ಹಾಲಿ ಚಾಂಪಿಯನ್ ಕೆಕೆಆರ್ ತಂಡದ ಮಿಸ್ಟ್ರಿ ಸ್ಪಿನ್ನರ್ ಕರೆತಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಐಪಿಎಲ್ ಮೆಗಾ ಹರಾಜಿನಲ್ಲಿ ಕೆಕೆಆರ್ ತಂಡದ ಮಾಜಿ ಸ್ಪಿನ್ನರ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ
ಜೆಡ್ಡಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2025ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಸಾಕಷ್ಟು ಅಳೆದುತೂಗಿ ಆಟಗಾರರನ್ನು ಖರೀದಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಮೂರು ಆಟಗಾರರನ್ನು ರೀಟೈನ್ ಮಾಡಿಕೊಂಡು 83 ಕೋಟಿ ರುಪಾಯಿ ಪರ್ಸ್‌ನಲ್ಲಿಟ್ಟುಕೊಂಡು ಹರಾಜಿಗೆ ಬಂದಿರುವ ಆರ್‌ಸಿಬಿ, ಇದೀಗ ಮತ್ತೊಮ್ಮೆ ಕಳೆದ ಆವೃತ್ತಿಯ ಚಾಂಪಿಯನ್ ತಂಡವಾದ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿದ್ದ ಮಿಸ್ಟ್ರಿ ಸ್ಪಿನ್ನರ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಹೌದು, ಆರಂಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿದ್ದ ಸ್ಪೋಟಕ ವಿಕೆಟ್ ಕೀಪರ್ ಬ್ಯಾಟರ್ ಫಿಲ್ ಸಾಲ್ಟ್ ಅವರನ್ನು ಖರೀದಿಸಿತ್ತು. ಇದೀಗ ಕೆಕೆಅರ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಿಸ್ಟ್ರಿ ಸ್ಪಿನ್ನರ್ ಸುಯಾಶ್ ಶರ್ಮಾ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. 30 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಲೆಗ್‌ಸ್ಪಿನ್ನರ್ ಸುಯಾಶ್ ಶರ್ಮಾ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಇದೀಗ 2.60 ಕೋಟಿ ರುಪಾಯಿ ನೀಡಿ ಖರೀದಿಸುವ ಮೂಲಕ ತನ್ನ ಬೌಲಿಂಗ್ ವಿಭಾಗವನ್ನು ಇನ್ನಷ್ಟು ಬಲಪಡಿಸಿಕೊಂಡಿದೆ.
Suyash Sharma will play for @RCBTweets 🙌🙌
— IndianPremierLeague (@IPL) November 24, 2024
He's SOLD for INR 2.6 Crore 🔥#TATAIPLAuction | #TATAIPL
ಜಮ್ಮು-ಕಾಶ್ಮೀರ ಮೂಲದ ಮಾರಕ ವೇಗಿಯನ್ನು ಖರೀದಿಸಿದ ಆರ್‌ಸಿಬಿ!
ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಐಪಿಎಲ್ ಮೆಗಾ ಹರಾಜಿಗೂ ಮುನ್ನ ಎಡಗೈ ವೇಗಿ ಯಶ್ ದಯಾಳ್ ಅವರನ್ನು ರೀಟೈನ್ ಮಾಡಿಕೊಂಡಿತ್ತು. ಇದೀಗ ಐಪಿಎಲ್ ಮೆಗಾ ಹರಾಜಿನಲ್ಲಿ ಜೋಶ್ ಹೇಜಲ್‌ವುಡ್ ಅವರನ್ನು 12.50 ಕೋಟಿ ರುಪಾಯಿಗೆ ಹಾಗೂ ರಸಿಕ್ ಸಲಾಂ ದರ್‌ಗೆ 6 ಕೋಟಿ ರುಪಾಯಿ ನೀಡಿ ಖರೀದಿಸುವ ಮೂಲಕ ತನ್ನ ಬೌಲಿಂಗ್ ಪಡೆಯನ್ನು ಮತ್ತಷ್ಟು ಬಲಿಷ್ಠವಾಗಿಸಿಕೊಂಡಿದೆ. ಈ ಬೌಲಿಂಗ್ ವಿಭಾಗಕ್ಕೆ ಸುಯಾಶ್ ಶರ್ಮಾ ಸೇರ್ಪಡೆ ಇನ್ನಷ್ಟು ಬಲ ತಂದುಕೊಟ್ಟಿದೆ.
ಇನ್ನುಳಿದಂತೆ ಆರ್‌ಸಿಬಿ ತಂಡವು ಫಿಲ್ ಸಾಲ್ಟ್ 11.50 ಕೋಟಿ, ಜಿತೇಶ್ ಶರ್ಮಾ 11 ಕೋಟಿ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು 8.75 ಕೋಟಿ ರುಪಾಯಿ ನೀಡಿ ಹರಾಜಿನಲ್ಲಿ ಖರೀದಿಸಿದೆ.