನು ಮತ್ತೆ ಪರಿಶೀಲಿಸುವಂತೆ ಭಾರತ ಅಂತಾರಾಷ್ಟ್ರೀಯ ಹಣಕಾಸು ನಿಧಿ(IMF)ಯನ್ನು ಒತ್ತಾಯಿಸುತ್ತದೆ. ಏಕೆಂದರೆ ಈ ಹಣವನ್ನು ಪಾಕಿಸ್ತಾನ ಭಯೋತ್ಪಾದನೆಗೆ ಬಳಸುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಭಾರತವೂ ಐಎಂಎಫ್‌ಗೆ ನೀಡುವ ಹಣವನ್ನು ಪಾಕಿಸ್ತಾನದಲ್ಲಿ ಅಥವಾ ಇನ್ನೇಲ್ಲೋ ಭಯೋತ್ಪಾದಕರಿಗೆ ಮೂಲ ಸೌಕರ್ಯ ಒದಗಿಸಲು ಬಳಸುವುದನ್ನು ಭಾರತ ಬಯಸುವವುದಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು.
ಇಂದಿನ ಕಾಲಕ್ಕೆ ಪಾಕಿಸ್ತಾನಕ್ಕೆ ನೀಡುವಂತಹ ಯಾವುದೇ ಹಣಕಾಸಿನ ನೆರವು ಭಯೋತ್ಪಾದನೆ ನಿಧಿಗಿಂತ ಭಿನ್ನ ಅಲ್ಲ ಎಂದು ನಾನು ನಂಬುತ್ತೇನೆ. ಹೀಗಾಗಿ ಐಎಂಎಫ್ ಪಾಕಿಸ್ತಾನಕ್ಕೆ ಒಂದು ಬಿಲಿಯನ್ ಡಾಲರ್ ನೆರವು ನೀಡುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಭಾರತ ಬಯಸುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದರು. ಇದೇ ವೇಳೆ ವಾಯುಪಡೆಯ ಸಿಬ್ಬಂದಿ ಹಾಗೂ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಉಪಸ್ಥಿತರಿದ್ದರು.
ನಿನ್ನೆಯೂ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂ ಪಾಕಿಸ್ತಾನವನ್ನು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ರಾಕ್ಷಸ ರಾಷ್ಟ್ರ ಎಂದು ಕರೆದಿದ್ದರು, ಅದರ ಪರಮಾಣು ಶಸ್ತ್ರಾಗಾರವನ್ನು ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಯ (IAEA) ಮೇಲ್ವಿಚಾರಣೆಯಲ್ಲಿ ಇಡಬೇಕೆಂದು ಅವರು ಒತ್ತಾಯಿಸಿದರು. ಪಾಕಿಸ್ತಾನದ ಪರಮಾಣು ಬೆದರಿಕೆಯೂ ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಯೋತ್ಪಾದನೆಯ ನಿರ್ಮೂಲನೆಗೆ ಭಾರತದ ದೃಢ ಸಂಕಲ್ಪವನ್ನು ತಡೆಯುವಲ್ಲಿ ವಿಫಲವಾಗಿವೆ ಎಂದು ಅವರು ಹೇಳಿದರು.
ಇನ್ನೊಂದೆಡೆ ಜಮ್ಮುಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಸೇನಾ ಕಾರ್ಯಾಚರಣೆ ಮುಂದುವರೆದಿದ್ದು, ಕಳೆದ 48 ಗಂಟೆಗಳಲ್ಲಿ ಉಗ್ರರ ವಿರುದ್ಧ ಎರಡು ಯಶಸ್ವಿ ಕಾರ್ಯಾಚರಣೆಗಳು ನಡೆದಿವೆ ಎಂದು ಕಾಶ್ಮೀರ ಐಜಿಪಿ ಹೇಳಿದ್ದಾರೆ. ಕಳೆದ 48 ಗಂಟೆಗಳಲ್ಲಿ ನಾವು ಎರಡು ಯಶಸ್ವಿ ಕಾರ್ಯಾಚರಣೆಗಳನ್ನು ನಡೆಸಿದ್ದೇವೆ. ಈ ಎರಡು ಕಾರ್ಯಾಚರಣೆಗಳನ್ನು ಕೇರನ್ ಮತ್ತು ಟ್ರಾಲ್ ಪ್ರದೇಶಗಳಲ್ಲಿ ನಡೆಸಲಾಗಿದ್ದು, ಒಟ್ಟು ಆರು ಭಯೋತ್ಪಾದಕರನ್ನು ತಟಸ್ಥಗೊಳಿಸಲಾಗಿದೆ. ಇಲ್ಲಿ ಭಯೋತ್ಪಾದಕ ವ್ಯವಸ್ಥೆಯನ್ನು ಕೊನೆಗೊಳಿಸಲು ನಾವು ಬದ್ಧರಾಗಿದ್ದೇವೆ ಎಂದು ಕಾಶ್ಮೀರದ ಐಜಿಪಿ ವಿಕೆ ಬರ್ಡಿ ಹೇಳಿದ್ದಾರೆ.


