Asianet Suvarna News Asianet Suvarna News

ಪ್ಯಾಂಗಾಂಗ್‌ನಲ್ಲಿ ಕಂಗೆಟ್ಟ ಚೀನಾ:, ಗಡಿಯಲ್ಲಿ ಭಾರೀ ಸಲಕರಣೆ ಜಮಾವಣೆ!

ಚೀನಾಕ್ಕೆ ಅಕ್ಸಾಯ್‌ಚಿನ್‌ ಆತಂಕ| ತನ್ನ ವಶದಲ್ಲಿರುವ ಜಾಗವನ್ನು ಭಾರತ ವಶಪಡಿಸಿಕೊಳ್ಳಬಹುದೆಂಬ ಭೀತಿ| ಸೇನೆ ಚಟುವಟಿಕೆ ತೀವ್ರಗೊಳಿಸಿದ ಚೀನಾ| ಇನ್ನಷ್ಟು ಸಲಕರಣೆ ಜಮಾವಣೆ| ದಕ್ಷಿಣ ಪ್ಯಾಂಗಾಂಗ್‌ನಲ್ಲಿ ಯುದ್ಧಸದೃಶ ವಾತಾವರಣ ತೀವ್ರ| ಆಯಕಟ್ಟಿನ ಸ್ಥಳದಲ್ಲಿ ಸೇನೆ ಸನ್ನದ್ಧ ಸ್ಥಿತಿಯಲ್ಲಿರಿಸಿದ ಭಾರತ

Indian Army changes border posture
Author
Bangalore, First Published Sep 5, 2020, 2:15 PM IST

ನವದೆಹಲಿ(ಸೆ.05): ಲಡಾಖ್‌ನ ಪ್ಯಾಂಗಾಂಗ್‌ ಸರೋವರದ ದಕ್ಷಿಣ ದಂಡೆಯ ಎತ್ತರದ ಪ್ರದೇಶಗಳನ್ನು ಭಾರತ ಆಕ್ರಮಿಸಿಕೊಂಡಿರುವ ಹಿನ್ನೆಲೆಯಲ್ಲಿ ಚೀನಾ ಮತ್ತಷ್ಟುಯುದ್ಧ ಟ್ಯಾಂಕ್‌ಗಳು ಹಾಗೂ ಇನ್‌ಫೆಂಟ್ರಿ ಪಡೆಗಳನ್ನು ಈ ಭಾಗದಲ್ಲಿ ನಿಯೋಜಿಸಿದ್ದು, ಯುದ್ಧದ ಆತಂಕ ಇನ್ನಷ್ಟುಹೆಚ್ಚಳವಾಗಿದೆ. ಭಾರತವೀಗ ಗಡಿಯನ್ನು ರಕ್ಷಿಸಿಕೊಳ್ಳುವುದರ ಬದಲು ಗಡಿಯನ್ನು ಭದ್ರಪಡಿಸಿಕೊಳ್ಳುವ ರಣತಂತ್ರ ಹೆಣೆದಿರುವುದರಿಂದ ಎಚ್ಚೆತ್ತುಕೊಂಡಿರುವ ಚೀನಾ, 1962ರಲ್ಲಿ ತಾನು ಭಾರತದಿಂದ ವಶಪಡಿಸಿಕೊಂಡಿದ್ದ ಅಕ್ಸಾಯ್‌ ಚಿನ್‌ ಪ್ರದೇಶದಲ್ಲೂ ಯುದ್ಧವಿಮಾನಗಳ ಹಾರಾಟವನ್ನು ಹೆಚ್ಚಿಸಿದೆ.

1962ರ ಯುದ್ಧದ ನಂತರ ಚೀನಾವನ್ನು ಎದುರಿಸಲು ರಚಿಸಿದ್ದ ಸ್ಪೆಷಲ್‌ ಫ್ರಂಟಿಯರ್‌ ಫೋರ್ಸ್‌ (ಎಸ್‌ಎಫ್‌ಎಫ್‌) ಎಂಬ ವಿಶೇಷ ಪಡೆಯನ್ನು ಭಾರತವೀಗ ಲಡಾಖ್‌ನಲ್ಲಿ ನಿಯೋಜಿಸಿದೆ. ಹೀಗಾಗಿ ಆ ಯುದ್ಧದ ವೇಳೆ ತಾನು ವಶಪಡಿಸಿಕೊಂಡಿದ್ದ ಅಕ್ಸಾಯ್‌ ಚಿನ್‌ ಪ್ರದೇಶವನ್ನು ಮರಳಿ ಪಡೆಯಲು ಭಾರತ ಯತ್ನಿಸಬಹುದು ಎಂಬ ಆತಂಕದಿಂದ ಚೀನಾ ಇದೀಗ ಅಕ್ಸಾಯ್‌ ಚಿನ್‌ ಪ್ರದೇಶದಲ್ಲೂ ಮಿಲಿಟರಿ ಚಟುವಟಿಕೆ ತೀವ್ರಗೊಳಿಸಿದೆ ಎಂದು ಮೂಲಗಳು ಹೇಳಿವೆ.

