ಭಾರತೀಯ ರೈಲ್ವೆಯಲ್ಲಿ LHB ಮತ್ತು ICF ಕೋಚ್‌ಗಳು ಬಳಕೆಯಲ್ಲಿದ್ದು, ಇವೆರಡರ ನಡುವೆ ಹಲವು ವ್ಯತ್ಯಾಸಗಳಿವೆ. LHB ಕೋಚ್‌ಗಳು ಸುರಕ್ಷತೆ, ವೇಗ ಹಾಗೂ ಪ್ರಯಾಣಿಕರ ಸೌಕರ್ಯಕ್ಕೆ ಹೆಚ್ಚು ಹೆಸರುವಾಸಿಯಾಗಿದ್ದು, ICF ಕೋಚ್‌ಗಳು ಹಳೆಯ ತಂತ್ರಜ್ಞಾನವನ್ನು ಹೊಂದಿವೆ.

ಇಂಡಿಯನ್‌ ರೈಲ್ವೆ ವಿಚಾರ ಬಂದಾಗ ಎಲ್‌ಎಚ್‌ಬಿ ಕೋಚ್‌ಗಳು ಹಾಗೂ ಐಸಿಎಫ್‌ ಕೋಚ್‌ಗಳು ಅನ್ನೋದು ಹೆಚ್ಚಾಗಿ ಚರ್ಚೆಯಲ್ಲಿರುತ್ತದೆ. ಇತ್ತೀಚೆಗೆ ಕೊಂಕಣ್‌ ನೆಟ್‌ವರ್ಕ್‌ನಲ್ಲಿ ಓಡಾಟ ನಡೆಸುವ ಮತ್ಸ್ಯಗಂಧ ಎಕ್ಸ್‌ಪ್ರೆಸ್‌, ಬೆಂಗಳೂರು-ಮುರ್ಡೇಶ್ವರ ನಡುವೆ ಓಡಾಡುವ ಟ್ರೇನ್‌ನ ಎಲ್ಲಾ ಕೋಚ್‌ಗಳನ್ನು LHB ಕೋಚ್‌ ಆಗಿ ಪರಿವರ್ತನೆ ಮಾಡುವುದಾಗಿ ತಿಳಿಸಿದೆ. ಹಾಗಾದರೆ ಈ LHB ಕೋಚ್‌ ಎಂದರೇನು? ಇದರಿಂದ ಲಾಭವೇನು? ಎಲ್‌ಎಚ್‌ಬಿ ಹಾಗೂ ಐಸಿಎಫ್‌ ಕೋಚ್‌ಗಳಿಗೆ ಇರುವ ವ್ಯತ್ಯಾಸವೇನು ಅನ್ನೋದನ್ನ ನೋಡೋಣ..

ಭಾರತದ ರೈಲ್ವೆ ಬಳಕೆ ಮಾಡುವುದು ಎರಡು ಮಾದರಿಯ ಕೋಚ್‌ಗಳನ್ನು ಮಾತ್ರ ಐಸಿಎಫ್‌ ಹಾಗೂ ಎಲ್‌ಎಚ್‌ಬಿ. ಐಸಿಎಫ್‌ ಎಂದರೆ ಇಂಟೆಗ್ರಲ್‌ ಕೋಚ್‌ ಫ್ಯಾಕ್ಟರಿ (Integral Coach Factory) ಉತ್ಪಾದನೆ ಮಾಡುವ ಕೋಚ್‌ಗಳು. ಚೆನ್ನೈನ ಪೆರಂಬೂರ್‌ನಲ್ಲಿ ಇದರ ಪ್ರಧಾನ ಫ್ಯಾಕ್ಟರಿ ಇದೆ ಅದರೊಂದಿಗೆ ಕಪುರ್ತಲದಲ್ಲಿರುವ ರೈಲ್‌ ಕೋಚ್‌ ಫ್ಯಾಕ್ಟರಿಯಲ್ಲೂ ಐಸಿಎಫ್‌ ಕೋಚ್‌ಗಳು ನಿರ್ಮಾಣವಾಗುತ್ತದೆ. ಇನ್ನು ಎಲ್‌ಎಚ್‌ಬಿ ಎಂದರೆ, ಲಿಂಕ್-ಹಾಫ್‌ಮನ್-ಬುಷ್ ಕೋಚ್‌ಗಳು (Linke-Hofmann-Busch), ಭಾರತೀಯ ರೈಲ್ವೆ ಬಳಸುವ ಆಧುನಿಕ ಪ್ರಯಾಣಿಕ ಕೋಚ್‌ಗಳು, ಸುರಕ್ಷತೆ, ಸೌಕರ್ಯ ಮತ್ತು ಸಾಂಪ್ರದಾಯಿಕ ಕೋಚ್‌ಗಳಿಗೆ ಹೋಲಿಸಿದರೆ ಹೆಚ್ಚಿನ ವೇಗದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ.Linke-Hofmann-Busch ಕಂಪನಿಯೇ ಈ ಕೋಚ್‌ಗಳನ್ನು ತಯಾರಿಸುತ್ತದೆ. ಭಾರತದಲ್ಲಿ ಕಪುರ್ತಲ, ಚೆನ್ನೈ ಹಾಗೂ ರಾಯ್‌ಬರೇಲಿಯಲ್ಲೂ LHB ಕೋಚ್‌ಗಳು ನಿರ್ಮಾಣವಾಗುತ್ತದೆ. ಎಲ್‌ಎಚ್‌ಬಿ ಕೋಚ್‌ಗಳು ಗರಿಷ್ಠ 160 ರಿಂದ 200 ಕಿಲೋಮೀಟರ್‌ ವೇಗದಲ್ಲಿ ಸಾಗಬಲ್ಲವು, ಐಸಿಎಫ್‌ ಹೆಚ್ಚೆಂದರೆ 110-140 ಕಿಲೋಮೀಟರ್‌ ವೇಗದಲ್ಲಿ ಹೋಗುತ್ತದೆ.

