‘ನಾವು ಮೇ 10ರಂದು ಬೆಳಗಿನ ಪ್ರಾರ್ಥನೆ (ನಮಾಜ್‌) ಮುಗಿಸಿ ಭಾರತದ ಮೇಲೆ ದಾಳಿ ಮಾಡಬೇಕು ಎಂದುಕೊಂಡಿದ್ದೆವು. ಆದರೆ ಭಾರತ ಅದಕ್ಕೂ ಮೊದಲೇ ನಮ್ಮ ಮೇಲೆ ಬ್ರಹ್ಮೋಸ್‌ ಕ್ಷಿಪಣಿ ಹಾರಿಸಿ ವಾಯುನೆಲೆಗಳನ್ನು ಧ್ವಂಸ ಮಾಡಿತು’ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಹೇಳಿದ್ದಾರೆ.

ನವದೆಹಲಿ (ಮೇ.30): ‘ನಾವು ಮೇ 10ರಂದು ಬೆಳಗಿನ ಪ್ರಾರ್ಥನೆ (ನಮಾಜ್‌) ಮುಗಿಸಿ ಭಾರತದ ಮೇಲೆ ದಾಳಿ ಮಾಡಬೇಕು ಎಂದುಕೊಂಡಿದ್ದೆವು. ಆದರೆ ಭಾರತ ಅದಕ್ಕೂ ಮೊದಲೇ ನಮ್ಮ ಮೇಲೆ ಬ್ರಹ್ಮೋಸ್‌ ಕ್ಷಿಪಣಿ ಹಾರಿಸಿ ವಾಯುನೆಲೆಗಳನ್ನು ಧ್ವಂಸ ಮಾಡಿತು’ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಹೇಳಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಪಾಕಿಸ್ತಾನ ಸೇನೆ ಭಾರತದ ದಾಳಿಯನ್ನು ಎದುರಿಸುವಲ್ಲಿ ವೈಫಲ್ಯ ಕಂಡಿತ್ತು ಎಂದು ಒಪ್ಪಿಕೊಂಡಿದ್ದಾರೆ.

ತನ್ನ ಮಿತ್ರ ದೇಶ ಅಜರ್‌ಬೈಜಾನ್‌ನಲ್ಲಿ ಕಾಯಕ್ರಮವೊಂದರಲ್ಲಿ ಭಾಗಿಯಾಗಲು ತೆರಳಿದ್ದ ಷರೀಫ್ ಅಲ್ಲಿ ಮಾತನಾಡಿ, ‘ಭಾರತದ ದಾಳಿಗೆ (ಆಪರೇಷನ್‌ ಸಿಂದೂರ) ಸೂಕ್ತ ತಿರುಗೇಟು ನೀಡಲು ನಾವು ನಿರ್ಧರಿಸಿದ್ದೆವು. ಅದರಂತೆ ಮೇ 10ರಂದು ಬೆಳಗಿನ ಪ್ರಾರ್ಥನೆ ಮುಗಿಸಿ ಮುಂಜಾನೆ 4.30ರ ವೇಳೆಗೆ ಯೋಜಿತ ದಾಳಿ ನಡೆಸಿ ಶತ್ರು ದೇಶಕ್ಕೆ ಪಾಠ ಕಲಿಸಲು ಸಜ್ಜಾಗಿದ್ದೆವು.

ಆದರೆ ಅದಕ್ಕೆ ಒಂದು ಗಂಟೆ ಮುಂಚೆಯೇ ಭಾರತವು ನಮ್ಮ ದೇಶದ ಹಲವು ಪ್ರದೇಶಗಳ ಮೇಲೆ ದಾಳಿ ನಡೆಸಿತು. ಅವರು ಬ್ರಹ್ಮೋಸ್‌ ಕ್ಷಿಪಣಿ ಬಳಸಿ ರಾವಲ್ಪಿಂಡಿ ಸೇರಿದಂತೆ ನಮ್ಮ ಹಲವು ಪ್ರದೇಶಗಳ ಮೇಲೆ ದಾಳಿ ನಡೆಸಿದರು. ಈ ಬಗ್ಗೆ ಅಸೀಂ ಮುನೀರ್‌ ನನಗೆ ತಿಳಿಸಿದರು’ ಎಂದು ಹೇಳಿದ್ದಾರೆ. ಅವರು ಹೀಗೆ ಹೇಳುವಾಗ, ಇತ್ತೀಚೆಗಷ್ಟೇ ಫೀಲ್ಡ್‌ ಮಾರ್ಷಲ್‌ ಆಗಿ ಬಡ್ತಿ ಪಡೆದಿರುವ ಮುನೀರ್‌ ಕೂಡ ಉಪಸ್ಥಿತರಿದ್ದರು. ಮೇ 9-10ರಂದು ಭಾರತ ನಡೆಸಿದ ಕ್ಷಿಪಣಿ ದಾಳಿಗೆ ಪಾಕ್‌ನ ರಕ್ಷಣಾ ಸಚಿವಾಲಯದ ಮುಖ್ಯಕಚೇರಿ ಇರುವ ರಾವಲ್ಪಿಂಡಿ ಸೇರಿದಂತೆ 11 ವಾಯುನೆಲೆಗಳು ಧ್ವಂಸವಾಗಿದ್ದವು.

ಶೆಹಬಾಜ್‌ ಹೇಳಿದ್ದೇನು?
-ಭಾರತದ ದಾಳಿ (ಆಪರೇಷನ್‌ ಸಿಂದೂರ) ಗೆ ಸೂಕ್ತ ತಿರುಗೇಟು ನೀಡಲು ನಿರ್ಧಾರ ಮಾಡಿದ್ದೆವು
-ಮೇ 10ರಂದು ಬೆಳಗ್ಗೆ ನಮಾಜ್‌ ಮುಗಿಸಿ ನಸುಕಿನ 4.30ಕ್ಕೆ ದಾಳಿ ಮಾಡಲು ಪ್ಲಾನ್‌ ರೂಪಿಸಿದ್ದೆವು
-ಆದರೆ ಅದಕ್ಕೆ ಒಂದು ಗಂಟೆ ಮೊದಲೇ ಭಾರತ ನಮ್ಮ ಹಲವು ಪ್ರದೇಶಗಳ ಮೇಲೆ ದಾಳಿ ಮಾಡಿತು
-‘ಬ್ರಹ್ಮೋಸ್‌’ ಕ್ಷಿಪಣಿ ಬಳಸಿ ರಾವಲ್ಪಿಂಡಿ ಸೇರಿ ಹಲವು ಸ್ಥಳಗಳ ಮೇಲೆ ಭಾರತ ದಾಳಿ ನಡೆಸಿತು
-ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಂ ಮುನೀರ್‌ ಅವರು ನನಗೆ ಈ ವಿಷಯವನ್ನು ತಿಳಿಸಿದರು
- ಮಿತ್ರ ದೇಶ ಅಜರ್‌ಬೈಜಾನ್‌ನಲ್ಲಿ ಮುನೀರ್‌ ಸಮ್ಮುಖವೇ ವೈಫಲ್ಯ ಒಪ್ಪಿಕೊಂಡ ಶೆಹಬಾಜ್‌ ಷರೀಫ್‌