ಪ್ಯಾಂಗಾಂಗ್‌ನಲ್ಲಿ ಕಂಗೆಟ್ಟ ಚೀನಾ:

ಆ.30ರ ಘರ್ಷಣೆಯ ನಂತರ ಪ್ಯಾಂಗಾಂಗ್‌ ತ್ಸೋ ದಕ್ಷಿಣ ದಂಡೆಯ ಎತ್ತರದ ಪ್ರದೇಶದ ಆಯಕಟ್ಟಿನ ಸ್ಥಳಗಳನ್ನು ಭಾರತ ಭದ್ರಪಡಿಸಿಕೊಂಡು ಚೀನಾ ವಿರುದ್ಧ ಮೇಲುಗೈ ಸಾಧಿಸಿದೆ. ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯ ತನ್ನ ಬದಿಯಲ್ಲಿ ಚೀನಾ ಯಾವುದೇ ಮಿಲಿಟರಿ ಚಟುವಟಿಕೆ ನಡೆಸಿದರೂ ಈ ಪ್ರದೇಶಗಳಿಂದ ಭಾರತಕ್ಕೆ ಚೆನ್ನಾಗಿ ಕಾಣಿಸುತ್ತದೆ. ಒಂದು ವೇಳೆ ಚೀನಾ ಆ ಕಡೆಯಿಂದ ದಾಳಿಯನ್ನೇನಾದರೂ ಆರಂಭಿಸಿದರೆ ಅದನ್ನು ಸುಲಭವಾಗಿ ಹತ್ತಿಕ್ಕುವ ವ್ಯೂಹಾತ್ಮಕ ಸ್ಥಳದಲ್ಲಿ ಭಾರತ ತನ್ನ ಯೋಧರು ಹಾಗೂ ಯುದ್ಧ ಸಾಮಗ್ರಿಗಳನ್ನು ನಿಯೋಜಿಸಿದೆ. ಇದು ಚೀನಾವನ್ನು ಕಂಗೆಡಿಸಿದ್ದು, ಭಾರತಕ್ಕೆ ಭೀತಿ ಹುಟ್ಟಿಸಲೆಂದೇ ಎಲ್‌ಎಸಿಯ ಆ ಕಡೆ ಯುದ್ಧ ಸಲಕರಣೆಗಳ ದಾಸ್ತಾನನ್ನು ಹೆಚ್ಚಿಸುತ್ತಿದೆ ಎಂದು ಸೇನಾಪಡೆಯ ಉನ್ನತ ಮೂಲಗಳು ತಿಳಿಸಿವೆ.

ಭಾರತದಿಂದಲೂ ತೀವ್ರ ಸಿದ್ಧತೆ

ಚೀನಾಕ್ಕೆ ಸರಿಸಮವಾಗಿ ಭಾರತ ಕೂಡ ತನ್ನ ಸಮರಸಿದ್ಧತೆಯನ್ನು ಹೆಚ್ಚಿಸಿದೆ. ಥಕುಂಗ್‌ ಮತ್ತು ಮುಕ್ಪಾರಿ ಬೆಟ್ಟಗಳ ಮೇಲೆ ಆಯಕಟ್ಟಿನ ಸ್ಥಳದಲ್ಲಿ ಭಾರತ ತನ್ನ ಯೋಧರನ್ನು ನಿಯೋಜಿಸಿರುವುದರಿಂದ ಚೀನಾದ ಎಲ್ಲಾ ಚಟುವಟಿಕೆಗಳೂ ಅಲ್ಲಿಂದ ಕಾಣಿಸುತ್ತಿವೆ. ಸ್ಪಂಗುರ್‌ ಕಣಿವೆಯ ಮೇಲೂ ಭಾರತ ತನ್ನ ಹದ್ದಿನ ಕಣ್ಣು ನೆಟ್ಟಿದೆ. ಅಲ್ಲದೆ ಈ ಪ್ರದೇಶದಲ್ಲಿ ಭಾರತ ತನ್ನ ಯುದ್ಧ ಟ್ಯಾಂಕ್‌ಗಳ ರಚನೆಯನ್ನು ಮರುವಿನ್ಯಾಸ ಮಾಡಿದ್ದು, ಎತ್ತರದ ಸ್ಥಳಗಳಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದೆ. ಇಲ್ಲಿಂದ ಕ್ಷಿಪಣಿ, ರಾಕೆಟ್‌ ಹಾಗೂ ಇತರ ಶಸ್ತಾ್ರಸ್ತ್ರಗಳನ್ನು ಕೂಡ ಬಳಸಿ ದಾಳಿ ನಡೆಸುವ ಸಿದ್ಧತೆಯನ್ನು ಭಾರತ ಮಾಡಿಕೊಂಡಿದೆ. ಅಲ್ಲದೆ ಪೂರ್ವ ಲಡಾಖ್‌ನ ಎತ್ತರದ ಸ್ಥಳಗಳಲ್ಲಿ ಭಾರತ ಟಿ-90 ಹೆವಿ ಯುದ್ಧ ಟ್ಯಾಂಕ್‌ಗಳು ಹಾಗೂ ಟಿ-72ಎಂ1 ಸುಧಾರಿತ ಟ್ಯಾಂಕ್‌ಗಳನ್ನು ಕೂಡ ನಿಯೋಜಿಸಿದೆ. ಇವೂ ಕೂಡ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯ ಹೊಂದಿವೆ.

