ಹಿಮಪಾತ, ರಸ್ತೆ ಸ್ಥಗಿತ : ಗರ್ಭಿಣಿಯನ್ನು ಸ್ಟ್ರೆಚರ್‌ನಲ್ಲಿ ಹೊತ್ತು ಆಸ್ಪತ್ರೆ ಸೇರಿಸಿದ ಸೇನೆ
- ಸಂಕಷ್ಟದಲ್ಲಿದ್ದ ಗರ್ಭಿಣಿಗೆ ತುರ್ತು ವೈದ್ಯಕೀಯ ಸೇವೆ
- ಹಿಮಪಾತದ ಮಧ್ಯೆಯೂ ಗರ್ಭಿಣಿಯ ಹೊತ್ತು ಸಾಗಿದ ಸೇನೆ
- ಜಮ್ಮು ಕಾಶ್ಮೀರದ ಘಗ್ಗರ್ ಹಿಲ್ ಗ್ರಾಮದಲ್ಲಿ ಘಟನೆ
ಜಮ್ಮುಕಾಶ್ಮೀರ(ಜ.9) ಪ್ರವಾಹವೇ ಬರಲಿ, ಭೂಕಂಪವಾಗಲಿ ಹೀಗೆ ಎಂಥಹದ್ದೇ ನೈಸರ್ಗಿಕ ವಿಕೋಪಗಳು ಸಂಭವಿಸಲಿ ತಕ್ಷಣವೇ ದೇಶದ ನಾಗರಿಕ ರಕ್ಷಣೆಗೆ ಧಾವಿಸುವ ಭಾರತೀಯ ಸೇನೆ ಈಗ ತುರ್ತು ವೈದ್ಯಕೀಯ ಸಹಾಯದ ಅಗತ್ಯವಿದ್ದ ಗರ್ಭಿಣಿಗೆ ಸುರಿಯುವ ಹಿಮಪಾತದ ಮಧ್ಯೆಯೂ ಸಹಾಯ ಮಾಡುವ ಮೂಲಕ ಪರಿಸ್ಥಿತಿ ಎಂತಹದೇ ಇರಲಿ ತಾವು ಸೇವೆಗೆ ಸದಾ ಸಿದ್ಧ ಎಂಬುದನ್ನು ಮತ್ತೆ ಮತ್ತೆ ಸಾಬೀತು ಪಡಿಸಿದ್ದಾರೆ.
ಶನಿವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತದ ನಡುವೆ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ತಲುಪಿಸಲು ಸೇನೆಯು ಸಹಾಯ ಮಾಡಿದೆ. ಬೋನಿಯಾರ್ ತಹಸಿಲ್‌ನ ( Boniyar tehsil) ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಸಮೀಪದಲ್ಲಿ ಬರುವ ಘಗ್ಗರ್ ಹಿಲ್ ಗ್ರಾಮದ ಗರ್ಭಿಣಿ ಮಹಿಳೆಯನ್ನು ಕಷ್ಟಕರವಾದ ರಸ್ತೆ ಪರಿಸ್ಥಿತಿಗಳ ನಡುವೆಯೂ ಬೋನಿಯಾರ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (PHC) ತುರ್ತು ವೈದ್ಯಕೀಯ ನೆರವಿಗಾಗಿ ಸೈನಿಕರು ಆಕೆಯನ್ನು ಸ್ಟ್ರೆಚರ್‌ನಲ್ಲಿ ಹೊತ್ತು ಕೊಂಡು ಹೋಗಿ ದಾಖಲಿಸಿದರು.
ಸೇನೆಯ ಪತ್ರಿಕಾ ಪ್ರಕಟಣೆಯ ಪ್ರಕಾರ, ಬೋನಿಯಾರ್ ತೆಹಸಿಲ್‌ನ ಎಲ್‌ಒಸಿ ಉದ್ದಕ್ಕೂ ಇರುವ ಘಗ್ಗರ್ ಹಿಲ್ ಗ್ರಾಮದ ಭಾರತೀಯ ಸೇನಾ ಪೋಸ್ಟ್‌ಗೆ ಜನವರಿ 8 ರಂದು ಬೆಳಗ್ಗೆ 10.30 ಕ್ಕೆ ನೆರವಿಗೆ ಧಾವಿಸುವಂತೆ ಕರೆ ಬಂದಿದೆ. ಗಂಭೀರ ಸ್ಥಿತಿಯಲ್ಲಿದ್ದ ಗರ್ಭಿಣಿ ಮಹಿಳೆಗೆ ತುರ್ತು ವೈದ್ಯಕೀಯ ನೆರವು ನೀಡುವಂತೆ ಸ್ಥಳೀಯರು ಮನವಿ ಮಾಡಿದ್ದರು. ನಂತರ ಸೇನೆಯ ವೈದ್ಯಕೀಯ ತಂಡ ಸ್ಥಳಕ್ಕೆ ಧಾವಿಸಿದೆ. ರೋಗಿಯ ಆರಂಭಿಕ ತಪಾಸಣೆ ನಂತರ ನಿರ್ಣಾಯಕ ಪರಿಸ್ಥಿತಿಯನ್ನು ವೀಕ್ಷಿಸಲು ತುರ್ತು ಸ್ಥಳಾಂತರ ಮಾಡಲಾಗಿದೆ.
