Baby Shower For Cat : ಗರ್ಭಿಣಿ ಬೆಕ್ಕಿಗೆ ಸೀಮಂತ ಮಾಡಿದ ತಮಿಳುನಾಡಿನ ಕುಟುಂಬ
- ಕೊಯಂಬತ್ತೂರಿನ ಪೆಟ್ ಕ್ಲಿನಿಕ್‌ನಲ್ಲಿ ಸೀಮಂತ ಸಂಭ್ರಮ
- ಬೆಕ್ಕಿಗೆ ಸೀಮಂತ ಮಾಡಿದ ಕುಟುಂಬ
- ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಚೆನ್ನೈ(ಜ.4): ತಮಿಳುನಾಡಿನ ಕುಟುಂಬವೊಂದು ತಮ್ಮ ಎರಡು ಮುದ್ದಾದ ಪರ್ಷಿಯನ್ ಗರ್ಭಿಣಿ ಬೆಕ್ಕುಗಳಿಗೆ ಸಾಮಾನ್ಯವಾಗಿ ಗರ್ಭಿಣಿ ಹೆಣ್ಮಗಳಿಗೆ ಮಾಡುವಂತೆಯೇ ಸಂಪ್ರದಾಯ ಬದ್ಧವಾಗಿ ಸೀಮಂತ ಮಾಡಿದ್ದಾರೆ. ಈ ಬೆಕ್ಕುಗಳ ಸೀಮಂತದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾಕುಪ್ರಾಣಿಗಳಾದ ಬೆಕ್ಕು, ನಾಯಿಗಳನ್ನು ಸಾಕುವವರಿಗೆ ಅವುಗಳ ಮೇಲೆ ಮನುಷ್ಯರಿಗಿಂತಲೂ ಹೆಚ್ಚಾದ ಪ್ರೀತಿ ಇರುತ್ತದೆ. ಅವುಗಳನ್ನು ಮನೆಯ ಸದಸ್ಯರಂತೆ ಕಾಣುವ ಅವರು ಅವುಗಳಿಗೆ ಏನಾದರೂ ಹೆಚ್ಚು ಕಮ್ಮಿಯಾದರು ತುಂಬಾ ಸಂಕಟ ಪಡುತ್ತಾರೆ.
ಈಗ ತಮಿಳುನಾಡಿನ ಕೊಯಂಬತ್ತೂರಿನ ಕುಟುಂಬವೊಂದು ತಮ್ಮ ಮನೆಯ ಮುದ್ದಾದ ಪರ್ಷಿಯನ್ ಬೆಕ್ಕು (Persian cats)ಗಳಿಗೆ ಸೀಮಂತ ಮಾಡಿದ್ದಾರೆ. ಪೆಟ್ ಕ್ಲಿನಿಕ್ (pet clinic) ವೊಂದರಲ್ಲಿ ಸೀಮಂತ ನಡೆದಿದ್ದು, ಗರ್ಭಿಣಿ ಹೆಣ್ಮಗಳನ್ನು ಸೀಮಂತಕ್ಕೆ ಸಿದ್ಧಗೊಳಿಸುವಂತೆ ಈ ಬೆಕ್ಕುಗಳಿಗೂ ಹೊಸ ಬಟ್ಟೆ , ಕಾಲಿಗೆ ಗೆಜ್ಜೆ, ಕುತ್ತಿಗೆಗೆ ಸರ ಹಾಕಿ ಶೃಂಗಾರ ಮಾಡಿದ್ದಾರೆ. ಜೊತೆಗೆ ಬೆಕ್ಕುಗಳ ವಿಶೇಷ ತಿನಿಸುಗಳನ್ನು ಸಿದ್ಧಪಡಿಸಿದ್ದಾರೆ. ಸೀಮಂತ ನಡೆದ ಸ್ಥಳವನ್ನೂ ಕೂಡ ಬೆಲೂನ್‌ಗಳನ್ನು ಕಟ್ಟಿ ಲೈಟಿಂಗ್‌ಗಳನ್ನು ಹಾಕಿ ಶೃಂಗರಿಸಿದ್ದಾರೆ. ಜೊತೆಗೆ ತರಹೇವಾರಿ ತಿನಿಸು ಹಣ್ಣು ಹಂಪಲುಗಳನ್ನು ತಂದಿರಿಸಿದ್ದಾರೆ. ಬಿಳಿ ಹಾಗೂ ಕಪ್ಪು ಬಣ್ಣದ ಈ ಎರಡು ಬೆಕ್ಕುಗಳಿಗೆ ಕೆಂಪು ಬಣ್ಣದ ಹೂವಿನ ಮಾಲೆಯನ್ನು ಹಾಕಿದ್ದಾರೆ. ಬಳಿಕ ಈ ಎರಡು ಬೆಕ್ಕುಗಳನ್ನು ತಮಗೆ ಬೇಕಾದನ್ನು ತಿನ್ನಲು ಬಿಟ್ಟಿದ್ದಾರೆ.