ಪರಿಸ್ಥಿತಿ ಕೊಂಚ ಉದ್ವಿಗ್ನ: ಸೇನಾ ಮುಖ್ಯಸ್ಥ ನರವಣೆ

ಚೀನಾ ಎಲ್‌ಎಸಿಯ ತನ್ನ ಬದಿಯಲ್ಲಿ ನಗರಿ-ಗುನ್ಸಾ ಮತ್ತು ಟಿಬೆಟ್‌ನ ಹೋಟನ್‌ ವಾಯುನೆಲೆಯಿಂದ ಯುದ್ಧವಿಮಾನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಹೆಚ್ಚಾಗಿ ಸುಖೋಯ್‌-30 ವಿಮಾನಗಳನ್ನು ಚೀನಾ ಬಳಸುತ್ತಿದ್ದು, ಭಾರತದ ವಾಯುಪಡೆ ಕೂಡ ಇದೇ ವಿಮಾನಗಳನ್ನು ನಿಯೋಜಿಸಿದೆ. ಹೀಗಾಗಿ ಎಲ್‌ಎಸಿಯ ಗುಂಟ ಪರಿಸ್ಥಿತಿ ‘ಕೊಂಚ ಉದ್ವಿಗ್ವವಾಗಿದೆ’ ಎಂದು ಸೇನಾಪಡೆ ಮುಖ್ಯಸ್ಥ ಜ.ಎಂ.ಎಂ.ನರವಣೆ ಶುಕ್ರವಾರ ಹೇಳಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ನಮ್ಮ ಸುರಕ್ಷತೆ ಹಾಗೂ ಭದ್ರತೆಗಾಗಿ ನಾವು ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ಎಲ್‌ಎಸಿಯ ಉದ್ದಕ್ಕೂ ನಮ್ಮ ಯುದ್ಧ ಸಾಮಗ್ರಿಗಳನ್ನು ನಿಯೋಜಿಸಿದ್ದೇವೆ. ಈ ಬಿಕ್ಕಟ್ಟನ್ನು ಮಾತುಕತೆಯ ಮೂಲಕವೇ ಸಂಪೂರ್ಣವಾಗಿ ಬಗೆಹರಿಸಿಕೊಳ್ಳುವ ವಿಶ್ವಾಸ ನಮಗಿದೆ ಎಂದಿದ್ದಾರೆ.

- ಜ| ಎಂ.ಎಂ.ನರವಣೆ, ಭಾರತೀಯ ಸೇನಾಪಡೆ ಮುಖ್ಯಸ್ಥ

ಭಾರತ-ಚೀನಾ ನಡುವಿನ ಘರ್ಷಣೆ ಲಡಾಖ್‌ನಲ್ಲಿ ಡೆಡ್‌-ಎಂಡ್‌ ಎನ್ನಬಹುದಾದ ಸ್ಥಿತಿಗೆ ತಲುಪಿದೆ. ಇದರಿಂದ ಇಬ್ಬರಿಗೂ ಯಾವುದೇ ಫಲ ಸಿಗುವುದಿಲ್ಲ, ಜೊತೆಗೆ ಬಿಕ್ಕಟ್ಟಿಗೆ ಪರಿಹಾರವೂ ಸಿಗುವುದಿಲ್ಲ. ಏಕೆಂದರೆ 3,488 ಕಿ.ಮೀ. ಉದ್ದದ ಎಲ್‌ಎಸಿಯಲ್ಲಿ ವರ್ಷದ ಎಲ್ಲಾ ದಿನ ಸೇನೆ ನಿಯೋಜಿಸಿಡಲು ಯಾರಿಗೂ ಸಾಧ್ಯವಿಲ್ಲ.

- ಭಾರತೀಯ ಸೇನಾಪಡೆಯ ಹಿರಿಯ ಅಧಿಕಾರಿ

Follow Us:
Download App:
  • android
  • ios