ಪಾಕ್ ಗಡಿ ಉದ್ವಿಗ್ನತೆ ಹಿನ್ನೆಲೆಯಲ್ಲಿ, ಪಂಜಾಬ್, ರಾಜಸ್ಥಾನದ ಗಡಿಭಾಗದ ರೈತರು ಗೋಧಿ ಕಟಾವು ಮುಗಿಸಿದ್ದಾರೆ. ಭಾರತೀಯ ವಾಯುಪಡೆ ಗಂಗಾ ಎಕ್ಸ್‌ಪ್ರೆಸ್‌ವೇನಲ್ಲಿ ಯುದ್ಧವಿಮಾನಗಳ ಹಾರಾಟ, ಲ್ಯಾಂಡಿಂಗ್ ಅಭ್ಯಾಸ ನಡೆಸಿತು. ನೌಕಾಪಡೆಯು ಅರೇಬಿಯನ್ ಸಮುದ್ರದಲ್ಲಿ ಕ್ಷಿಪಣಿ ಪರೀಕ್ಷೆ ನಡೆಸಿ, ಕರಾವಳಿ ಕಾವಲು ಪಡೆಯೊಂದಿಗೆ ಭದ್ರತೆ ಬಿಗಿಗೊಳಿಸಿದೆ.
ಭಾರತ-ಪಾಕಿಸ್ತಾನ ಗಡಿಯಲ್ಲಿ ಯುದ್ಧದ ಪರಿಸ್ಥಿತಿ ಉಂಟಾಗಿದ್ದು, ಭಾರತೀಯ ರಕ್ಷಣಾ ಇಲಾಖೆಯ ಸೂಚನೆ ಮೇರೆಗೆ ಪಾಕ್ ಗಡಿಭಾಗಕ್ಕೆ ಹೊಂದಿಕೊಂಡಿರುವ ದೇಶದ ರೈತರು ಗೋಧಿ ಬೆಳೆಗಳನ್ನು ಕಟಾವು ಮಾಡಿದ್ದಾರೆ. ಭಾರತದ ರೈತರು ಪಂಜಾಬ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ, ಪಾಕಿಸ್ತಾನ ಗಡಿಗೆ ಹತ್ತಿರವಿರುವ ಪ್ರದೇಶಗಳಲ್ಲಿ ಗೋಧಿ ಕೊಯ್ಲು ಪೂರ್ಣಗೊಳಿಸಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರ ಗಳ ಮೂಲಕ ಸುಮಾರು 3,310 ಕಿಲೋಮೀಟರ್ ಉದ್ದದ ಭಾರತ-ಪಾಕಿಸ್ತಾನ ಗಡಿ ಹರಡಿಕೊಂಡಿದೆ. ಈ ಗಡಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಗೋಧಿ ಕೊಯ್ಲಿನ ಸ್ಥಿತಿಯನ್ನು ಕುರಿತು ಕೇಳಿದಾಗ, ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಅವರು "ಈಗ ಗೋಧಿ ಕೊಯ್ಲು ಆಗಿದೆ" ಎಂದು ತಿಳಿಸಿದ್ದಾರೆ. ಗಡಿ ಪ್ರದೇಶಗಳಲ್ಲಿ ಎಷ್ಟು ಗೋಧಿಯನ್ನು ಕೊಯ್ಲು ಮಾಡಲಾಗಿದೆ ಎಂಬುದು ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಆದರೆ, ಕೃಷಿ ಆಯುಕ್ತ ಪ್ರವೀಣ್ ಕುಮಾರ್ ಸಿಂಗ್ ಅವರು, ಪಂಜಾಬ್ ರಾಜ್ಯದ ಗಡಿಭಾಗದಲ್ಲಿ ಗೋಧಿ ಬೆಳೆಯುವ ಪ್ರದೇಶ ಹೆಚ್ಚು ಇದೆ ಎಂದು ಮಾಹಿತಿ ನೀಡಿದ್ದಾರೆ. ಈ ಬಾರಿ ರೈತರು ಉತ್ತಮ ಇಳುವರಿಯನ್ನು ಕೂಡ ಪಡೆದಿದ್ದರು ಎಂದು ಮಾಹಿತಿ ನೀಡಿದರು.
