ಕೊರೋನಾ ಸೋಂಕು, ಸಾವು: ಸೆಪ್ಟೆಂಬರ್ನ ಮೊದಲ 15 ದಿನದಲ್ಲಿ ಭಾರತ ನಂ.1
- ಅಮೆರಿಕ, ಬ್ರೆಜಿಲ್ ಹಿಂದಿಕ್ಕಿದ ಭಾರತ ಕೊರೋನಾ ಸೋಂಕು, ಸಾವಿನಲ್ಲಿ ನಂ1.
- ಸಾವಿನ ದರಕ್ಕೆ ಹೋಲಿಸಿದಾಗ ಭಾರತ 8ನೇ ಸ್ಥಾನದಲ್ಲಿದ್ದು, 1.25ರ ದರದಲ್ಲಿ ವಿಶ್ವದಲ್ಲಿ 8ನೇ ಸ್ಥಾನದಲ್ಲಿದೆ.
ನವದೆಹಲಿ (ಸೆ.18): ಭಾರತವು ಇತ್ತೀಚೆಗೆ ಬ್ರೆಜಿಲ್ ದೇಶವನ್ನು ಹಿಂದಿಕ್ಕಿ ಕೊರೋನಾ ಕೇಸುಗಳಲ್ಲಿ ವಿಶ್ವದಲ್ಲೇ 2ನೇ ಸ್ಥಾನ ಸಂಪಾದಿಸಿತ್ತು. ಇದರ ಬೆನ್ನಲ್ಲೇ ಸೆಪ್ಟೆಂಬರ್ನ ಮೊದಲ 15 ದಿನದ ಅವಧಿಯಲ್ಲಿ ಕೊರೋನಾ ಕೇಸು ಹಾಗೂ ಸಾವಿನ ಪ್ರಕರಣಗಳಲ್ಲಿ ಭಾರತ, ವಿಶ್ವದಲ್ಲೇ ಮೊದಲ ಸ್ಥಾನ ಗಳಿಸಿದೆ.
ಸೆ.1ರಿಂದ 15ರ ಅವಧಿಯಲ್ಲಿ ಭಾರತದಲ್ಲಿ 13,08,991 ಕೊರೋನಾ ಪ್ರಕರಣಗಳು ವರದಿ ಆಗಿವೆ. ವಿಶ್ವದಲ್ಲೇ ಅತಿ ಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿರುವ ಅಮೆರಿಕದಲ್ಲಿ 5,57,657 ಕೇಸು ಹಾಗೂ ಬ್ರೆಜಿಲ್ನಲ್ಲಿ 4,83,299 ಪ್ರಕರಣಗಳು ದೃಢಪಟ್ಟಿವೆ.
ಇನ್ನು ಸಾವನ್ನು ಗಮನಿಸಿದಾಗ ಭಾರತದಲ್ಲಿ ಈ 15 ದಿನದಲ್ಲಿ 16,307 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಅಮೆರಿಕದಲ್ಲಿ 11,461 ಹಾಗೂ ಬ್ರೆಜಿಲ್ನಲ್ಲಿ 11,178 ಸೋಂಕಿತರು ಸಾವನ್ನಪ್ಪಿದ್ದಾರೆ.ಆದರೆ ಸಾವಿನ ದರಕ್ಕೆ ಹೋಲಿಸಿದಾಗ ಭಾರತ 8ನೇ ಸ್ಥಾನದಲ್ಲಿದ್ದು, 1.25ರ ದರದಲ್ಲಿ ವಿಶ್ವದಲ್ಲಿ 8ನೇ ಸ್ಥಾನದಲ್ಲಿದೆ. ಮೆಕ್ಸಿಕೋ, ಕೊಲಂಬಿಯಾ ಹಾಗೂ ಪೆರು- ಸಾವಿನ ದರದಲ್ಲಿ ಟಾಪ್-3 ಸ್ಥಾನ ಪಡೆದಿವೆ.
ಕರ್ನಾಟಕದಲ್ಲಿ ಭಾರೀ ಏರಿಕೆ ಕಂಡ ಕೊರೋನಾ: ನಿಜವಾಯ್ತು ಭವಿಷ್ಯ
ಕರ್ನಾಟಕದಲ್ಲಿ ಗುರುವಾರ 9,366 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 4.94 ಲಕ್ಷಕ್ಕೆ ಏರಿಕೆಯಾಗಿದೆ. ಬಹುತೇಕ ಶುಕ್ರವಾರ ಒಟ್ಟು ಸೋಂಕಿತರ ಸಂಖ್ಯೆ 5 ಲಕ್ಷದ ಗಡಿ ದಾಟುವ ಸಾಧ್ಯತೆ ಇದೆ. ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಒಂದೇ ದಿನ ದಾಖಲೆಯ 3,799 ಮಂದಿಗೆ ಸೋಂಕು ದೃಢಪಟ್ಟಿದೆ. ಉಳಿದಂತೆ ಬಳ್ಳಾರಿ 677, ಮೈಸೂರು 591, ತುಮಕೂರು 381, ದಕ್ಷಿಣ ಕನ್ನಡ 308, ಬೆಳಗಾವಿ 295, ದಾವಣಗೆರೆ 257, ಧಾರವಾಡ 247, ಬಾಗಲಕೋಟೆ 234, ರಾಯಚೂರು 227, ಶಿವಮೊಗ್ಗ 218, ಹಾಸನ 206, ಹಾವೇರಿ 188, ಕೊಪ್ಪಳ 180, ಕಲಬುರಗಿ 175, ಚಿತ್ರದುರ್ಗ 152, ಉತ್ತರ ಕನ್ನಡ 127, ಉಡುಪಿ 120, ಕೋಲಾರ 115, ಚಿಕ್ಕಮಗಳೂರು 112, ಚಾಮರಾಜನಗರ 108, ವಿಜಯಪುರ 107, ಚಿಕ್ಕಬಳ್ಳಾಪುರ 102, ಮಂಡ್ಯ 86, ಬೀದರ್ 80, ಗದಗ 69, ಬೆಂಗಳೂರು ಗ್ರಾಮಾಂತರ 66, ಯಾದಗಿರಿ 50, ಕೊಡಗು 47, ರಾಮನಗರ ಜಿಲ್ಲೆಯಲ್ಲಿ 42 ಹೊಸ ಪ್ರಕರಣ ವರದಿಯಾಗಿದೆ.