ಈ ವಿಶೇಷ ಸಮಾರಂಭದಲ್ಲಿ ಒಂದು ವರ್ಷದ ಎರಡು ಹೆಣ್ಣು ಬೆಕ್ಕುಗಳಿಗೆ ಸೀಮಂತ ಮಾಡಲಾಗಿದೆ. ಈ ಎರಡು ಬೆಕ್ಕುಗಳಿಗೆ ಕ್ಷಿರಾ( Kshira) ಹಾಗೂ ಐರಿಶ್(Iris) ಎಂದು ಹೆಸರಿಡಲಾಗಿದೆ. ಎರಡು ಬೆಕ್ಕುಗಳಿಗೂ ಕ್ರಮವಾಗಿ ತಮ್ಮ 50ನೇ ಹಾಗೂ 35ನೇ ದಿನದಲ್ಲಿ ಸೀಮಂತ ಮಾಡಲಾಗಿದೆ. ವರದಿಗಳ ಪ್ರಕಾರ ಬೆಕ್ಕುಗಳ ಗರ್ಭಾವಸ್ಥೆಯ ಅವಧಿ 62 ದಿನಗಳಾಗಿವೆ. ಈ ಕಾರ್ಯಕ್ರಮದಲ್ಲಿ ಪೆಟ್ ಕ್ಲಿನಿಕ್‌ನ ವೈದ್ಯರು ಸೇರಿದಂತೆ ಹಲವು ಹೆಂಗಳೆಯರು ಭಾಗಿಯಾಗಿದ್ದರು.
Maharashtra Politics: ಆದಿತ್ಯ ಠಾಕ್ರೆ ನೋಡಿ 'ಮಿಯಾಂವ್ ಮಿಯಾಂವ್' ಎಂದ ಬಿಜೆಪಿ ಶಾಸಕ!
ಜನ ಮನುಷ್ಯರಿಗೆ ಸೀಮಂತ ಮಾಡುತ್ತಾರೆ. ನಾವು ಬೆಕ್ಕುಗಳಿಗೆ ಅದೇ ರೀತಿ ಮಾಡಿದ್ದೇವೆ. ಬೆಕ್ಕುಗಳು ನಮ್ಮ ಕುಟುಂಬದ ಸದಸ್ಯರು. ನಾವು ಈ ಕ್ಲಿನಿಕ್‌ಗೆ ಬಂದು ಡಾಕ್ಟರ್‌ಗಳ ಜೊತೆಗೂಡಿ ಈ ಸೀಮಂತ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆವು ಎಂದು ಬೆಕ್ಕಿನ ಮಾಲೀಕರು ಹೇಳಿದ್ದಾರೆ. ಈ ಕಾರ್ಯಕ್ರಮದ ಫೋಟೋ ಹಾಗೂ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
Beware : ಮನೆಯಲ್ಲಿ ಬೆಕ್ಕು ಸಾಕಿದ್ದೀರಾ? ಅನಾಹುತಕ್ಕಿಂತ ಮೊದಲು ಎಚ್ಚೆತ್ತುಕೊಳ್ಳಿ
ಪ್ರಾಣಿಗಳು ಅದರಲ್ಲೂ ಶ್ವಾನ ಮನುಷ್ಯನ ಅತ್ಯುತ್ತಮ ಸ್ನೇಹಿತ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ ಮತ್ತು ನಂಬಲಾಗಿದೆ. ಕೆಲವೊಮ್ಮೆ ಅವುಗಳ ಮಾಲೀಕರು ಅವುಗಳನ್ನು ಮುದ್ದಿಸುವ ಸಲುವಾಗಿ ವಿಪರೀತವಾದುದನ್ನು ಮಾಡುತ್ತಾರೆ. ಈ ಹಿಂದೆ ಆಸ್ಟ್ರೇಲಿಯನ್ ದಂಪತಿಗಳು (Australian couple) ಕ್ರಿಸ್ಮಸ್ ಸಮಯದಲ್ಲಿ ನ್ಯೂಜಿಲೆಂಡ್‌ನಿಂದ ತಮ್ಮ ನಾಯಿಯನ್ನು ಮನೆಗೆ ತರಿಸಲು ಖಾಸಗಿ ಜೆಟ್ ಅನ್ನು ಬಾಡಿಗೆಗೆ ಪಡೆಯಲು ಹತ್ತಾರು ಸಾವಿರ ಡಾಲರ್‌ಗಳನ್ನು ಖರ್ಚು ಮಾಡಿದ್ದರು. ಈ ಇಡೀ ಪ್ರಕ್ರಿಯೆಗೆ ತುಂಬಾ ಹಣ ಖರ್ಚಾಗಿದ್ದು, ಇದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ನಾಯಿಗೆ 'ಮಿಲಿಯನ್ ಡಾಲರ್ ಮಂಚ್ಕಿನ್ ಎಂದು ನಾಮಕರಣ ಮಾಡಿದ್ದರು.