ರಾಜಸ್ಥಾನ ರಾಜ್ಯದಲ್ಲಿ ಗೋಧಿ ಕೃಷಿ ಮುಖ್ಯವಾಗಿ ಗಂಗಾನಗರ, ಹನುಮಾನ್‌ಗಢ ಮತ್ತು ಜೈಸಲ್ಮೇರ್ ಜಿಲ್ಲೆಗಳ ಗಡಿಭಾಗಗಳಲ್ಲಿ ನಡೆಯುತ್ತದೆ. ಅಲ್ಲಿ ರೈತರು ಗೋಧಿ ಕೊಯ್ಲು ಪೂರ್ಣಗೊಳಿಸಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ದೃಢಪಡಿಸಿದ್ದಾರೆ. ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಸಂಭವಿಸಿದ ದಾಳಿಯ ನಂತರ, ಭಾರತ-ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿತ್ತು. ಇದರ ಪರಿಣಾಮವಾಗಿ, ರೈತರು ತಕ್ಷಣ ತಮ್ಮ ಗೋಧಿಯನ್ನು ಕೊಯ್ಲು ಮಾಡಲು ಸೂಚನೆ ನೀಡಲಾಗಿತ್ತು. ಭದ್ರತೆಯ ದೃಷ್ಟಿಯಿಂದ ಅಧಿಕಾರಿಗಳ ಮುನ್ನೆಚ್ಚರಿಕೆ ಕ್ರಮವಾಗಿ ಗೋಧಿ ಕೊಯ್ಲು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಗಂಗಾ ಎಕ್ಸ್‌ಪ್ರೆಸ್‌ವೇನಲ್ಲಿ ವಾಯುಪಡೆಯ ಸಮರಾಭ್ಯಾಸ
ಭಾರತೀಯ ವಾಯುಪಡೆ (ಐಎಎಫ್) ಶುಕ್ರವಾರ ಉತ್ತರ ಪ್ರದೇಶದ ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ಯುದ್ಧವಿಮಾನಗಳ ವಿಶೇಷ ಹಾರಾಟ ಮತ್ತು ಲ್ಯಾಂಡಿಂಗ್ ಅಭ್ಯಾಸ ನಡೆಸಿತು. ಈ ಅಭ್ಯಾಸದಲ್ಲಿ ಯುದ್ಧವಿಮಾನಗಳು ಮತ್ತು ಯುದ್ಧ ಸಾರಿಗೆ ವಿಮಾನಗಳು ಭಾಗವಹಿಸಿದವು. ಯುದ್ಧ ಕಾಲದಲ್ಲೋ ಅಥವಾ ತುರ್ತು ಸಂದರ್ಭದಲ್ಲೋ ಎಕ್ಸ್‌ಪ್ರೆಸ್‌ವೇವನ್ನು ವಿಮಾನಗಳ ಹಾರಾಟಕ್ಕೆ ಬಳಸಬಹುದೇ ಎಂಬುದನ್ನು ಪರೀಕ್ಷಿಸುವ ಉದ್ದೇಶದಿಂದ ಈ ಅಭ್ಯಾಸ ನಡೆಸಲಾಯಿತು.
ಈ ತಾಲೀಮು ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯಿಂದಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿರುವ ಸಮಯದಲ್ಲಿ ನಡೆದಿದೆ. ಗಂಗಾ ಎಕ್ಸ್‌ಪ್ರೆಸ್‌ವೇ ಅನ್ನು ಭಾರತದಲ್ಲಿ ಮೊದಲ ಬಾರಿಗೆ ಹಗಲು ಮತ್ತು ರಾತ್ರಿ ಎರಡೂ ಸಮಯದಲ್ಲಿ ವಿಮಾನ ಲ್ಯಾಂಡಿಂಗ್‌ಗಳಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಹಿಂದೆ ಲಕ್ನೋ-ಆಗ್ರಾ ಮತ್ತು ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಗಳಲ್ಲಿ ಹಗಲು ಹೊತ್ತಿನಲ್ಲಿ ಮಾತ್ರ ಈ ತರಹದ ಅಭ್ಯಾಸಗಳು ನಡೆಯುತ್ತಿತ್ತು.