ದೆಹಲಿಯ 66 ಲಕ್ಷ ಜನರಿಗೆ ಸೋಂಕು!
ದೆಹಲಿಯ ಶೇ.33ರಷ್ಟುಜನರಲ್ಲಿ ಕರೋನಾ ವಿರುದ್ಧ ಹೋರಾಡುವ ಪ್ರತಿಕಾಯ ಶಕ್ತಿ ಉತ್ಪತ್ತಿ ಆಗಿದೆ ಎಂಬ ಸಂಗತಿ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ನಡೆಸಲಾದ ಸೆರೋಲಾಜಿಕಲ್ ಸಮೀಕ್ಷೆಯಿಂದ ತಿಳಿದುಬಂದಿದೆ. 17,000 ರಕ್ತದ ಮಾದರಿಗಳ ಪ್ರಾಥಮಿಕ ವಿಶ್ಲೇಷಣೆಯ ಬಳಿಕ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಅಂದರೆ ಸಮೀಕ್ಷೆಯ ಪ್ರಕಾರ ದೆಹಲಿಯ 2 ಕೋಟಿ ಜನರ ಪೈಕಿ 66 ಲಕ್ಷ ಮಂದಿ ಕೊರೋನಾ ವೈರಸ್‌ಗೆ ತುತ್ತಾಗಿದ್ದು, ಅದರಿಂದ ಚೇತರಿಸಿಕೊಂಡಿದ್ದಾರೆ. ಗಸ್ಟ್ ಮೊದಲ ವಾರದಲ್ಲಿ ನಡೆಸಿದ ಈ ಹಿಂದಿನ ಸೆರೋ ಸಮೀಕ್ಷೆಯ ವೇಳೆ ಶೇ. 29.1ರಷ್ಟುಜನರಲ್ಲಿ ಪ್ರತಿಕಾಯ ಶಕ್ತಿ ಉತ್ಪತ್ತಿ ಆಗಿರುವುದು ಕಂಡುಬಂದಿತ್ತು. ಇದೇ ವೇಳೆ ಪ್ರತಿಕಾಯ ಶಕ್ತಿ ಉತ್ಪತ್ತಿ ಆದ ಮಾತ್ರಕ್ಕೆ ಅದು ಕೊರೋನಾದಿಂದ ದೀರ್ಘಾವಧಿ ರಕ್ಷಣೆ ನೀಡಲಿದೆ ಎಂದು ಹೇಳಲಾಗದು. ಒಂದು ವೇಳೆ ಪ್ರತಿಕಾಯ ಶಕ್ತಿ ಕ್ಷೀಣಿಸಿದರೆ ಸೋಂಕಿಗೆ ತುತ್ತಾಗುವ ಅಪಾಯವಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಹತ್ತೆ ದಿನದಲ್ಲಿ 33 ಸಾವಿರ ಮಂದಿಗೆ ಕೊರೋನಾ: ಬೆಚ್ಚಿಬಿದ್ದ ಬೆಂಗಳೂರು
ನಿನ್ನೆ 98190 ಕೇಸು 1176 ಜನರ ಸಾವು
ನವದೆಹಲಿ: ಗುರುವಾರ ದೇಶಾದ್ಯಂತ 98190 ಜನರಲ್ಲಿ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಪ್ರಮಾಣ 52.02 ಲಕ್ಷಕ್ಕೆ ತಲುಪಿದೆ. ಮತ್ತೊಂದೆಡೆ ನಿನ್ನೆ 1176 ಜನರು ಸಾವನ್ನಪ್ಪಿದ್ದು, ಈ ಮೂಲದ ಸೋಂಕು ಇದುವರೆಗೆ 84297 ಜನರನ್ನು ಬಲಿಪಡೆದಂತೆ ಆಗಿದೆ. ಇನ್ನು ಇದುವರೆಗೆ 40.95 ಲಕ್ಷ ಸೋಂಕಿತರು ಗುಣಮುಖರಾಗಿ ಹೊರಹೊಮ್ಮಿದ್ದಾರೆ.
3 ಕೋಟಿ ದಾಟಿದ ಸೋಂಕಿತರು
ನವದೆಹಲಿ: ಜಾಗತಿಕ ಮಟ್ಟದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗುರುವಾರ 3 ಕೋಟಿ ದಾಟಿದೆ. ಜೊತೆಗೆ ಸಾವಿನ ಸಂಖ್ಯೆಯೂ 10 ಲಕ್ಷದ ಸಮೀಪಕ್ಕೆ ಆಗಮಿಸಿದೆ. ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿ ಅಮೆರಿಕ, ಭಾರತ, ಬ್ರೆಜಿಲ್ ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ.