ಮೈನಸ್ ತಾಪಮಾನದಲ್ಲಿ ಖುಕುರಿ ಡಾನ್ಸ್... ಮೈ ಕೊರೆಯುವ ಚಳಿಯಲ್ಲಿ ಯೋಧರ ಸಖತ್ ಸ್ಟೆಪ್
- ಮೈನಸ್ ತಾಪಮಾನದಲ್ಲಿ ಯೋಧರ ಖುಕರಿ ಡಾನ್ಸ್
- ಮೈ ಕೊರೆಯುವ ಚಳಿಯಲ್ಲಿ ಯೋಧರ ಸಖತ್ ಸ್ಟೆಪ್
- ಜಮ್ಮುಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ದೃಶ್ಯ ಸೆರೆ
ಜಮ್ಮುಕಾಶ್ಮೀರ(ಜ.9): ಭಾರತೀಯ ಸೇನಾ ಯೋಧರು ಸಂದರ್ಭ ಎಂತಹುದ್ದೇ ಇರಲಿ ಆ ಕ್ಷಣವನ್ನು ಉಲ್ಲಾಸಮಯಗೊಳಿಸುವುದರಲ್ಲಿ ಎತ್ತಿದ ಕೈ. ದೇಶ ಸಂಕಷ್ಟಕ್ಕೀಡಾದಾಗಲೆಲ್ಲಾ ಮುಂದೋಡಿ ಬಂದು ನೆರವಿಗೆ ಬರುವ ಭಾರತೀಯ ಯೋಧರು ತಮ್ಮ ಸಂಸ್ಕೃತಿ ಸಂಪ್ರದಾಯ ಪಾಲಿಸುವುದರ ಜೊತೆ ನೃತ್ಯಗಳನ್ನು ಮಾಡಿ ಸಂಭ್ರಮಿಸುವುದರಲ್ಲೂಅಷ್ಟೇ ಹುಶಾರು. ತಾವಿರುವ ಸ್ಥಳ ಎಂತಹದ್ದೇ ಇರಲಿ ಅಲ್ಲಿ ಉತ್ಸಾಹ ತುಂಬುವ ಯೋಧರು ಈಗ ಮೈನಸ್‌ಗಿಂತಲೂ ಕಡಿಮೆ ತಾಪಮಾನವಿರುವ ಹಿಮದಿಂದ ಆವೃತ್ತವಾದ ಪ್ರದೇಶದಲ್ಲಿ ಸಖತ್ ಆಗಿ ಖುಕುರಿ ಡಾನ್ಸ್ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಗೋರ್ಖಾ ರೆಜಿಮೆಂಟ್‌ನಲ್ಲಿ ಗೋರ್ಖಾ ಸಂಸ್ಕೃತಿಯಾದ ಈ ಖುಕುರಿ ನೃತ್ಯ ಯೋಧರಿಗೆ ಚಿರಪರಿಚಿತ. ಸಣ್ಣದಾದ ಚೂರಿಯನ್ನು ಹಿಡಿದುಕೊಂಡು ಮಾಡುವ ನೃತ್ಯ ಇದಾಗಿದ್ದು, ಇದು ವಿಜಯವನ್ನು ಸಂಕೇತಿಸುತ್ತದೆ. ಇದನ್ನು ಸೈನಿಕರ ಗೌರವಾರ್ಥ ಪ್ರದರ್ಶಿಸಲಾಗುತ್ತದೆ. ಗಡಿಯನ್ನು ಕಾಪಾಡುವುದು ಸಣ್ಣ ಕೆಲಸವಲ್ಲ, ಅದರಲ್ಲೂ ವಿಶೇಷವಾಗಿ ಮೈನಸ್ ಶೂನ್ಯ ತಾಪಮಾನವನ್ನು ಎದುರಿಸುತ್ತಿದ್ದರೆ ಇನ್ನಷ್ಟು ಕಷ್ಟ. ಆದರೆ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಈ ಮೈನಸ್ ತಾಪಮಾನದಲ್ಲೂ ರಾಷ್ಟ್ರಧ್ವಜದ ಮುಂದೆ ಭಾರತೀಯ ಯೋಧರು ಖುಕುರಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.
ಟ್ವಿಟ್ಟರ್‌ನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, 33 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಹಿಮದ ಮೇಲೆ ಸೈನಿಕರು ಏಕಕಾಲಕ್ಕೆ ಒಂದು ಹೆಜ್ಜೆಯೂ ಅತ್ತಿತವಾಗದಂತೆ ಡಾನ್ಸ್ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಉತ್ತರ ಕಾಶ್ಮೀರದ( north Kashmir) ಕುಪ್ವಾರಾ ಜಿಲ್ಲೆಯ ತಂಗ್‌ಧರ್ (Tangdhar) ಸೆಕ್ಟರ್‌ನ ಹಿಮದಿಂದ ಆವೃತವಾದ ಶ್ರೇಣಿಗಳಲ್ಲಿ ಭಾರತೀಯ ಸೇನೆ ಈ ನೃತ್ಯವನ್ನು ಪ್ರದರ್ಶಿಸಿದೆ.
