ಬೆಂಗಳೂರು (ಸೆ.18): ರಾಜ್ಯದಲ್ಲಿ ಗುರುವಾರ 9,366 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 4.94 ಲಕ್ಷಕ್ಕೆ ಏರಿಕೆಯಾಗಿದೆ. ಬಹುತೇಕ ಶುಕ್ರವಾರ ಒಟ್ಟು ಸೋಂಕಿತರ ಸಂಖ್ಯೆ 5 ಲಕ್ಷದ ಗಡಿ ದಾಟುವ ಸಾಧ್ಯತೆ ಇದೆ.

ಈ ಮೂಲಕ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತಮಿಳುನಾಡು ಬಳಿಕ 5 ಲಕ್ಷ ಸೋಂಕಿನ ಗಡಿ ದಾಟುತ್ತಿರುವ 4ನೇ ರಾಜ್ಯ ಎಂಬ ಅಪಕೀರ್ತಿಗೆ ರಾಜ್ಯ ಭಾಜನವಾಗುತ್ತಿದೆ.

ಇನ್ನು ಗುರುವಾರ 93 ಮಂದಿ ಸೋಂಕಿಗೆ ಬಲಿಯಾಗಿದ್ದು ಒಟ್ಟು ಸಾವಿನ ಸಂಖ್ಯೆ 7,629ಕ್ಕೆ ಏರಿಕೆಯಾಗಿದೆ. ರಾಜ್ಯಕ್ಕೆ ಕೊರೋನಾ ಕಾಲಿಟ್ಟ6 ತಿಂಗಳ 9 ದಿನಕ್ಕೇ 5 ಲಕ್ಷ ಗಡಿ ಮುಟ್ಟುತ್ತಿರುವ ಸೋಂಕು ಪ್ರತಿ 100 ಮಂದಿ ಸೋಂಕಿರಲ್ಲಿ 1.54 ಮಂದಿಯನ್ನು ಬಲಿ ಪಡೆದಂತಾಗಿದೆ.

ಕೋವಿಡ್ ವಿರುದ್ಧದ ಸಮರದಲ್ಲಿ ಕೊರೋನಾಗೆ ಆಂಬ್ಯುಲೆನ್ಸ್‌ ಚಾಲಕ ಬಲಿ: ಶ್ರೀರಾಮುಲು ಸಂತಾಪ

ಗುರುವಾರ 72,030 ಮಂದಿಗೆ ಪರೀಕ್ಷೆ ನಡೆಸಿದ್ದು 9,366 ಮಂದಿಗೆ ಸೋಂಕು ದೃಢಪಟ್ಟಿದೆ. 7,268 ಮಂದಿ ಗುಣಮುಖರಾಗಿದ್ದು ಒಟ್ಟು ಗುಣಮುಖರಾದವರ ಸಂಖ್ಯೆ 3.83 ಲಕ್ಷಕ್ಕೆ ಏರಿಕೆಯಾಗಿದೆ. ಉಳಿದಂತೆ 1.03 ಲಕ್ಷ ಮಂದಿ ಚಿಕಿತ್ಸೆಯಲ್ಲಿದ್ದು ಈ ಪೈಕಿ 805 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಗ್ಯ ಇಲಾಖೆಗೆ ಅಂಕಿ-ಅಂಶ ಕೊರತೆ:

ಸರ್ಕಾರಿ ವೈದ್ಯರ ಅಸಹಕಾರ ಮುಷ್ಕರದ ದುಷ್ಪರಿಣಾಮ ಕೊರೋನಾ ವರದಿಗಳ ಮೇಲೆಯೂ ಬೀರಿದ್ದು, ಹಲವು ಜಿಲ್ಲೆಗಳಿಂದ ಸೋಂಕು, ಸಾವು ಹಾಗೂ ಗುಣಮುಖರಾದವರ ಮಾಹಿತಿಯು ಸೂಕ್ತವಾಗಿ ಬರುತ್ತಿಲ್ಲ. ಈ ಕಾರಣದಿಂದ ಗುರುವಾರ 15 ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ ಶೂನ್ಯ ಎಂದು ನಮೂದಾಗಿದೆ. ಇನ್ನು 19 ಜಿಲ್ಲೆಗಳಿಂದ ಗುರುವಾರದ ಕೊರೋನಾ ಸಾವಿನ ಸಂಖ್ಯೆ ಶೂನ್ಯ ಎಂದು ವರದಿಯಾಗಿದ್ದು, ಇದು ಸಹ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಬೆಂಗಳೂರಿನಲ್ಲಿ ದಾಖಲೆಯ ಸೋಂಕು:

ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಒಂದೇ ದಿನ ದಾಖಲೆಯ 3,799 ಮಂದಿಗೆ ಸೋಂಕು ದೃಢಪಟ್ಟಿದೆ. ಉಳಿದಂತೆ ಬಳ್ಳಾರಿ 677, ಮೈಸೂರು 591, ತುಮಕೂರು 381, ದಕ್ಷಿಣ ಕನ್ನಡ 308, ಬೆಳಗಾವಿ 295, ದಾವಣಗೆರೆ 257, ಧಾರವಾಡ 247, ಬಾಗಲಕೋಟೆ 234, ರಾಯಚೂರು 227, ಶಿವಮೊಗ್ಗ 218, ಹಾಸನ 206, ಹಾವೇರಿ 188, ಕೊಪ್ಪಳ 180, ಕಲಬುರಗಿ 175, ಚಿತ್ರದುರ್ಗ 152, ಉತ್ತರ ಕನ್ನಡ 127, ಉಡುಪಿ 120, ಕೋಲಾರ 115, ಚಿಕ್ಕಮಗಳೂರು 112, ಚಾಮರಾಜನಗರ 108, ವಿಜಯಪುರ 107, ಚಿಕ್ಕಬಳ್ಳಾಪುರ 102, ಮಂಡ್ಯ 86, ಬೀದರ್‌ 80, ಗದಗ 69, ಬೆಂಗಳೂರು ಗ್ರಾಮಾಂತರ 66, ಯಾದಗಿರಿ 50, ಕೊಡಗು 47, ರಾಮನಗರ ಜಿಲ್ಲೆಯಲ್ಲಿ 42 ಹೊಸ ಪ್ರಕರಣ ವರದಿಯಾಗಿದೆ.

ಒಂದೂವರೆ ತಿಂಗಳ ಕಂದಮ್ಮ ಬಲಿ: ತೀವ್ರ ಜ್ವರದಿಂದ ದಕ್ಷಿಣ ಕನ್ನಡ ಜಿಲ್ಲೆಯ ಆಸ್ಪತ್ರೆಗೆ ದಾಖಲಾಗಿದ್ದ ಒಂದೂವರೆ ತಿಂಗಳ ಕಂದಮ್ಮ ಕೊರೋನಾಗೆ ಬಲಿಯಾಗಿದೆ. ಉಳಿದಂತೆ ಬೆಂಗಳೂರು ನಗರದಲ್ಲಿ 34, ಮೈಸೂರು 17, ದಕ್ಷಿಣ ಕನ್ನಡದಲ್ಲಿ ಒಟ್ಟು 9, ಬಳ್ಳಾರಿ 7, ಧಾರವಾಡ 6, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಬಾಗಲಕೋಟೆಯಲ್ಲಿ ತಲಾ 4, ಗದಗ, ವಿಜಯಪುರದಲ್ಲಿ ತಲಾ 2 ಮಂದಿ ಸಾವನ್ನಪ್ಪಿದ್ದಾರೆ.

 40 ಲಕ್ಷ ಗಡಿ ದಾಟಿದ ಸೋಂಕು ಪರೀಕ್ಷೆ:  ರಾಜ್ಯದಲ್ಲಿ ಸತತ ಎರಡನೇ ದಿನ 70 ಸಾವಿರಕ್ಕೂ ಹೆಚ್ಚು ಕೊರೋನಾ ಪರೀಕ್ಷೆಗಳು ನಡೆದಿದೆ. ಗುರುವಾರ ನಡೆದ 72,030 ಪರೀಕ್ಷೆಗಳಿಂದಾಗಿ ಒಟ್ಟು ಪರೀಕ್ಷೆ ಸಂಖ್ಯೆ 40,58,313ಗೆ ತಲುಪುವ ಮೂಲಕ 40 ಲಕ್ಷದ ಗಡಿ ದಾಟಿದೆ. ಈ ಪೈಕಿ ಶೇ. 12.24 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.