ಭೀಕರ ಹಿಮಪಾತಕ್ಕೆ ಅಂಜದೆ ನಿಂತ ಗಂಡು... ಭಾರತೀಯ ಯೋಧನ ವಿಡಿಯೋ ವೈರಲ್
ಇಲ್ಲಿ ಭಾರಿ ಹಿಮಪಾತದಿಂದಾಗಿ ವಾಹನವನ್ನು ಓಡಿಸುವುದು ಕೂಡ ಕಷ್ಟಕರವಾದ ಕಾರಣ, ಸೇನೆಯು ಸ್ಟ್ರೆಚರ್ ಅನ್ನು ಸಿದ್ಧಪಡಿಸಿ ಅದರ ಮೇಲೆ ಗರ್ಭಿಣಿಯನ್ನು ಮಲಗಿಸಿ ಸಾಗಿಸಿದ್ದಾರೆ ನಂತರ ಸಾರ್ವಜನಿಕ ಆರೋಗ್ಯ ಕೇಂದ್ರ (PHC)ದ ಆಂಬುಲೆನ್ಸ್‌ಗೆ ಗರ್ಭಿಣಿಯನ್ನು ಶಿಫ್ಟ್ ಮಾಡಲಾಯಿತು.
ಇದಾದ ನಂತರ, ಹೆಚ್ಚು ಸಮಯ ವ್ಯರ್ಥ ಮಾಡದೆ, ಯುದ್ಧಭೂಮಿಯ ನರ್ಸಿಂಗ್ ಸಹಾಯಕರು (BFNA) ಸೇರಿದಂತೆ ಸ್ಥಳಾಂತರಿಸುವ ತಂಡವು ಮಹಿಳೆಯನ್ನು ಘಗ್ಗರ್ ಹಿಲ್‌ನಿಂದ ಸಲಾಸನ್‌ಗೆ ಬೆಳಗ್ಗೆ 11 ಗಂಟೆಗೆ ಸ್ಥಳಾಂತರಿಸಿತು ಎಂದು ಸೇನೆ ಹೇಳಿದೆ.
Baby Shower For Cat : ಗರ್ಭಿಣಿ ಬೆಕ್ಕಿಗೆ ಸೀಮಂತ ಮಾಡಿದ ತಮಿಳುನಾಡಿನ ಕುಟುಂಬ
ಭಾರೀ ಹಿಮಪಾತದ ನಡುವೆಯೂ ಭಾರತೀಯ ಸೇನಾ ತಂಡವು ಗರ್ಭಿಣಿಯನ್ನು ಸುರಕ್ಷಿತವಾಗಿ 6.5 ಕಿಮೀ ಕ್ರಮಿಸುವ ಮೂಲಕ ಸಲಾಸನ್‌ಗೆ ಕರೆತಂದಿತು ಮತ್ತು ಮಧ್ಯಾಹ್ನ 1.45 ಕ್ಕೆ ಪಿಎಚ್‌ಸಿ ಬೋನಿಯಾರ್‌ನಿಂದ ವೈದ್ಯಾಧಿಕಾರಿಗಳ ತಂಡಕ್ಕೆ ಹಸ್ತಾಂತರಿಸಿತು ಎಂದು ಸೇನೆ ಹೇಳಿದೆ. ಉತ್ತರ ಭಾರತದಲ್ಲಿ ತಾಪಮಾನ ತೀವ್ರವಾಗಿ ಕುಸಿಯುತ್ತಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತದ ನಡುವೆಯೂ ಸೈನಿಕರು ದೇಶಕ್ಕಾಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ. ಈ ನಡುವೆ ಅಗತ್ಯವಿರುವವರಿಗೆ ಭಾರತೀಯ ಸೇನೆ ಹೆಗಲಾಗಿ ನಿಂತು ಸಹಾಯ ಮಾಡುತ್ತಿದೆ.