ಇದಲ್ಲಕ್ಕಿಂತ ಮುಖ್ಯವಾಗಿ ಆಕ್ಸಿಡೆಂಟ್‌ ಆದಾಗ ಎಲ್‌ಎಚ್‌ಬಿ ಕೋಚ್‌ಗಳಿದ್ದಾಗ ಪ್ರಾಣಾಪಾಯ ಕಡಿಮೆ. ಎಲ್‌ಎಚ್‌ಬಿ ಕೋಚ್‌ಗಳು ಆಂಟಿ ಟೆಲಿಸ್ಕೋಪಿಕ್‌. ಅಂದರೆ, ಡಿಕ್ಕಿಯ ಸಮಯದಲ್ಲಿ, ವಿಶೇಷವಾಗಿ ಮುಖಾಮುಖಿ ಡಿಕ್ಕಿಗಳ ಸಮಯದಲ್ಲಿ ರೈಲು ಬೋಗಿಗಳು ಒಂದಕ್ಕೊಂದು ಅಪ್ಪಳಿಸುವುದನ್ನು ಅಥವಾ ಉರುಳುವುದನ್ನು ತಡೆಯುವ ವಿನ್ಯಾಸ ವೈಶಿಷ್ಟ್ಯವಾಗಿದೆ. ಸರಳ ಅರ್ಥದಲ್ಲಿ ಹೇಳುವುದಾದರೆ, ಬೋಗಿಗಳು ಅಪ್ಪಚ್ಚಿಯಾಗುವ ಬದಲು ಜಿಗ್‌ಜಾಗ್‌ ಮಾದರಿಯಲ್ಲಿ ಟ್ರ್ಯಾಕ್‌ ತಪ್ಪುತ್ತದೆ. ಆದರೆ, ಐಸಿಎಫ್‌ ಕೋಚ್‌ಗಳಿರುವ ರೈಲು ಅಪಘಾತವಾದರೆ, ಒಂದರ ಮೇಲೆ ಒಂದರಂತೆ ಬಿದ್ದು ಸಾವುನೋವುಗಳ ಸಂಖ್ಯೆ ಹೆಚ್ಚಾಗುತ್ತದೆ. ಇನ್ನು ಎಲ್‌ಎಚ್‌ಬಿ ಕೋಚ್‌ಗಳು ಢಿಕ್ಕಿ ಅಪಾಯವನ್ನು ತಪ್ಪಿಸಬಲ್ಲ ವ್ಯವಸ್ಥೆಯನ್ನು ಹೊಂದಿದೆ. ಇದು ಮುಖಾಮುಖಿ ರೈಲು ಢಿಕ್ಕಿಯ ಅಪಾಯವನ್ನು ತಪ್ಪಿಸುತ್ತದೆ. ಆದರೆ, ಐಸಿಎಫ್‌ ಕೋಚ್‌ಗಳಲ್ಲಿ ಈ ವ್ಯವಸ್ಥೆಯಿಲ್ಲ.

ಭಾರತೀಯ ರೈಲ್ವೆಯ ವಿಚಿತ್ರ ರೂಲ್ಸ್; ಲೋಕೋ ಪೈಲಟ್‌ಗಳು ಎಳನೀರು ಕುಡಿಯುವಂತಿಲ್ಲವೇ? ಏನಿದು ನಿಯಮ?

ಎಲ್‌ಎಚ್‌ಬಿ ಕೋಚ್‌ಗಳು ಹಗುರವಾಗಿದ್ದು, ಹೆಚ್ಚಿನ ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲುದು. ಐಸಿಎಫ್‌ಗಳು ಭಾರೀ ತೂಕ ಹೊಂದಿರುತ್ತದೆ. ಕಡಿಮೆ ಪ್ರಯಾಣಿಕರನ್ನು ಕರೆದೊಯ್ಯುತ್ತದೆ. ಎಲ್‌ಎಚ್‌ಬಿ ಬೋಗಿಗಳು ಹೆಚ್ಚಿನ ಎಸಿ ಪವರ್‌ರನ್ನು ಪ್ರಯಾಣಿಕರಿಗೆ ನೀಡಿದರೆ, ಐಸಿಎಫ್‌ನ ಎಸಿ ವ್ಯವಸ್ಥ ಭಾರೀ ಹಳೆಯದಾಗಿದೆ. ಐಸಿಎಫ್‌ ಕೋಚ್‌ಗಳು 21.337 ಮೀಟರ್‌ ಉದ್ದ ಹೊಂದಿದ್ದರೆ, ಎಲ್‌ಎಚ್‌ಬಿ 23.54 ಮೀಟರ್‌ ಉದ್ದ ಹೊಂದಿರುತ್ತದೆ. ಐಸಿಎಫ್‌ 47 ಟನ್‌ ಬೋಗಿಯನ್ನು ಉತ್ಪಾದನೆ ಮಾಡಿದರೆ, ಎಲ್‌ಎಚ್‌ಬಿ ಬೋಗಿಗಳು ಕೇವಲ 40.2 ಟನ್‌ ತೂಕ ಹೊಂದಿರುತ್ತದೆ.

ಭಾರತೀಯ ರೈಲು ಸೀಟ್ ಬುಕಿಂಗ್‌ನಲ್ಲಿ ಭಾರೀ ಬದಲಾವಣೆ; ಎಲ್ಲರಿಗೂ ಸಿಗೋದಿಲ್ಲ ಕೆಳಗಿನ ಸೀಟು!