Bathing in a moving train: ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿಯಾಗಲು ವ್ಯಕ್ತಿಯೊಬ್ಬ ಚಲಿಸುವ ರೈಲಿನ ಬೋಗಿಯೊಳಗೆ ಸ್ನಾನ ಮಾಡಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ನಂತರ ರೈಲ್ವೆ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ರೀಲ್ಸ್‌ಗಾಗಿ ರೈಲ್ವೆಯ ಬೋಗಿ ಮಧ್ಯೆ ನಿಂತು ಸ್ನಾನ ಮಾಡಿದ ಯುವಕ

ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವುದಕ್ಕೋಸ್ಕರ ಏನು ಬೇಕಾದರು ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬ ಚಲಿಸುವ ರೈಲಿನ ಬೋಗಿಯೊಳಗೆಯೇ ಸ್ನಾನ ಮಾಡಿದ್ದಾನೆ. ಹಾಗಂತ ಈತ ರೈಲಿನ ಶೌಚಾಲಯದೊಳಗೆ ಸ್ನಾನ ಮಾಡಿಲ್ಲ, ರೈಲು ಸಾಗುತ್ತಿದ್ದಾಗ ಬೋಗಿಯ ಮಧ್ಯೆ ನಿಂತು ಸ್ನಾನ ಮಾಡಿದ್ದು, ಈತನ ವೀಡಿಯೋ ಆತ ಬಯಸಿದಂತೆಯೇ ವೈರಲ್ ಆಗಿದೆ. ಆದರೆ ರೈಲ್ವೆ ಪೊಲೀಸರು ಆತನ ವಿರುದ್ಧ ಈಗ ಪ್ರಕರಣ ದಾಖಲು ಮಾಡಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ ಆತ ರೈಲಿನ ಶೌಚಾಲಯದ ಸಮೀಪದಲ್ಲೇ ಆತ ರೈಲಿನ ಪ್ರಯಾಣಿಕರು ತನ್ನನ್ನು ನೋಡುತ್ತಿದ್ದಾರೆ. ಜೊತೆಗೆ ತಾನು ಹೀಗೆ ರೈಲಿನ ಮಧ್ಯೆ ನಿಂತು ಸ್ನಾನ ಮಾಡುವುದರಿಂದ ಅತ್ತಿತ್ತ ಹೋಗುತ್ತಿರುವ ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂಬುದನ್ನು ಕೂಡ ಅರ್ಥ ಮಾಡಿಕೊಳ್ಳದೇ ಆತ ರೈಲಿನ ಮಧ್ಯೆ ಸ್ನಾನ ಮಾಡಿದ್ದಾನೆ. ಹಸಿರು ಬಣ್ಣದ ಬಕೆಟ್‌ನಲ್ಲಿ ನೀರು ತುಂಬಿಸಿಕೊಂಡು ಬಂದು ಆ ಬೋಗಿ ಮಧ್ಯೆ ಬಕೆಟ್ ಇಟ್ಟು ಸ್ಟೀಲ್ ಲೋಟದಿಂದ ತಲೆಗೆ ನೀರನ್ನು ಸುರಿದುಕೊಂಡಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ :ಬಂಧನಕ್ಕೆ ಆಗ್ರಹ

ಈ ವೀಡಿಯೋವನ್ನು ಮತ್ತೊಬ್ಬ ಪ್ರಯಾಣಿಕ ತನ್ನ ಮೊಬೈಲ್ ಕ್ಯಾಮರಾದಲ್ಲಿ ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಈಗ ವೈರಲ್ ಆಗಿದೆ. @WokePandemic ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ರೈಲ್ವೆಯ ರತ್ನಗಳು, ರೈಲಿನಲ್ಲಿ ಸ್ನಾನ ಮಾಡುತ್ತಿರುವ ವ್ಯಕ್ತಿ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಲಕ್ಷಕ್ಕೂ ಹೆಚ್ಚು ಜನ ಈ ವೀಡಿಯೋ ನೋಡಿದ್ದಾರೆ.