ಹಿಮಪಾತ, ರಸ್ತೆ ಸ್ಥಗಿತ : ಗರ್ಭಿಣಿಯನ್ನು ಸ್ಟ್ರೆಚರ್‌ನಲ್ಲಿ ಹೊತ್ತು ಆಸ್ಪತ್ರೆ ಸೇರಿಸಿದ ಸೇನೆ
ನೆಟ್ಟಿಗರು ಚಳಿಯ ತಾಪಮಾನವನ್ನು ಎದುರಿಸಿ ನೃತ್ಯ ಪ್ರದರ್ಶಿಸಿದ ಸೈನಿಕರನ್ನು ಶ್ಲಾಘಿಸಿದ್ದಾರೆ. ಗಡಿಗಳ ರಕ್ಷಕರ ಬಗ್ಗೆ ಹೆಮ್ಮೆಎನಿಸುತ್ತಿದೆ. ನಿಮ್ಮ ಧೈರ್ಯ, ಸಾಮರ್ಥ್ಯ, ಭಕ್ತಿ ಮತ್ತು ದೇಶಭಕ್ತಿ ನಮ್ಮ ಭಾರತವನ್ನು ಅಪಾಯಗಳಿಂದ ರಕ್ಷಿಸುತ್ತದೆ. ರಾಷ್ಟ್ರವು ನಿಮಗೆ ಸಾಕಷ್ಟು ಧನ್ಯವಾದ ಹೇಳಲು ಸಾಧ್ಯವಿಲ್ಲ! ಜೈ ಹಿಂದ್ ವಂದೇ ಮಾತರಂ, ಎಂದು ಟ್ವಿಟ್ಟರ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಭೀಕರ ಹಿಮಪಾತಕ್ಕೆ ಅಂಜದೆ ನಿಂತ ಗಂಡು... ಭಾರತೀಯ ಯೋಧನ ವಿಡಿಯೋ ವೈರಲ್
ಗೂರ್ಖಾ ಸಂಸ್ಕೃತಿಯಲ್ಲಿ, 'ಖುಕುರಿ' ಒಂದು ಸಣ್ಣ ಚಾಕು, ಇದು ವಿಜಯ, ದೃಢತೆ ಮತ್ತು ಶಕ್ತಿಯನ್ನು ಸಂಕೇತಿಸುತ್ತದೆ. ಅದರ ಚೂಪಾದ ಬ್ಲೇಡ್ ಮತ್ತು ಕೆತ್ತಿದ ಮರದ ಹಿಡಿಕೆಯೊಂದಿಗೆ, ಚಾಕುವನ್ನು ನೃತ್ಯದಲ್ಲಿ ಆಸರೆಯಾಗಿ ಬಳಸಲಾಗುತ್ತದೆ. ನರ್ತಕರು ಬೀಟ್ ಹಾಕುವಾಗ ಚಾಕುವನ್ನು ಬಳಸಿ ವಿವಿಧ ತಂತ್ರಗಳನ್ನು ಪ್ರದರ್ಶಿಸುತ್ತಾರೆ. auchitya.com ಪ್ರಕಾರ, ಸೈನಿಕರು ಒದಗಿಸುವ ಭದ್ರತೆಗಾಗಿ ಗೌರವಾರ್ಥವಾಗಿ ಈ ನೃತ್ಯವನ್ನು ಪ್ರದರ್ಶಿಸಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಸೇನೆಯ ಸಾಕಷ್ಟು ವಿಡಿಯೋ ವೈರಲ್ ಆಗಿದೆ. ಇದಕ್ಕೂ ಮುನ್ನ ಭಾರತೀಯ ಸೇನೆಯ ವೈದ್ಯಕೀಯ ತಂಡವೊಂದು ಗರ್ಭಿಣಿ ಮಹಿಳೆಯನ್ನು ನಿಯಂತ್ರಣ ರೇಖೆ ಬಳಿಯಿಂದ ತುರ್ತು ವೈದ್ಯಕೀಯ ಸೇವೆಗಾಗಿ ಸ್ಟ್ರೆಚರ್ ಮೇಲೆ ಹೊತ್ತುಕೊಂಡು ಸ್ಥಳಾಂತರಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಭಾರೀ ಹಿಮಪಾತದ ನಡುವೆಯೂ ಮಹಿಳೆಯನ್ನು ಸೈನಿಕರು ಸ್ಟ್ರೆಚರ್‌ನಲ್ಲಿ ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದರು. ಭಾರತೀಯ ರಕ್ಷಣಾ ಸಚಿವಾಲಯವೂ ಕೂಡ ಈ ವಿಡಿಯೋವನ್ನು ಶೇರ್ ಮಾಡಿದೆ.