ರಫೇಲ್, ಸುಖೋಯ್-30 ಎಂಕೆಐ, ಮಿರಾಜ್-2000 ಸೇರಿದಂತೆ ಹಲವಾರು ಯುದ್ಧವಿಮಾನಗಳು ಈ ವ್ಯಾಯಾಮದಲ್ಲಿ ಪಾಲ್ಗೊಂಡವು. ಸ್ಥಳೀಯ ಜನತೆ ಮತ್ತು ವಿದ್ಯಾರ್ಥಿಗಳು ಈ ದೃಶ್ಯಗಳನ್ನು ಕುತೂಹಲದಿಂದ ವೀಕ್ಷಿಸಿದರು. ಈ ಅಭ್ಯಾಸದಲ್ಲಿ ಬೆಳಕು ಮತ್ತು ಹವಾಮಾನ ಪರಿಸ್ಥಿತಿಗಳಲ್ಲಿ ವಿಮಾನಗಳ ಹಾರಾಟ, ಲ್ಯಾಂಡಿಂಗ್ ಮತ್ತು ಟೇಕ್‌ಆಫ್ ಪರೀಕ್ಷಿಸಲಾಯಿತು.
ಸಮುದ್ರದಲ್ಲಿಯೂ ಎಚ್ಚರಿಕೆ ಕ್ರಮ:
ಉಗ್ರರಿಂದ 26 ಮಂದಿ ಪಹಲ್ಗಾಮ್‌ನಲ್ಲಿ ಬಲಿಯಾದ ಹಿನ್ನೆಲೆಯಲ್ಲಿ, ಭದ್ರತಾ ಪಡೆಗಳು ಎಲ್ಲೆಡೆ ಎಚ್ಚರಿಕೆ ಕ್ರಮ ತೆಗೆದುಕೊಂಡಿವೆ. ಭಾರತೀಯ ನೌಕಾಪಡೆ ಅರೇಬಿಯನ್ ಸಮುದ್ರದಲ್ಲಿ ಅಲರ್ಟ್ ಆಗಿದ್ದು, ಬಹುಯುದ್ಧ ನೌಕೆಗಳಿಂದ ಹಡಗು ವಿರೋಧಿ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪ್ರಯೋಗಿಸಿದೆ.
ನೌಕಾಪಡೆಯ ಹೊಸ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ ನೌಕೆಯಾದ ಐಎನ್‌ಎಸ್ ಸೂರತ್, ಮಧ್ಯಮ-ಶ್ರೇಣಿಯ ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ (ಎಂಆರ್-ಎಸ್‌ಎಎಂ) ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಿತು. ಇಸ್ರೇಲ್‌ನೊಂದಿಗೆ ಜಂಟಿಯಾಗಿ ಅಭಿವೃದ್ಧಿಪಡಿಸಲಾದ ಈ ವ್ಯವಸ್ಥೆಯು 70 ಕಿಲೋಮೀಟರ್ ದೂರದವರೆಗೆ ವೈಮಾನಿಕ ಬೆದರಿಕೆಗಳನ್ನು ತಟಸ್ಥಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಅತ್ಯಾಧುನಿಕ ರಾಡಾರ್ ಮತ್ತು ಎಐ ವ್ಯವಸ್ಥೆಗಳನ್ನು ಹೊಂದಿರುವ ಈ ವಿಧ್ವಂಸಕ ಯುದ್ಧ ನೌಕೆಯನ್ನು ಈ ವರ್ಷದ ಆರಂಭದಲ್ಲಿ ನಿಯೋಜಿಸಲಾಯಿತು ಮತ್ತು ಇದು ನೌಕಾ ಬಲದಲ್ಲಿ ಬಲಿಷ್ಠ ಎನಿಸಿಕೊಂಡಿದೆ.
ಕರಾವಳಿಯಲ್ಲಿ ಹೆಚ್ಚು ಎಚ್ಚರಿಕೆ
ಭದ್ರತೆಗಾಗಿ, ಭಾರತೀಯ ಕರಾವಳಿ ಕಾವಲು ಪಡೆ ಗುಜರಾತ್ ಸಮುದ್ರ ಗಡಿಯಲ್ಲಿ ಹಡಗುಗಳನ್ನು ನಿಯೋಜಿಸಿದ್ದು, ನೌಕಾಪಡೆಯೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