ಪ್ರತಿಕ್ರಿಯಿಸಿದ ಭಾರತೀಯ ರೈಲ್ವೆ

ಈ ವೀಡಿಯೋ ನಂತರದಲ್ಲಿ ರೈಲ್ವೆ ಇಲಾಖೆಯ ಗಮನಕ್ಕೂ ಬಂದಿದ್ದು, ಹೀಗೆ ರೈಲಿನಲ್ಲಿ ಸ್ನಾನ ಮಾಡಿ ಪ್ರಯಾಣಿರಿಗೆ ಕಿರಿಕಿರಿ ಉಂಟು ಮಾಡಿದ್ದಲ್ಲದೇ ಬೋಗಿಯೊಳಗೆ ಕೆಸರು ಮಾಡಿದ ವ್ಯಕ್ತಿಯನ್ನು ಗುರುತಿಸಲಾಗಿದೆ. ಆತ ತಾನು ಕೇವಲ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಫೇಮಸ್ ಆಗುವುದಕ್ಕಾಗಿ ಈ ಕೃತ್ಯವೆಸಗಿದ್ದೇನೆ ಎಂದು ಆತ ಒಪ್ಪಿಕೊಂಡಿದ್ದಾಗಿ ರೈಲ್ವೆ ಹೇಳಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಾರ್ತ್‌ ಸೆಂಟ್ರಲ್ ರೈಲ್ವೆ ಈ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ವೀರಾಂಗಣ ಲಕ್ಷ್ಮಿಬಾಯಿ ಝಾನ್ಸಿ ನಿಲ್ದಾಣದಲ್ಲಿ ರೈಲಿನೊಳಗೆ ಸ್ನಾನ ಮಾಡುವುದನ್ನು ವಿಡಿಯೋ ಮಾಡಿದ ವ್ಯಕ್ತಿಯ ಗುರುತು ಪತ್ತೆಯಾಗಿದೆ. ರೀಲ್ ಮಾಡುವ ಮೂಲಕ ಜನಪ್ರಿಯತೆ ಗಳಿಸಲು ಇಂತಹ ಕೃತ್ಯ ಎಸಗಲಾಗಿದೆ ಎಂದು ಆ ವ್ಯಕ್ತಿ ಒಪ್ಪಿಕೊಂಡಿದ್ದಾನೆ. ಮೇಲೆ ತಿಳಿಸಿದ ವ್ಯಕ್ತಿಯ ವಿರುದ್ಧ ಆರ್‌ಪಿಎಫ್ ಕಾನೂನು ಕ್ರಮ ಕೈಗೊಳ್ಳುತ್ತಿದೆ. ಉತ್ತರ ಮಧ್ಯ ರೈಲ್ವೆ ತನ್ನ ಎಲ್ಲಾ ಪ್ರಯಾಣಿಕರನ್ನು ಇತರ ಪ್ರಯಾಣಿಕರಿಗೆ ಅನುಚಿತ ಮತ್ತು ಅನಾನುಕೂಲಕರವಾದ ಯಾವುದೇ ಕೃತ್ಯದಲ್ಲಿ ತೊಡಗಿಸದಂತೆ ವಿನಂತಿಸುತ್ತದೆ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಿದೆ.

ಈ ವೀಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಜನ ಸೋಶಿಯಲ್ ಮೀಡಿಯಾದಲ್ಲಿ ಒಂದು ಲೈಕ್ ಹಾಗೂ ಕಾಮೆಂಟ್‌ಗಾಗಿ ಏನು ಬೇಕಾದರು ಮಾಡುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ಇದನ್ನು ಮುಜುಗರದ ಸಂಗತಿ ಎಂದು ಕರೆದರೆ, ಇನ್ನು ಕೆಲವರು ರೈಲಿನ ಒಳಗೆ ಕೊಳಕು ನೋಡಿ ಸರ್ಕಾರವನ್ನು ದೂಷಿಸುತ್ತಾರೆ. ಆದರೆ ಕೆಲವರು ವೀಡಿಯೋಗಾಗಿ ಅವರೇ ಗಲೀಜು ಮಾಡುತ್ತಾರೆ. ಹೀಗಾಗಿ ಮುಂದಿನ ಸಲ ರೈಲಿನಲ್ಲಿ ಕೊಳಕು ನೋಡಿದರೆ ಕೇವಲ ಸರ್ಕಾರವನ್ನು ದೂಷಿಸಬೇಡಿ ಅದು ನಮ್ಮ ಜವಾಬ್ದಾರಿಯೂ ಹೌದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ವೈರಲ್ ಆಗಲು ಜನರು ಏನು ಬೇಕಾದರೂ ಮಾಡುತ್ತಾರೆ, ಎಫ್‌ಐಆರ್ ಅಥವಾ ದಂಡ ಕೂಡ ಅವರನ್ನು ತಡೆಯಲು ಸಾಧ್ಯವಿಲ್ಲ ಏಕೆಂದರೆ ಶಿಕ್ಷೆಗಿಂತ ಕಂಟೆಂಟ್‌ನಿಂದ ಹೆಚ್ಚು ಗಳಿಸಬಹುದು ಎಂದು ಅವರಿಗೆ ತಿಳಿದಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆ ವ್ಯಕ್ತಿ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯಲು ಈ ಕೃತ್ಯವನ್ನು ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ತನ್ನ ನಡವಳಿಕೆಗೆ ಸಿಕ್ಕಿಹಾಕಿಕೊಂಡು ಶಿಕ್ಷೆ ಅನುಭವಿಸುತ್ತಾನೆ ಎಂದು ಅವನಿಗೆ ಖಂಡಿತವಾಗಿಯೂ ತಿಳಿದಿದೆ ಆದರೆ ನಂತರ ಅದನ್ನು ನಿಭಾಯಿಸುತ್ತಾನೆ. ಮೊದಲನೆಯದಾಗಿ ವೈರಲ್ ಆಗುವ ಮೂಲಕ ಎರಡು ನಿಮಿಷಗಳ ಖ್ಯಾತಿ ಅವನಿಗೆ ಬಹಳ ಮುಖ್ಯ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಆತನಿಗೆ ರೈಲನ್ನು ಸ್ವಚ್ಛಗೊಳಿಸುವ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.

Scroll to load tweet…


ಇದನ್ನೂ ಓದಿ: ಎಲ್‌ಪಿಜಿ ಸಾಗಿಸುತ್ತಿದ್ದ ಟ್ರಕ್ ಪಲ್ಟಿ: ಸಿಲಿಂಡರ್‌ ಸ್ಫೋಟಕ್ಕೆ ಸುಟ್ಟು ಕರಕಲಾದ ಟ್ರಕ್

ಇದನ್ನೂ ಓದಿ: ಟೈರ್‌ ಸ್ಫೋಟ ಬಳಿಕ ಕಾರಿಗೆ ಬೆಂಕಿ : ಮಹಿಳೆ ಸಜೀವ ದಹನ