ಬೆಂಗಳೂರು(ಸೆ.18): ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ದಾಖಲೆಯ 3,799 ಹೊಸ ಕೊರೋನಾ ಸೋಂಕಿತ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,84,082ಕ್ಕೆ ಏರಿಕೆಯಾಗಿದೆ.

ನಗರದಲ್ಲಿ ಕೊರೋನಾ ಸೋಂಕಿತರ ಪತ್ತೆ ಸಂಖ್ಯೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದ್ದು, ಒಂದೇ ದಿನ ನಗರದಲ್ಲಿ 3,799 ಪ್ರಕರಣ ಪತ್ತೆಯಾಗುವ ಮೂಲಕ ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಹಾಕಿದೆ. ಬುಧವಾರವಷ್ಟೇ ಪತ್ತೆಯಾದ 3,571 ಪ್ರಕರಣ ಈವರೆಗೆ ದಾಖಲೆಯಾಗಿತ್ತು. ಆದರೆ, ಗುರುವಾರ ಆ ದಾಖಲೆ ಮೀರಿದ ಸೋಂಕಿತರು ನಗರದಲ್ಲಿ ಒಂದೇ ದಿನ ಪತ್ತೆಯಾಗಿದ್ದಾರೆ.

ವಾರದಲ್ಲಿ ಮೂರನೇ ದಾಖಲೆ:

ಕಳೆದ ಒಂದು ವಾರದ ಕೊರೋನಾ ಸೋಂಕಿತರ ಪತ್ತೆಯಾದ ಅಂಕಿ ಸಂಖ್ಯೆ ಗಮನಿಸಿದರೆ ಕೇವಲ ಒಂದು ದಿನ ಮಾತ್ರ (ಸೆ.14) ನಗರದಲ್ಲಿ ಮೂರು ಸಾವಿರಕ್ಕಿಂತ ಕಡಿಮೆ ಸೋಂಕಿತರು ಪತ್ತೆಯಾಗಿದ್ದಾರೆ. ಉಳಿದಂತೆ ವಾರದ ಎಲ್ಲ ದಿನ ಮೂರು ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದಾರೆ. ಅದರಲ್ಲಿ ಸೆ.12 ರಂದು ದಾಖಲೆಯ 3,552 ಕೊರೋನಾ ಸೋಂಕಿತರು ಪತ್ತೆಯಾದರೆ, ಸೆ.16ರಂದು ದಾಖಲೆಯ 3,571 ಸೋಂಕಿತರು ಪತ್ತೆಯಾಗಿದ್ದರು. ಇನ್ನು ಗುರುವಾರ ಆ ಎಲ್ಲ ದಾಖಲೆ ಮೀರಿದ ಸೋಂಕಿತರು ಪತ್ತೆಯಾಗುವ ಮೂಲಕ ನೂತನ ದಾಖಲೆ ಸೃಷ್ಟಿಯಾಗಿದೆ.

ಖ್ಯಾತ ಮಕ್ಕಳ ತಜ್ಞ ಕೊರೋನಾಕ್ಕೆ ಬಲಿ

10 ದಿನದಲ್ಲಿ 33000 ಪ್ರಕರಣ:

ಕಳೆದ ಸೆ.8 ರಿಂದ ಸೆ.17 ರ ಅವಧಿಯಲ್ಲಿ ನಗರದಲ್ಲಿ ಬರೋಬ್ಬರಿ 33,297 ಪ್ರಕರಣ ಪತ್ತೆಯಾಗಿವೆ. ಇನ್ನು ನಗರದಲ್ಲಿ ಪ್ರತಿದಿನ ಕೊರೋನಾ ಸೋಂಕಿತರ ಪತ್ತೆ ಪ್ರಮಾಣ ಸರಾಸರಿ 3 ಸಾವಿರದಿಂದ ಮೂರುವರೆ ಸಾವಿರಕ್ಕೆ ಹೆಚ್ಚಾಗುತ್ತಿರುವ ಲಕ್ಷಣ ಕಂಡು ಬರುತ್ತಿವೆ.

ಇನ್ನು ಗುರುವಾರ 2,184 ಮಂದಿ ಸೋಂಕು ಮುಕ್ತರಾಗಿದ್ದು, ಗುಣಮುಖರ ಸಂಖ್ಯೆ 1,40,473ಕ್ಕೆ ತಲುಪಿದೆ. ಆಸ್ಪತ್ರೆ, ಆರೈಕೆ ಕೇಂದ್ರ ಹಾಗೂ ಹೋಂ ಐಸೋಲೇಷನ್‌ ಸೇರಿ 41,053 ಸಕ್ರಿಯ ಕೊರೋನಾ ಪ್ರಕರಣಗಳಿದೆ. ಇನ್ನು 271 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಗುರುವಾರ 34 ಮಂದಿ ಸೋಂಕಿಗೆ ಬಲಿಯಾದ ವರದಿಯಾಗಿದೆ. ಈ ಪೈಕಿ 23 ಮಂದಿ ವೃದ್ಧರು ಹಾಗೂ 11 ಮಂದಿ 60 ವರ್ಷದೊಳಗಿನವರಾಗಿದ್ದಾರೆ. ಈವರೆಗೆ 2,555 ಮಂದಿ ಮೃತಪಟ್ಟಿದ್ದಾರೆ.